ಚಕ್ರ

ಚಕ್ರ

ಚಲನೆ ೧ :
ಅವರಿಬ್ಬರು ಅಲ್ಲಿ ಕುಳಿತಿದ್ದಾರೆ. ಹತ್ತಿರ. ನಾವು ನೀವು ಭಾವಿಸಿದ್ದಕ್ಕಿಂತ ಹತ್ತಿರ. ಪರಸ್ಪರರ ಉಸಿರು ತಾಕುವಷ್ಟು ಸನಿಹ. ಮಾತುಗಳು ಉಸಿರುಗಳಾಗಿ , ಉಸಿರು ದೃಷ್ಟಿಗಳಾಗಿ , ದೃಷ್ಟಿ ಭಾವಗಳಾಗಿ ಭಾವಗಳೆಲ್ಲ ಅವಳ ಕಣ್ಣಿನಿಂದ ಅವನೆಡೆಗೆ ತೇಲಿ ಬರುತ್ತಿದ್ದವು.
" ತುಂಬಾ ಪ್ರೀತಿಸ್ತೀಯಾ ಶ್ರೀ?" ಅವಳು
"ಮ್" ಅವನು
" ಎಷ್ಟು?" ಅವಳು. ಅವಳಿಗೆ ತಿಳಿಯುವ ಕಾತುರ. ಪ್ರೀತಿಸಿದವ ಪ್ರೀತಿ ಮೊಗೆದು ಕೊಡಲೆಂಬ ಆತುರ.
" ಇಷ್ಟು" ಅವನು.  " ಆಳದಷ್ಟು , ಬೆಟ್ಟದಷ್ಟು , ಸಾಗರದಷ್ಟು , ಸಮುದ್ರದಷ್ಟು. ಬಿಗಿ ಹಿಡಿದ ಮುಷ್ಟಿ ಗಾತ್ರದ ಹೃದಯ ನೂಕುತ್ತಿರುವ ಬಿಸಿ ರಕ್ತದಷ್ಟು. ರಾತ್ರಿಗಳು ಎಣಿಸದ ಚುಕ್ಕಿಗಳಷ್ಟು. ನಿನ್ನ ಚಂದಮ ನನ್ನ ಎದೆಗೆ ಹಾದು ಬರುವಷ್ಟು. ಕೇಂದ್ರದ ಸುತ್ತ ಕೋಟೆ ಕಟ್ಟಿರುವ ಪರಮಾಣು ಲೆಕ್ಕವಿಲ್ಲದೇ ಹೊತ್ತು ಗೊತ್ತಿಲ್ಲದೇ
ಸುತ್ತಾಡುವಷ್ಟು.
" ಅರ್ಥವಾಗಲಿಲ್ಲ ಶ್ರೀ..!?" ಅವಳು
ಅವಳಿಗೆ ಅರ್ಥ ಮಾಡಿಕೊಳ್ಳುವ ಕಾತರ ,
" ಅರ್ಥ ಮಾತಿಗಲ್ಲ , ಅರ್ಥ ಕ್ರಿಯೆಗೆ. ಮಾತು ಕ್ರಿಯೆಯಾದಾಗ ಅದಕ್ಕೆ ಅರ್ಥ. " ಅವನು
 ಇವನಿಗೆ ಅರ್ಥ ಮಾಡಿಸುವ ಆತುರ
" ಅಂದರೆ?" ಅವಳು ಕಣ್ಣರಳಿಸಿದಳು.
ಅವನು ಮಾತು ಮುಗಿಸಿ ಕ್ರಿಯೆಗೆ ತೊಡಗಿದ. ಅವನ ತುಟಿಗೆ ಅವಳ ತುಟಿಯ ಶಬ್ದ ನುಂಗಿ ಹಸಿವು ತಣಿಸಿಕೊಳ್ಳುವ ಆಶೆ.
ದಾಹ.. ರಭಸ ಪ್ರವಾಹ..ಕಂಪಿಸುವ ದೇಹ..
ಉಬ್ಬು ತಗ್ಗುಗಳಲ್ಲಿ ಸ್ಪರ್ಶ ಮೀಟಿದಾಗ ಸುಖದ ತನನ೦..!
ಮಾತು ಮಂದಿರ... ಆಸೆ ಚಂದಿರ..
ಕ್ರಿಯೆ ಅದಕ್ಕೆ ಪ್ರತಿಕ್ರಿಯೆ...
ಒಳಗಿನ ಆಲಯ ... ಪ್ರವೇಶಿಸಿದಾಗ ಅದೇ ದೇವಾಲಯ..!!


ಚಲನೆ ೨ :
ಹಲವು ದಿನಗಳು ಹಿಂದೆ ಕುಳಿತಿವೆ.  ಕಾಲ ಓಡುತ್ತಿದೆ.
"ಶ್ರೀ" ಅವಳು
"ಮ್" ಅವನು
" ಹೇಳಲೇ?" ಅವಳು
" ಹೇಳು" ಅವನು
ಹಲವಾರು ಮುನ್ನುಡಿಯ ನಂತರ ಅವಳು ಹೇಳಿದಳು. ಅಲ್ಲ ತೋರಿದಳು.
ಅವನ ಕ್ರಿಯೆ.. ಅವಳ ಕ್ರಿಯೆ... ಇಬ್ಬರ ಕ್ರಿಯೆ.. ಇಬ್ಬರ ಕ್ರಿಯೆಗೂ ಸಾಕ್ಷಿಯಾಗಿ ಅವಳ ದೇಹ ಪ್ರತಿಕ್ರಿಯೆ ತೋರಿತ್ತು. ಅರ್ಥ ಸಿಕ್ಕಿತ್ತು. ಅಲ್ಲ ಅರ್ಥ ಒಳಗೆ ಬೆಳೆದಿತ್ತು. ತಿಂಗಳು ತುಂಬಿತ್ತು.
ಸಮೃದ್ದ ಭೂಮಿಯಲ್ಲಿ ಹದ ಸಮಯಕ್ಕೆ  ಬೀಜ ಬಿತ್ತಿದರೆ ಮೊಳಕೆ ಖಂಡಿತ.  ಆದರೆ ಬೆಳೆ ಬೆಳೆಸುವದು ಕಷ್ಟ.
ಬೆಳೆಸಲೆಂದು ಬಿತ್ತಿದರೆ ಬೆಳೆ ಇಲ್ಲದಿದ್ದರೆ ಕಳೆ..!
ಅವನಿಗೆ ಅದು ಕಳೆ. ಅವಳಿಗೆ ಬೆಳೆ.
ಬೇಡದ ಕಳೆ ಕೀಳಿಸುಎಂದ. ಪ್ರೀತಿಗೆ ಹಣದ ಮಾತನಾಡಿದ.
ಮಾತಿಗೆ ಮಾತು ಬೆಳೆಯಿತು.
ಕೊನೆಗೆ ಕಿತ್ತಿದ್ದು.. ಕೊಂದಿದ್ದು ಬೆಳೆಯನ್ನಲ್ಲ , ಕಳೆಯನ್ನಲ್ಲ.. ಕಟ್ಟಿದ್ದ ಗರ್ಭವನ್ನಲ್ಲ.. ಅವರ ಪ್ರೀತಿಯನ್ನ..
ಅವನು ಅವಳಿಂದ ಎದ್ದು ನಡೆದ..!

ಚಲನೆ ೩
ಕೆಲವು ದಿನಗಳ ನಂತರ ಅವಳ ಹೆಣ ಬಾವಿಯಲ್ಲಿ ತೇಲಾಡುತಿತ್ಟು.
" ನನ್ನ ಸಾವಿಗೆ ನಾನೇ ಕಾರಣ" ಎಂಬ ಅಂತಿಮ ಪತ್ರ.
ಅವನು ದುಃಖಿಸಿದ ಗೋಳಾಡಿದ ಕಣ್ಣೀರು ಧಾರೆ ಧಾರೆಯಾಗಿ ಹರಿಸಿದ. (?)
ಯತಾಪ್ರಕಾರ ಕೆಲವು ಕೋರ್ಟು ಕಛೇರಿಗಳು ನಡೆದವು. ಜನರು ಎಲ್ಲವನ್ನು ಕಾಲದ ಅಡಿಯಲ್ಲಿ ಮರೆತರು.

ಚಲನೆ ೧:
ಮತ್ತೆ ಅದೇ ಜಾಗ.
ಮತ್ತೆ ಅಲ್ಲಿ ಇಬ್ಬರು ಕುಳಿತಿದ್ದಾರೆ.
ಅವರಲ್ಲೊಬ್ಬ ಮತ್ತೆ ಅದೇ ಅವತ್ತಿನ ಅವನು..!!!
ಆದರೆ ಅವಳ ಬದಲು ಇನ್ನೊಬ್ಬಳು..!!!!
" ತುಂಬಾ ಪ್ರೀತಿಸ್ತೀಯಾ ಶ್ರೀ"? ಅವಳು
" ಮ್" ಅವನು
" ಎಷ್ಟು?" ಅವಳು
...........................
.................
..........
........
...












Rating
No votes yet

Comments