ತೀರದಲ್ಲಿ ಹೆಜ್ಜೆ ಗುರುತು ಸಾವಿರಾರು,ನೀನೇ ಹೇಳು ನನ್ನದಾವುದು....

ತೀರದಲ್ಲಿ ಹೆಜ್ಜೆ ಗುರುತು ಸಾವಿರಾರು,ನೀನೇ ಹೇಳು ನನ್ನದಾವುದು....

"ವಿಶ್ ಯೂ ಹ್ಯಾಪಿ ಬರ್ತ್ ಡೇ "..ಅಕ್ಕರೆಯಿಂದ ಕೈ ಕುಲುಕಿದ ಮನುವಿನ ಕಣ್ಣುಗಳನ್ನೇ ದಿಟ್ಟಿಸಿದೆ. ..ಅಲ್ಲಿದ್ದಿದ್ದು ಪ್ರೀತಿಯೋ ಅಥವಾ ಸ್ನೇಹವೋ ಎಂದು ಒಂದರೆಗಳಿಗೆ ಗೊಂದಲವಾದರೂ ಅಷ್ಟು ತಲೆಕೆಡಿಸಿಕೊಳ್ಳಲಿಲ್ಲ."ನನ್ನ ಪ್ರೀತಿಯ ಸ್ನೇಹಳಿಗೆ ನನ್ನದೊಂದು ಪುಟ್ಟ ಕಾಣಿಕೆ, ದಯಮಾಡಿ ಸ್ವೀಕರಿಸಿಕೊಳ್ಳಬೇಕು"ಎಂದು ನಾಟಕೀಯ ಶೈಲಿಯಲ್ಲಿ  ಹೇಳಿ ತಾನು ತಂದ ಗಿಫ್ಟಿನ ಪ್ಯಾಕನ್ನು ಕೈಯ್ಯಲ್ಲಿಟ್ಟ.ನಾನೊಂದು ನಗು ಸೂಸಿ ಏನೋ ಹೇಳುವಷ್ಟರಲ್ಲಿ,ಬರ್ತೀನಿ ಸ್ನೇಹ, ಕ್ಲಾಸಿಗೆ ಲೇಟಾಗ್ತಿದೆ ಸಂಜೆ ನಂಗೆ ಸ್ಪೆಷಲ್ ಪಾರ್ಟೀನ ಮರಿಬೇಡ ಎಂದು ಬಂದಷ್ಟೇ ವೇಗದಲ್ಲಿ ಕಣ್ಮರೆಯಾದ..ವಾವ್..ಜನ್ಮದಿನದ ಮೊದಲ ಶುಭಾಶಯ ನನ್ನ ಪ್ರೀತಿಯ ಮನುವಿನದ್ದು ...ದಿನವೆಲ್ಲಾ ಖುಷಿಯಾಗಿದ್ದೆ ..ಚಿಕ್ಕ ಚಿಕ್ಕ ಘಟನೆಗೂ ಹೆಚ್ಚು ಖುಷಿ ಪಡೋದು ನನ್ನ ಹುಟ್ಟುಗುಣ..ಇಂತಹ ಮನಸ್ಸಿದ್ದಾಗಲೇ ಕಾಣುವ ಪ್ರತೀ ದೃಶ್ಯ ಸುಂದರವಾಗಿ ಕಾಣೋದು!ಅದರಲ್ಲೂ ಹೀಗೆ ಪ್ರೀತಿಯಲ್ಲಿ ಬಿದ್ದರಂತೂ ಕೇಳೋದೇ ಬೇಡ,ಆಡುವ ಮಾತೆಲ್ಲ ಕಾವ್ಯವೇ ...ಕಾಡುವ ನೆನಪೆಲ್ಲ ಧ್ಯಾನವೇ ...!



ಈ ಪ್ರೀತಿಯೇ ಹೀಗೆ ,ಸದಾ ಕಾಡುವ   ಮೃದು ಭಾವಗಳ ಧೃಡ ಚಿತ್ತಾರ..ಬದುಕಿನಲ್ಲಿ ನನ್ನದೇ ಆದ ಒಂದು ಸುಂದರ ಗುರಿಯಿಟ್ಟುಕೊಂಡು ಮುಂದುವರಿಯುವಾಗ ಅದು ಹ್ಯಾಗೆ ಪ್ರೀತಿಸಲು ಶುರು ಮಾಡಿದೆನೋ ಗೊತ್ತಿಲ್ಲ.ಆದರೆ ಅವನು ನನ್ನನ್ನು ಪ್ರೀತಿಸುತ್ತಿಲ್ಲವೇನೋ ..ಇದೊಂದೇ ಆಗಾಗ ಕಾಡುತ್ತಿರೋದು..ಈ ಏಕಮುಖ ಪ್ರೀತಿ ಅದೆಲ್ಲಿಗೆ ತಲುಪಿಸುತ್ತೋ..ರಾತ್ರಿ ಊಟ ಮುಗಿಸಿ ಪುಸ್ತಕ ಹಿಡಿದು ಕುಳಿತೆ..ಪರೀಕ್ಷೆಗೆ ಇನ್ನೆರೆಡೆ ವಾರವಿತ್ತು..ಹಾಗೆ ಕಿಟಕಿಯಿಂದ ಆಗಸದೆಡೆಗೆ ನೋಡಿದೆ.ಹ್ಮ್.. ಇನ್ನು ಈ ನಕ್ಷತ್ರಗಳನ್ನ ನೋಡಿದ ಮೇಲೆ ಓದೋದಕ್ಕೆ ಮನಸ್ಸೇ ಬರೋದಿಲ್ಲ ..ರಾತ್ರಿಯ ನೀರವತೆಯಲ್ಲಿ ನೆನಪಾಗೋದೇ ಮನು..ಹೀಗೆ ಒಂದು ಬೆಳದಿಂಗಳ ರಾತ್ರಿಯಲ್ಲಿ ಕೇಳಿದ್ದ ಸ್ನೇಹ ,ನೀ ಮದುವೆ ಆಗೋ ಹುಡುಗ ಹ್ಯಾಗಿರಬೇಕು ಅಂತ ..ನಾ ಹೇಳೋ ಮೊದಲೇ ಹೇಳಿದ್ದ,ನನ್ನ ಹೆಂಡತಿ ಹೀಗೆಲ್ಲ ರಾತ್ರಿ,ಆಕಾಶ,ಚಂದ್ರ ಅಂದ್ರೆ ಬಿಟ್ ಓಡೋಗಿ ಬಿಡ್ತೀನಿ ಅಷ್ಟೇ.ಅಲ್ಲ ಸ್ನೇಹ,ಈ ಬೆಳದಿಂಗಳ ರಾತ್ರಿಯಲ್ಲಿ ಈ ಸಮುದ್ರದ ಅಲೆಗಳನ್ನು ನೋಡಬೇಕು ಅಂತ ಮಗು ಹಾಗೆ ಅಷ್ಟು ಹಠ ಮಾಡ್ತಿದ್ದ್ಯಲ್ಲ..ಅಂಥಹ ಖುಷಿ ಏನೀಗ ?ನನಗೇನೋ ಹಗಲಲ್ಲಿ ಕಾಣಿಸೋದು ಈಗ ರಾತ್ರಿಯಲ್ಲಿ  ಅಸ್ಪಷ್ಟವಾಗಿ ಕಾಣಿಸ್ತಿದೆ ಅಷ್ಟೇ !ಹಾಗೆಂದವನನ್ನೇ ದಿಟ್ಟಿಸಿದ್ದೆ..ಹೌದು..ನಾನೂ ಇರಬೇಕಿತ್ತು ನಿನ್ನಂತೆಯೇ...ನಿರ್ಭಾವುಕಳಾಗಿ!


 
ಒಹ್,ಇದೇ ರೀತಿ ಓದುವ ಹೊತ್ತಿನಲ್ಲಿ ಇದನ್ನೆಲ್ಲಾ ನೆನಪಿಸಿಕೊಂಡರೆ ಉದ್ದಾರ  ಆದ ಹಾಗೇನೆ ಅಂದುಕೊಂಡು ಡೈರಿ ಯನ್ನ  ತೆಗೆದೆ.ಅದನ್ನು ಅಪ್ ಡೇಟ್  ಮಾಡದಿದ್ದರೆ ಎಲ್ಲಿಯ ಸಮಾಧಾನ!ಅದರಲ್ಲಿ "ಮನು,ಸದಾ ಕಾಡುವ ನಿನ್ನ ನೆನಪಿನಿಂದ ಓದೋಕೆ ಆಗ್ತಿಲ್ಲ ಕಣೋ ..ಹೀಗೆ ಆದರೆ ನಾ ನನ್ನ ಗುರಿ ಮುಟ್ಟೋದು ತಡ ಆಗಬಹುದು..ಪ್ರೀತಿಸಬಾರದಿತ್ತು ಅಂತ ಸಾವಿರ ಸಲ ಅಂದುಕೊಳ್ಳುವೆ..ಮತ್ತೆ ಪುನಃ ಅದೇ ರಾಗ..ಇನ್ನೊಂದು ತಿಂಗಳಿಗೆ ಪರೀಕ್ಷೆ  ಮುಗಿಯುತ್ತೆ .ಅದೇ ದಿನ ಧೈರ್ಯ ದಿಂದ ಎಲ್ಲ ವಿಷಯ ಹೇಳ್ತೀನಿ..ನೋಡೋಣ ಏನಾಗುತ್ತೆ ಅಂತ ..ಈಗ ಕಿಟಕಿಯಿಂದ ಒಂದೇ ಒಂದು ನಕ್ಷತ್ರ ಕಾಣಿಸ್ತಿದೆ ..ಅಂತಹ ಮಿನುಗುವ ನಕ್ಷತ್ರಗಳೆಲ್ಲ ನನ್ನಂತಹ ಭಾವುಕಿಯರ ಕಾಡುವ ನೂರು ನೆನಪುಗಳಿಗೆ ಸಾಕ್ಷಿ..ಅಂಥಹ ಒಂದು ಕಾಡುವ ನೆನಪು ನೀನು ,ನಿನ್ನ ನೆನಪಿನಲೆಗಳಡಿಯಲ್ಲಿ ದಡ ಸೇರಲು ತವಕಿಸುವ ಪುಟ್ಟ ಹನಿ ನಾನು, ದಡಕ್ಕೆ ಸೇರಿಸುವೆಯೋ ಇಲ್ಲ ತಳದಲ್ಲಿ ಮುಳುಗಿಸುವೆಯೋ ನಿನ್ನಿಷ್ಟ !"..ಹೀಗೆಂದು ಬರೆದ ಮೇಲೆ ಮನಸ್ಸು ನಿಯಂತ್ರಣಕ್ಕೆ ಬಂತು..ಮತ್ತೆ ಸ್ವಲ್ಪ ಓದಿ ಮಲಗಿಕೊಂಡೆ!



ಒಂದರ ಮೇಲೊಂದು ಪರೀಕ್ಷೆ ಮುಗಿದು ನಿರಾಳವೆನ್ನಿಸಿತ್ತು ,ಪ್ರತೀ ಪರೀಕ್ಷೆಗೂ ಮನು ಶುಭ ಕೋರುತ್ತಿದ್ದ..ಪರೀಕ್ಷೆ ಮುಗಿದು ೧೫ ದಿನಗಳಾದರೂ ನನಗೆ ವಿಷಯ ಹೇಳಲು ಧೈರ್ಯ ಬರಲಿಲ್ಲ ..ಮುಂದಿನ ೨ ದಿನಗಳಲ್ಲಿ ಮನು ಬಂದು ತಾನು ಸಹನಾ ಳನ್ನು ಪ್ರೀತಿಸುತ್ತಿರುವ ವಿಷಯ ಹೇಳಿದ.ಅವರ ಭೇಟಿ, ಮಾತುಕತೆ ,ತನ್ನ ಪ್ರೊಪೋಸಲ್ ಹೀಗೆ ಎಲ್ಲವನ್ನೂ ಮನಸಾರೆ ಹೇಳಿಕೊಳ್ಳುತ್ತಿದ್ದರೆ ನನಗೆ ಕೆನ್ನೆ ಮುಟ್ಟಿ ನೋಡಿಕೊಳ್ಳಲು ಸಹ ಭಯವಾಗುತ್ತಿತ್ತು..ಅಳುತ್ತಿಲ್ಲ ತಾನೇ !ತಕ್ಷಣ ಸಾವರಿಸಿಕೊಂಡು ಮನಪೂರ್ವಕವಾಗಿ ಶುಭ ಹಾರೈಸಿದ್ದೆ .ರಾತ್ರಿ ಮಲಗಿದವಳಿಗೆ ನಿದ್ದೆಯ ಮಾತು ದೂರಾಗಿತ್ತು..ಇಲ್ಲಿಯವರೆಗೆ ಅವನೊಂದು ಕನಸಾಗಿದ್ದ ,ಇನ್ನು ಮುಂದೆ ಕೂಡಾ..ಸ್ನೇಹ ನನ್ನ ಪ್ರೀತಿಯ ವಿಷಯವನ್ನು ಅಮ್ಮಂಗೂ ಹೇಳದೆ ಮೊದಲು ಬಂದು ನಿಂಗೆ ಹೇಳ್ತಾ ಇದ್ದೀನಿ ಅಂದ ಅವನ ಕಣ್ಣಲ್ಲಿದ್ದ ಅದೇ ಹೊಳಪನ್ನು ನಾನು ನನ್ನ ಸ್ವಾರ್ಥಕ್ಕೆ ಪ್ರೀತಿಯೆಂದು ಅರ್ಥ ನೀಡಲು ಹೋಗಿದ್ದೇನಾ..ಅಂದಿನ ಡೈರಿ ಯಲ್ಲಿ ಬರೀ sorry ಮನು ಅಂದಷ್ಟೇ ಬರೆದೆ..ರಾತ್ರಿ ತಡವಾಗಿ ಮಲಗಿ ಬೆಳಿಗ್ಗೆ ಏಳುವಾಗ ೯ ಗಂಟೆ ಮೀರಿತ್ತು..ಅಡುಗೆ ಮನೆಯಲ್ಲಿ ಎದುರಾದ ಅಮ್ಮನ ಸ್ವರ..ಮನು ಬಂದಿದ್ದ ಪುಟ್ಟಾ ..ನೀ ಮಲಗಿದ್ದು ನೋಡಿ ಎಬ್ಬಿಸದೆ ಹಾಗೆ ಹೋದ .ಏನೂ  ಹೇಳದೆ ಸುಮ್ಮನಾದೆ..ಮೊದಲೆಲ್ಲಾ ಗುನುಗುನಿಸುತ್ತಿದ್ದ ಹಾಡುಗಳು ಅಂದು ಗಂಟಲಿಗೆ ಬರಲೇ ಇಲ್ಲ ..ಬೀರುವಿನಿಂದ ಬಟ್ಟೆ ತೆಗೆಯುವಾಗ  ಅಲ್ಲಿದ್ದ  ಆಟೋಗ್ರಾಫ್ ನೋಡಿ ಶಾಕ್ !ಹಾಗಾದ್ರೆ ಡೈರಿ ??! ಓಹ್  ಏನೋ ಆಲೋಚಿಸುತ್ತಾ ಟೇಬಲ್  ಮೇಲಿಡಬೇಕಿದ್ದ  ಆಟೋಗ್ರಫಾನ್ನು ಬೀರುವಲ್ಲಿಟ್ಟು, ಡೈರಿಯನ್ನು ಟೇಬಲ್ ಮೇಲಿಟ್ಟಿದ್ದೆ.ಎಲ್ಲಿತ್ತು ಅಲ್ಲಿ?ನೆನಪಾಗಿ ನಡುಗಿಬಿಟ್ಟೆ.. ಅಂದರೆ..ಅಂದರೆ ..ಮನು ತೆಗೆದುಕೊಂಡು ಹೋಗಿದ್ದು ಸ್ಪಷ್ಟ!ಕೂಡಲೇ ರಸ್ತೆಗಿಳಿದೆ..ಎದುರಲ್ಲೇ ಮನು ಬರುತ್ತಿದ್ದ ..ಕೈಯಲ್ಲಿ ನನ್ನ ಡೈರಿ!ಕೇವಲ ಒಂದು ಘಂಟೆಯಲ್ಲಿ ಓದಿಬಿಟ್ಟನಾ..ಏನೂ ಮಾತಾಡದೆ ಡೈರಿ ಕೈಯಲ್ಲಿಟ್ಟ..ಕಣ್ಣು ನೋಡಿ ಮಾತಾಡಲೂ ಭಯ..ಮತ್ತೆ ಸಿಗ್ತೀನಿ ಅಂದು ಹೇಳಿ ಹೋದ ಅವನ ಮನೋಭಾವವನ್ನು ಗ್ರಹಿಸಲಾಗದೆ ಹೋದೆ.ಯಾಕೋ ತಳಮಳ ಜಾಸ್ತಿ ಆಗತೊಡಗಿತು..ಇನ್ನೊಂದು ತಿಂಗಳಿನಲ್ಲಿ ಕೋಚಿಂಗ್ ಗೋಸ್ಕರ ದೂರದಲ್ಲಿದ್ದ ಮಾಮನ ಮನೆಗೆ ಹೋಗೋಳಿದ್ದೆ..ಆದ ಬೇಜವಾಬ್ದಾರಿತನಕ್ಕೆ ನನ್ನ ಮೇಲೇನೆ ಸಿಟ್ಟು ಬಂತು.ಆ ದಿನ ರಾತ್ರಿ ಎಂದಿನಂತೆ ಡೈರಿ ತೆಗೆದಾಗ ಅಲ್ಲಿ ಒಂದು  ಪತ್ರವಿತ್ತು !ಮನುವಿನ ಕೈಬರಹ!!ಉದ್ವೇಗದಿಂದ ಓದಿದೆ...
"ಸ್ನೇಹ ,
ಏನ್ ಬರೀಬೇಕು ಅಂತ ಗೊತ್ತಿಲ್ಲ,ನೀನು ನನ್ನ ಪ್ರೀತಿಸುತ್ತಿದ್ದಿ ಅಂತ ಊಹಿಸೋಕು ಆಗ್ತಿಲ್ಲ ನಂಗೆ..ಗುರಿ,ಕನಸು  ಮುಖ್ಯ ಅಂತಾನೆ ಇದ್ಯಲ್ಲ, ಒಂದೇ ಸಲ ಏನಾಗಿದ್ದು ನಿಂಗೆ?..ಹೋಗ್ಲಿ ..ಈಗ ಸಹನಾಳ ವಿಷ್ಯ ನಿಂಗೆ ಗೊತ್ತು..ಆದರೆ ಆ ಒಂದು ಕಾರಣಕ್ಕೆ ನಿನ್ನ ದೂರ ಮಾಡ್ಕೊಳ್ಳೋಕೆ ನಂಗೆ ಆಗಲ್ಲ..ಹಾಗಂತ ಸಹನಳನ್ನು ಬಿಡೋಕೂ ಆಗೋಲ್ಲ..ನನಗೆ ಶಿಸ್ತು ಕಲಿಸಿದವಳು ನೀನು, ಸೋತಾಗ ಧೈರ್ಯ ತುಂಬಿದವಳು ನೀನು..ಬದುಕನ್ನು ಇಷ್ಟ ಪಡುವಂತೆ ಮಾಡಿದವಳು ನೀನು..ಇನ್ನು ಮುಂದೆ  ಮೊದಲಿನಂತೆ ಫ್ರೆಂಡ್ ಆಗಿರೊದ ಇಲ್ಲ ದೂರ ದೂರಾನೇ ಇರೋದಾ ..ಸಲಹೆ ನಿನ್ನದು.ಏನೇ ಆದರೂ ಪಾಲಿಸುವೆ "
"ಮನು "...

ನಾ ಮುಂದೊಂದು ಕ್ಷಣವೂ  ಯೋಚಿಸಲಿಲ್ಲ, ಕೂಡಲೇ ಪೆನ್ನು  ಹಾಳೆ ಹಿಡಿದು ಕುಳಿತೆ,
"ಮನು ,
ಇನ್ನೇನು ಸತ್ತು ಕೇವಲ ನೆನಪಾಗಿ ಉಳಿಯಬೇಕಿದ್ದ ಸಂಬಂಧಕ್ಕೆ ಇಂಥಹ ಒಂದು ತಿರುವು ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ..ಒಹ್ ,ನಾನು ನೋಡು ..ನನ್ನ ಭಾವುಕತೆಯ ವಾಕ್ಯಗಳು ನಿಂಗೆ ಅರ್ಥ ಆಗಲ್ಲ ಆಲ್ವಾ ..ಹ್ಮ್..ಅರ್ಥ ಆಗದಿದ್ದರೂ ವ್ಯರ್ಥವಾಗದಿದ್ದರೆ ಸಾಕಷ್ಟೇ.ನಾನು ನಿನ್ನ ನಡೆ ನುಡಿ ,ನಗುವಿಗೆ ಸೋತಿರಬಹುದು.ನಿನ್ನ ತುಂಟ ನಗು ,ನೋಡುವ ನೇರ ನೋಟ, ಮಾತಾಡಿಸುವ ರೀತಿ ಎಲ್ಲ... ಎಲ್ಲವೂ. ಇಷ್ಟವಾಗಿತ್ತು ನಂಗೆ !ಆದರೆ ಈಗ ಗೊತ್ತಿದ್ದೂ ಗೊತ್ತಿದ್ದೂ ಸಹನಳಂತ ಮುಗ್ಧ ಹುಡುಗಿಗೆ ಮೋಸ ಮಾಡಲು ತಯಾರಿಲ್ಲ ನಾನು.ನನ್ನಷ್ಟಕ್ಕೆ ಬದುಕಲು ನಿನ್ನ ನೆನಪುಗಳೊಂದಷ್ಟಿದ್ದರೆ ಸಾಕು.ಬದುಕನ್ನು ಬಂದ ಹಾಗೆ ಸ್ವೀಕರಿಸಿ ,ಅದಕ್ಕೆ ಮತ್ತೆ ಕನಸಿನ ,ಭರವಸೆಯ ಬಣ್ಣ ತುಂಬಲು ಗೊತ್ತಿದೆ ನಂಗೆ. ಬಿಡು ,ಸಿಗದ ವಸ್ತುವಿಗೆ ಎಂದೂ ಮರುಗಿದವಳಲ್ಲ ನಾನು.ಕಾಲ ಎಲ್ಲವನ್ನೂ ಮರೆಸುತ್ತೆ ಅಂತಾರೆ,ನೋಡೋಣ.....ಆದರೂ ಕೊನೆಗೂ.. ಸಿಗದ ಪ್ರೀತಿಗೆ ,ಕೈ ಜಾರಿದ ಕನಸಿಗೆ. ಕಣ್ಣಂಚಿನ ಹನಿಗೆ ಕಾರಣವಾದ ನಿನ್ನ ಬಗೆಗೊಂದು ಅವ್ಯಕ್ತ ಭಾವ ಕೊನೆಯವರೆಗೂ ಕೊರಗುವಂತೆ ಇರಬಾರದಷ್ಟೇ!ಮದುವೆಗೆ ಎಲ್ಲಿದ್ದರೂ ಬಂದೇ ಬರುವೆ.
take care..
"ಸ್ನೇಹ "...

ಬರೆದು ಮುಗಿಸಿ ಪತ್ರ ನಾಳೆಯೊಳಗೆ ಮನುವಿನ ಕೈ ಸೇರುತ್ತದೆ ಎಂದು ಖಾತ್ರಿಯಾದ ಮೇಲೆ ಮಾಮನಿಗೆ ಫೋನ್ ಮಾಡಿ ಬೆಳಿಗ್ಗೆನೆ ಬರಲಿರುವೆ ಎಂದು ತಿಳಿಸಿದೆ.ಆಮೇಲೆ ಎಂದರೆ ನನ್ನ ನಿರ್ಧಾರ ಬದಲಾಗಬಹುದು.ಲಗ್ಗೇಜ್ ಪ್ಯಾಕ್ ಮಾಡುತ್ತಾ ರಾತ್ರಿಯಾಗತೊಡಗಿತು..ಒಳಗೆ ಅಮ್ಮ ಫೋನ್ ನಲ್ಲಿ ತನ್ನ ಅಣ್ಣನ ಹತ್ತಿರ ಹೇಳುತ್ತಿದ್ದರು ಏನು ಹುಡಿಗಿಯೋ  ಮುಂದಿನ ತಿಂಗಳು ಹೋಗ್ತೀನಿ ಅಂತಿದ್ದೊಳು ಈಗ ನಾಳೆನೇ ಹೋಗ್ತಾಳಂತೆ..ಅರ್ಥ ಮಾಡ್ಕೊಳ್ಳೋಕೆ ಆಗಲ್ಲ ಈಗಿನವರನ್ನ...ತೆಗೆದುಕೊಂಡ ಧೃಡ ಮತ್ತು ಸ್ಪಷ್ಟ ನಿರ್ಧಾರದಿಂದ ಮನಸ್ಸು ತುಂಬಾನೇ ಹಗುರಾಗಿತ್ತು .ಪಕ್ಕದ ಸಮುದ್ರದ ತೀರ ನೆನಪಾಯ್ತು.ಯಾಕೋ ಹೋಗಬೇಕೆನಿಸಲಿಲ್ಲ..ಹೋದರೆ ಆ ತೀರದ ಹೆಜ್ಜೆ ಗುರುತುಗಳಲ್ಲಿ ಮನು, ಸಹನಾರ ಹೆಜ್ಜೆಗುರುತಿನ ಪಕ್ಕದಲ್ಲಿರುವ ನನ್ನ ಹೆಜ್ಜೆಯ ಅಸ್ತಿತ್ವದ ಸೆಲೆ ಕಾಣದೆನೋ...ಕತ್ತೆತ್ತಿ ರಾತ್ರಿಯಾಗಸವನ್ನು ನೋಡಿದೆ ..ನಕ್ಷತ್ರಗಳು ಕೂಡಾ ಮೊದಲಿನಂತೆ ಮನಸನ್ನು ಕೆಣಕದೆ ಅವುಗಳ ಪಾಡಿಗೆ ಅವು ಸುಮ್ಮನೆ ಮಿನುಗುತಿದ್ದವು !
 

Rating
No votes yet

Comments