ಅಕ್ಷರ - ಎಷ್ಟು ಬೇಕು?
ಶ್ರಾವಣದ ಒಂದು ಉತ್ಕೃಷ್ಟ ಸಂಡೇ ದಿವಸ ವ್ಯರ್ಥ ಹೋಗಲು ಬಿಡದಂತೆ ಇಲ್ಲಿ ಹಾಜರಿರುವ ಸಹ ವಾಕ್ಪಟುಗಳಿಗೆಲ್ಲ ನಮಸ್ಕಾರ. ಇದೇನು ಮಲ್ಟಿಲಿಂಗ್ವಲ್ ಮಿಸಳಭಾಜಿ ನಮಸ್ಕಾರ ಅಂತಿರ? ನನ್ನ ಇಂದಿನ ವಿಷಯಕ್ಕೆ ಸೂಕ್ತವಾಗಿದೆ ಅಂದುಕೊಂಡಿರುವೆ! ಆ ವಾಕ್ಯದಲ್ಲಿ ಸಂಸ್ಕೃತ ಕನ್ನಡ ಹಿಂದಿ ಮತ್ತು ಇಂಗ್ಲೀಶ್ ಶಬ್ದಗಳಿವೆ. ಆ ನಾಲ್ಕು ಭಾಷೆಗಳ ಲಿಪಿ ಉಪಯೋಗಿಸಿ ನಾನು ನುಡಿದಂತೆ ಆ ವಾಕ್ಯವನ್ನು ಬರೆಯಲಾದೀತೆ? ಅನುವಾದಿಸಿ ಅಲ್ಲ, ಬರಿ ಲಿಪಿ ಉಪಯೋಗಿಸಿ. ಕನ್ನಡದಲ್ಲಿ ಬರೆಯ ಬಹುದು. ಇಂಗ್ಲೀಷಿನಲ್ಲಿ ಬರೆಯಲಾಗದು, ಇಂಗ್ಲೀಷ್ ಆಡಿದಂತೆ ಬರೆಲಾಗುವ ಭಾಷೆ ಅಲ್ಲ. ಸಂಸ್ಕೃತ ಮತ್ತು ಹಿಂದಿಗಳೆರಡೂ ದೇವನಾಗರೀ ಲಿಪಿ ಬಳಸುತ್ತವೆ. ಆ ಲಿಪಿಯಲ್ಲಿ ’ಒ, ಳ’ ಅಕ್ಷರ ಇಲ್ಲ. ಆದ್ದರಿಂದ ಈ ವಾಕ್ಯವನ್ನ ಇಂಗ್ಲೀಶು/ಸಂಸ್ಕೃತ/ಹಿಂದಿಯಲ್ಲಿ ಬರೆಯಲಾಗದು. ವಾವ್, ಕನ್ನಡದ ವರ್ಣ ಮಾಲೆ ಗ್ರೇಟ್ ಅಲ್ವಾ? ಹೌದು, ಆದರೆ ವಿಷಯ ಅದಲ್ಲ. ಒಂದು ಭಾಷೆಯ ಶಬ್ದಗಳನ್ನ ಇನ್ನೊಂದು ಭಾಷೆಯ ಲಿಪಿಯಲ್ಲಿ ಬರೆಯಬೇಕು ಅನ್ನುವದೇ ಅಷ್ಟು ಸಮಂಜಸವಲ್ಲ ಅನಿಸುವದಿಲ್ಲವೆ?
ಒಂದು ಭಾಷೆಯಲ್ಲಿ ವಸ್ತು/ವ್ಯಕ್ತಿ/ವಿಷಯಗಳನ್ನ ಹೇಳಲಿಕ್ಕೆ ಶಬ್ದಗಳಿರುವಂತೆ, ಶಬ್ದಗಳಿಗೆ ಸಂಕೇತಗಳಾಗಿ ಅಕ್ಷರಗಳಿರುತ್ತವೆ. ಆಕಳು ಎನ್ನುವ ಶಬ್ದ ಆಕಳು ಎನ್ನುವ ಪ್ರಾಣಿಯನ್ನ ಹೇಳಿದರೆ ’ಆ, ಕ, ಳು’ ಗಳು ಆ ಶಬ್ದವನ್ನ ’ತೋರಿಸುವ’ ಅಕ್ಷರಗಳು. ಒಂದು ಭಾಷೆ ಅಕ್ಷರಗಳನ್ನ ಹೇಗೆ ಗುರುತಿಸಿಕೊಳ್ಳುತ್ತದೆ? ಸಂಸ್ಕೃತದಂತಹ, ಸ್ವಚ್ಛ, ಸ್ಪಷ್ಟ ಉಚ್ಚಾರಣೆಗೆ ಬಹಳ ಮಹತ್ವ ಕೊಡುವ ಭಾಷೆ ಅದರಲ್ಲಿ ಹುಟ್ಟುವ ಪ್ರತಿ ಶಬ್ದದ ಸ್ವತಂತ್ರ ತುಣುಕುಗಳನ್ನ, ಅವು ಬಾಯಿಯಲ್ಲಿ ಎಲ್ಲಿ ಹುಟ್ಟುತ್ತವೆ ಎನ್ನುವದನ್ನ ಗುರುತಿಸಿಕೊಳ್ಳುವದರ ಮೂಲಕ ಅಕ್ಷರಗಳನ್ನ ಡಿಫೈನ್ ಮಾಡಿಕೊಳ್ಳುತ್ತದೆ. ಸಂಸ್ಕೃತದ ಒಂದು ಶಿಕ್ಷಾ ಕ್ರಮದಲ್ಲಿ ೬೩ ಅಥವಾ ೬೪ ಅಕ್ಷರಗಳಿದ್ದವಂತೆ. ಅದರಲ್ಲಿ ಹೃಸ್ವ ದೀರ್ಘ ಸ್ವರಗಳ ಜೊತೆಗೆ ಪ್ಲುತ ಎನ್ನುವ ಮೂರು ಮಾತ್ರೆಯ ಸ್ವರಗಳಿವೆ. ಹಾಗೇ ಅಂ ಅಃ ಗಳ ಜೊತೆ ಇನ್ನೆರಡು ವಿಸರ್ಗಗಳಿವೆ. ಅನುನಾಸಿಕಗಳ ಜೊತೆ ಸೇರಿದ ನಾಲ್ಕು ಯಮಾಕ್ಷರಗಳು ಅಥವಾ ನಾಸಿಕ್ಯಗಳಿವೆ. ತಾಂತ್ರಿಕ ಸಂಸ್ಕೃತದಲ್ಲಿ (ಅಥವಾ ತಂತ್ರಶಾಸ್ತ್ರದಲ್ಲಿ) ೫೦ ಅಥವಾ ೫೧ ಅಕ್ಷರಗಳಿವೆ. ಇಲ್ಲಿ ಪ್ಲುತಗಳನ್ನು ಬಿಡಲಾಗಿದೆ, ಹಾಗೇ ಅನುನಾಸಿಕ್ಯಗಳನ್ನೂ. ಇಲ್ಲಿ ೧೬ ಸ್ವರಗಳು, ೨೫ ಸ್ಪರ್ಷಾಕ್ಷರಗಳು (ವರ್ಗೀಯ ವ್ಯಂಜನಗಳು) ಮತ್ತು ೧೦ ವ್ಯಾಪಕಾಕ್ಷರಗಳು. ಇಲ್ಲಿ ’ಳ ಮತ್ತು ಕ್ಷ’ ಗಳನ್ನ ಸ್ವತಂತ್ರ ಅಕ್ಷರಗಳೆಂದು ಎಣಿಸುತ್ತಾರೆ. ಈ ಎಲ್ಲ ಅಕ್ಷರಗಳಿಗೂ ಒಬ್ಬ ಅಭಿಮಾನಿ ದೇವತಾ ರೂಪವಿದೆ. ಆಯಾ ಅಕ್ಷರಗಳಲ್ಲಿ ಆಯಾ ರೂಪವನ್ನಿಟ್ಟು ಉಪಾಸನೆ ಮಾಡುವದು ಮಾತೃಕಾ ನ್ಯಾಸ ಅನಿಸಿಕೊಳ್ಳುತ್ತದೆ. ’ಅ ಅಗಸ, ಆ ಆನೆ, ಇ ಇಲಿ’ ಎನ್ನುವ ಕನ್ನಡ ವರ್ಣಮಾಲೆಯ ಪಟದಂತೆ ಇಲ್ಲಿ ’ಅ ಅನಂತ ಆ ಆನಂದ ಇ ಇಂದಿರೇಶ ಎನ್ನುವ ಪಟ ಮಾಡಬಹುದು. ಆದರೆ ಸಂಸ್ಕೃತದ ಈ ವರ್ಣಮಾಲೆಯಲ್ಲಿ ಹೃಸ್ವ ’ಎ ಒ’ ಗಳಿಲ್ಲ. ಈಗಿನ ಸಂಸ್ಕೃತ ವರ್ಣಮಾಲೆಯಲ್ಲಿ ’ಳ’ ಕೂಡ ಇಲ್ಲ (ಎ ಇರುವಂತಿದೆ). ’ಎ ಒ ಳ’ ಗಳು ಭಾಷೆಯಲ್ಲೇ ಇಲ್ಲ ಅಂತಲ್ಲ. ಬಹುಲ/ಬಹಳ, ಕಾಲ/ಕಾಳ ದಂತಹ ಶಬ್ದಗಳು, ಋಗ್ವೇದದ ’ಅಗ್ನಿಮೀಳೆ ಪುರೋಹೀತಮ್’ ಎನ್ನುವ ಸೂಕ್ತ ಎಲ್ಲ ’ಳ’ ಇರುವದನ್ನ ಹೇಳುತ್ತವೆ. ಹಾಗೇ ಸಂಗೀತದಲ್ಲಿ ೧ ಮಾತ್ರೆಯ ’ಎ ಒ’ ಗಳೂ ಇವೆ. ಬನ್ನಂಜೆ ಗೋವಿಂದಾಚಾರ್ಯರು ಮಧ್ವಾಚಾರ್ಯರ ’ಅತಿಮತ ತಮೊಗಿರಿ ಸಮಿತಿ ವಿ ಭೇದನ| ಜಗದೆಕ ಕಾರಣ ರಮ ರಮ ರಮಣಾ’ ಎನ್ನುವ ದ್ವಾದಶ ಸ್ತೋತ್ರದ ಉದಾಹರಣೆ ಕೊಡುತ್ತಾರೆ.
ಕನ್ನಡದಲ್ಲಿ ಸಂಸ್ಕೃತದ ಬಹಳಷ್ಟು ಅಕ್ಷರಗಳಿವೆ. ಕನ್ನಡದ ’ಎ ಒ ಳ’ ಗಳು ಇವೆ. ಹಳೆಗನ್ನಡದ ’ಶಕಟ ರೇಫವನ್ನೂ, ರಳ ಮತ್ತು ಕ್ಷಳಗಳನ್ನೂ ಕೈ ಬಿಡಲಾಗಿದೆ ಹಾಗೆಯೇ ಸಂಸ್ಕೃತದ ’ೠ, ಲೃ’ಗಳನ್ನೂ ಇಟ್ಟುಕೊಂಡಿಲ್ಲ. ಋ ಕೂಡ ಬಿಡಬೇಕು ಎನ್ನುವ ವಾದವೂ ಇದೆ. ಕನ್ನಡಕ್ಕೆ ಸಂಸ್ಕೃತ ತಾಯಿಯಾದ್ದರಿಂದ ಅಷ್ಟು ಸಂಸ್ಕೃತದ ಅಕ್ಷರಗಳಿರುವದು ಸ್ವಾಭಾವಿಕ ಅನ್ನಬಹುದು. ಆದರೆ ಕನ್ನಡ ಸಂಸ್ಕೃತದಿಂದ ಹುಟ್ಟಿದ್ದಲ್ಲ. ಕನ್ನಡ ದ್ರಾವಿಡ ಭಾಷಾ ಸಮೂಹಕ್ಕೆ ಸೇರಿದ್ದು. ತಮಿಳು, ತೆಲುಗು ಮಲಯಾಳಗಳು ಅದರ ಜ್ಞಾತಿ ಭಾಷೆಗಳು. ಈ ಭಾಷೆಗಳು ಸಂಸ್ಕೃತದಿಂದ ಬಹಳಷ್ಟು ಪದಗಳನ್ನ ಆಮದು ಮಾಡಿಕೊಂಡಿದ್ದರೂ, ಇವುಗಳದ್ದೇ ಆದ ಪದ ಸಮೂಹವೂ ಸಾಕಷ್ಟು ದೊಡ್ಡದಾಗಿದೆ. ಕನ್ನಡದದ್ದೇ ಆದ ತಂದೆ, ತಾಯಿ, ಅಣ್ಣ, ತಮ್ಮ ಎನ್ನುವ ಸಂಬಂಧವಾಚಿ ಪದಗಳಿವೆ. ಕೈ ಕಾಲು ಕಿವಿ ಮುಂತಾದ ದೇಹದ ಅಂಗ ಹೇಳುವ ಪದಗಳಿವೆ. ಒಂದು ಎರಡು ಇತ್ಯಾದಿ ಸಂಖ್ಯಾವಾಚಿ ಪದಗಳಿವೆ. ವಾಕ್ಯ ರಚನಾ ಕ್ರಮ ಬೇರೆ ಇದೆ. ಅದು ಇದು ಉದು ಇತ್ಯಾದಿ ಸರ್ವನಾಮಗಳಿವೆ. ಇಂತಹವುಗಳನ್ನಾಧರಿಸಿ ಕನ್ನಡ ಸಂಸ್ಕೃತದಿಂದ ಹುಟ್ಟಿದ್ದಲ್ಲ ಎನ್ನುವದನ್ನ ಭಾಷಾ ಶಾಸ್ತ್ರಜ್ಞರು ಕಂಡುಕೊಂಡಿದ್ದಾರೆ. ಕನ್ನಡದ ಈಗಿನ ವರ್ಣಮಾಲೆಯಲ್ಲಿರುವ ಎಲ್ಲ ಅಕ್ಷರಗಳನ್ನೂ ಕನ್ನಡಿಗರು ಬಳಸುತ್ತಾರೆಯೆ? ಕನ್ನಡದ ಮೂಲ ಶಬ್ದಗಳಲ್ಲೂ ಅವುಗಳ ಉಪಯೋಗ ಆಗುತ್ತದೆಯೆ ಎಂದು ಪ್ರಶ್ನೆ ಕೇಳಿದರೆ ಉತ್ತರ ’ಇಲ್ಲ’ ಎಂದೇ ಹೇಳಬೇಕಾಗುತ್ತದೆ. ಕನ್ನಡ ನಿಘಂಟಿನಲ್ಲಿ ’ದೇಸಿ’ ಶಬ್ದಗಳನ್ನ ಹುಡುಕಿದಾಗ ಕನ್ನಡದ್ದೇ ಆದ ಶಬ್ದಗಳಲ್ಲಿ ಈಗಿರುವ ಎಲ್ಲ ಅಕ್ಷರಗಳ ಬಳಕೆ ಆಗುವದಿಲ್ಲ ಎಂದು ಗೊತ್ತಾಗುತ್ತದೆ. ಹಾಗಿದ್ದರೆ ಹೆಚ್ಚಿನ ಅಕ್ಷರಗಳು ಬಂದು ಸೇರಿದ್ದು ಹೇಗೆ? ಹೇಗೆಂದರೆ ಕನ್ನಡದ ವ್ಯಾಕರಣ ಪಂಡಿತರು ಪಾಣಿನಿಯನ್ನ ಅನುಸರಿಸಿದರು ಮತ್ತು ಸಂಸ್ಕೃತ ಅಕ್ಷರಗಳನ್ನ ಕನ್ನಡಕ್ಕೆ ತಂದಾಗ ಮೂಲ ರೂಪದಲ್ಲೇ ತರಬೇಕು ಎನ್ನುವ ನಿಯಮ ಮಾಡಿಕೊಂಡಿದ್ದರಿಂದ.
ಅಂದರೆ ಕನ್ನಡಿಗರ ನಾಲಿಗೆ ಸಹಜವಾಗಿ ನುಡಿಯಬಹುದಾದ ಶಬ್ದಗಳನ್ನಷ್ಟೇ ಕನ್ನಡ ಲಿಪಿಯಲ್ಲಿ ಸಂಕೇತಿಸಬೇಕೆಂದರೆ ಈಗಿರುವ ೪೮/೪೯ ಅಕ್ಷರಗಳು ಬೇಕಿಲ್ಲವೆ ಎನ್ನುವ ಪ್ರಶ್ನೆ ಬಂದರೆ ಉತ್ತರ ’ಹೌದು’ ಎಂದೇ ಹೇಳಬೇಕಾಗುತ್ತದೆ. ಏಕೆಂದರೆ ಕನ್ನಡ ಪದಗಳಲ್ಲಿ ಮಹಾಪ್ರಾಣಗಳ ಉಪಯೋಗ ಇಲ್ಲ, ಶ/ಷ ಗಳ ವ್ಯತ್ಯಾಸವಿಲ್ಲ, ನ/ಣ/ಮ ಬಿಟ್ಟರೆ ಇತರ ಅನುನಾಸಿಕಗಳ ಅವಶ್ಯಕತೆಯಿಲ್ಲ. ಐ ಔ ಅಕ್ಷರಗಳಿಗೆ ಕನ್ನಡದ್ದೇ ’ಅಯ್’ ಮತ್ತು ’ಅವ್’ ಉಪಯೋಗಿಸಬಹುದು. ಉತ್ತರ ಕರ್ನಾಟಕದಲ್ಲಿ (ಹಾಗೆ ಕರ್ನಾಟಕದ ಇತರ ಭಾಗಗಳಲ್ಲೂ; ಅವರವರ ಮನೆಯ ಕನ್ನಡವನ್ನನುಸರಿಸಿ) ಮಹಾಪ್ರಾಣಗಳನ್ನು ಬಳಸುತ್ತಾರಾದರೂ ಎಲ್ಲ ಸಂದರ್ಭದಲ್ಲೂ ಸರಿಯಾಗೇ ಬಳಸುತ್ತಾರೆ ಎಂದೇನೂ ಇಲ್ಲ. ಅಗಾಧ ಎನ್ನುವದು ಮಾತಿನಲ್ಲಿ ಅಘಾದ ಆಗಬಹುದು. ಆಷಾಢ ಆಶಾಡವಾಗುವದೇ ಹೆಚ್ಚು. ಶ/ಷ ದ ವ್ಯತ್ಯಾಸ ಆಡು ಮಾತಿನಲ್ಲಿ ಗೊತ್ತಾಗುವದಿಲ್ಲ. ಅದೇ ರೀತಿ ನ/ಣ/ಮ ಬಿಟ್ಟರೆ ಉಳಿದ ಅನುನಾಸಿಕಗಳ ಉಪಯೋಗ ಇಲ್ಲವೇ ಇಲ್ಲ ಅನ್ನ ಬಹುದು. ಅಃ ಎನ್ನುವ ವಿಸರ್ಗಾಕ್ಷರ ಬೇಕಿಲ್ಲ. ಹೀಗೆ ನೋಡಿಕೊಂಡು ಹೋದರೆ ೪೮ ಅಕ್ಷರಗಳ ಬದಲು ೩೨ ಅಕ್ಷರಗಳಲ್ಲಿ ಕನ್ನಡಿಗರು ಉಚ್ಚರಿಸುವಂತೆ ಶಬ್ದಗಳನ್ನ ಬರೆದು ಬಿಡಬಹುದು.
ಹಾಗೆ ಮಾಡಿದರೆ ಏನು ಪ್ರಯೋಜನ? ಈಗ ಕನ್ನಡ ಸಾಕಷ್ಟು ಸಂಸ್ಕೃತಮಯವಾಗಿದೆ. ವೈಜ್ಞಾನಿಕ ಯುಗದ ಹೊಸ ಶಬ್ದಗಳನ್ನು ಹುಟ್ಟು ಹಾಕಲು ಯಾವಾಗಲೂ ಸಂಸ್ಕೃತದ ಮೊರೆ ಹೋಗುವದು ಚಟವಾಗಿದೆ. ಹಾಗೆ ಹುಟ್ಟಿಸಿದ ಅಭಿಯಂತರ, ವಿದ್ಯುನ್ಮಾನ, ಕ್ಷಾರ, ಆಮ್ಲ, ಪತ್ರಹರಿತ್ತು, ಬೀಜೋಕ್ತಿ ಮುಂತಾದ ಪದಗಳು ಕನ್ನಡಕ್ಕೆ ಕನ್ನಡಿಗರಿಗೆ ಸಹಜವಾಗಿ ಒಗ್ಗುವದಿಲ್ಲ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಕಷ್ಟಪಟ್ಟು ಇವನ್ನು ಕಲಿತರೂ ಮುಂದೆ ಜೀವನದಲ್ಲಿ ಅವುಗಳನ್ನ ಅದೇ ಹೆಸರಿನಿಂದ ಕರೆಯುವದಿಲ್ಲ. ಇಂಗ್ಲೀಶ್ ಪದಗಳೇ ಸಹಜ ಎನಿಸಿಬಿಡುತ್ತವೆ. ಕನ್ನಡದ ಅಕ್ಷರಗಳನ್ನ ಕನ್ನಡಿಗರ ನಾಲಿಗೆ ಆಡುವಂತಷ್ಟೇ ಬರೆಯುವಂತೆ ಇಟ್ಟುಕೊಂಡಾಗ ಹೊರಗಿನಿಂದ ತಂದ ಪದಗಳನ್ನೂ ಕನ್ನಡಕ್ಕೆ ಒಗ್ಗಿಸಿಕೊಳ್ಳಬಹುದು. ಬರೀ ಅಕ್ಷರಗಳನ್ನ ಕೈ ಬಿಡುವದರಿಂದ ಇದಾಗುವದಿಲ್ಲ. ಕನ್ನಡಕ್ಕೆ ಕನ್ನಡದ್ದೇ ವ್ಯಾಕರಣವೂ ಬೇಕು. ಅವೆರಡರ ಬಲದಿಂದ ಸಹಜ ಕನ್ನಡಕ್ಕೆ ಒಗ್ಗುವ ಹೊಸ ಪದಗಳನ್ನ ಹುಟ್ಟಿಸಿಕೊಳ್ಳಬಹುದು. ಆಗ ನನ್ನಂತಹವನು ಅತಿ ಸಂಸ್ಕೃತ ಬಳಸದೇ, ಸರಳ ಕನ್ನಡದಲ್ಲಿ ’ಶ್ರಾವಣದ ಒಂದು ಸುಂದರ ಸಂಡೇ ಹುಸಿ ಹೋಗಲು ಬಿಡದಂತೆ ಇಲ್ಲಿ ಸೇರಿದ ಚತುರ ಮಾತುಗಾರರಿಗೆಲ್ಲ ವಂದನೆಗಳನ್ನ ತಿಳಿಸುತ್ತ’ ನನ್ನ ಮಾತನ್ನ ಶುರು ಮಾಡಬಹುದು, ಅಥವ ಮುಗಿಸಬಹುದು. ನಮಸ್ಕಾರ.
(ಆಕರಗಳು
೧. ’ಅಕ್ಷರ’ - ಪುಸ್ತಕಕ್ಕೆ ಬರೆದ ಬನ್ನಂಜೆ ಗೋವಿಂದಾಚಾರ್ಯರ ಮುನ್ನುಡಿ
೨. ಸಂಪದ, ಸಲ್ಲಾಪ, ಎನ್ ಗುರು ಮುಂತಾದ ಕನ್ನಡ ತಾಣಗಳಲ್ಲಿ ಶಂಕರ ಭಟ್ಟರ ಪುಸ್ತಕಗಳ ಕುರಿತು ನಡೆದ ವಿಚಾರ ವಿನಿಮಯ
೩. ಮಾಸ್ತಿ ವೆಂಕಟೇಶ ಅಯ್ಯಂಗಾರರ ’ನಮ್ಮ ನುಡಿ’ ಪುಸ್ತಕ
)
(ಕೊ.ಕೊಸರು - ಕನ್ನಡ ವರ್ಣಮಾಲೆಯಿಂದ ಮಹಾಪ್ರಾಣಗಳನ್ನ ಕೈ ಬಿಡುವದನ್ನ ನಾನು ಒಪ್ಪುವದಿಲ್ಲ. ಆದರೆ ಕನ್ನಡಕ್ಕೆ ಕನ್ನಡದ್ದೇ ವ್ಯಾಕರಣ ಬೇಕು ಹಾಗೂ ಕನ್ನಡದ ಹೊಸ ಪದಗಳ ಹುಟ್ಟು ಸಾಧ್ಯವಾದಷ್ಟೂ ಕನ್ನಡ ಮೂಲದಿಂದಲೇ ಆಗಿರಬೇಕು ಎನ್ನುವದನ್ನ ಬೆಂಬಲಿಸುತ್ತೇನೆ. ಇವೆರಡೂ ಪರಸ್ಪರ ವಿರುದ್ಧ ಅನಿಸಿಕೆಗಳು ಅನಿಸಬಹುದೇನೋ, ವಿರುದ್ಧವಾಗಿರಬೇಕಿಲ್ಲ ಎನ್ನುವದು ನನ್ನ ಅನಿಸಿಕೆ.
Comments
ಙ, ಞ,ೞ, ಱ ಇವಿಷ್ಟು ಬೇಕೇ ಬೇಕು!
In reply to ಙ, ಞ,ೞ, ಱ ಇವಿಷ್ಟು ಬೇಕೇ ಬೇಕು! by kpbolumbu
ಸೇರ್ಪಡೆ: ಙ, ಞ,ೞ, ಱ ಇವಿಷ್ಟು ಬೇಕೇ ಬೇಕು!
In reply to ಙ, ಞ,ೞ, ಱ ಇವಿಷ್ಟು ಬೇಕೇ ಬೇಕು! by kpbolumbu
ಉ: ಙ, ಞ,ೞ, ಱ ಇವಿಷ್ಟು ಬೇಕೇ ಬೇಕು!
In reply to ಉ: ಙ, ಞ,ೞ, ಱ ಇವಿಷ್ಟು ಬೇಕೇ ಬೇಕು! by Iynanda Prabhukumar
ಉ: ಙ, ಞ,ೞ, ಱ ಇವಿಷ್ಟು ಬೇಕೇ ಬೇಕು!
In reply to ಉ: ಙ, ಞ,ೞ, ಱ ಇವಿಷ್ಟು ಬೇಕೇ ಬೇಕು! by Iynanda Prabhukumar
ಉ: ಙ, ಞ,ೞ, ಱ ಇವಿಷ್ಟು ಬೇಕೇ ಬೇಕು!
In reply to ಙ, ಞ,ೞ, ಱ ಇವಿಷ್ಟು ಬೇಕೇ ಬೇಕು! by kpbolumbu
ಉ: ಙ, ಞ,ೞ, ಱ ಇವಿಷ್ಟು ಬೇಕೇ ಬೇಕು!
In reply to ಉ: ಙ, ಞ,ೞ, ಱ ಇವಿಷ್ಟು ಬೇಕೇ ಬೇಕು! by aniljoshi
ಉ: ಙ, ಞ,ೞ, ಱ ಇವಿಷ್ಟು ಬೇಕೇ ಬೇಕು!
In reply to ಙ, ಞ,ೞ, ಱ ಇವಿಷ್ಟು ಬೇಕೇ ಬೇಕು! by kpbolumbu
ಉ: ಙ, ಞ,ೞ, ಱ ಇವಿಷ್ಟು ಬೇಕೇ ಬೇಕು!
In reply to ಉ: ಙ, ಞ,ೞ, ಱ ಇವಿಷ್ಟು ಬೇಕೇ ಬೇಕು! by Prabhu Murthy
ಉ: ಙ, ಞ,ೞ, ಱ ಇವಿಷ್ಟು ಬೇಕೇ ಬೇಕು!
ಉ: ಅಕ್ಷರ - ಎಷ್ಟು ಬೇಕು?
In reply to ಉ: ಅಕ್ಷರ - ಎಷ್ಟು ಬೇಕು? by mnsrao
ಅಕ್ಷರ - ಇನ್ನೆಷ್ಟು ಬೇಕು?
In reply to ಉ: ಅಕ್ಷರ - ಎಷ್ಟು ಬೇಕು? by mnsrao
ಉ: ಅಕ್ಷರ - ಎಷ್ಟು ಬೇಕು?
In reply to ಉ: ಅಕ್ಷರ - ಎಷ್ಟು ಬೇಕು? by aniljoshi
ಉ: ಅಕ್ಷರ - ಎಷ್ಟು ಬೇಕು?