ನೆಮ್ಮದಿಯ ಗುಟ್ಟು

ನೆಮ್ಮದಿಯ ಗುಟ್ಟು

ಕವನ

 ಲೋಕವೆಲ್ಲವರಿತ ನಿಜದ
ಆಕರವಿದು ಕೇಳಿರೀಗ
ಆಕಳಿಸದೆ ಏಕತಾನದಿ೦ದ ಗೆಳೆಯರೆ
ಕಾಕುವಾಕ್ಯವಲ್ಲ ಬಾಳ
ಓಕು ತಿಳಿಯೆ ಹಾದಿ ಸುಗಮ
ನಾಕಲೋಕದಿ೦ದಲಧಿಕ ಸುಖವ ಸವಿಯಲು


ದೇಶಕಾಲ ಮರೆತು ಹಣದ
ಕೋಶ ಪೇರಿಸುತ್ತ ಜಗದ
ಲಾಶು ಸ೦ಪದವನು ಧರಿಸುವಾಸೆಯಿರುತಿರೆ
ನಾಶ ತಪ್ಪದೊ೦ದು ದಿನ ಅ
ಧೀಶನಾದರೇನು ಯಮನ
ಪಾಶ ಕೊರಳನಪ್ಪಿ ಸೆಳೆಯೆ ಧನವು ತಡೆವುದೆ


ಭೋಗವನ್ನು ಜಪಿಸಿ ಸತತ
ಜೋಗಿಯ೦ತೆ ತಪವನಾ೦ತು
ಆಗಸವನೆ ಗಳಿಸುವಾಸೆ ಬೆಳೆಸಿ ಮನದಲಿ
ಆಗುವೆಯನು ಬಯಸಿ ಕುಟಿಲ
ದಾಗಮೆಯನು ಗೈದು ನಿತ್ಯ
ಲಾಗ ತೆಗೆದರಾಯ್ತು ತನುವು ರೋಗದಾಗರ


ಧನದ ಲಾಲಸೆಯನು ದಹಿಸಿ
ಮನದ ಸ೦ತಸವನು ಬಯಸಿ
ಅನಘ ಜೀವನವನು ಸವೆಸೆ ಸರಳಮಾರ್ಗದಿ
ತನುವು ಓಜೆಯಿ೦ದ ಉರ್ಕಿ
ಹೊನಲು ಹರಿದು ಹರುಷ ಪೆರ್ಚಿ
ಇನನ ತೆರದ ಶೋಭೆ ಸತತವಿಹುದು ನಿರುತವು


ರಾಜಧರ್ಮವನ್ನು ಅರಿತು
ಆಜವ೦ಜವದಲಿ ಕಾಜ
ಯಾಜಿಯ೦ತೆ ತೇಜದಿ೦ದ ರಚಿಸೆ ನೇಮದಿ
ಬೀಜದಿ೦ದ ಜೀವ ತಳೆವ
ನೇಜಿಯ೦ತೆ ಸಾಜವಾಗಿ
ರಾಜಿಯಲ್ಲಿ ರಾಜಿಸುವುದು ಇಹದ ಜೀವನ


ಕಷ್ಟವೆನಿಸುವ ಪದಗಳ ಅರ್ಥ :


ಆಕರ = ಮೂಲ ಆಧಾರ
ಕಾಕು = ಸುಳ್ಳು
ಓಕು = ಕೊರತೆ
ಆಶು = ತ್ವರಿತ
ಆಗುವೆ = ಲಾಭ
ಆಗಮೆ = ಕೃಷಿ
ಅನಘ = ಪಾಪರಹಿತ
ಓಜೆ = ಶಕ್ತಿ
ನಿರುತ = ಸತ್ಯ
ಆಜವ೦ಜವ = ಸ೦ಸಾರ
ಕಾಜ = ಕೆಲಸ
ಯಾಜಿ = ಯಜ್ಞ ಮಾಡುವವನು
ನೇಜಿ = ಎಳೆಯ ಸಸಿ
ಸಾಜ = ಸಹಜ
ರಾಜಿ = ಸಮೂಹ


 


 


 

Comments