ದೃಷ್ಟಿ/ಕಣ್ಣು ಆಸರೆ ಅಂದ್ರೇನು?

ದೃಷ್ಟಿ/ಕಣ್ಣು ಆಸರೆ ಅಂದ್ರೇನು?

ನಮ್ಮನೆಗೆ ನಮ್ಮ ಪುಟಾಣಿ ಮಗಳನ್ನ ನೋಡಲು ಯಾರಾದ್ರು ನೆಂಟರು, ಸ್ನೇಹಿತರು ಬಂದು ಹೋದರೆ ಸಾಕು ಸಂಜೆ ಹೊತ್ತಿಗೆ ಮಗಳು ಒಂದೇ ಸಮ ಅಳಲು ಶುರುಮಾಡಿದರೆ ನಿಲ್ಲಿಸಲಾಗದು. ಆಕೆಗೆ "ಕಣ್ಣಾಸರೆಯಾಗಿದೆ" ಅಂತ ನಮ್ಮಮ್ಮ " ಉಪ್ಪು, ವೀಳ್ಯದೆಲೆ, ಅನ್ನ,ಮೆಣಸಿನಕಾಯಿ, ಹರಿಶಿಣ, ಕೆಂಡ, ನೀರು" ಉಪಯೋಗಿಸಿ ಅವರು ಕಲಿತ ರೀತಿಯಲ್ಲಿ ದೃಷ್ಟಿ ತೆಗೆಯುತ್ತಾರೆ. ನಂತರ ಮಗಳು ನೆಮ್ಮದಿಯಾಗಿ ಮಲಗುತ್ತಾಳೆ. ಈ ಪ್ರಕ್ರಿಯೆಯನ್ನ ಕಳೆದ ತಿಂಗಳಿನಿಂದ ಸುಮಾರು ಸಲ ನೋಡ್ತಾ ಇದರ ಬಗ್ಗೆ ಅನೇಕ ಪ್ರಶ್ನೆಗಳು ಮೂಡಿವೆ.
 
1. ದೃಷ್ಟಿ/ಕಣ್ಣು ಆಸರೆ ಎಂದರೇನು?
2. ಕಣ್ಣು ಆಸರೆ ಹೇಗೆ ಆಗತ್ತೆ? ಏಕೆ ಆಗತ್ತೆ?
3. ದೃಷ್ಟಿ ತೆಗೆಯುವಿಕೆಯ ವಿಧಾನಗಳೇನು?
4. ಉಪ್ಪು, ವೀಳ್ಯದೆಲೆ, ಅನ್ನ,ಮೆಣಸಿನಕಾಯಿ, ಹರಿಶಿಣ, ಕೆಂಡ, ಬೂದಗುಂಬಳಕಾಯಿ, ನಿಂಬೆ ಹಣ್ಣು ಇವುಗಳು ಹೇಗೆ ದೃಷ್ಟಿಯನ್ನ ತೆಗೆಯುತ್ತವೆ? ಈ ಪದಾರ್ಥಗಳಲ್ಲಿ ಅಂತಹ ಯಾವ ವಿಶಿಷ್ಟ ಗುಣಗಳಿವೆ?

ಮೊದಲೆರಡು ಪ್ರಶೆಗಳಿಗೆ ನನಗೆ ತಿಳಿದದ್ದು...
ನಮ್ಮ ಸೂಕ್ಷ್ಮ ಶರೀರದದಲ್ಲಿರುವ ಏಳು ಚಕ್ರಗಳು- ಸಹಸ್ರಾರ, ಆಜ್ಞಾ, ವಿಶುದ್ಧ, ಅನಾಹತ, ಮಣಿಪೂರ, ಸ್ವಾಧಿಸ್ಠಾನ, ಮೂಲಾಧಾರ. ಪ್ರತಿ ಚಕ್ರದಲ್ಲಿ ದೇಹಕ್ಕೆ ಸಾಕಾಗುವಷ್ಟು ಶಕ್ತಿ ಸಂಗ್ರಹವಾಗಿರುತ್ತದೆ. ಚಿಕ್ಕ ಮಕ್ಕಳಲ್ಲಿ ಎಲ್ಲಾ ಚಕ್ರಗಳು ತೆರೆದಿರೋದ್ರಿಂದ ಶಕ್ತಿಯ ಸಂಚಲನೆ ತುಂಬಾ ಸಲೀಸು. ಅಂದರೆ ಹೊರಗಿನಿಂದ ಬರುವ ಹೆಚ್ಚಿನ ಶಕ್ತಿಯನ್ನ ಸಂಗ್ರಹಿಸುವ/ಇರುವ ಶಕ್ತಿಯನ್ನ ಕ್ಷೀಣಿಸಿಕೊಳ್ಳುವ ಪ್ರಕ್ರಿಯೆ ಯಾವುದೇ ಅಡೆ ತಡೆಯಿಲ್ಲದೆ ನಡೆಯುತ್ತದೆ.

ಯಾರಾದ್ರೂ ಮಗುವನ್ನ ನೋಡಿ ಸಂತಸದಿಂದ "ವಾವ್! ಆ ಮಗು ಎಷ್ಟು ಮುದ್ದಾಗಿದೆ" ಅನ್ನೋ ಗುಣಾತ್ಮಕ ಶಕ್ತಿಯನ್ನ ವರ್ಗಾಯಿಸಿದಾಗ ಈ ಹೆಚ್ಚಿನ ಶಕ್ತಿಯನ್ನ ಸಂಗ್ರಹಿಸಿಕೊಂಡು ಮಗುವಿನ ಸೂಕ್ಷ್ಮ ಶರೀರದದಲ್ಲಿ ಆಗುವ ಶಕ್ತಿಯ ಅಸಮತೋಲನೆಯ ರೋಧನೆಯೇ ದೃಷ್ಟಿ.

ಬೇಜಾರಿನಿಂದ "ಛೇ! ಆ ಮಗು ಲಕ್ಷಣವಾಗೇ ಇಲ್ವಲ್ಲ" ಅನ್ನುವ ನಕಾರಾತ್ಮಕತೆಯಿಂದ ಚಕ್ರ ಇರುವ ಶಕ್ತಿಯನ್ನ ಕ್ಷೀಣಿಕೊಂಡಾಗ ಕೂಡಾ ಅಸಮತೋಲನೆ ಆಗತ್ತೆ.
ಇದು ನಾನು ನನ್ನದೇ ಆದ ರೀತಿಯಲ್ಲಿ ಅರ್ಥೈಸಿಕೊಂಡಿರೋದು :) ಎಷ್ಟು ಸರಿ ಅಂತ ಗೊತ್ತಿಲ್ಲ. ಇದರ ಬಗ್ಗೆ ನಿಮ್ಮ ವಿಚಾರಗಳೇನು ತಿಳಿಸಿ.

ಮೇಲಿನವಷ್ಟು ಮನುಷ್ಯರಿಗೆ ಸಂಬಂಧ ಪಟ್ಟಂತ ಪ್ರಶ್ನೆಗಳು. ಇನ್ನು ವಸ್ತುಗಳ ಬಗ್ಗೆ.....ಹೊಸ ಮನೆ, ಹೊಸ ಗಾಡಿಯನ್ನ ಕೊಂಡಾಗ ಕೂಡ ದೃಷ್ಟಿಯಾಗದಿರಲೆಂದು ಬೂದಗುಂಬಳಕಾಯಿಯನ್ನ ನಿವಾಳಿಸಿ ಒಡೆಯುತ್ತಾರೆ ಮತ್ತು ನಿಂಬೆ ಹಣ್ಣನ್ನ ಉಪಯೋಗಿಸುತ್ತಾರಲ್ವಾ.

5. ವಸ್ತುಗಳಿಗೆ ಹೇಗೆ ದೃಷ್ಟಿಯಾಗುತ್ತದೆ?

ಗೂಗಲಿಸಿ ನೋಡಿದೆ ಇದರ ಬಗ್ಗೆ ಯಾವ ವಿಚಾರಗಳು ಸಿಗಲಿಲ್ಲ, ಅದಕ್ಕೇ ಈ ಬರಹ :)

ವೈಜ್ಞಾನಿಕವಾಗಿ ಈ ವಿಚಾರಗಳ ಬಗ್ಗೆ ನಿಮಗೆ ಗೊತ್ತಿದ್ದರೆ ದಯವಿಟ್ಟು ಹಂಚಿಕೊಳ್ಳಿ.

ಧನ್ಯವಾದಗಳು
ಸವಿತ ಎಸ್ ಆರ್

Comments