ಮೌನ ಅಭಿಮಾನಿ

Submitted by ಗಣೇಶ on Thu, 11/29/2007 - 07:50

ಸಂಪದದಲ್ಲಿ ಅನೇಕ ಉತ್ತಮ ಲೇಖನಗಳು,ಕವಿತೆ,ಬ್ಲಾಗ್... ಬರುತ್ತಿವೆ.ಆದರೆ ಹೆಚ್ಚಿನವರು(ನನ್ನನ್ನೂ ಸೇರಿಸಿ) ಅದನ್ನು ಮೆಚ್ಚಿ ಒಂದು ವಾಕ್ಯವಾದರೂ ಪ್ರತಿಕ್ರಿಯೆ ಬರೆಯುವುದಿಲ್ಲ.


'ವಕ್ರನಾದ ಶುಕ್ರ'ಹಂಸಾನಂದಿಯವರ ಲೇಖನ ಚೆನ್ನಾಗಿತ್ತು.'ಮೋಹನ ರಾಗದ ಬಗ್ಗೆಯೂ ಲೇಖನಗಳು ಮೋಹಕವಾಗಿತ್ತು.(ನನ್ನ ಮಗ ಸಂಗೀತ ಜೂನಿಯರ್ ಪರೀಕ್ಷೆಗೆ ಕಟ್ಟಿದಾಗ ಸಂಗೀತಕ್ಕೆ ಸಂಬಂಧಿಸಿದ ಕೆಲ ಪುಸ್ತಕಗಳನ್ನು ತಂದಿದ್ದೆ.ಅವುಗಳಲ್ಲಿ ಇಂಗ್ಲೀಷ್ ಗ್ರಾಮರ್ ಕಲಿಸಿದಂತೆ ಸಂಗೀತ ಪಾಠಗಳಿತ್ತು.)ಆ ದಿನದಿಂದ ಬೇರೆ ರಾಗಗಳ ಬಗ್ಗೆ ಅವರ ಲೇಖನ ಬರುವುದನ್ನು ಕಾಯುತ್ತಿದ್ದೇನೆ ಅಷ್ಟೆ. ಪ್ರತಿಕ್ರಿಯೆ ಬರೆಯುವ ಗೋಜಿಗೆ ಹೋಗಲಿಲ್ಲ.


ಪತ್ರಿಕೆ,ವಾರಪತ್ರಿಕೆ,ಟಿ.ವಿ.,ರೇಡಿಯೋ,ಸಿನೆಮಾದಲ್ಲೂ ಹಲವು ವಿಷಯಗಳು ಮೆಚ್ಚಿಗೆಯಾಗುತ್ತದೆ.ನಾವು ಒಂದು ಲೇಖನ/ಕಾರ್ಯಕ್ರಮವನ್ನು ಮೆಚ್ಚಿ ಪತ್ರ ಬರೆದಿದ್ದು ಇದೆಯೋ? ಈಗ ಪತ್ರಿಕೆ,ವಾರಪತ್ರಿಕೆಗಳಲ್ಲಿ ಕೊನೇ ಪುಟಕ್ಕೆ ಮಾತ್ರ ಸೀಮಿತವಾಗಿದ್ದ ಸಿನೆಮಾ ವಿಷಯ ಪ್ರತಿ ಪುಟಗಳನ್ನು ಕಬಳಿಸುತ್ತಾ ಮೊದಲ ಪುಟಕ್ಕೂ ಆಗಮಿಸಿದೆ.


'ಚಂದನ' ಬಿಟ್ಟು ಉಳಿದ ಟಿ.ವಿ.ಯವರಿಗಂತೂ ಸಂಗೀತ,ಸಾಹಿತ್ಯ,ಹಾಸ್ಯವೆಲ್ಲಾ ಸಿನಿಮಾಕ್ಕೆ ಸಂಬಂಧಿಸಿದ್ದು ಮಾತ್ರ. ಕ್ರಿಕೆಟ್,ಸಿನೆಮಾ,ರಾಜಕೀಯದ ಅಭಿಮಾನಿಗಳು ಮಾತ್ರ ಕಾರ್ಯತಹ ಅಭಿಮಾನ ತೋರಿಸುವರು.ನಮ್ಮದೇನಿದ್ದರೂ ಕೇವಲ ಮೌನಾಭಿಮಾನ.


ಮೆಚ್ಚುಗೆ ನುಡಿ ನಮ್ಮ ಹೃದಯದಲ್ಲಿರುತ್ತದೆ.ನಾಲಗೆಗೆ ಬರುವುದಿಲ್ಲ. ತಮ್ಮ ತಮ್ಮ ಮನೆಯಲ್ಲಿ ಇನ್ನೂ ಅಧ್ವಾನ.ಹೃದಯದಲ್ಲಿ ಮೆಚ್ಚುಗೆ,ಬಾಯಲ್ಲಿ ಕಿಡಿನುಡಿ .......

fair and lovelyನೋ ಸ್ನೋವನ್ನೋ ಹಚ್ಚಿ 'ಇದ್ದುದರಲ್ಲೇ'ಸಿಂಗರಿಸಿ ಹೊರಟ ಮಗಳ ಸೌಂದರ್ಯ ಮೆಚ್ಚಿಗೆಯಾದರೂ...ಹೇಳುವುದು-"ಸುಮಾರು ಅರ್ಧ ಘಂಟೆಯಿಂದ ನೋಡುತ್ತಿದ್ದೇನೆ.ಮೇಕಪ್ ಮುಗೀತಾನೇ ಇಲ್ಲಾ..ನೀನು ಕಾಲೇಜಿಗೆ ಹೋಗುವುದಾ?ಫ್ಯಾಷನ್ ಶೋಗಾ?"


ನಾವು just pass ಆಗಿರುವುದು ಗೊತ್ತಿದೆ.ಮಗ ೯೦% ಆಸುಪಾಸಿನಲ್ಲಿ ಮಾರ್ಕ್ ತೆಗೆದುಕೊಳ್ಳುತ್ತಿರುವ ಬಗ್ಗೆ ಹೆಮ್ಮೆಯಿದೆ..."ಸಂಸ್ಕೃತದಲ್ಲಿ ಮಾರ್ಕ್ಸ್ ನೋಡು..ಏನು ಓದುತ್ತಾನೋ ಕಪಿ.ನಿಮ್ಮಮ್ಮನ ಹತ್ತಿರವೇ sign ಹಾಕಿಸಿಕೊ ಹೋಗು"ಎನ್ನುತ್ತೇವೆ.


ತಂದೆಯವರ ಕಾಲು ಬಿದ್ದು ಆಶೀರ್ವಾದ ಪಡಕೊಂಡು ಕೆಲಸಕ್ಕೆ ಹೊರಡಬೇಕು ಅಂದುಕೊಳ್ಳುತ್ತೇವೆ..."ಗ್ಯಾಸ್ ಬುಕ್ ಮಾಡಿದಿರಾ? ಒಂದು ವಾರದಿಂದ ಹೇಳುತ್ತಿದ್ದೇನೆ.ಅದೊಂದು....."ಎಂದು ಮುಖಗಂಟಿಕ್ಕಿಕೊಂಡು ಹೋಗುತ್ತೇವೆ.


ಕೆಲಸದಿಂದ ಬರುವಾಗ ಒಂದು ಮೊಳ ಮಲ್ಲಿಗೆ ತೆಗೆದುಕೊಂಡು ನಮ್ಮಷ್ಟೇ ದುಡಿದು ದಣಿದಿರುವ ಹೆಂಡತಿಗೆ ಕೊಡುವ ಮನಸ್ಸು........ಬ್ಯಾಗ್ ಅವಳ ಮೇಲೆ ಬಿಸಾಕಿ 'ತಲೆ ಸಿಡೀತಾ ಇದೆ.Tea ಆಗಿದ್ಯಾ..ಇಲ್ಲಾ tea ಪುಡಿ ತರಬೇಕಷ್ಟೆಯಾ?'ಕೊಂಕು ನುಡೀತೇವೆ ಯಾಕೆ?ಮದುವೆಗೆ ಮೊದಲು ನೂರಾರು ಬಾರಿ ಹೇಳುತ್ತಿದ್ದ'I LOVE YOU' ಗೋಡ್ರೇಜ್ನೊಳಗೆ ಭದ್ರವಾಗಿಟ್ಟಿರುತ್ತೇವೆ.ಯಾಕೆ ನಾಲಗೆಗೆ ಬರುವುದಿಲ್ಲಾ?


ತಾನೇ ೨-೩ ಖಾಯಿಲೆಯಿಂದ ಬಳಲುತ್ತಿದ್ದರೂ ಮಗ 'ತಲೆಸಿಡಿತಾ ಇದೆ'ಎಂದು ಹೇಳಿದ್ದ ಮಾತು ಕಿವಿಗೆ ಬಿದ್ದಕೂಡಲೇ 'ತಲೆ ನೋವಾ ಮಗನೇ. ಹಣೆಗೆ ವಿಕ್ಸ್ ಹಚ್ಚುತ್ತೇನೆ'ಎಂದ ತಾಯಿಗೆ 'ಏನೂ ಬೇಡ.ನೀನು ಸುಮ್ಮನಿದ್ದರೆ ಸಾಕು.'ಎನ್ನುತ್ತೇವೆ. "ಅಮ್ಮಾ,ನಿನ್ನ ಸೇವೆನೇ ನಾನು ಮಾಡಬೇಕು,ಅದು ಬಿಟ್ಟು ನಿನ್ನ ಹತ್ತಿರ ನಾನು ಕೆಲಸ ಮಾಡಿಸುವುದೇ" ಎಂಬ ಮಾತು ಹೃದಯಕ್ಕೂ ಬಾಯಿಗೂ ನಡುವೆ ಎಲ್ಲೋ ಕಟ್ ಆಗುತ್ತದೆ. ತಾಯಿಯನ್ನು ಹೃದಯದಲ್ಲಿ ಅತೀ ಪೂಜ್ಯ ಭಾವನೆಯಿಂದ ನೋಡುವೆವು.ಅವರ ಆರೋಗ್ಯ,ಆಹಾರ,ವಿಹಾರದ ಬಗ್ಗೆ ಗಮನಿಸುವುದೇ ಇಲ್ಲ. ನಾವು ಯಾಕೆ ಹೀಗೆ?

Comments