ಹೌದು, ನಾನು ನಾನಾಗಿಯೇ ಇರಬೇಕು!

ಹೌದು, ನಾನು ನಾನಾಗಿಯೇ ಇರಬೇಕು!

ಹೌದು, ನಾನು ನಾನಾಗಿಯೇ ಇರಬೇಕು!

 

ಕೆಲವೊಮ್ಮೆ ನಾನು ನನ್ನ ಸಾಮಾನ್ಯ ಮನೋಧರ್ಮಕ್ಕೆ ವಿರುದ್ಧವಾಗಿ ನಡೆದುಕೊಂಡು ಬಿಡುತ್ತೇನೆ. ನಂತರ ನನಗೇ ಆಶ್ಚರ್ಯವುಂಟಾಗುತ್ತದೆ. ಜೊತೆಗೇ ಖೇದವೂ.ಯಾವುದೋ ಮಾತಿಗೆ ಮಾತು ಬೆಳೆದಾಗ ಮಾನಸಿಕ ಒತ್ತಡದಿಂದಾಗಿ ಕೋಪ ಬರುತ್ತದೆ. ಕೋಪ ಬಂದಾಗ ಮನಸ್ಸು ಬುದ್ಧಿಯ ಹಿಡಿತದಲ್ಲಿ ಇರುವುದಿಲ್ಲ. ಹಾಗಾಗಿ ಬಾಯಿಯಿಂದ ಏನೇನೋ ಮಾತುಗಳನ್ನು ಹೊರಹಾಕುತ್ತದೆ ನನ್ನ ಮನಸ್ಸು. ನಂತರ ಮನಸ್ಸು ಶಾಂತವಾದಾಗ, ಬುದ್ಧಿ ಮನಸ್ಸಿನ ಮೇಲೆ ಮರು ಹಿಡಿತ ಸ್ಥಾಪಿಸಿದಾಗ, "ಛೇ... ಎಂಥಾ ಕೆಲಸವಾಯ್ತು ನನ್ನಿಂದ..." ಎನ್ನುವ ಭಾವನೆ ಬಿಡದೇ ಕಾಡತೊಡಗುತ್ತದೆ. ನಾನು ಆಡಿದ ಮಾತುಗಳು, ಆ ವ್ಯಕ್ತಿಗೆ ಸಲ್ಲಬಾರದ ಮಾತುಗಳಾಗಿರುವುದಿಲ್ಲ, ಆದರೆ, ನನ್ನ ವ್ಯಕ್ತಿತ್ವಕ್ಕೆ ಸಲ್ಲದವಾಗಿರುತ್ತವೆ. ಇದರಿಂದ ಅತೀವ ಕೊರಗು ಮನವನ್ನು ಆವರಿಸಿಕೊಂಡುಬಿಡುತ್ತದೆ. ಹೆಚ್ಚು ಕಡೀಮೆ ಇಪ್ಪತ್ತನಾಲ್ಕು ಘಂಟೆ ನನ್ನನ್ನು ಸತಾಯಿಸ ನಂತರವೇ ವಿರಮಿಸುವುದದು. ಆ ನಡುವೆ, ಆಹಾರ ರುಚಿಸದು, ಮಾತುಗಳೂ ಹಿಡಿಸವು, ನಿದ್ದೆಯೂ ಸರಿಯಾಗಿ ಬಾರದು.

ನಿನ್ನೆಯೂ ಹಾಗಾಯ್ತು. ಅಮ್ಮನವರಿಗೆ ಕರೆ ಮಾಡಿ ಮಾತಾಡುತ್ತಿದ್ದೆ. ಮಾತು ಮುಂದುವರಿಯುತ್ತಿದ್ದಾಗ ಅತ್ತಲಿಂದ ಮೌನ. ಕೊಂಚ ಹೊತ್ತು ಕಳೆದು, ಬೇರೊಬ್ಬ ವ್ಯಕ್ತಿಯ ಸ್ವರ ಕೇಳಿತು. ಅಮ್ಮ ಮತ್ತು ನಾನು ಆ ವ್ಯಕ್ತಿಯ ಬಗ್ಗೆಯೇ ಮಾತಾಡುತ್ತಿದ್ದೆವು. ದೂರವಾಣಿಯ ಸ್ವರ ಜೋರಾಗಿತ್ತು. ಹಾಗಾಗಿ ಮಾತುಗಳನ್ನು ಕೇಳಿಸಿಕೊಂಡ ಆವ್ಯಕ್ತಿ, ಚರವಾಣಿಯನ್ನು ಅಮ್ಮನಿಂದ ಕಸಿದುಕೊಂಡು ತನ್ನ ಕಿವಿಗೆ ಇಟ್ಟುಕೊಂಡಿದ್ದರು. ಆ ವ್ಯಕ್ತಿಗೂ ನನಗೂ ತೀರ ಆತ್ಮೀಯ ರಕ್ತ ಸಂಬಂಧ ಇದ್ದಿತ್ತಾದರೂ, ಈಗ್ಗೆ ಎರಡು ಮೂರು ವರುಷಗಳಿಂದ ಸಂಬಂಧದ ನಡುವೆ ಬಿರುಕುಮೂಡಿತ್ತು. ಹಾಗಾಗಿ, ನಾನೊಂದು ತೀರ ನೀನೊಂದು ತೀರ ಅನ್ನುವಂತಿದ್ದೆವು. ಯಾವುದೇ ರೀತಿಯ ಸಂಪರ್ಕವೂ ಇದ್ದಿರಲಿಲ್ಲ. ದೂರವಾಣೀಯಲ್ಲಿ ಮಾತನ್ನು ಕದ್ದಾಲಿಸಿದ್ದೂ ಅಲ್ಲದೇ, ಅಮ್ಮನಿಂದ ಕಸಿದುಕೊಂಡೂ ಮಾತಿಗಿಳಿದು ನನ್ನನ್ನು ಬೈಯ್ಯಲು ಶುರುಮಾಡಿದಾಗ, ಅದ್ಯಾಕೋ, ನನ್ನ ಬುದ್ಧಿಗೆ  ನನ್ನ ಮನಸ್ಸಿನ ಮೇಲಿದ್ದ ಹಿಡಿತ ಜಾರಿ ಹೋಗಿತ್ತು. ಮನ ಬಯಸಿದಂತೆ ಬೈದು ಬಿಟ್ಟೆ. ಬಹುಷಃ ಒಂದೆರಡು ಅವಾಚ್ಯ ಪದಗಳೂ ಹೊರಬಂದವು. ಅಲ್ಲದೇ, ನನಗಿಂತ ಹಿರಿಯರಾದ ಆ ವ್ಯಕ್ತಿಯೊಂದಿಗೆ, ನೇರವಾಗಿ ಏಕವಚನಕ್ಕೆ ಇಳಿದು ಬಿಟ್ಟಿದ್ದೆ.

ಮಾತು ಮುಗಿಸಿ ಅರೆ ಗಳಿಗೆ ಕಳೆದಾಗ, ಮನಸ್ಸಲ್ಲಿ ಮರುಧ್ವನಿಯಾಗುತ್ತಿದ್ದುದು "ನನ್ನ ಜೊತೆಗೆ ಏಕವಚನದಲ್ಲಿ ಮಾತಾಡ್ತಾ ಇದೀಯಾ..." ಎನ್ನುವ ಆ ವ್ಯಕ್ತಿಯ ಮಾತುಗಳು. ತಾನು ಎಷ್ಟೇ ಕೆಟ್ಟವನಾದರೂ, ತಾನು ಜೀವನದಲ್ಲಿ ಏನೇ ಮಾಡಿದ್ದರೂ, ಆ ವ್ಯಕ್ತಿಗೆ, ನಾನು ಬದಲಾಗುವುದು ಇಷ್ಟವಿಲ್ಲ. ನನ್ನಿಂದ ಅಂಥ ಧಾಟಿಯ ಮಾತುಗಳು ಆತನಿಗೆ ತೀರ ಅನಿರೀಕ್ಷಿತ. ಹಾಗಾಗಿ ಆತ ನನ್ನನ್ನು ಪ್ರಶ್ನಿಸಿದ್ದ, ಆ ಪರಿ ನನ್ನ ಕಿವಿಗಳಲ್ಲಿ ಮಾರ್ದನಿ ಮೂಡಿಸುತ್ತಿತ್ತು. ರಾತ್ರಿ ನಿದ್ದೆ ಬಾರದೇ ಒದ್ದಾಡಿದೆ. ಏಕೇ ಹೀಗೆ? ಆ ವ್ಯಕ್ತಿ ಮತ್ತು ಅವರಂಥವರು, ಏನೆಲ್ಲಾ ನಡೆದರೂ ಆರಾಮದ ಜೀವನ ನಡೆಸುತ್ತಿರುತ್ತಾರೆ. ಆದರೆ, ನನಗೆ ಮತ್ತು ನನ್ನಂಥವರಿಗೆ ಏಕೆ ಈ ರೀತಿಯ ಕೊರಗು ಕಾಡುತ್ತದೆ?

ಹೌದು, ನನಗೆ ನನ್ನದೇ ಆದ ಮನೋಧರ್ಮವಿದೆ. ನಾನು ಬಾಳಿ ಬಂದ ಶೈಲಿ ಇದೆ. ನಾನು ನಂಬಿಕೊಂಡು ಬಂದ ನನ್ನದೇ ತತ್ವಾದರ್ಶಗಳಿವೆ. ನಾನು ಅದರಿಂದ ವಿಮುಖನಾಗುವುದು ನನಗೇ ಪಥ್ಯವಲ್ಲ. ನಾನು ನಾನಾಗಿಯೇ ಇರಬೇಕು. ಅನ್ಯರು ಯಾವ ರೀತಿ ಬದಲಾದರೂ ನಾನು ಬದಲಾಗಬಾರದು. ಸಾಧ್ಯವಾದರೆ ಮೌನಕ್ಕೆ ಶರಣಾಗಬೇಕು. ಅದನ್ನು ಬಿಟ್ಟು, ವಾದ ವಿವಾದಗಳಿಗೆ ಇಳಿಯಬಾರದು. ಅದರಿಂದ ಅನ್ಯರಿಗೆ ನೋವಾಗುತ್ತದೋ ಇಲ್ಲವೋ ಅನ್ನುವುದಕ್ಕಿಂತಲೂ ಹೆಚ್ಚಾಗಿ, ನಾನೇ ನೋವು ಅನುಭವಿಸುತ್ತಾ ಕೊರಗಬೇಕಾಗುತ್ತದೆ. ನನ್ನಿಂದ ಅನ್ಯರಿಗೆ ನೋವಾದಾಗಲೂ ಅನ್ಯರಿಗಿಂತ ಹೆಚ್ಚಾಗಿ ನಾನೇ ನೋಯಿಸಿಕೊಂಡು ಕೊರಗುತ್ತಿರುತ್ತೇನೆ, ಅನ್ನುವುದು ನಾನು ಕಂಡುಕೊಂಡ ಸತ್ಯ. ನನ್ನಿಂದ ನೊಂದವರು ನನ್ನನ್ನು ಕ್ಷಮಿಸುತ್ತಾರೋ ಇಲ್ಲವೋ, ಆದರೆ, ನನ್ನನ್ನು ನಾನೇ ಕ್ಷಮಿಸಲಾಗದೇ ಒದ್ದಾಡುತ್ತಿರುತ್ತೇನೆ. ಸದಾ ನನ್ನನ್ನು ಕಾಡುವ ಕೊರಗು, ಆ ಒಳಗಿನ ನೋವು ನನ್ನನ್ನು ನಾನೇ ಕ್ಷಮಿಸಲು ಬಿಡುವುದಿಲ್ಲ.

ಹೌದು, ನಾವು ನಾನಾಗಿಯೇ ಇರಬೇಕು.

ನಾನು ನನ್ನಂಥೆಯೇ ಇರಬೇಕು.

ಅವರಿವರು ಬದಲಾದರೂ ನಾನು ಬದಲಾಗಬಾರದು, ನಾನೇಕೆ ಬದಲಾಗಬೇಕು?

ಅಲ್ಲವೇ?
*******



 
 

Rating
No votes yet

Comments