ರಾಜಸ್ಥಾನದ ನೆನಪುಗಳು
ರಾಜಸ್ಥಾನದ ನೆನಪುಗಳು
ನಾನು ನನ್ನ ಜೀವನದಲ್ಲಿ ಕರ್ನಾಟಕದ ಹೊರಗೆ ಕಾಲಿಟ್ಟಿದ್ದೇ, ನಾನು ಭಾರತೀಯ ವಾಯುಸೇನೆಯಲ್ಲಿ ಸೇರಿ ಬೆಂಗಳೂರಿನಲ್ಲಿ ಟ್ರೇನಿಂಗ ಮುಗಿಸಿ ಜೋಧಪುರಕ್ಕೆ ವರ್ಗವಾದಾಗ. ಅದು ೧೯೯೦ ರ ಜನೆವರಿ. ನನ್ನ ಅದ್ರಷ್ಟಕ್ಕೆ ನನ್ನ ಗೆಳೆಯನಿಗೂ ಜೋಧಪುರಕ್ಕೆ ವರ್ಗವಾಗಿತ್ತು. ಆಗ ಜೊಧಪುರಕ್ಕೆ ನೇರವಾದ ರೈಲು ಇರಲಿಲ್ಲ. ಅಂತೇ ನಾನು ಮತ್ತು ನನ್ನ ಗೆಳೆಯ ಬೆಂಗಳೂರು - ಅಹಮದಾಬಾದಿನ ರೈಲಿನಲ್ಲಿ ಕುಳಿತಿದ್ದಾಯ್ತು. ಜೀವನದಲ್ಲಿ ಮೊದಲಬಾರಿಗೆ ಅಷ್ಟು ದೂರದ ಗೊತ್ತಿಲ್ಲದ ಊರಿಗೆ ಪಯಣ, ಮನೆಯವರೆಲ್ಲರಿಂದ ಅಷ್ಟು ದೂರ ಹೋಗುವ ದುಗುಡ, ಗೆಳೆಯನೊಬ್ಬ ಜೊತೆಗಿದ್ದದ್ದೇ ಒಂದು ಧೈರ್ಯ. ದಾರಿಯಲ್ಲಿ ಗೆಳೆಯನ ಮನೆಯವರು ಕೊಟ್ಟಿದ್ದ ಒತ್ತು ಶಾವಿಗೆಯ ರುಚಿ ಇನ್ನೂ ನೆನಪಿನಿಂದ ಮಾಸಿಲ್ಲ.
ಜೋಧಪುರ ರಾಜಸ್ಥಾನದ ಎರಡನೆಯ ದೊಡ್ಡ ನಗರ. ರಾಜಸ್ಥಾನದ ರಾಜಧಾನಿ ಜಯಪುರವನ್ನು ಪಿಂಕ ಸಿಟಿ ಎಂದು ಕರೆದರೆ, ಜೋಧಪುರವನ್ನು ಸನ್ ಸಿಟಿ (ಸೂರ್ಯ ನಗರ) ಎಂದು ಕರೆಯುತ್ತಾರೆ. ತುಂಬ ಸುಂದರ ನಗರ ಎಲ್ಲ ಸವಲತ್ತುಗಳನ್ನೂ ಹೊಂದಿದೆ. ಪರ್ಯಟಕರಿಗೊಂದು ಆಕರ್ಷಣೀಯ ಸ್ಥಳ. ೧೪೫೯ ರಲ್ಲಿ ರಾವ್ ಜೋಧಾ ರಾಜನಿಂದ ಕಟ್ಟಿದ ಮಹರಾನಘರ ಕೋಟೆ, ಅಲ್ಲಿಯೇ ಹತ್ತಿರದಲ್ಲಿರುವ ಜಸವಂತ ಥಾಡಾ ಮತ್ತು ಇಪ್ಪತ್ತನೆಯ ಶತಮಾನದಲ್ಲಿ ಮಹಾರಾಜಾ ಉಮ್ಮೇದ ಸಿಂಘನಿಂದ ನಿರ್ಮಿತ ಊಮ್ಮೇದ ಭವನ್ ಪ್ಯಾಲೇಸ್, ಮಾರವಾರ ರಾಜಮನೆತನದವರ ಹಳೆಯ ರಾಜಧಾನಿ ಮಂಡೊರ, ೧೯೩೬ ರಲ್ಲಿ ಮಹಾರಾಜಾ ಸೂರ ಸಿಂಘ ನಿಂದ ನಿರ್ಮಿತ ಭಾಲಸಮಂದ ಕೆರೆ ಮತ್ತು ಅರಮನೆ, ಕೈಲಾನಾ ಕೆರೆ ಹೀಗೆ ಅನೇಕ ನೋಡತಕ್ಕ ಸ್ಥಳಗಳಿವೆ. ಇವೆಲ್ಲಕ್ಕೂ ಮಿಗಿಲಾಗಿ ಅಲ್ಲಿಯ ಜನಗಳ ಪ್ರೀತಿ ಮತ್ತು ವಾತ್ಸಲ್ಯ ಮರೆಯುವಂತೆಯೇ ಇಲ್ಲ.
ಇಂದಿಗೆ ಭಾರತೀಯ ವಾಯುಸೇನೆಯಲ್ಲಿ ಸೇರಿ ಇಪ್ಪತ್ತೊಂದು ವರುಷಗಳಾದವು, ಅಂತೆಯೇ ಸಾಕಷ್ಟು ಸ್ಥಳಗಳನ್ನು ಸುತ್ತಿದ್ದೂ ಆಯ್ತು. ಆದರೆ ಆ ನನ್ನ ಮೊದಲ ದಿನಗಳ ರಾಜಸ್ಥಾನದ ನೆನಪು ಅವಿಸ್ಮರಣೀಯ. ಅಲ್ಲಿಯ ಜನಗಳಲ್ಲಿರುವಷ್ಟು ಪ್ರೀತಿ, ಸಾಚಾತನವನ್ನು ನಾನು ಇನ್ನೆಲ್ಲಿಯೂ ಕಾಣಲಿಲ್ಲ. ಅಲ್ಲಿಗೆ ಹೋಗಿದ್ದು ಜನೆವರಿ ಎಂದೆನಲ್ಲ. ನನ್ನ ಮಧುರ ಅನುಭವ ಮೊದಲಾದದ್ದು ಮಾರ್ಚನಲ್ಲಿ. ಅಂದು ಹೋಳೀ ಹುಣ್ಣಿಮೆ. ನಾನು ಆ ದಿನ ರಾತ್ರಿ ಏಕಾಂಗಿಯಾಗಿ ಕುಳಿತಿದ್ದೆ. ನನ್ನ ಗೆಳೆಯ ಸರಕಾರೀ ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಿದ್ದ. ಮನಸ್ಸು ಮನೆಯನ್ನು ಮತ್ತು ಚಿಕ್ಕವನಾಗಿದ್ದಾಗ ಹಳ್ಳಿಯಲ್ಲಿ ಕಾಮನ ಹಬ್ಬದ ಸಂಭ್ರಮವನ್ನು ನೆನೆಯುತ್ತಿತ್ತು. ಆಗ ನಾವೆಲ್ಲ ಹುಡುಗರು ಸೇರಿ ಕಾಮನ ಹಬ್ಬಕ್ಕೆ ತಿಂಗಳಾನು ತಿಂಗಳು ರಾತ್ರಿಯೆಲ್ಲ ತಿರುಗಿ ಕಟ್ಟಿಗೆ, ಕುಳ್ಳು ಮುಂತಾದುವನ್ನು ಕದಿಯುತ್ತಿದ್ದೆವು. ಬೇಕಾದಷ್ಟು ಸಲ ಕೆಲ ಮನೆಗಳ ಗೇಟು ಬಾಗಿಲುಗಳೂ ಕಾಮನಿಗೆ ಆಹುತಿಯಾಗುತ್ತಿದ್ದವು. ಆ ದಿನಗಳಲ್ಲಿ ಒಂದು ಸಲ ಕಟ್ಟಿಗೆ ಮುಂತಾದವು ಕಾಮನ ಕಟ್ಟೆಗೆ ಬಂದು ಸೇರಿದರೆ ಅದನ್ನು ಯಾರೂ ವಾಪಸ್ಸು ತೆಗೆದುಕೊಂಡು ಹೋಗುತ್ತಿರಲ್ಲಿಲ್ಲ. ನಾನು ಸಮಯ ಕಳೆಯಲು ರಾಜಸ್ಥಾನದ ಹೋಳೀ ಹಬ್ಬವನ್ನು ನೋಡಲು ಹೊರಟೆ. ವಾಯುಸೇನಾ ಸ್ಥಳದಿಂದ ರತ್ನಡ ಸರ್ಕಲ್ ದಾಟಿ ಮುಂದೆ ಅಲ್ಲೊಂದು ಕಡೆಗೆ ಕಾಮಣ್ಣನನ್ನು ಸುಡುತ್ತಿದ್ದರು. ನಾನು ದೂರದಿಂದ ನೋಡುತ್ತಿದ್ದೆ. ಜನಗಳೆಲ್ಲ ಸೇರಿ ತುಂಬ ಉತ್ಸಾಹದಿಂದ, ಹರ್ಷೊಲ್ಲಾಸದಿಂದ ಹೋಳೀ ಆಚರಿಸುತ್ತಿದ್ದರು. ಆಗಲೇ ಅಪರಿಚಿತ ಹುಡುಗನೊಬ್ಬ ಬಂದು ನನ್ನನ್ನು ಪ್ರೀತಿಯಿಂದ ಮತನಾಡಿಸಿದ. ನಾನು ನನ್ನ ಪರಿಚಯ ಹೇಳಿದೊಡನೆ ನನ್ನನ್ನು ಕರೆದುಕೊಂಡು ಹೋಗಿ ತನ್ನೆಲ್ಲ ಗೆಳೆಯರಿಗೆ ಪರಿಚಯಿಸಿದ. ಅವರೆಲ್ಲ ನನ್ನನ್ನು ಆತ್ಮೀಯವಾಗಿ, ಈ ಊರು ನನ್ನದು ಇವರೆಲ್ಲ ನಮ್ಮವರೇ ಎಂಬ ಭಾವನೆ ಬರುವಂತೆ ಮಾತನಾಡಿಸಿದರು. ಕೆಲವೇ ಕ್ಷಣಗಳಲ್ಲಿ ನಾನು ಅವರ ಜೊತೆಯಲ್ಲಿ ಎಷ್ಟೋ ವರುಷಗಳ ಪರಿಚಯಿಸ್ಥನಂತೆ ಬೆರೆತು ಹೋದೆ. ಆ ದಿನ ಅವರು ನನ್ನನ್ನು ಅವರ ಮನೆಗಳಿಗೆ ಕರೆದುಕೊಂಡು ಹೋಗಿ ಅತಿಥಿ ಸತ್ಕಾರವನ್ನೂ ಮಾಡಿದರು. ಅಪರಿಚಿತನಾದ ನನ್ನೆಡೆಗೆ ಅವರು ತೋರಿದ ಪ್ರೀತಿ ಮರೆಯುವಂತೆಯೇ ಇಲ್ಲ.
ಇನ್ನೊಂದು ದಿನ ನನ್ನ ಹಳೆಯ ಹವ್ಯಾಸವಾದ ಚಿತ್ರ ಬರೆಯುವುದಕ್ಕೆ ಬಣ್ಣ ಖರಿದಿಸಲು ರೈಲು ನಿಲ್ದಾಣದ ಹತ್ತಿರದ ಅಂಗಡಿಯೊಂದಕ್ಕೆ ಹೋದೆ. ಅಂಗಡಿಯವ ಅತೀ ಆದರದಿಂದ ತನ್ನಲ್ಲಿದ್ದ ಸಾಮಗ್ರಿಗಳನ್ನು ತೋರಿಸಿದ. ನಾನೊಂದು ಕ್ಯಾಮ್ಲಿನ್ ವಾಟರ್ ಕಲರ್ ಡಬ್ಬ ಖರೀದಿಸಿದೆ. ನಾನು ಕಪ್ಪು ಬಣ್ಣವನ್ನು ಹೆಚ್ಚಾಗಿ ಉಪಯೋಗಿಸುತ್ತಿದ್ದುದರಿಂದ ಆ ಡಬ್ಬದಲ್ಲಿ ಒಂದು ಕಪ್ಪು ಬಾಟಲ್ ಹೆಚ್ಚಾಗಿ ಇರಿಸಿದೆ. ಅಂಗಡಿಯವನಿಗೆ ಹಣ ಕೊಟ್ಟು ಏನೋ ಕೆಲಸವಿದ್ದುದರಿಂದ ಸ್ವಲ್ಪ ಸಮಯದ ನಂತರ ಬಂದು ಡಬ್ಬ ತೆಗೆದುಕೊಂಡು ಹೋಗುವೆನೆಂದು ಹೇಳಿ ಹೋರಗೆ ಬಂದೆ. ಆದರೆ ಆಮೇಲೆ ಆ ಡಬ್ಬವನ್ನು ಅಲ್ಲಿಯೇ ಮರೆತು ನನ್ನ ಕೋಣೆಗೆ ಹಿಂದಿರುಗಿದೆ. ಅದಾದ ಎರಡೇ ದಿನಗಳಲ್ಲಿ ನಾನು ಸರಕಾರೀ ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಬೇಕಾಯಿತು. ನಾನು ಹಿಂದಿರುಗಿದ್ದು ಮೂರು ತಿಂಗಳ ನಂತರ. ನನಗೇನೂ ನನ್ನ ಆ ಬಣ್ಣದ ಡಬ್ಬ ತಿರುಗಿ ಸಿಗುವುದೆಂದು ಅನಿಸಿರಲಿಲ್ಲ. ಆದರೂ ಪ್ರಯತ್ನಿಸೋಣ ಎಂದು ಆ ಅಂಗಡಿಗೆ ಹೋದೆ. ಆತ ಎಂದಿನಂತೆ ಆದರದಿಂದ ಮಾತನಾಡಿಸಿದ. ನಾನು ಹೀಗೆ ಎಂದು ಹೇಳಿದೊಡನೆ, ಆತ ನೆನಪಿಸಿಕೋಂಡು ಆ ಡಬ್ಬದಲ್ಲಿ ಎರಡು ಕಪ್ಪು ಬಣ್ಣದ ಬಾಟಲ್ ಗಳಿರಬೇಕು ಎಂದು ತನ್ನ ಅಂಗಡಿಯಲ್ಲಿದ್ದ ಎಲ್ಲ ಡಬ್ಬಗಳನ್ನೂ ತೆಗೆಸಿ ನೋಡಿದ. ಅವುಗಳಲ್ಲಿತ್ತು ಆ ನನ್ನ ಬಣ್ಣದ ಡಬ್ಬ. ಅದನ್ನು ಆತ ಸಂತಸದಿಂದ ನನ್ನ ಕೈಲಿಟ್ಟ. ನಾನು ಆತನಿಗೆ ಧನ್ಯವಾದಗಳನ್ನು ಅರ್ಪಿಸಿದೆ. ಈ ರೀತಿಯ ಸಾಚಾತನವನ್ನು ಬೆರೆಡೆಗೆ ಕಣಬಹುದೇ?.
ನಾನು ಮತ್ತು ನನ್ನ ಗೆಳೆಯ ಶುದ್ಧ ಶಾಖಾಹಾರಿಗಳು. ನಮಗೆ ನಮ್ಮ ಕಡೆಯ ಊಟ ಬಿಟ್ಟರೆ ಉತ್ತರಭಾರತದ ಊಟ ರುಚಿಸುತ್ತಿರಲ್ಲಿಲ್ಲ. ಆದರೆ ಭಾರತೀಯ ವಾಯುಸೇನೆಯಲ್ಲಿ ನಮಗಾಗಿ ಬರೀ ದಕ್ಷಿಣ ಭಾರತದ ವ್ಯಂಜನಗಳು ಸಿಗುವುದು ಕನಸಿನ ಮಾತು. ಅಲ್ಲದೇ ನಮ್ಮ ಮೆಸ್ಸಿನಲ್ಲಿ ಕಾಲಿಡಲು ನಿಗಧಿಯಾದ ಸಮವಸ್ತ್ರ ಧರಿಸಿಯೇ ಹೋಗಬೇಕು. ರಾತ್ರಿಯೂಟಕ್ಕೆ ಬೇಸಿಗೆಯಲ್ಲಾದರೆ ಬಿಳಿಯ ಪ್ಯಾಂಟು, ಬಿಳಿಯ ಉದ್ದ ತೋಳಿನ ಅಂಗಿ ಹಾಗೂ ಕಾಲಿಗೆ ಕರಿಯ ಚರ್ಮದ ಶೂ. ಇನ್ನು ಚಳಿಗಾಲದಲ್ಲಾದರೆ ಫುಲ್ ಸೂಟ್ ನಲ್ಲಿ ಹೋದರೆ ಮಾತ್ರ ಪ್ರವೇಶ. ಈ ವಸ್ತ್ರಗಳ ಕಟ್ಟುನಿಟ್ಟಿನಿಂದಾಗಿ ಬಹಳಷ್ಟು ಸಲ ನಾವು ರಾತ್ರಿಯೂಟಕ್ಕೆ ಹೋಗುತ್ತಲೇ ಇರಲಿಲ್ಲ. ಜನತಾ ಹೋಟಲಿನ ಮಿರ್ಚಿ ವಢಾ, ಮೇವಾ ಕಚೋರಿ, ಪ್ಯಾಸ್ (ಈರುಳ್ಳಿ) ಕಚೋರಿ ಸಮೋಸಗಳು ನಮ್ಮ ಹೊಟ್ಟೆ ತುಂಬಿಸುತ್ತಿದ್ದವು.
ಜೋಧಪುರ, ಮತ್ತು ರಾಜಸ್ಥಾನ ಸುಂದರವಾಗಿ ಕಾಣುವುದಕ್ಕೆ ಇದ್ದ ಮತ್ತೊಂದು ಕಾರಣವೆಂದರೆ ಬಹುಶಃ, ನವದಾಂಪತ್ಯ ಪ್ರಾರಂಭವಾದದ್ದು ಜೋಧಪುರದಿಂದ. ಆಫೀಸರ್ ಮೆಸ್ಸಿನ ಊಟ ಸಾಕಾಗಿ ಬೇಗನೇ ಮದುವೆಯಾಗಿ ಸಂಸಾರ ಹೂಡಿದೆ. ಆ ದಿನಗಳಲ್ಲಿ ಜೋಧಪುರದಲ್ಲಿ ಸರಕಾರೀ ಮನೆ ಸಿಗುವುದಕ್ಕೆ ಹಲವು ವರುಷ ಕಾಯಬೇಕಿತ್ತು. ಅಂತೆಯೇ ಬಾಡಗೀ ಮನೆಯ ಅನ್ವೇಷಣೆ ಶುರುವಾಯಿತು. ಮನೆ ಸಿಗುವುದು ತುಂಬ ಸುಲಭವಲ್ಲವಾದರೂ, ನನ್ನ ಅದ್ರಷ್ಟಕ್ಕೆ ಸರಕಾರ ಕೊಡುತ್ತಿದ್ದ ಮಾಸಿಕ ಮನೆ ಭತ್ತೆಯ ದರದಲ್ಲಿಯೇ ತುಂಬ ಸುಂದರವಾದ ಶಾಸ್ತ್ರೀ ನಗರ ಬಡಾವಣೆಯಲ್ಲಿ ತುಂಬ ಸುಂದರವಾದ ಮನೆ ಸಿಕ್ಕಿತು. ತುಂಬ ಸುಂದರವಾದ ಸುಸಜ್ಜಿತ ಪ್ರತ್ಯೇಕವಾದ ಮನೆ. ಸುತ್ತಲೂ ಸಾಕಷ್ಟು ಸಾಕಷ್ಟು ಜಾಗ. ಮನೆಯ ಮುಂದೆ ಹಸುರಾದ ಹುಲ್ಲು ಮತ್ತು ಹೂದೋಟ. ಮನೆಯ ಹಿಂದುಗಡೆ ತರಕಾರಿ ಬೆಳೆಸಬಹುದಾದಷ್ಟು ಜಾಗ ಎಲ್ಲ ಇದ್ದವು. ಮನೆಯ ಮಾಲೀಕರು ಹತ್ತಿರದ ಊರಿನಲ್ಲಿ ವೈದ್ಯರಾಗಿದ್ದರು (ಪ್ಲಾಸ್ಟಿಕ್ಕ ಸರ್ಜರಿ ಸ್ಪೆಶಲಿಷ್ಟ್), ತುಂಬ ನಿಗರ್ವಿಯಾದ ಮನುಷ್ಯ. ಮನೆಯ ಬಾಡಿಗೆಯ ಬಗ್ಗೆ ಎಂದೂ ತಕರಾರು ಮಾಡಿದವರಲ್ಲ. ಮನೆಯ ಹಿಂದುಗಡೆ ಗರಾಜಿನ ಮೇಲೆ ಸಣ್ಣ ಕೋಣೆಯೋಂದನ್ನು ತಮ್ಮ ಸ್ವಂಥ ಉಪಯೋಗಕ್ಕಾಗಿ ಇಟ್ಟುಕೊಡಿದ್ದರು. ಆಗಾಗ ಕೆಲಸದ ನಿಮಿತ್ತ ಬಂದು ಹೋಗುತ್ತಿದ್ದರು. ಹಾಗೊಂದು ಸಲ ಬಂದಾಗ ತಾವೇ ಸ್ವಥಃ ಮನೆಯ ಹಿತ್ತಲಿನಲ್ಲಿ ರಾಜಸ್ಥಾನದ ದಾಲ್ ಭಾಟಿ ಮಾಡಿ ನಮಗೆಲ್ಲ ಊಟ ಹಾಕಿದ್ದರು. ಭಾಟಿ ಮಡಲು ಗೋದಿಯ ಹಿಟ್ಟಿನಿಂದ ಉಂಡೆಗಳನ್ನು ಮಾಡಿ ಬೆಂಕಿಯಲ್ಲಿ ಸುಟ್ಟು ಬೇಯಿಸುತ್ತಾರೆ. ಅದರ ಜೊತೆಗೆ ಐದು ತರಹದ ಬೇಳೆಗಳನ್ನು ಉಪಯೋಗಿಸಿ ಮಾಡಿದ ಪಂಚರಂಗೀ ದಾಲ್ ಮತ್ತು ಭಾಟಿ ನೆನೆಯುವಷ್ಟು ಶುದ್ಧವಾದ ತುಪ್ಪ, ತುಂಬ ಅದ್ಭುತವಾದ ರುಚಿ. ಸ್ವಥಃ ವೈದ್ಯರಾಗಿದ್ದೂ ತಾವೇ ರುಚಿಕಟ್ಟಾದ ಅಡುಗೆ ಮಾಡಿ ನಮಗೆ ಉಣಬಡಿಸಿದ್ದು ಮರೆಯಲಾಗದ ಅನುಭವ.
ಮದುವೆಯಾದ ಮೊದಲ ದೀಪಾವಳಿ ಮಾವನ ಮನೆಗೆ ಹೋಗಬೇಕಲ್ಲ, ಆದರೆ ರಜೆ ಸಿಗದಿದ್ದುದರಿಂದ ನಾವು ಅತ್ತೆ ಮಾವನವರನ್ನೇ ಜೋಧಪುರಕ್ಕೆ ಕರೆಸಿಕೊಂಡಿದ್ದೆವು. ನನ್ನ ರಜೆಯ ಅನುಭವ ನನ್ನ ಅತ್ತೆಯ ಮನೆಯವರಿಗೆ ತುಂಬ ಮೊದಲೇ ಪರಿಚಯವಾಗಿತ್ತು. ನನ್ನ ಮದುವೆಯ ನಿಶ್ಚಯ ಕಾರ್ಯ್ ನನ್ನ ಹೆಂಡತಿಯ ತವರೂರಾದ ಬೆಳಗಾವಿಯಲ್ಲಿ ನಿಶ್ಚಿತವಾಗಿತ್ತು. ಆದರೆ ನಾನು ಆಗ ರಾಜಸ್ಥಾನದ ಬಾಡಮೇರ ಜಿಲ್ಲೆಯ ಉತ್ತರಲೈ ಎಂಬಲ್ಲಿ ಕಾರ್ಯನಿರತನಾಗಿದ್ದೆ. ರಜೆ ಸಿಗದೇ ಹೋದದ್ದರಿಂದ ಹೇಗೋ ಕಷ್ಟಪಟ್ಟು ಒನ್ನ ವೇ ಎಸ್ ಟಿ ಡಿ ಯಲ್ಲಿ ನಾನು ನಾಳೆಯ ನಿಶ್ಚಿತಾರ್ಥಕ್ಕೆ ಬರಲಾಗುವುದಿಲ್ಲ ಎಂದು ಸಂದೇಶ ರವಾನಿಸಲು ಸಫಲನಾಗಿದ್ದೆ. ಶಾಸ್ತ್ರೀ ನಗರದಲ್ಲಿ ಸ್ವಲ್ಪ ಶ್ರೀಮಂತರ ಮನೆಗಳೇ ಹೆಚ್ಚಾಗಿದ್ದವು ಎಂದು ಹೇಳಬಹುದು. ಒಂದಕ್ಕಿಂತ ಒಂದು ಸುಂದರವಾದ ಪ್ರತ್ಯೇಕ ಮನೆಗಳು. ಬಹುಮಹಡಿ ಕಟ್ಟಡಗಳು ಇರಲೇ ಇಲ್ಲ. ದೀಪಾವಳಿಯ ಹತ್ತು ಹೈದಿನೈದು ದಿನಗಳು ಎಲ್ಲಿ ನೋಡಿದರಲ್ಲಿ ಎಣ್ಣೆಯ ದೀಪಗಳಿಂದ ಅಲಂಕ್ರತವಾದ ಮನೆಗಳು. ಪ್ರತಿಯೊಂದು ಮನೆಯವರು ನೂರು ಇನ್ನೂರು ಎಣ್ಣೆಯ ಪಣತಿಗಳನ್ನು ಹಚ್ಚುತ್ತಿದ್ದರು. ನಮ್ಮದೋ ಹೊಸ ಸಂಸಾರ, ಆದರೂ ನಾವೂ ಕೂಡ ಮೊದಲ ದೀಪಾವಳಿಯ ಸಂಭ್ರಮಕ್ಕೆ ಸಾಕಷ್ಟು ಪಣತಿಗಳನ್ನು ಖರೀದಿಸಿದ್ದೆವು. ಆದರೆ ದೀಪಾವಳಿಯ ಮೊದಲ ದಿನ ಸಂಜೆ ಇತರ ಕೆಲಸಗಳಿಂದಾಗಿ ದೀಪ ಹಚ್ಚಲು ಸ್ವಲ್ಪ ತಡವಾಗಿತ್ತು. ನಾವಿನ್ನೂ ಪಣತಿಗಳನ್ನು ಎಣ್ಣೆ, ಬತ್ತಿ ಹಾಕಿ ತಯಾರಿಸುತ್ತಿದ್ದೆವು. ಆಗಲೇ ನಮ್ಮ ಪಕ್ಕದ ಮನೆಯವರು ಒಂದು ದೊಡ್ಡ ಹರಿವಾಣದ ತುಂಬ ಎಣ್ಣೆ ಬತ್ತಿ ಹಾಕಿ ತಯಾರಿಸಿದ ಪಣತಿಗಳನ್ನು ತಂದು ನೀವೂ ದೀಪ ಹಚ್ಚಿ ಎಂದು ಕೊಡ ಬಂದರು. ನಾವು ತಯರಿಸುತ್ತಿದ್ದ ಪಣತಿಗಳನ್ನು ತೋರಿಸಿ ಅವರ ಪಣತಿಗಳನ್ನು ನಯವಾಗಿ ನಿರಾಕರಿಸಿದೆವು. ಆದರೆ ಅವರ ಆ ಔದಾರ್ಯ ಮರೆಯಬಹುದೇ?.
ಇನ್ನು ಮನೆ ಮಾಡಿದ ಮೇಲೆ ಸಂಸಾರ ಸಾಗಿಸಲು ಸಾಮಾನುಗಳು ಬೇಕಲ್ಲ. ನಾನು ಅದೇ ತಾನೇ ಕೊಂಡ ಕೈನೆಟಿಕ್ ಹೊಂಡ ದ್ವಿಚಕ್ರ ವಾಹನದಲ್ಲಿ ಮಡದಿಯೋಡನೆ ಸಾಮನು ತರಲು ಹೋಗುತ್ತಿದ್ದೆ. ಹೊಸ ಸಂಸಾರಸ್ಥರಾದ ನಮಗೆ, ಮನೆಗೆ ಏನೆಲ್ಲ ಬೇಕು ಎಂದು ತಿಳಿಯುತ್ತಿರಲಿಲ್ಲ. ಒಂದು ದಿನ ಸಾಯಂಕಾಲ ಪ್ಲ್ಯಾಸ್ಟಿಕ್ಕ ಮತ್ತು ಇತರೇ ಅಂಗಡಿಯೊಂದರಲ್ಲಿ ನಾವು ಕಣ್ಣಿಗೆ ಕಂಡ ವಸ್ತುಗಳನ್ನು ಬೇಕೆ ಬೇಡವೆ ಎಂದು ಚರ್ಚಿಸಿ ಆಯ್ದುಕೊಳ್ಳುತ್ತಿದ್ದೆವು. ನಮ್ಮ ಖರಿದಾರಿ ಮುಗಿಯುವ ಹೊತ್ತಿಗೆ ಅಂಗಡಿ ಮುಚ್ಚುವ ಸಮಯವಾಗಿತ್ತು. ಆದರೂ ಅಂಗಡಿಯವ ನಕ್ಕು " ಸಾಬ್ ಅಂದರ್ ಭೀ ಜಾಯಿಯೆ ಉಧರ್ ಔರ್ ಭಿ ಸಾಮಾನ್ ಹೈ. ಉನ್ಹೆ ದೇಖಕರ್ ಆಪ್ ಕೋ ಶಾಯದ ಔರ ಭಿ ಕುಛ ಸಾಮಾನ ಯಾದ ಆಯೇಗಾ" (ಸಾಬ ಒಳಗಡೆ ಇನ್ನೂ ಸಾಮಾನುಗಳಿವೆ ನೋಡಿ, ನಿಮಗೆ ಮತ್ತಾವುದಾದರೂ ವಸ್ತು ನೆನಪಾಗಬಹುದು) ಎಂದು ಇತರ ಸಾಮಾನುಗಳನ್ನೂ ತೋರಿಸಿದ.
ತಿಂಗಳ ದಿನಸೀ ಸಾಮಾನುಗಳಿಗೆ ಒಂದು ಅಂಗಡಿ ಗೊತ್ತುಮಾಡಿಕೊಂಡಿದ್ದೆವು. ನಮಗೆ ನಮ್ಮ ಮನೆಗಳಲ್ಲಿ ಜೋಳ, ಗೋದಿಗಳನ್ನು ತಂದು ಗಿರಣಿಗೆ ಹೋಗಿ ಹಿಟ್ಟು ಬೀಸಿಕೊಂಡು ಬರುವುದು ಗೊತ್ತಿತ್ತೆ ಹೊರತು, ಅಂಗಡಿಯಿಂದಲೇ ಹಿಟ್ಟು ಖರೀದಿಸುವ ಅಭ್ಯಾಸವಿರಲಿಲ್ಲ. ಆದರೆ ಉತ್ತರ ಭಾರತದ ಕಡೆಗೆ ಹೆಚ್ಚಾಗಿ ಅಂಗಡಿಯಿಂದಲೇ ಹಿಟ್ಟು ಖರೀದಿಸುತ್ತಾರೆ. ಹಾಗೆ ಹಿಟ್ಟು ಕೊಳ್ಳಲು ಹಿಂಜರಿದ ನನ್ನ ಹೆಂಡತಿ ಅಂಗಡಿಯವನಿಗೆ " ಅಗರ ಆಟಾ ಅಚ್ಛಾ ನಹೀ ಹೋಗಾ ತೋ ಆಟಾ ಕೋ ವಾಪಸ ಲೇನಾ ಹೋಗಾ" (ಹಿಟ್ಟು ಚೆನ್ನಾಗಿಲ್ಲದೇ ಇದ್ದರೆ ವಾಪಸ ತೆಗೆದುಕೊಳ್ಳಬೇಕು) ಎಂದು ಹೇಳಿದಳು. ಅದಕ್ಕೆ ಅಂಗಡಿಯವ "ಮೇಮ್ ಸಾಬ ಆಪ ಆಟಾ ಲೇಕೆ ಜಾಯಿಯೆ ಔರ ರೋಟಿ ಬನಾಯಿಯೆ, ಅಗರ ಆಪಕೋ ರೋಟಿ ಪಸಂದ ನಹಿ ಆಯಾ ತೋ ಆಟಾ ಕ್ಯಾ ಹಮ ರೋಟೀ ಭೀ ವಾಪಸ ಲೇಂಗೆ ಔರ್ ಆಪಕೋ ಪೈಸೆ ವಾಪಸ ದೇಂಗೆ" (ಮೇಮ್ ಸಾಬ ನೀವು ಹಿಟ್ಟು ತೆಗೆದುಕೊಂಡು ಹೋಗಿ ರೊಟ್ಟಿ ಮಾಡಿರಿ ನಿಮಗೆ ರೊಟ್ಟಿ ರುಚಿಸದಿದ್ದರೆ, ಹಿಟ್ಟನ್ನಷ್ಟೇ ಅಲ್ಲ ನಾವು ರೊಟ್ಟಿಯನ್ನೂ ಇಂದಕ್ಕೆ ಪಡೆದು ಹಣ ವಪಸ್ಸು ಕೊಡುತ್ತೇವೆ) ಎಂದು ಹೇಳಿದ. ಇದು ಬರೀ ಹೇಳಿದ ಮಾತಲ್ಲ, ನಾವು ಅಲ್ಲಿದ್ದಷ್ಟು ದಿನ ಆತ ಆ ರೀತಿಯೇ ನಡೆದುಕೊಳ್ಳುತ್ತಿದ್ದ.
ಮದುವೆಯಾದ ಆ ಹೊಸ ದಿನಗಳಲ್ಲಿ ಜೋಧಪುರ ಸುತ್ತಿದ್ದೊಂದು ಅವಿಸ್ಮರಣೀಯ ಅನುಭವ. ಅಲ್ಲಿಯ ಕೈಲನ ಲೇಕ, ಮಂಡೋರ ಗಾರ್ಡನ್, ಹೋಟಲ್ಲುಗಳು ಹಾಗೂ ಸಿನೆಮಾ ಹಾಲುಗಳು ಎಲ್ಲೆಂದರಲ್ಲಿ ಯಾವಗ ಬೇಕಾದರೂ ಸುತ್ತುತ್ತಿದ್ದೆವು. ರಾತ್ರಿ ಹನ್ನೆರಡು ಗಂಟೆಯಲ್ಲೂ ಹೆಣ್ಣುಮಕ್ಕಳು ಮೈತುಂಬ ಆಭರಣಗಳನ್ನು ತೊಟ್ಟು ನಿರ್ಭಯವಾಗಿ ಓಡಾಡಬಹುದಿತ್ತು. ರಾಜಸ್ಥಾನದ ಜನ ಅಡುಗೆಯನ್ನು ಶುದ್ಧ ತುಪ್ಪದಲ್ಲಿಯೇ ತಯರಿಸುತ್ತಾರೆ. ನಾವು ಮೊದಲ ಸಲ ಹೊಟಲ್ಲಿಗೆ ಹೋದಾಗ ಹೋಟಲ್ಲಿನವನು ಹೇಳಿದ್ದು ಕೇಳಿ ದಂಗಾಗಿದ್ದೆವು. "ಆಪಕೊ ಖಾನ ಶುದ್ಧ ಘೀ ಮೆ ಚಾಹಿಯೆ? ಔರ ಖಾನೆ ಮೆ ದೇಸೀ ಘೀ ಕಿತನಾ ಚಾಹಿಯೆ, ದೊ ಸೌ ಗ್ರಾಮ ಯಾ ಎಕ ಪಾವ್" (ನಿಮಗೆ ಶುದ್ಧ್ ತುಪ್ಪದಲ್ಲಿ ತಯಾರಿಸಿದ ಊಟ ಬೇಕೇ, ಮತ್ತು ಜೊತೆಗೆ ನೂರು ಗ್ರಾಮ ಅಥವ ಒಂದು ಪಾವು ತುಪ್ಪ ಬೇಕೇ ?). ಓಂದು ಊಟದಲ್ಲಿ ಅನ್ನಕ್ಕೆ ಒಂದು ಚಮಚ ತುಪ್ಪ ತಿನ್ನುವ ನಾವು ಹೊಟಲಿನವನು ಕೇಳಿದ ಒಂದು ಪಾವು ತುಪ್ಪ ಕೇಳಿ ಸುಸ್ತಾಗಿದ್ದೆವು. ಜನತಾ ಹೊಟಲ್ಲಿನ ಮಿರ್ಚಿ ಬಡಾ, ಪ್ಯಾಸ್ ಕಚೋರಿ, ರಸ್ ಮಲೈ, ಮತ್ತು ಲಸ್ಸಿಯನ್ನು ನಾವು ಇನ್ನೂ ಮರೆತಿಲ್ಲ.
ರಾಜಸ್ಥಾನ ಪರ್ಯಟಕರಿಗೆ ತುಂಬ ಆಕರ್ಷಕ ಸ್ಥಳ. ಅಲ್ಲಿಯ ಸರಕಾರ ಮತ್ತು ಜನ ಪರ್ಯಟಕರನ್ನು ಆಕರ್ಷಿಸಲು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಮುಖ್ಯವಾಗಿ ರಾಜ್ಯದ ಪರ್ಯಟಕ ಸ್ಥಾನಗಳಿಗೆ ಸೊಗಸಾದ ರಸ್ತೆ ಸೌಲಭ್ಯ ಇದೆ. ಹೋಟಲ್ಲುಗಳು, ಮತ್ತು ಹೊಟಲ್ಲಿನ ಸೌಲಭ್ಯಗಳು ತುಂಬ ಶುಚಿ ರುಚಿಯಾಗಿರುತ್ತವೆ. ಅಲ್ಲಿಯ ಜನ ತುಂಬ ಆದರ ಸತ್ಕಾರ ಪೂರಕವಾಗಿ ಮಾತನಾಡಿಸುತ್ತಾರೆ. ನಮ್ಮ ಕರ್ನಾಟಕದಲ್ಲಿ ರಾಜಸ್ಥಾನಕ್ಕಿಂತಲೂ ಹೆಚ್ಚಿನ ಸುಂದರ ಪರ್ಯಟನ ಸ್ಥಾನಗಳಿವೆ, ಆದರೆ ಪರ್ಯಟಕರನ್ನು ಆಕರ್ಷಿಸಬಲ್ಲ ಸೌಕರ್ಯಗಳು ಇಲ್ಲ ಎಂದೇ ಹೇಳಬಹುದು. ನಮ್ಮವರು ಈ ವಿಷಯದಲ್ಲಿ ರಾಜಸ್ಥಾನದವರಿಂದ ಕಲಿಯುವುದು ಬಹಳಷ್ಟಿದೆ ಎಂದು ನನ್ನ ಅನಿಸಿಕೆ. ರಾಜಸ್ಥನದ ನೋಡತಕ್ಕ ನಗರಗಳಲ್ಲಿ, ಜಯಪುರ, ಜೋಧಪುರ, ಉದಯಪುರ, ಆಜ್ಮೇರ್ (ಪುಷ್ಕರ ತೀರ್ಥ), ಮತ್ತು ಜೈಸಲ್ಮೇರ್ ಮುಖ್ಯವಾದವುಗಳು. ಜೀವನದಲ್ಲಿ ಒಮ್ಮೆಯಾದರೂ ರಜಸ್ಥಾನದ ಮರಳು ಗುಡ್ಡಗಳನ್ನು ನೋಡಲೇ ಬೇಕು. ಹಾಗೆ ನಾನೊಂದು ಸಲ ನನ್ನ ಸಹೋದ್ಯೊಗಿಗಳೊಡನೆ ಜೈಸಲ್ಮೇರಗೆ ಹೋಗಿದ್ದೆ. ಅಲ್ಲಿಗೆ ಹತ್ತಿರದಲ್ಲಿ ಇರುವ ಸಮ್ಮ ಮರಳು ಗುಡ್ಡೆಗಳು ಪರ್ಯಟಕರಿಗೊಂದು ಆಕರ್ಷಣೀಯ ಸ್ಥಳ. ಅಲ್ಲಿಗೆ ಹಲವಾರು ದೇಶಗಳಿಂದ ಪರ್ಯಟಕರು ಬರುತ್ತಾರೆ. ಅಂತೆಯೇ ಅಲ್ಲಿಯ ಜನರ ಆದಾಯ ಉದ್ಯೋಗ ಪರ್ಯಟಕರನ್ನು ಅವಲಂಬಿಸಿದೆ. ಅಲ್ಲಿಯ ಶಾಲೆಯ ಮೆಟ್ಟಿಲೂ ಹತ್ತದ ಅನೇಕ ಜನ (ಮಕ್ಕಳು) ವಿದೇಶಿಯರೊಂದಿಗೆ ಆಂಗ್ಲ ಹಾಗೂ ಇತರೆ ವಿದೇಶೀ ಭಾಷೆಗಳಲ್ಲಿ ವ್ಯವಹರಿಸುತ್ತಾರೆ. ನಾವು ನೊಡುತ್ತಿರುವಂತೆ ಚಿಕ್ಕ ಹುಡುಗನೊಬ್ಬ ಆಂಗ್ಲ ಮಹಿಳೆಯೊಬ್ಬಳೊಡನೆ ವ್ಯವಹರಿಸುತ್ತಿದ್ದ. ಆ ಮಹಿಳೆ, ಒಂಟೆಯ ಕೊರಳಲ್ಲಿದ್ದ ಸುಂದರ ಪಟ್ಟಿಯೊಂದನ್ನು ನೋಡುತ್ತಿದ್ದಳು. ಆ ಹುಡುಗ ಅದನ್ನು ಗಮನಿಸಿ, ಆ ಕೊರಳ ಪಟ್ಟಿಯನ್ನು ಆ ಒಂಟೆಯ ಕೊರಳಿಂದ ತೆಗೆದು ಮಾರಾಟ ಮಾಡಲು ಆ ಮಹಿಳೆಗೆ ಮಾರಾಟ ಮಾಡಿದ. This madam very good indian coton, embroidary made by poor women. very good loking. very strong. put water here top, does not come down. only six hundred rupees ಹೀಗೆ ಆಕೆಯನ್ನು ಮರಳು ಮಾಡಿ ಮಾರಾಟ ಮಾಡಿದ ಮೇಲೆ ಅವನನ್ನು ನಾವು "ಔರ್ ಕಿತನೆ ಕಾ ಚೂನ ಲಗಾಯ ಎಂದು ಕೇಳಿದೆವು" ಅದಕ್ಕವನು ನಕ್ಕು "ಅರೇ ಸಾಬ್ ಸತ್ತರ ರುಪೈಕಾ ಸಾಮಾನ ಕೊ ಚಾರ ಸೌ ರುಪೈ ಮೆ ಭೇಜ ದಿಯ, ಯೇ ಅಂಗ್ರೆಜಿ ಲೋಗ ತೊ ಹಮಾರೆ ದೇಶ ಕೊ ಕಿತನಾ ಚೂನಾ ಲಗಾಯಾ ಹೈ. ಅಬ ಹಮಾರಿ ಬಾರೀ ಹೈ ಹಮ್ ಭಿ ಛೊಡತೆ ನಹೀ" ಎಂದು ಉತ್ತರಿಸಿದ.
ಅರವಿಂದ ಶೇಡಬಾಳ
Comments
ಉ: ರಾಜಸ್ಥಾನದ ನೆನಪುಗಳು
ಉ: ರಾಜಸ್ಥಾನದ ನೆನಪುಗಳು
ಉ: ರಾಜಸ್ಥಾನದ ನೆನಪುಗಳು
ಉ: ರಾಜಸ್ಥಾನದ ನೆನಪುಗಳು