ಜೀವನವೆಂದರೆ ಅಲ್ಪವಿರಾಮಗಳ ಸಂತೆ, ಕೊನೆಗೊಂದು ಪೂರ್ಣವಿರಾಮ - ೧

ಜೀವನವೆಂದರೆ ಅಲ್ಪವಿರಾಮಗಳ ಸಂತೆ, ಕೊನೆಗೊಂದು ಪೂರ್ಣವಿರಾಮ - ೧

ಇಂಜಿನಿಯರಿಂಗ್ ಮುಗಿಸಿಕೊಂಡು ರಾಜ್ಯ ರಸ್ತೆ ಸಾರಿಗೆಯ ಕೆಂಪು ಬಸ್ಸಿನಲ್ಲಿ ಬೆಂಗಳೂರಿಗೆ ಬಂದು ಇಳಿದ ಹುಡುಗ, ಕಣ್ಣುಗಳಲ್ಲಿ ಕನುಸುಗಳ ರಾಶಿ, ಕಷ್ಟಪಟ್ಟು ಓದಿಸಿದ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುವ ಬಯಕೆ, ತಂಗಿಯ ಮದುವೆಯ ಜವಾಬ್ದಾರಿ, ಅದಕ್ಕಿಂತ ಮೊದಲು ತನಗೊಂದು ಸೂರು ಹುಡುಕಿಕೊಳ್ಳುವ, ಆಮೇಲೆ ಬದುಕಿಗೊಂದು ಕೆಲಸ ಪಡೆಯುವ ಸಾಹಸ, ಗೆಳೆಯರ ಜೊತೆಗೂಡಿ ಒಂದು ಬಾಡಿಗೆ ಮನೆ, ನಂತರ ಕೆಲಸ ಹುಡುಕುವ ನಿರಂತರ ಕಾಯಕ, ಬಿ, ಎಂ, ಟಿ, ಸಿಯ ಡೈಲಿ ಪಾಸ್ ತೆಗೆದುಕೊಂಡು ಕಂಡ ಕಂಡ ಕಂಪನಿಗಳಲ್ಲಿ ರೆಸ್ಯುಮ್ಗಳನ್ನು ಸುರಿದು ಸಂಜೆಯ ಹೊತ್ತಿಗೆ ಬಸವಳಿದು ಮನೆಗೆ ಬಂದು ಸೇರಿ, ಅಡಿಗೆ ಮಾಡಿ ತಿಂದು, ಹಾಸಿಗೆಯ ಮೇಲೆ ಬಿದ್ದಾಕ್ಷಣ ನಾಳೆಯೋ ನಾಡಿದ್ದೋ ರೆಸ್ಯುಮ್ಗಳನ್ನು ಕೊಟ್ಟು ಬಂದ ಕಂಪನಿಗಳಿಂದ ಕಾಲ್ ಬರುವುದೋ ಎನ್ನುವ ಕನಸುಗಳು, ಬುಧವಾರದ ಅಸೆಂಟ್ ನೋಡಿ ಶನಿವಾರದ ವಾಕ್ ಇನ್ಗೆ ಸಿದ್ಧತೆ, ಶನಿವಾರ ಅಲ್ಲಿ ಹೋಗಿ ನೋಡಿದರೆ ಜನಸಾಗರ, ಇಷ್ಟು ಜನದಲ್ಲಿ ಕೆಲಸ ಸಿಗುವುದೋ ಇಲ್ಲವೋ ಎನ್ನುವ ಹತಾಶೆಯ ನಡುವೆ ಕಷ್ಟಪಟ್ಟು ನಿಂತು ರಿಟನ್ ಟೆಸ್ಟ್ ಬರೆದು, ಕೊನೆಗೆ ಫಲಿತಾಂಶ ಬಂದ ಮೇಲೆ ಮೊದಲನೇ ಸುತ್ತಿನಲ್ಲೇ ಹೊರಬಿದ್ದು, ತನ್ನ ಗೆಳೆಯರ ಪರಿಸ್ಥಿತಿಯೂ ಹಾಗೆಯೇ ಆಗಿ, ಅಲ್ಲಿಂದ ಮಜೆಸ್ಟಿಕ್ಗೆ ಬಂದು ಕಪಾಲಿಯಲ್ಲೋ ಸಂತೋಷ್ ಥಿಯೇಟರ್ನಲ್ಲೋ ಒಂದು ಸಿನೆಮಾ ನೋಡಿ ಮತ್ತೆ ಮನೆ ಕಡೆಗೆ ಪ್ರಯಾಣ, ಹೀಗೆ ಅಲ್ಲಿ ಇಲ್ಲಿ ಹುಡುಕಿ ಕೊನೆಗೊಂದು ದಿನ ಯಾವುದೋ ಕಂಪನಿಯಲ್ಲಿ ಕೆಲಸ, ತನ್ನ ಗೆಳೆಯರಿಗೂ ಹಾಗೆ ಒಂದೊಂದು ಕಡೆ, ಕೆಲಸ ಸಿಕ್ಕಾಗಲೆಲ್ಲ ಒಬ್ಬೊಬ್ಬರಿಂದ ಪಾರ್ಟಿ, ಈ ನಡುವೆ ಊರಿನಲ್ಲಿ ಕಷ್ಟವಿದ್ದರೂ ತನಗೆ ಬರುತ್ತಿರುವ ಸಂಬಳ ಕಡಿಮೆ ಎಂದುಕೊಂಡು ಸ್ವಲ್ಪವನ್ನೂ ಕಳಿಸದೆ, ವೀಕೆಂಡ್ ಸಿನೆಮಾ, ವಿಂಡೋ ಶಾಪಿಂಗ್, ಬಟ್ಟೆ ಖರೀದಿ, ಬಣ್ಣದ ಲೋಕ, ಅಲ್ಲಲ್ಲಿ ಸುತ್ತಾಟ, ತನಗಾಗಿ ಹೊಸ ಮೊಬೈಲ್, ಲ್ಯಾಪ್ ಟಾಪ್, ತನ್ನ ಆಫೀಸಿನಲ್ಲೇ ತನ್ನೊಂದಿಗೆ ಕೆಲಸ ಮಾಡುತ್ತಿರುವ ಹುಡುಗಿಯೊಂದಿಗೆ ಒಡನಾಟ, ಅವಳ ಜೊತೆ ಸುತ್ತಾಡಲು ಸಾಲದಿಂದ ತೆಗೆದುಕೊಂಡ ಬೈಕ್, ಬಂದ ಸಂಬಳವೆಲ್ಲ ತಮ್ಮಿಬ್ಬರ ಸುತ್ತಾಟಕ್ಕೆ, ತನ್ನ ಮಗ ನೋಡಲು ಬರಲೇ ಇಲ್ಲ ಎಂದು ಅಮ್ಮನ ಚಡಪಡಿಕೆ, ತನ್ನ ಮಗನನ್ನು ಹೋಗಿ ನೋಡಿಕೊಂಡು ಬರಲು ಹೊರಟ ಅಪ್ಪ, ತನ್ನ ಮಗ ಸಾವಿರ ಸಾವಿರ ದುಡಿಯುತ್ತಿದ್ದರೂ ಅದೇ ಕೆಂಪು ಬಸ್ಸಿನಲ್ಲಿ ಬೆಂಗಳೂರಿಗೆ ಪಯಣ, ಸಂಜೆ ತಲುಪಿ ಕಾಯಿನ್ ಬೂತಿಂದ ಕರೆ ಮಾಡಿದರೆ ಮಗನಿಂದ ಬಂದ ಉತ್ತರ ಸ್ವಲ್ಪ ಹೊತ್ತು ಕಾಯಿ ಎಂದು, ಅಲ್ಲಿ ಇವನು ತನ್ನ ಹುಡುಗಿಯೊಂದಿಗೆ ಊರೆಲ್ಲ ಸುತ್ತಾಡಿ ಐಶಾರಾಮಿ ಹೋಟೆಲ್ಲಿನಲ್ಲಿ ಊಟ ಮಾಡಿ ವಾಪಸ್ ಮನೆಗೆ ಬರುವಾಗ ರಾತ್ರಿ, ತನ್ನ ಅಪ್ಪನ ನೆನಪು, ಹೋಗಿ ಕರೆದುಕೊಂಡು ಬಂದು ಅಲ್ಲೇ ಮನೆಯ ಪಕ್ಕದಲ್ಲಿ ತಳ್ಳುವ ಗಾಡಿಯಲ್ಲಿ ಮಾಡಿದ ಊಟವನ್ನು ತಂದು ತಂದೆಗೆ ಕೊಟ್ಟಾದ ಮೇಲೆ ತಂದೆಯ ಹತ್ತಿರ ಸ್ವಲ್ಪ ಯೋಗಕ್ಷೇಮ, ಆಮೇಲೆ ತಾನು ನಿದ್ರಾದೇವಿಗೆ ಶರಣು, ತಂದೆಯ ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಮಾತುಗಳೆಲ್ಲವೂ ಕಣ್ಣೀರಿನ ರೂಪದಲ್ಲಿ ಧರೆಗೆ, ಅವನ ಅಮ್ಮನ ಕಾಯಿಲೆ, ತಂಗಿಯ ಕಾಯಿಲೆ, ಬೆಳಗ್ಗೆ ಎದ್ದವನೇ ಆಫೀಸಿಗೆ ರೆಡಿ, ಅಪ್ಪನಿಗೆ ಹತ್ತಿರದಲ್ಲೇ ಇರುವ ಬಸ್ ಸ್ಟಾಪ್ ಹೇಳಿ ಹೊರಟ ಅವನು ಸೀದಾ ಹೋದದ್ದು ಗೆಳತಿಯ ಹತ್ತಿರ, ಕಾಲಚಕ್ರ ಉರುಳುತ್ತಿತ್ತು, ಇವನು ತನ್ನ ಗೆಳತಿಯೊಂದಿಗೆ ಮದುವೆಯಾಗಿಬಿಟ್ಟ, ತನ್ನ ಕುಟುಂಬದವರನ್ನು ಕರೆಯಲೇ ಇಲ್ಲ, ಕಾರಣಗಳು ತುಂಬಾ ಇದ್ದವು, ತನ್ನ ತಂಗಿಯ ಮದುವೆಯ ಜವಾಬ್ದಾರಿ, ಮನೆಯಲ್ಲಿದ್ದ ಬಡತನ, ತಾನು ಮದುವೆಯಾಗಲಿದ್ದ ಹುಡುಗಿಯ ಜಾತಿ, ಆ ಹುಡುಗಿಯ ಮನೆಯಿಂದಲೂ ಯಾರು ಬಂದಿರಲಿಲ್ಲ, ವಿಷಯ ತಿಳಿದ ಅವನ ಅಪ್ಪ ಅಮ್ಮ ಸ್ವಲ್ಪ ದಿನ ಪರಿತಪಿಸಿದರು, ಸ್ವಲ್ಪ ದಿನಗಳ ನಂತರ ಮಗಳ ಮದುವೆ ಮಾಡಿದರು, ಇತ್ತ ಇವನ ಸಂಸಾರ ಮೊದಮೊದಲು ಚೆನ್ನಾಗಿ ನಡೆಯುತ್ತಿತ್ತು, ಒಂದೆರಡು ವರ್ಷ ಅಲ್ಲಿ ಇಲ್ಲಿ ತಿರುಗಾಟ, ಸಿನೆಮಾ, ಪಾರ್ಟಿ, ಕಾರು, ಸ್ವಂತ ಮನೆ, ಹೀಗೆ ಸಾಲವೂ ಏರುತ್ತಲೇ ಹೋಯಿತು, ಅದಾದ ಕೆಲವು ದಿನಗಳಲ್ಲಿಯೇ ಆರ್ಥಿಕ ಹಿಂಜರಿತದಿಂದ ಇಬ್ಬರ ಕೆಲಸಕ್ಕೂ ಕುತ್ತು ಬಂತು, ಇತ್ತ ಸಾಲಗಾರರು ಪೀಡಿಸುತ್ತಿದ್ದರು, ಕೆಲಸ ಹುಡುಕಿ ಹುಡುಕಿ ಸುಸ್ತಾಗಿ, ಬೇರೆ ಏನೂ ಕೆಲಸ ತಿಳಿಯದಿದ್ದ ಇವರು ಇದ್ದ ಮನೆ, ಕಾರು, ಬೈಕ್ ಎಲ್ಲ ಮಾರಿ ಊರಿನ ಕಡೆ ಹೆಜ್ಜೆ ಹಾಕಿದರು, ಅಮ್ಮ ಆಗಲೇ ಈ ಲೋಕವನ್ನು ಬಿಟ್ಟು ಹೋಗಿದ್ದಳು, ಅಪ್ಪ ಇದ್ದ ಜಮೀನಿನಲ್ಲೆ ಗುತ್ತಿಗೆ ಮಾಡಿಸಿ ಜೀವನ ಸಾಗಿಸುತ್ತಿದ್ದ, ಇವರಿಬ್ಬರೂ ಈಗ ಆ ಜಮೀನನ್ನೇ ತಮ್ಮ ಜೀವನೋಪಾಯಕ್ಕಾಗಿ ಅವಲಂಬಿಸಿದ್ದಾರೆ.

Comments