ನ್ಯೂಸ್ ಏನಿರಬಹುದು?

ನ್ಯೂಸ್ ಏನಿರಬಹುದು?

ಈ ದಿನದ ಪೇಪರ್ ನೋಡಿ ನಾನಂತೂ ಕುಣಿದದ್ದೇ ಕುಣಿದದ್ದು!! ಕನ್ನಡ ಫಿಲ್ಮ್‌ನ ಕೊರಿಯೋಗ್ರಾಫರ್ಸ್‌ಗಳು ನನ್ನ ಕುಣಿತ ನೋಡಿದ್ದರೆ ಕಮ್ಮಿಯಲ್ಲಿ ೬-೭ ಹೊಸ ಸ್ಟೆಪ್ ಕಲಿತು ದರ್ಶನ್ "ಕೈಯಲ್ಲಿ" ಮಾಡಿಸುತ್ತಿದ್ದರು!


"ಅಲ್ರೀ, ಕುಣಿಯುವಂತಹ ಸುದ್ದಿ ಪತ್ರಿಕೆಯಲ್ಲಿ ನಮಗೇನೂ ಕಾಣಿಸಲಿಲ್ಲವಲ್ಲಾ..?" ಅಂದ್ರಾ..


ಹೇಗೆ ಕಾಣಿಸಲು ಸಾಧ್ಯ? ಅದಿರುವುದು ೧೬ನೇ ಪುಟದ ಕೊಟ್ಟಾಕೊನೆಯಲ್ಲಿ!


ಸುದ್ದಿ ಏನು ಎಂದು ಹೇಳುವ ಮೊದಲು ನಿಮಗೆ ನನ್ನ ಕಷ್ಟದ ಪರಿಚಯ ಮಾಡಿಸದಿದ್ದರೆ, ಆ ಸುದ್ದಿ ಎಷ್ಟು ಮಹತ್ವದ್ದು ಎಂದು ನಿಮಗೆ ಗೊತ್ತಾಗದು- ನೋಡಿ, ಬೆಂಗಳೂರಲ್ಲಿ ಬಾಡಿಗೆಗೆ ಮನೆ ಹುಡುಕುವುದು ಎಷ್ಟು ಕಷ್ಟ ಎಂದು ಎಲ್ಲರಿಗೂ ಗೊತ್ತಿದ್ದದ್ದೇ. ಬೆಡ್‌ರೂಂ ದೊಡ್ಡದಿದ್ದರೆ- ಅಡುಗೆ ಕೋಣೆ ಚಿಕ್ಕದು, ಕಿಚನ್ ಚೆನ್ನಾಗಿದ್ದರೆ- ನೀರು ಸಪ್ಲೈ ಇಲ್ಲ, ವರಾಂಡ ಸರಿಯಾಗಿದ್ದರೆ-ವಠಾರ ಸರಿಯಿಲ್ಲ...ಹೇಗೋ ಎಲ್ಲಾ ಅಡ್ಜಸ್ಟ್ ಮಾಡಿ, ೫-೬ ತಿಂಗಳು ಹುಡುಕಾಡಿ, ಒಂದು ಮನೆ ಸಿಲೆಕ್ಟ್ ಮಾಡಿ ನುಗ್ಗಿದೆ-೧೫ ವರ್ಷಗಳ ಹಿಂದೆ!! ಮನೆ ಸ್ವಲ್ಪ ಹಳೇದಾದರೂ, ನನ್ನ ಕಣ್ಣಿಗೆ ಅರಮನೆನೇ!


"೧೫ ವರ್ಷದಿಂದ ಇದ್ದೀರಾ.. ಪೂರ್ತಿ ಮನೆಗೆ ಹೊಸದಾಗಿ ಪ್ಲಾಸ್ಟರಿಂಗ್ ಮಾಡಿಸಿ ಟೈಲ್ಸ್ ಹಾಕಿ, ಪೈಂಟ್ ಮಾಡಿಸಿ" ಎಂದು ಕೆಲವರು ಉಚಿತ ಸಲಹೆ ನೀಡುವರು. ನನ್ನಾಕೆನೂ ಅವರ ದನಿಗೆ ದನಿ ಸೇರಿಸಿ ಅದೇ ಹಾಡುವಳು- ಅಲ್ರೀ, ಸಾಲಸೋಲ ಮಾಡಿ, ೨-೩ ಲಕ್ಷ ಖರ್ಚು ಮಾಡಿ ಎಲ್ಲಾ ರೆಡಿ ಮಾಡಿದ ದಿನಾನೇ ಒವ್ನರ್ ಸಾಹೇಬ್ರು ಬಂದು "ಮನೆ ನಮಗೆ ಬೇಕು, ಖಾಲಿ ಮಾಡಿ" ಅಂದರೆ?


ಬೇರೆ ಬಾಡಿಗೆ ಮನೆಗೆ ಹೋಗೋಣ ಎಂದರೆ ನನ್ನ ಬಜೆಟ್‌ಗೆ ಹೊಂದೋ ಮನೆ ಸಿಗಬೇಕಾದರೆ, ೩೦ ಕಿ.ಮೀ. ದಾಟಿ ಮುಂದೆ ಹೋಗಬೇಕೋ ಏನೋ.. "ಅಲ್ಲಿದೆ ನಮ್ಮನೆ..ಇಲ್ಲಿರುವುದು ಸುಮ್ಮನೆ" ಅಂದು ದಾಸರು ಹೇಳಿಲ್ಲವೆ. ಸುಮ್ಮನೆ ಇರುವುದು ಬಿಟ್ಟು ಸೈಟು, ಮನೆ, ಎಂದು ತಲೆತಿಂತಾಳೆ ನನ್ನಾಕೆ. ಈ ಮನೆ ಬಗ್ಗೆ ಆಕೆಯ ದೂರುಗಳು ಒಂದಾ ಎರಡಾ..


"ಜೋರಾಗಿ ನಕ್ಕರೆ, ಮಾತನಾಡಿದರೆ ಬಾಗಿಲು ಕಿಟಕಿಗಳೆಲ್ಲಾ ಅಲುಗಾಡುವವು"


-"ಡಿಸ್ಕೋ ಲೈಟ್ ಇದ್ದ ಹಾಗೇ ನಮ್ಮದು ಡಿಸ್ಕೋ ಮನೆ..ಕುಣಿಯಲಿ ಬಿಡು" ಅಂದೆ.


"ಗೋಡೆ ಉದ್ದಕ್ಕೂ ಬಿರುಕು ಬಿಟ್ಟಿದೆ. ನೆಲ ನೋಡಿ ಹೇಗೆ ಇದೆ.."


-"ರೆಡ್ಡಿದ್ದು ಹೊಸ ಮನೆ ಗೋಡೆನೇ ಬಿರುಕು ಬಿಟ್ಟಿದ್ದು ನೋಡಿಲ್ವಾ ನೀನು? ಸಂಸಾರದಲ್ಲಿ ಬಿರುಕು ಬೀಳಬಾರದು. ಮೊಸಾಯಿಕ್ ನೆಲದಲ್ಲಿ ಜಾರಿ ಬೀಳುವುದು ಜಾಸ್ತಿ. ನಮ್ಮ ನೆಲದಲ್ಲಿ ಒಮ್ಮೆಯಾದರೂ ಜಾರಿ ಬಿದ್ದಿದ್ದೇವಾ? ಪೈಂಟ್‌ನಲ್ಲಿ ಲೆಡ್ ಇದೆಯಂತೆ ಆರೋಗ್ಯಕ್ಕೆ ಹಾಳು. ಸುಣ್ಣದಲ್ಲಿ ಕ್ಯಾಲ್ಸಿಯಂ ಇದೆಯಂತೆ. ಮೈಗೆ ಮೆತ್ತಿದರೂ ಆರೋಗ್ಯಕ್ಕೆ ಒಳ್ಳೆಯದು" ಎಂದು ನನ್ನಿಂದಾದಷ್ಟು ಸಮಾಧಾನ ಹೇಳುತ್ತಿದ್ದೆ. ಒಮ್ಮೆ....


ನನ್ನ ಫ್ರೆಂಡ್ ಮನೆಯ ಫಂಕ್ಷನ್‌ಗೆ ಹೋಗಬೇಕಿತ್ತು. ಅರ್ಧಗಂಟೆಯಲ್ಲಿ ರೆಡಿಯಾಗು ಎಂದು ನಾನು ಹೇಳಿದೆ. ಹತ್ತೇ ನಿಮಿಷದಲ್ಲಿ ನನ್ನೆದುರು ಬಂದು ನಿಂತಳು! ಪರವಾಗಿಲ್ವೇ? ಅಂದು ನೋಡುತ್ತೇನೆ!! " ಅಲ್ವೇ ಈ ಸಮಯದಲ್ಲಿ ಇದನ್ನೆಲ್ಲಾ ತಲೆಗೆ ಹಚ್ಚಿಕೊಂಡಿದ್ದೀಯಲ್ಲಾ? ಇನ್ನು ಸ್ನಾನ ಮಾಡಿ ಹೊರಡುವುದು ಯಾವಾಗ?" ಜೋರಾಗಿ ಎಂದೆ. ಕಣ್ಣಲ್ಲಿ ಕೆಂಡ ಕಾರುತ್ತಾ, " ರಿಪೇರಿ ಮಾಡಿಸಿ, ರಿಪೇರಿ ಮಾಡಿಸಿ ಎಂದು ಸಾರಿ ಸಾರಿ ಹೇಳಿದೆ. ಕೇಳಲಿಲ್ಲ. ಈಗ ನೋಡಿ ಸೀಲಿಂಗ್ ಸುಣ್ಣ ಸಹಿತ ಕಿತ್ತು ತಲೆಮೇಲೆ ಬಿತ್ತು. ಏನೋ ನನ್ನ ಹಣೆ ಬರಹ ಚೆನ್ನಾಗಿತ್ತು.........."


ಹೌದು......


ನನಗೂ ಅನ್ನಿಸಿತ್ತು. ಈ ಮನೆ ಬಿಟ್ಟು ಬೇರೆ ಮನೆಗೆ ಹೋಗಬೇಕೆಂದು. ಆದರೆ ಈಗ ಮೇಲೆ ಹೇಳಿದ ಯಾವ ತೊಂದರೆಗಳಿಗೂ ಅಲ್ಲಾ!!


ಕೆಲ ವರ್ಷದಿಂದ...........(ಮುಂದಿನ ಬ್ಲಾಗಲ್ಲಿ..)


ಖುಷಿಯ ಸಂಗತಿಯೆಂದರೆ, ಈದಿನದ ನ್ಯೂಸ್(ಆರಂಭದಲ್ಲಿ ಹೇಳಿದಂತೆ) ಓದಿದ ಮೇಲೆ ಮನೆ ಬಿಡುವ ಯೋಚನೆ ಕ್ಯಾನ್ಸಲ್!!!


-ಗಣೇಶ.


 


 



 



 

Rating
No votes yet

Comments