ಚನ್ನೆಮಣೆ ಇಂದಿನ ಪೀಳಿಗೆ ಅರಿಯದು-ಹಿಂದಿನ ಪೀಳಿಗೆ ಮರೆಯದು.

ಚನ್ನೆಮಣೆ ಇಂದಿನ ಪೀಳಿಗೆ ಅರಿಯದು-ಹಿಂದಿನ ಪೀಳಿಗೆ ಮರೆಯದು.

ಎಷ್ಟೇ ದೊಡ್ಡವರಾದ್ರೂ ಎಲ್ಲರಲ್ಲೂ "ಬಾಲ್ಯ" ಅಡಗಿ ಕುಳಿತಿರುತ್ತದೆ. ಓದಿದಾಗ, ನೋಡಿದಾಗ, ಕೇಳಿದಾಗ ನಾನೂ ಆಡಿದ್ದೆ, ನನ್ನ ಬಾಲ್ಯವೂ ಹೀಗೇ ಇತ್ತು ಎಂಬ ನೆನಪಿದೆಯಲ್ಲಾ ಅದು ಅತ್ಯಂತ ಮುದ ನೀಡುತ್ತದೆ, ಹಂಚಿಕೊಂಡಾಗ ಹರುಷ ಹೆಚ್ಚುತ್ತದೆ, ಹೌದಲ್ಲವೇ? ಚಿಕ್ಕಂದಿನಲ್ಲಿ ಯಾವ ಆಟ ಆಡುತ್ತಿದ್ದೆವು ಎಂದು ನೆನಪಿಸಿಕೊಳ್ಳಿ...ಆಗ ಈ ಚೆನ್ನದ ಚೆನ್ನೆಮಣೆ-ಅಳಗುಳಿ ಮಣೆಯೂ ನಿಮಗೆ ನೆನಪಾಗುತ್ತದೆ. ಹಾಗೊಂದು ನೆನಪಿನ ದೋಣಿ ಈ ಚೆನ್ನೆಮಣೆ......

ಪ್ರತಿಯೊಂದೂ ಕ್ರೀಡೆಯ ಇತಿಹಾಸ ಆಯಾ ಜನಾಂಗದ ಸಂಸ್ಕೃತಿ, ಮನೋಭಾವ, ಅಭಿರುಚಿಗಳಿಗೆ ಕನ್ನಡಿ. ಕಾಲ ಬದಲಾದಂತೆ ತನ್ನ ಸ್ವರೂಪವನ್ನು ಬದಲಾಯಿಸಿಕೊಂಡರೂ ಆಯಾ ಜನಾಂಗದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ.

ದಕ್ಷಿಣ ಭಾರತದಲ್ಲಿ ನಮ್ಮಲ್ಲಿ ಚನ್ನೆಮಣೆ, ಅಳಗುಳಿಮಣೆ, ಕೇರಳದಲ್ಲಿ ನಿಕ್ಕಕ್ಕಳಿ, ತಮಿಳಿನಲ್ಲಿ ಪನ್ನಾಂಗುಯಿ ಎಂದು ಹೇಳುತ್ತಿದ್ದ ಈ ಅಳಗುಳಿ ಮಣೆಯಲ್ಲಿ ಏಳುಗುಣಿಗಳ ಎರಡುಸಾಲು ಮತ್ತು ಇಕ್ಕೆಲಗಳಲ್ಲಿ ಹೆಚ್ಚಿನ ಬೀಜಗಳನ್ನು ಹಾಕಲು ಇನ್ನೆರಡು ಕುಳಿಗಳು ಇರುತ್ತಿದ್ದವು. ಆ ಕುಳಿಗಳಲ್ಲಿ ಹುಣಿಸೆಬೀಜ ಅಥವಾ ಗುಲಗಂಚಿ. ಅದೂ ಸಿಕ್ಕದಿದ್ದಲ್ಲಿ ಸಣ್ಣಸಣ್ಣ ಕಲ್ಲುಗಳನ್ನು ತುಂಬಿಸಿ ಈರ್ವರು ಎದುರು-ಬದುರು ಕೂತು ಬೀಜಗಳನ್ನು ಸಾಲಾಗಿ ಕುಳಿಗಳಲ್ಲಿ ಹಾಕಬೇಕಾಗಿತ್ತು. ಒಂದು ಕುಳಿ ತುಂಬಿದಾಕ್ಷಣ ಆ ಕುಳಿಯ ಬೀಜಗಳನ್ನು ಬದಿಗಿಟ್ಟು ಕಡೆಯಲ್ಲಿ ಯಾರ ಕುಳಿಯಲ್ಲಿ ಹೆಚ್ಚು ಬೀಜಗಳು ಸೇರುವುದೋ ಅವರು ಗೆದ್ದವರು ಎಂಬ ಆಟವದಾಗಿತ್ತು.

ಜಾಗರಣೆ, ಉಪವಾಸದ ದಿನಗಳಲ್ಲಿ, ಗ್ರಾಮೀಣ ಭಾಷೆಯಲ್ಲಿ ಆಷಾಡದ ಆಟ, ಹೊತ್ತು ಕಳೆಯುವ ಆಟ ಎಂದು ಕರೆಯಲ್ಪಡುತ್ತಿದ್ದ ಈ ಆಟ. ಗ್ರಾಮೀಣ ಸಂಸ್ಕೃತಿಯಲ್ಲಿ ಪಗಡೆ, ಚನ್ನೆಮಣೆಗಳನ್ನು ಗಂಡ-ಹೆಂಡತಿ, ಒಡಹುಟ್ಟಿದವರು ಆಡಿದಲ್ಲಿ ಕೌಟುಂಬಿಕ ಹಾಗೂ ಭಾವನಾತ್ಮಕ ಸಂಬಂಧಗಳಿಗೆ ಧಕ್ಕೆ ಬರುತ್ತದೆ ಎಂಬ ಹೆದರಿಕೆಯಿಂದ ಬಹುತೇಕ ಮನೆಗಳಲ್ಲಿ ಮನೆಯವರೊಂದಿಗೆ ಈ ಆಟ ಆಡಲು ನಿಷೇಧ ಹೇರುತ್ತಿದ್ದರು ಎಂದಳು ನನ್ನಮ್ಮ.

ಅರಮನೆ, ಶ್ರೀಮಂತರ ಮನೆಗಳಲ್ಲಿ ಚಿನ್ನ, ಬೆಳ್ಳಿ, ಹಿತ್ತಾಳೆಗಳ ಮಣೆಗಳು ಇವೆ ಎಂದು ಕೇಳಿಬಂದರೂ ಶ್ರೀಸಾಮಾನ್ಯರ ಮನೆಗಳಲ್ಲಿ ಮರದ ಮಣೆಗಳು ಇರುತ್ತಿದ್ದವು. ಕೆಲವೊಮ್ಮೆ ಹೊಲಗಳಲ್ಲಿ, ಮಣ್ಣಿನಲ್ಲಿ ಕುಳಿಗಳನ್ನು ಮಾಡಿ ಕಲ್ಲುಗಳನ್ನು ಇಟ್ಟು ಹೊತ್ತು ಕಳೆಯುವುದಕ್ಕಾಗಿ ಆಡುತ್ತಿದ್ದರು. ದಂಡಿಗಾಗಿ ಪರಸ್ಥಳಗಳಲ್ಲಿ ಬೀಡು ಬಿಡುತ್ತಿದ್ದ ಸೈನಿಕರಿಗೆ ಕೂಡ ಈ ಆಟ ಪ್ರಿಯವಾಗಿತ್ತು. ಇಂದಿಗೂ ಶ್ರವಣಬೆಳಗೊಳ, ಬಾದಾಮಿಯಲ್ಲಿ ನೆಲದಲ್ಲಿ ಕೊರೆದ ಅಳಗುಳಿಯಾಟದ ಗುಳಿಗಳನ್ನು ಕಾಣಬಹುದು. ವಯಸ್ಸಿನ ಅಂತರವಿಲ್ಲದೆ ಎಲ್ಲರೂ ಆಡುತ್ತಿದ್ದ ಮಣೆ ಅದು. ಹೆಚ್ಚಾಗಿ ಹೆಣ್ಣುಮಕ್ಕಳು, ಮಳೆಯ ಕಾಲದಲ್ಲಿ ಮನೆಯಲ್ಲಿ ಉಳಿದವರಿಗೆ ಅಳಗುಳಿ ಮಣೆ, ಕವಡೆ, ಚೌಕಾಬಾರ ಪ್ರಿಯವಾದ ಆಟವಾಗಿತ್ತು. ಕ್ರಿಯಾ ಶೀಲತೆಗೆ ತಕ್ಕಂತೆ ಅಳಗುಳಿ ಮಣೆ ವಿವಿಧ ಆಕಾರಗಳಲ್ಲಿ ಕಾಣ ಬರುತ್ತಿತ್ತು.

ಈ ಆಟ ಬರೀ ಭಾರತದಲ್ಲೇ ಅಲ್ಲ ಹಿಂದೆ ಆಫ್ರಿಕೆಯಲ್ಲಿ ಮಂಕಲ ಎಂಬ ಬೇರೊಂದು ರೂಪ, ನಾಮದಲಿ ಜನಪ್ರಿಯವಾಗಿತ್ತು. ಸೋಯಿಂಗ್ ಸೀಡ್ಸ್, ಪಿಟ್ ಅಂಡ್ ಪೆಬಲ್ಸ್ ಎಂದು ಕರೆಯಲ್ಪಡುತ್ತಿದ್ದ ಈ ಆಟದ ಮೂಲಸ್ಥಾನ ಆಫ್ರಿಕಾ, ಇದಕ್ಕೆ ಶತಮಾನಗಳ ಇತಿಹಾಸವಿದೆ ಎಂದು ನ್ಯಾಷನಲ್ ಜಿಯಾಗ್ರಫಿಯ ಹೇಳಿಕೆ. ಬೋರ್ನಿಯೋ, ಮಲೇಶಿಯಾಗಳಲ್ಲಿ ಸೋಂಕ್ಗಾ, ಇಂಡೋನೇಶಿಯ, ಶ್ರೀಲಂಕಾದಲ್ಲಿ ಚೋಂಕ, ಕಾಮರೂನ್ ದ್ವೀಪದಲ್ಲಿ ಸೋಂಗೋ, ಪೂರ್ವ ಆಫ್ರಿಕೆಯಲ್ಲಿ ಬಾವೋ ಎಂದು ಆರುಕುಳಿಗಳ ಚನ್ನೆಮಣೆಯಾಟ ಪ್ರಚಲಿತದಲ್ಲಿತ್ತು. ಕೆಲದಿನಗಳ ಹಿಂದೆ ಆರ್ಕಿಯಾಲಜಿ ಇಲಾಖೆ ಇಥಿಯೋಪಿಯಾದಲ್ಲಿ ದೊರಕಿದ ಚೆನ್ನೆಮಣೆಗೆ ಕೇವಲ ೧೩೦೦ ವರುಷಗಳು.

ಈಗಿನ ಮಕ್ಕಳಿಗೆ ಕುಂಟಾಬಿಲ್ಲೆ, ಚೌಕಾಬಾರ, ಮರಕೋತಿ, ಚಿನ್ನಿದಾಂಡು, ಕಣ್ಣುಮುಚ್ಚಾಲೆ ಈ ಆಟಗಳು ಗೊತ್ತಿಲ್ಲ, ಹೇಳಿ ಕೊಡ್ತೀವಿ ಅಂದ್ರೆ ಇಂಟರೆಸ್ಟ್ ಇಲ್ಲ, ಜೊತೆಗೆ ಟೈಮಂತೂ ಇಲ್ವೇ ಇಲ್ಲ. ಸಿಗೋ ಟೈಮಿನಲ್ಲಿ ಟಿ.ವಿ ಪರದೆಯ ಕಾರ್ಟೂನ್‌ಗಳಲ್ಲಿ ಮಗ್ನರಾಗುವ ಕೌಚ್‌ಪೊಟಾಟೋಗಳು. ಜೊತೆಗೆ ಅಯ್ಯೋ ಆ ಗೇಮ್ಸಾ ಹಳೇಕಾಲದ್ದು, ಛೀ ಬೋರಿಂಗ್ ರಾಗ ಬೇರೆ. ಏನ್ ಮಾಡ್ತೀರಾ, ಪಾಪದ್ದು, ಯಾಂತ್ರಿಕತೆ, ಸ್ಪರ್ಧಾತ್ಮಕದ ಈ ದೌಡುವ ಈ ಯುಗದಲ್ಲಿ ಅವರ ಬಾಲ್ಯವೂ ಬೋರಿಂಗ್, ಟೈಮಿಲ್ಲ, ಟಿ.ವಿ ಎಂದು ದೌಡಾಯಿಸುತ್ತಿದೆ.

ಮನೆಮಂದಿಯೊಂದಿಗೆ, ಮಕ್ಕಳೊಂದಿಗೆ ಜೊತೆಯಾಗಿ ಕುಳಿತು ಆಡಬಹುದಾದ ಈ ಆಟ ನಶಿಸೇ ಹೋಗಿತ್ತು. ಆದರೆ ಇತ್ತೀಚೆಗೆ ಚನ್ನೆಮಣೆ, ಚೌಕಾಬಾರ, ಕವಡೆ ತರಹದ ಅಟಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಹೊಣೆಯನ್ನು ತುಳುನಾಡು, ಕರಾವಳಿ, ಮಲೆನಾಡಿನ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ತಿಳಿಯಪಡಿಸಿ, ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ ಎಂಬುದು ಕೇಳಿದ ಸಿಹಿಸುದ್ದಿ.

 

ಚಿತ್ರ: ಹರಿ ಪ್ರಸಾದ್ ನಾಡಿಗ್
 

Comments