ಪೌರಾಣಿಕ ಕಥೆ: ಪಾರ್ವತಿ ಕಲ್ಯಾಣ
ಆದಿ ಅಂತ್ಯವಿಲ್ಲವೆನ್ನುವಂತೆ ವಿಶಾಲವಾಗಿ ಹರಡಿರುವ ಹಿಮಾಲಯದ ಪರ್ವತಗಳ ಸಾಲುಸಾಲು. ದೇವ ಗಂಧರ್ವರಿಗೆ ತಪೋ ನಿರತರಿಗೆ ಪ್ರಿಯವೆನಿಸುವ ಕಣಿವೆ ತಪ್ಪಲುಗಳು. ಬೆಳಗಿನ ಹೊತ್ತು ಬೆಳ್ಳಿಕವಚ ಹೊದಿಸಿದಂತೆ ಸಂಜೆ ಅದರ ಮೇಲೆಯೆ ಚಿನ್ನ ಕರಗಿಸಿ ಸುರಿದಂತೆ ಕಂಗೊಳಿಸುವ ರಮಣೀಯ ಪರ್ವತ ಶೃಂಗಗಳು.ಎಲ್ಲ ಮಾಸಗಳಲ್ಲು ಹಾಲಿನ ನೊರೆ ಉಕ್ಕಿದಂತೆ ಸಕ್ಕರೆಯನ್ನು ತಂದು ಗುಡ್ಡೆಹಾಕಿದಂತೆ ಎತ್ತಲೆತ್ತಲು ತುಂಬಿ ಹರಡಿನಿಂತ ಹಿಮದ ರಾಶಿ.ಕಾಡಿನ ನಡುವೆ ವಿಶಾಲವಾದ ಹಸಿರು ಹೊನ್ನಿನ ಕಣಿವೆಯಲ್ಲಿ ನೆಲೆಸಿ ಸ್ವಚಂದವಾಗಿ ವಿಹರಿಸುವ ವನ್ಯ ಮೃಗಗಳ ಗುಂಪುಗಳು.ತನಗೆ ಯಾರು ಎದುರಿಲ್ಲವೆಂದು ಸದಾ ಬೀಸುವ ಕುಳಿರ್ಗಾಳಿ.
ಇಂತದೆ ಹಲವು ವಿಷೇಶಗಳ ಹಿಮಾಲಯದ ಮೇಲು ಮೇಲಿನ ನಾಡಿಗೆ ಹೋದಂತೆ ಎಲ್ಲ ಪ್ರಕೃತಿ ವೈಭವಗಳ ನಡುವಿನ ಈ ಪ್ರದೇಶ ಮಾತ್ರ ಸ್ವಲ್ಪ ವಿಬಿನ್ನವಾಗಿ ತೋರಿ ಬರುತ್ತಿದೆ ಅದೆ ಕೈಲಾಸ ಪರ್ವತಗಳ ಪ್ರದೇಶ.ಇಲ್ಲಿ ಹುಟ್ಟುವ ಸೂರ್ಯನು ಅಷ್ಟೆ ತುಂಬಾ ವಿನಮ್ರನಾಗಿದ್ದಾನೆ, ಕಣಿವೆಯ ಸರೋವರದ ಸಮೀಪವಿರುವ ಉನ್ನತ ಶೃಂಗವೊಂದರ ಮೇಲೆ ತಪಸ್ಸಿಗೆ ಕುಳಿತ ಪರಶಿವ ತನ್ನ ಬಿಸಿಲಿನ ಜಳದಿಂದ ಬಳಲಬಾರದೆಂದು ಹಿತವಾಗಿದ್ದಾನೆ. ರಾತ್ರಿಯ ಚಂದ್ರ ತುಂಬಾ ಪ್ರಶಾಂತ. ಅಲ್ಲಿ ಬೀಸುವ ಗಾಳಿಯು ಅಷ್ಟೆ ತನ್ನ ಹುಚ್ಚುತನವನ್ನು ತೋರದೆ ನಿದಾನವಾಗಿ ಚಲಿಸುತ್ತಾನೆ. ಅಷ್ಟೆ ಏಕೆ ಕಾಡಿನಲ್ಲಿ ಸ್ವಚಂದವಾಗಿರುವ ವನ್ಯಮೃಗಗಳು ವಿಹರಿಸುತ್ತ ಒಂದನೊಂದು ಹಿಂಬಾಲಿಸುತ್ತ ಬರುವ ಕ್ರೂರಮೃಗಗಳು ಆ ಬಾಗದ ಸನಿಹ ಬರುತ್ತಿದ್ದಂತೆ ನಿದಾನವಾಗಿ ಚಲಿಸಿ ತಮ್ಮ ಆಗಮನ ಶಿವನ ಗಮನ ಸೆಳೆಯದಂತೆ ಎಚ್ಚರವಹಿಸುತ್ತವೆ. ಎಷ್ಟು ಕಾಲವಾಯಿತು ಪರಶಿವನಿಲ್ಲಿ ತಪಸ್ಸಿಗೆ ಕುಳಿತು ಕಾಲನಿಗೆ ಸ್ಮರಣೆ ತಪ್ಪಿದೆ, ಅವನಿಗೆ ಎಣಿಕೆ ಮರೆತಿದೆ. ಕಾಲನಿಗೆ ಕಾಲನಲ್ಲವೆ ಪರಮೇಶ್ವರ.
ಏಕೊ ಆ ದಿನ ಹುಟ್ಟುವಾಗಲೆ ಸೂರ್ಯನಿಗೆ ಸಂಭ್ರಮ, ಪ್ರಕೃತಿಮಾತೆ ಸಂತೃಪ್ತಿಯಿಂದ ನಸುನಗುತ್ತಿದ್ದಾಳೆ.ವಾಯುದೇವನು ಯಾವ ಕಣಿವೆಯಿಂದಲೊ ಹೊತ್ತುತಂದ ಹೂವಿನ ಸುವಾಸನೆಯನ್ನು ಹೊತ್ತು ಪರಶಿವನಿಗೆ ಸುತ್ತಿ ಸುತ್ತಿ ಬರುತ್ತಿದ್ದಾನೆ.ಇದಕ್ಕೆಲ ಕಾರಣವು ಇದೆ, ಕಾಲದ ಪರಿವೆಯನ್ನು ಮರೆತು ಕುಳಿತಿದ್ದ ಪರಶಿವನ ಮುಖದಲ್ಲಿನ ಉಗ್ರತೆ ಕರಗಿ ಬಿಗುವು ಸಡಿಲಗೊಂಡು ತುಟಿಗಳಲ್ಲಿ ಎಂತದೊ ನಗುವು ಲಾಸ್ಯವಾಡಿದೆ. ಮನ್ಮಥನನ್ನು ಸುಡಲೆಂದು ಬೆಂಕಿಯುಗುಳಿದ ಕೋಪಕ್ಕೆ ಅದುರುತ್ತಿದ್ದ ಮೂರನೆಯ ಕಣ್ಣುಗಳು ಮುಚ್ಚಿ ಈಗ ಕಾಣದಂತಾಗಿದೆ. ಸಂಪೂರ್ಣ ಪ್ರಕೃತಿಯೆ ಈಗ ಎದ್ದು ಕುಳಿತಿದೆ ಇಂದೊ ನಾಳೆಯು ಎಚ್ಚರಗೊಳ್ಳುವ ಪರಶಿವನಿಗಾಗಿ.ದೇವತೆಗಳ ಉತ್ಸಾಹವು ಮೇರೆ ಮೀರಿದೆ ಹೇಗೋ ತಮ್ಮ ಕಷ್ಟ ಕಳೆಯುವ ಕಾಲ ಹತ್ತಿರ ಬರುತ್ತಿದೆಯಲ್ಲ ಎಂದು, ತನ್ನ ದುಖಃದ ದಿನಗಳು ದೂರಾಗುವ ಸಮಯ ಸಮೀಪಿಸಿದೆಯಲ್ಲಿ ಎಂದು ಇಂದ್ರನು ತವಕಿಸುತ್ತಿದ್ದಾನೆ.ಇಷ್ಟಾದರು ಮಾಯೆಯ ಮುಸುಕಿನಲ್ಲಿ ಮರೆತು ಮೈಮರೆತಿರುವವನೊಬ್ಬನೆ ರಕ್ಕಸ ತಾರಕ ಅಂದರೆ ತಾರಕಾಸುರ
ತಾರಕಸುರ ರಕ್ಕಸರ ನಾಯಕ, ಅರಸ, ಅತುಳ ಪರಾಕ್ರಮಿ. ಸಿಂಹಾಸನವೇರುತ್ತಲೆ ಅವನು ಮಾಡಿದ ಕೆಲಸವೆಂದರೆ ತನ್ನ ರಕ್ಷಣೆಗಾಗಿ ಶಕ್ತಿವರ್ದನೆಗಾಗಿ ಪರಬ್ರಹ್ಮನನ್ನ ಕುರಿತು ಮಾಡಿದ ಕಠಿಣ ತಪಸ್ಸು.ಹಲವು ವರ್ಷ ಒಂಟಿಕಾಲಿನಲ್ಲಿ ನಿಂತು ದ್ಯಾನ ಮಾಡಿದ ನಂತರ ಮರದಿಂದ ಕಾಲುಗಳಲ್ಲಿ ಕೊಂಬೆಹಿಡಿದು ತಲೆಕೆಳಗಾಗಿ ನೇತಾಡುತ್ತ ಕೆಲವು ವರ್ಷ ತಪಸ್ಸನ್ನು ಆಚರಿಸಿದ. ನಿರಾಹಾರನಾದ, ಕಡೆಗೆ ತನ್ನ ಪ್ರಾಣವನ್ನು ಅರ್ಪಿಸಲು ಸಿದ್ದನಾದ. ಆಗ ಬ್ರಹ್ಮನು ಬರಲೇ ಬೇಕಾಯಿತು, ಬಂದವನು ಕೇಳಿದ
"ತಾರಕ ಏಕಾಗಿ ಈ ಕಠಿಣ ತಪ ನಿನಗೆ ಏನು ಬೇಕು ಹೇಳು? "
ತಾರಕ ಕೇಳಿದ ವರವಾದರೊ ಅಷ್ಟೆ ವಿಚಿತ್ರವಾಗಿತ್ತು "ನನಗೆ ಏಳು ವರ್ಷದ ಬಾಲಕನಿಂದ ಮಾತ್ರ ಮರಣ ಬರಲಿ, ವಿಷ್ಣು ಆದಿಯಾಗಿ ಉಳಿದ ಯಾರಿಂದಲೂ ಮರಣ ಬಾರದಿರಲಿ" ಎಂದು ಮೊದಲನೆ ವರ ಕೇಳಿದ , ಎರಡನೆಯದಾಗಿ "ಅ ಏಳು ವರ್ಷದ ಬಾಲಕ ಶಿವಪುತ್ರನೇ ಆಗಿರಬೇಕು" ಎಂದು ಬೇಡಿದ. ಬ್ರಹ್ಮನಾದರೊ ತಥಾಸ್ತು ಎಂದ.ದೇವತೆಗಳೆಲ್ಲ ಕಂಗೆಟ್ಟರು. ತಾರಕ ಮೂರು ಲೋಕವನ್ನು ಆಕ್ರಮಿಸಿದ.ಇಂದ್ರಾದಿಗಳು ವಿಷ್ಣುವಿಗೆ ಮೊರೆ ಬಂದರು,ವಿಷ್ಣುವು ತಾನು ಅಸಹಾಯಕನೆಂದ ಶಿವಪುತ್ರನಿಂದಲ್ಲದೆ ತಾರಕನಿಗೆ ಅನ್ಯರಿಂದ ಮರಣವಿಲ್ಲ.
ತಾರಕನು ಯೋಚಿಸಿಯೆ ವರಬೇಡಿದ್ದ. ಪರಶಿವನೀಗ ಒಂಟಿ, ಅವನು ಮದುವೆಯಾಗುವುದು ಅಸಂಭವ. ಒಂದುವೇಳೆ ಮದುವೆಯಾದರು ದೀರ್ಘತಪಸ್ಸಿನಲ್ಲಿ ಮುಳುಗಿ ಸನ್ಯಾಸಿಯಂತಿರುವ ಅವನು ಸಂಸಾರಿಯಾಗಿ ಮಕ್ಕಳನ್ನು ಪಡೆಯುವುದು ಸಾದ್ಯವೆ ಇಲ್ಲ ಎಂದು ತಾರಕನ ಲೆಕ್ಕ.ಅವನ ಯೋಚನೆಯು ಸರಿ ಇತ್ತು.
ಆದಿದೇವನಾದ ಪರಶಿವನು ಸತಿಯನ್ನು ವರಿಸಿದ್ದ. ಸತಿಯಾದರೊ ದಕ್ಷಬ್ರಹ್ಮನ ಪುತ್ರಿ. ಅದೇನೊ ಸದಾ ಮಾವನಿಗೆ ತನ್ನ ಅಳಿಯ ಶಿವನನ್ನು ಕಂಡರೆ ಎಂತದೊ ತಿರಸ್ಕಾರ. ಸದಾ ಸ್ಮಶಾನವಾಸಿಯಾದ, ಬೂದಿಯನ್ನು ವಿಭೂತಿಯಾಗಿ ಬಳಿದುಕೊಳ್ಳುವ, ಪ್ರೇತಗಣಗಳೊಡನೆ ವಾಸಿಸುವ ಶಿವನನ್ನು ತನ್ನ ಸರಿಸಮಾನವಾಗಿ ಕಾಣಲು ಒಪ್ಪದ ದುರಭಿಮಾನ.ಅಂತಹ ದುರಂಹಕಾರ ಅವನ ಪುತ್ರಿಯ ಮರಣಕ್ಕೆ ಕಾರಣವಾಗಿತ್ತು.
ತನ್ನ ಅರಮನೆಯಲ್ಲಿ ನಡೆದ ಮಹಾಯಾಗಕ್ಕೆ ದೇವ ದೇವತೆಗಳನ್ನು ಸಮಸ್ತರನ್ನು ಅಹ್ವಾನಿಸಿ ಬೇಕೆಂದೆ ಅಳಿಯನನ್ನು ಕರೆಯದೆ ಅಲಕ್ಷ ಮಾಡಿದ. ಯಾಗದ ವಿಷಯ ಅರಿತ ಸತಿಗೆ ತವರಿನ ವ್ಯಾಮೋಹ, ಶಿವನು ಬೇಡವೆಂದು ಸೂಕ್ಷ್ಮವಾಗಿ ತಿಳಿಸಿದರು ಅರಿಯದೆ ತವರಿಗೆ ಬಂದಳು.ಸಮಸ್ತರೆದುರು ದಕ್ಷರಾಜನು ಅಳಿಯನನ್ನು ಹಳಿದ ಮಗಳನ್ನು ತಿರಸ್ಕರಿಸಿದ. ತಂದೆಯ ನಡತೆಯಿಂದ ಕಂಗೆಟ್ಟಳು ಸತಿ. ತನ್ನಿಂದ ಪತಿಗೆ ಅವಮಾನವಾಯ್ತೆಂದು ಮರುಗಿದಳು. ಅಭಿಮಾನಧನೆಯಾದ ಆಕೆ ಎಲ್ಲರೂ ಬೆಚ್ಚಿಬೀಳುವಂತೆ ತನ್ನನ್ನೆ ಯಜ್ಙಕುಂಡಕ್ಕೆ ಅರ್ಪಿಸಿಕೊಂಡು ದೇಹತ್ಯಾಗ ಮಾಡಿದಳು. ವಿಷಯವರಿತ ಶಿವ ರೌದ್ರನಾದ, ಅವನ ಗಣಗಳು ಅಬ್ಬರಿಸಿ ಬಂದರು ದಕ್ಷ ಹತನಾಗಿ ಹೋದ.
ತನ್ನ ಸತಿ ಹೋದ ಕೊರಗು ಶಿವನನ್ನು ಬಾದಿಸತೊಡಗಿತು, ಪ್ರಪಂಚವನ್ನೆ ತೊರೆದ ಅವನು ಏಕಾಂಗಿಯಾದ, ಕೈಲಾಸದ ಉನ್ನತ ಶೃಂಗ ಒಂದನ್ನೇರಿ ದ್ಯಾನಕ್ಕೆ ಕುಳಿತ.ಸಮಾದಿಗೆ ಇಳಿದ, ಪ್ರಕೃತಿಯೊಡನೆ ಒಂದಾಗಿ ಬೆರೆತುಹೋದ.ಕೈಲಾಸ ಅನಾಥವಾಯಿತು. ಸತಿಯಿಲ್ಲದ ಶಿವನಿಲ್ಲದ ಪ್ರಮುಥಗಣಗಳಾದರು ಏನು ಮಾಡಿಯಾರು. ಎಲ್ಲರೂ ಕಂಗೆಟ್ಟರು.
ಇತ್ತ ದಕ್ಷಯಾಗದಲ್ಲಿ ದೇಹತ್ಯಾಗ ಮಾಡಿದ ಸತಿ , ಪರ್ವತರಾಜನಿಗೆ ಮಗಳಾಗಿ ಹುಟ್ಟಿ, ಕನ್ಯೆಯಾಗಿ ಬೆಳೆದು ಪಾರ್ವತಿ ಎಂದು ಪ್ರಖ್ಯಾತಳಾಗಿದ್ದಳು.ದೇವತೆಗಳೆಲ್ಲ ಚಿಂತಿಸಿದರು ಹೇಗಾದರು ಶಿವ ಪಾರ್ವತಿಯರನ್ನು ಸೇರಿಸಬೇಕಿದ್ದು ಅದಕ್ಕೆ ಲೋಕಸಂಚಾರಿ ನಾರದರ ರಾಯಬಾರವಾಯಿತು.ನಾರದರು ಪರ್ವತರಾಜನಲ್ಲಿಗೆ ಬಂದು ಪಾರ್ವತಿಯನ್ನು ಬೇಟಿಮಾಡಿ ಅವಳಿಗೆ ಸೂಕ್ತ ವರನೆಂದರೆ ಪರಶಿವನೆಂದು. ಅವನೀಗ ಒಂಟಿಯೆಂದು, ತಪದಲ್ಲಿರುವನೆಂದು ಹೇಗಾದರು ಅವನನ್ನು ಒಲಿಸಿಕೊಳ್ಳೆಂದು ಬೋದಿಸಿದರು.ತಂದೆಯ ಒಪ್ಪಿಗೆ ಪಡೆದ ಪಾರ್ವತಿ ಸಖಿಯರನ್ನು ಕೂಡಿಕೊಂಡು ನಾರದರ ಜೊತೆ ಶಿವನಿರುವಲ್ಲಿಗೆ ತಲುಪಿದಳು.
ಶಿವನಾದರೋ ಅಚಲ, ಎಚ್ಚರಗೊಳ್ಳುವುದು ದೂರವೆ ಉಳಿಯಿತು. ತಪಸ್ಸಿನಲ್ಲಿರುವ ಅವನ ಸೇವೆಗೆ ನಿಂತಳು ಪಾರ್ವತಿ. ಅವನಿಗೆ ಯಾವುದೆ ತೊಂದರೆಯಾಗದಂತೆ ಸುತ್ತಲು ಶೃಂಗರಿಸುವುದು,ಹೂವ ಹಾಸುವುದು.ಬಿಸಿಲಿನಲ್ಲಿ ನೆರಳು ಮಾಡುವುದು ಇಂತವೆ.ಸದಾ ಮೌನವಾಗಿ ಅವನ ಜೊತೆಯಲ್ಲಿರುತ್ತಿದ್ದಳು.ದೇವತೆಗಳಿದಾದರೊ ಎಂತದೋ ಆತುರ.ಒಂದಡೆ ತಾರಕನ ಕಾಟವಾದರೆ, ಮೊತ್ತೊಂದಡೆ ಕಣ್ಮುಚ್ಚಿ ಕುಳಿತ ಶಿವ. ಪಾರ್ವತಿಯಂತೆ ಅನಂತ ಕಾಲದವರೆಗು ಕಾಯಲು ಅವರಿಗೆ ನೆಮ್ಮದಿಯಿಲ್ಲ. ಹಾಗಾಗಿ ಎಲ್ಲರೂ ಸೇರಿ ಮನ್ಮಥನನ್ನು ಕಳಿಸಿದರು ಏನಾದರು ಮಾಡಿ ಶಿವನನ್ನು ಎಚ್ಚರಗೊಳಿಸಿ ಅವನ ಗಮನ ಪಾರ್ವತಿ ಕಡೆಗೆ ತಿರುಗುವಂತೆ ಮಾಡು ಎಂದು. ಅವರ ಕಾರ್ಯ ಸುಗಮವಾಗಲಿ ಎಂದು. ಅದೋ ವಸಂತಕಾಲ ಮನ್ಮಥನು ಉತ್ಸಾಹದಿಂದ ಬಂದ ಅವನ ಪತ್ನಿ ರತಿಯೊಡನೆ. ಅವನಿಗೆ ಎಂತದೊ ಉನ್ಮಾದ ತನ್ನ ಶರಬಾಣವನ್ನು ಹೂಡಿದ, ಅವನಿಗೆ ಅಹಂ ಅತಿವಿಶ್ವಾಸ ತನ್ನ ಬಾಣಕ್ಕೆ ಸೃಷ್ಟಿಯಲ್ಲಿ ಎದುರೆ ಇಲ್ಲ ಎಂದು. ಇದ್ದಕಿದ್ದಂತೆ ತನ್ನಲ್ಲಾದ ಬದಲಾವಣೆಯಿಂದ ಶಿವ ಎಚ್ಚೆತ್ತ, ತನ್ನ ತಪಸ್ಸಿಗೆ ಬಂಗ ಬಂದುದ್ದಕ್ಕೆ ಆತ ಕ್ರೋದಗೊಂಡಿದ್ದ. ಎದುರಿಗೆ ಮನ್ಮಥನನ್ನು ನೋಡುವಾಗಲೆ ತಿಳಿಯಿತು ಇದು ಯಾರ ಕಾರ್ಯವೆಂದು. ಹೊತ್ತಿ ಉರಿಯಿತು ಅವನ ಹಣೆಗಣ್ಣು ನಿಂತಲ್ಲಿಯೆ ಭಸ್ಮವಾಗಿ ಹೋದ ಮನ್ಮಥ.
ಸೃಷ್ಟಿಯೆ ನಡುಗಿಹೋಯ್ತು ನಡೆದ ಅಚಾತುರ್ಯಕ್ಕೆ, ದೇವತೆಗಳು ತಮ್ಮಿಂದಾದ ತಪ್ಪಿಗೆ ಬಿಚ್ಚಿಬಿದ್ದರು.ಶಿವನ ಎದುರು ನಿಂತ ಪಾರ್ವತಿ ಅವನನ್ನು ಅನುನಯದಿಂದ ಪ್ರಾರ್ಥಿಸಿದಳು ಶಾಂತನಾಗಬೇಕೆಂದು, ಲೋಕಕಲ್ಯಾಣಕ್ಕಾಗಿ ತಪೋವಿಮುಖನಾಗೆಂದು ಬೇಡಿಕೊಂಡಳು. ಶಿವನ ಕೋಪ ಇಳಿದಿರನಲಿಲ್ಲ. ಅವನ ತಪಸಿನ ದಾಹವಿನ್ನು ತೀರಿರಲಿಲ್ಲ. ಶಿವನು ಪಾರ್ವತಿಗೆ ತಕ್ಷಣವೆ ಅಲ್ಲಿಂದ ಹೊರಡಬೇಕೆಂದು ,ಯಾರು ತನ್ನ ಹತ್ತಿರ ಸುಳಿಯಬಾರದೆಂದು ಕಟ್ಟಪ್ಪಣೆ ವಿದಿಸಿ ಪುನಃ ಅದೇ ಅನಂತ ತಪಸ್ಸಿನಲ್ಲಿ ಮುಳುಗಿಹೋದ.
ಅಪರ್ಣ: ಪಾರ್ವತಿ ಅಲ್ಲಿಂದ ಹೊರಟಳು, ತಂದೆ ಪರ್ವತ ರಾಜ ಬಂದ "ಮಗಳೆ ಬಾ" ಎಂದು. ಆದರೆ ಅವಳೀಗ ಶಿವನಲ್ಲಿಯೆ ತನ್ನ ಮನಸ್ಸನು ಅರ್ಪಿಸಿದ್ದಳು, ಪರಶಿವನಿಲ್ಲದ ಬಾಳು ಇಲ್ಲವೆಂದು ಅರಿತಿದ್ದಳು, ತಂದೆಯ ಜೊತೆ ಹೊರಡಲು ನಿರಾಕರಿಸಿ ಶಿವನಂತೆ ತಾನು ಸಹ ಕಠಿಣ ತಪದಲ್ಲಿ ತೊಡಗುವುದೆಂದು ನಿರ್ದರಿಸಿದಳು. ಅನ್ನಾಹಾರವನ್ನು ತೊರೆದ ಆಕೆ ಪರ್ಣಕುಟಿಯಲ್ಲಿ ನೆಲೆಸಿ ಬದುಕಲು ದಿನ ಒಂದು ಹಸಿ ಎಲೆಯನ್ನಷ್ಟೆ ತಿಂದಳು. ಹಲವು ವರ್ಷ ಹಾಗಿದ್ದ ಅವಳು ನಂತರ ಒಣಗಿದ ಎಲೆಯನ್ನಷ್ಟೆ ತಿಂದಳು ನಂತರ ಅದನ್ನು ತೊರೆದು ಅಪರ್ಣಳಾದಳು. ಮನಸ್ಸು ಶಿವನಲ್ಲಿಯೆ ದೃಡವಾಯಿತು. ದೇಹಬಾವ ತೊರೆದು ಹೋಯ್ತು, ಶಿವನಿಗೆ ತಕ್ಕ ಶಿವೆಯಾಗಿ ನಿಶ್ಚಲಳಾದಳು, ಸ್ಥಿರವಾದಳು.
ಹೌದು ಶಿವನೀಗ ಪ್ರಕೃತಕ್ಕೆ ಬರುತ್ತಿದ್ದ,ಅವನ ಮುಖದಲ್ಲಿನ ರೌದ್ರ ಭಾವ ಕರಗಿ ಅಲ್ಲಿ ಎಂತದೋ ಶಾಂತ ಭಾವ ಲಾಸ್ಯ ತುಂಬಿಕೊಳ್ಳುತ್ತಿತ್ತು.ಶಿವನ ಹೃದಯ ಬುದ್ದಿಗಳು ಎಚ್ಚೆತ್ತವು. ಸುತ್ತ ನಡೆಯುತ್ತಿದ್ದ, ನಡೆದಿದ್ದ ಎಲ್ಲ ಘಟನೆಗಳು ಅವನ ಜ್ಝಾನನೇತ್ರಕ್ಕೆ ಗೋಚರಿಸಿದವು. ತನಗಾಗಿ ಪಾರ್ವತಿ ಅಪರ್ಣಳಾಗಿ ಕಠಿಣ ತಪದಲ್ಲಿರುವುದು ಅವನ ಅರಿವಿಗೆ ಬಂದಿತು. ತನ್ನ ಎಚ್ಚರಕ್ಕಾಗಿ ಸೃಷ್ಟಿಯೆ ಕಾದುಕುಳಿತಿರುವುದು ಅವನಿಗೆ ಭೋದೆಯಾಯ್ತು. ನಿದಾನವಾಗಿ ಕಣ್ಣು ತೆರೆದ ಪರಮೇಶ್ವರ. ಎಲ್ಲೆಲ್ಲು ಸಂಭ್ರಮ, ಪ್ರಕೃತಿ ನಲಿಯಿತು. ಶಿವಗಣ ಸಂತೋಷದಿಂದ ನೃತ್ಯಮಾಡಿತು. ದೇವ ದೇವಾದಿಗಳು ಋಷಿಮುನಿಗಳು ಶಿವನನ್ನು ಸ್ತುತಿಸುತ್ತ ಉಘೇ ಉಘೇ ಎಂದರು. ಅವನಿಗಾಗಿ ತಪೋನಿರತಳಾಗಿರುವ ಸತಿಯ ಪುನರ್ಜನ್ಮ ರೂಪವಾದ ಪಾರ್ವತಿಯನ್ನು ಅನುಗ್ರಹಿಸಿ ಲೋಕವನ್ನು ಪಾಲಿಸಬೇಕೆಂದು ಬೇಡಿಕೊಂಡರು. ಒಲಿದ ಶಿವ ಈಗ ಅರಗಿಳಿಯಂತೆ. ಅವರೆಲ್ಲರ ಮಾತಿಗೆ ಅಸ್ತು ಎಂದ. ಪಾರ್ವತಿಯತ್ತ ಹೊರಟ. ಅಷ್ಟು ಸುಲುಭದಲ್ಲಿ ಒಲಿಯುವನೆ ಅವನು? . ಒಬ್ಬ ಸನ್ಯಾಸಿಯಂತೆ ವೇಶದಾರಿಯಾದ. ದಾರಿಹೋಕನಂತೆ ಅವಳತ್ತ ನಡೆದ.
ಪಾರ್ವತಿ ಎಂದಿನಂತೆ ತನ್ನ ಶಿವಪೂಜೆಯಲ್ಲಿ ಮುಳುಗಿದ್ದಳು. ಅತಿಥಿಯಂತೆ ಬಂದ ಸನ್ಯಾಸಿಯನ್ನು ಸ್ವಾಗತಿಸಿದಳು. ಶಿವ ಅವಳಿಂದ ಅತಿಥ್ಯ ಸ್ವಿಕರಿಸಿ ನಂತರ ನುಡಿದ
"ರಾಜಕುಮಾರಿ ನೀನು ಶಿವನಿಗಾಗಿ ತಪ ಮಾಡುತ್ತಿರುವೆ ಎಂದು ತಿಳಿಯಿತು. ನಿನಗಾರು ಇದನ್ನು ಭೋದಿಸಿದರು? ತಿಳಿಯದು. ಅವನಾದರೊ ಸನ್ಯಾಸಿ ಎಲ್ಲವನ್ನು ತೊರೆದವನು.ಸುಕೋಮಲೆಯಾದ ನೀನು ಮಸಣದಲ್ಲಿ ವಾಸಿಸುವ, ಅಲ್ಲಿನ ಬೂದಿಯನ್ನೆ ವಿಭೂತಿಯಾಗಿ ಧರಿಸುವ, ಮೂರು ಕಣ್ಣುಗಳೊಡನೆ ವಿಕಾರಿಯಾದ,ಪ್ರೇತ ಪಿಶಾಚಿಗಳೊಡನೆ ವಾಸಿಸುವ ಅವನನ್ನು ಏಕೆ ಬಯಸುವೆ. ಯಾರಾದರು ಸುಂದರರಾದರು ತರುಣರು ಆದ ನನ್ನಂತವರನ್ನು ಒಲಿದು ವರಿಸಬಾರದೇಕೆ?" ಎಂದು ನಗುತ್ತ ಪ್ರಶ್ನಿಸಿದನು.
ಶಿವನಿಂದೆಯಿಂದ ಪಾರ್ವತಿ ಕೋಪಗೊಂಡಳು,ಅವನನ್ನು ಕುರಿತು "ಎಲವೊ ಹುಸಿ ಸನ್ಯಾಸಿ ನಿನ್ನ ನಾಲಿಗೆಯನ್ನು ಬಿಗಿಹಿಡಿ, ಲೌಕಿಕ ಆಸೆಗಳಿಂದ ತುಂಬಿರುವ ನಿನ್ನ ಕಣ್ಣುಗಳು ಪರಶಿವನ ಮಹಿಮೆ ಅರಿಯಲಾರದು.ಬದುಕಿರುವ ಪ್ರತಿಜೀವಿಯ ಕಡೆಯ ಜಾಗ ನಮ್ಮನ್ನು ಸದಾ ಎಚ್ಚರಿಸುವ ಸ್ಮಶಾನವಾಸದ ಗುಟ್ಟು ನೀನರಿಯಲಾರೆ. ನಿನ್ನ ಆಸೆಗಳನ್ನು ಸುಡು ಎನ್ನುತ್ತ ಶವ ಸುಟ್ಟ ಬೂದಿಯನ್ನೆ ದರಿಸುವ ಅವನ ಮನ ನಿನಗೆ ಗೋಚರಿಸುವುದಿಲ್ಲ.ನಿನ್ನಂತ ಶಿವನಿಂದಕರು ಇರಬಾರದು" ಎನ್ನುತ್ತ ಶಪಿಸಲು ಮುಂದಾದಾಗ ಶಿವ ತನ್ನ ನಿಜ ಸ್ವರೂಪದಿಂದ ಪಾರ್ವತಿದೇವಿಯ ಎದುರು ನಿಂತನು. ಶಿವನನ್ನು ಕಂಡ ಪಾರ್ವತಿ ಪರವಶಳಾದಳು. ಎಲ್ಲ ಸುಖಾಂತವಾಯಿತು.
ಪಾರ್ವತಿದೇವಿಯ ತಂದೆ ತಾಯಿಯರು ಓಡೋಡಿ ಬಂದರು, ದೇವದೇವತೆಗಳೆಲ್ಲ ನೆರೆದರು. ಸಂಭ್ರಮದಿಂದ ಶಿವ ಪಾರ್ವತಿಯರ ಕಲ್ಯಾಣ ನೆರವೇರಿಸಿದರು. ಅದೇ ಸಂದರ್ಪದಲ್ಲಿ ದೇವತೆಗಳೆಲ್ಲ ಶಿವನನ್ನು ಪ್ರಾರ್ಥಿಸಿದರು, ಮನ್ಮಥನಿಲ್ಲದಿದ್ದರೆ ಲೋಕದ ಸೃಷ್ಟಿಕಾರ್ಯವೆ ನಡೆಯದು, ಹಾಗಾಗಿ ಅವನನ್ನು ಬದುಕಿಸು ಎಂದರು. ಶಿವ ಒಪ್ಪಿಕೊಂಡ, ಮನ್ಮಥ ಬದುಕಿದ ಆದರೆ ಶರೀರವೆ ಇಲ್ಲದೆ ಅನಂಗನಾದ. ಅವನ ಪತ್ನಿ ರತಿದೇವಿಯು ಸಂತೋಷಿಸಿದಳು. ಮದುವೆಯ ನಂತರ ಶಿವ ಪಾರ್ವತಿಯರು ತಮ್ಮ ವೈವಾಹಿಕ ಜೀವನಕ್ಕಾಗಿ ಗಂಧಮಂದನ ಪರ್ವತದತ್ತ ನಡೆದರು.
******* ಶುಭಂ ******
ಹಿನ್ನೋಟ: ಸುಮ್ಮನೆ ಹಾಗೆ ಪೌರಾಣಿಕ ಹಿನ್ನಲೆಯ ಕಥೆಯೊಂದನ್ನು ಬರೆಯಬೇಕೆಂದೆನಿಸಿತು. ಸಣ್ಣ ಕಥೆಗೆ ವಸ್ತು ಯಾವುದಾಗಬಹುದೆಂದು ಯೋಚಿಸಿದಾಗ ಹೊಳೆದ ವಸ್ತು "ಪಾರ್ವತಿ ಕಲ್ಯಾಣ" , ಸುಂದರ ಹಿಮಾಲಯದ ಹಿನ್ನಲೆಯಲ್ಲಿನ ಕಥೆ ಆಸಕ್ತಿದಾಯಕ. ಮತ್ತೆ ಎಂದಿನಂತೆ ಸಂಪದಿಗರ ಪ್ರತಿಕ್ರಿಯೆಗೆ ಕಾಯುತ್ತೇನೆ.
-ಪಾರ್ಥಸಾರಥಿ
ವಿ.ಸೂ. ಮೇಲಿನ ಚಿತ್ರ ಇಂಟರ್ ನೆಟ್ ನಿಂದ ಪಡೆದಿದ್ದು
Comments
ಉ: ಪೌರಾಣಿಕ ಕಥೆ: ಪಾರ್ವತಿ ಕಲ್ಯಾಣ
In reply to ಉ: ಪೌರಾಣಿಕ ಕಥೆ: ಪಾರ್ವತಿ ಕಲ್ಯಾಣ by Jayanth Ramachar
ಉ: ಪೌರಾಣಿಕ ಕಥೆ: ಪಾರ್ವತಿ ಕಲ್ಯಾಣ
In reply to ಉ: ಪೌರಾಣಿಕ ಕಥೆ: ಪಾರ್ವತಿ ಕಲ್ಯಾಣ by Jayanth Ramachar
ಉ: ಪೌರಾಣಿಕ ಕಥೆ: ಪಾರ್ವತಿ ಕಲ್ಯಾಣ
In reply to ಉ: ಪೌರಾಣಿಕ ಕಥೆ: ಪಾರ್ವತಿ ಕಲ್ಯಾಣ by gopaljsr
ಉ: ಪೌರಾಣಿಕ ಕಥೆ: ಪಾರ್ವತಿ ಕಲ್ಯಾಣ
In reply to ಉ: ಪೌರಾಣಿಕ ಕಥೆ: ಪಾರ್ವತಿ ಕಲ್ಯಾಣ by partha1059
ಉ: ಪೌರಾಣಿಕ ಕಥೆ: ಪಾರ್ವತಿ ಕಲ್ಯಾಣ
ಉ: ಪೌರಾಣಿಕ ಕಥೆ: ಪಾರ್ವತಿ ಕಲ್ಯಾಣ
In reply to ಉ: ಪೌರಾಣಿಕ ಕಥೆ: ಪಾರ್ವತಿ ಕಲ್ಯಾಣ by nagarathnavina…
ಉ: ಪೌರಾಣಿಕ ಕಥೆ: ಪಾರ್ವತಿ ಕಲ್ಯಾಣ
In reply to ಉ: ಪೌರಾಣಿಕ ಕಥೆ: ಪಾರ್ವತಿ ಕಲ್ಯಾಣ by nagarathnavina…
ಉ: ಪೌರಾಣಿಕ ಕಥೆ: ಪಾರ್ವತಿ ಕಲ್ಯಾಣ
In reply to ಉ: ಪೌರಾಣಿಕ ಕಥೆ: ಪಾರ್ವತಿ ಕಲ್ಯಾಣ by partha1059
ಉ: ಪೌರಾಣಿಕ ಕಥೆ: ಪಾರ್ವತಿ ಕಲ್ಯಾಣ
ಉ: ಪೌರಾಣಿಕ ಕಥೆ: ಪಾರ್ವತಿ ಕಲ್ಯಾಣ
In reply to ಉ: ಪೌರಾಣಿಕ ಕಥೆ: ಪಾರ್ವತಿ ಕಲ್ಯಾಣ by dinesh.kr
ಉ: ಪೌರಾಣಿಕ ಕಥೆ: ಪಾರ್ವತಿ ಕಲ್ಯಾಣ
ಉ: ಪೌರಾಣಿಕ ಕಥೆ: ಪಾರ್ವತಿ ಕಲ್ಯಾಣ
In reply to ಉ: ಪೌರಾಣಿಕ ಕಥೆ: ಪಾರ್ವತಿ ಕಲ್ಯಾಣ by raghumuliya
ಉ: ಪೌರಾಣಿಕ ಕಥೆ: ಪಾರ್ವತಿ ಕಲ್ಯಾಣ
ಉ: ಪೌರಾಣಿಕ ಕಥೆ: ಪಾರ್ವತಿ ಕಲ್ಯಾಣ
In reply to ಉ: ಪೌರಾಣಿಕ ಕಥೆ: ಪಾರ್ವತಿ ಕಲ್ಯಾಣ by RAMAMOHANA
ಉ: ಪೌರಾಣಿಕ ಕಥೆ: ಪಾರ್ವತಿ ಕಲ್ಯಾಣ
ಉ: ಪೌರಾಣಿಕ ಕಥೆ: ಪಾರ್ವತಿ ಕಲ್ಯಾಣ
In reply to ಉ: ಪೌರಾಣಿಕ ಕಥೆ: ಪಾರ್ವತಿ ಕಲ್ಯಾಣ by GOPALAKRISHNA …
ಉ: ಪೌರಾಣಿಕ ಕಥೆ: ಪಾರ್ವತಿ ಕಲ್ಯಾಣ
ಉ: ಪೌರಾಣಿಕ ಕಥೆ: ಪಾರ್ವತಿ ಕಲ್ಯಾಣ
In reply to ಉ: ಪೌರಾಣಿಕ ಕಥೆ: ಪಾರ್ವತಿ ಕಲ್ಯಾಣ by raghumuliya
ಉ: ಪೌರಾಣಿಕ ಕಥೆ: ಪಾರ್ವತಿ ಕಲ್ಯಾಣ