ಒಡಹುಟ್ಟಿದವರು!

ಒಡಹುಟ್ಟಿದವರು!

ಒಡಹುಟ್ಟಿದವರು!

ಆಗ:

ಒಡಹುಟ್ಟಿದವರು
ಅಮ್ಮ ಎಂದಷ್ಟೇ ನುಡಿಯುತ್ತಿದ್ದಾಗ
ಅನ್ಯ ಪದಗಳನ್ನೂ ಕಲಿಸಿದವರು

ಒಡಹುಟ್ಟಿದವರು
ಅಂಬೆಗಾಲಿಕ್ಕಿ ಮುಗ್ಗರಿಸುತ್ತಿದ್ದಾಗ
ಕೈಹಿಡಿದು ನಡೆಯ ಕಲಿಸಿದವರು

ಒಡಹುಟ್ಟಿದವರು
ನಾ ಮಳೆಯಲ್ಲಿ ನೆನೆದು ಬಂದಾಗ
ನನ್ನೊದ್ದೆ ಬಟ್ಟೆಯ ಬದಲಿಸಿದವರು

ಒಡಹುಟ್ಟಿದವರು
ನಿದ್ದೆಯಲಿ ಬೆದರಿ ಕನವರಸಿದಾಗ
ಮೈ ತಟ್ಟಿ ಮತ್ತೆ ಮಲಗಿಸಿದವರು

ಒಡಹುಟ್ಟಿದವರು
ಕಾಗದದ ದೋಣಿ ಒದ್ದೆಯಾದಾಗ
ತಮ್ಮ ದೋಣಿಯನೇ ನೀಡಿದವರು

ಒಡಹುಟ್ಟಿದವರು
ಕಣ್ಣಾ ಮುಚ್ಚಾಲೆ ಆಡುತ್ತಿರುವಾಗ
ತಾವಾಗೇ ಸೋತು ನಗಿಸಿದವರು

ಒಡಹುಟ್ಟಿದವರು
ಪಥ್ಯ ಮಾಡಲು ಒಪ್ಪದೇ ಇದ್ದಾಗ
ಮುದ್ದಿನಿಂದ ಶುಶ್ರೂಷೆ ನೀಡಿದವರು

ನಂತರ:

ಒಡಹುಟ್ಟಿದವರು
ನಾನು ನನ್ನ ಕಾಲ ಮೇಲೆ ನಿಂತಾಗ
ಒಳಗೆ ಮತ್ಸರವ ತುಂಬಿಕೊಂಡವರು

ಒಡಹುಟ್ಟಿದವರು
ತಪ್ಪು ಒಪ್ಪುಗಳ ವಿಮರ್ಶೆಗೆ ಹೋದಾಗ
ಸಂಬಂಧವನೇ ಮುರಿದು ಹೋದವರು

ಒಡಹುಟ್ಟಿದವರು
ಕುಡಿತಕ್ಕೆ ಮಾರುಹೋಗದಿರಿಯೆಂದಾಗ
ಅಮಲಿನಲ್ಲೇ ಜರೆದು ನೋಯಿಸಿದವರು

ಒಡಹುಟ್ಟಿದವರು
ನಾ ಒಂಟಿಯೇ ಎಂದು ಗಾಬರಿಯಲ್ಲಿದ್ದಾಗ
ಮುಖವಾಡವ ಧರಿಸಿ ನಾಟಕ ಆಡಿದವರು

ಈಗ:

ಒಡಹುಟ್ಟಿದವರು
ಮೊದಲು ಸಂಬಂಧಗಳ ಸರಿಪಡಿಸಿಯೆಂದಾಗ
ಸಂಬಂಧವ ಮರೆತು ಆಸ್ತಿಯ ಮಾತೆತ್ತಿದವರು

ಒಡಹುಟ್ಟಿದವರು
ಸುಧಾರಣೆಯ ಹಾದಿ ಮುಚ್ಚದಿರಿಯೆಂದಾಗ
ಕುಡುಕರ ಮಾತಿಗೇ ಸೊಪ್ಪು ಹಾಕಿದವರು

ಒಡಹುಟ್ಟಿದವರು
ಇವರಾದರೂ ನನ್ನವರು ಎಂದು ನಂಬಿದ್ದಾಗ
ಬೆನ್ನಲ್ಲಿ ಇರಿದೆನ್ನ ಜೀವಂತ ಸಾಯಿಸಿದವರು
*********************

Rating
No votes yet

Comments