ಕನ್ನಡ ಕುವರ ಕುಮಾರವ್ಯಾಸ
ರಸಋಷಿ ಕುಮಾರವ್ಯಾಸನು ನಡುಗನ್ನಡದ ಕವಿಗಳಲ್ಲೆಲ್ಲಾ ಅಗ್ರಗಣ್ಯನೆಂದು ಹೇಳಬಹುದು."ವೀರನಾರಾಯಣನೆ ಕವಿ ಲಿಪಿಕಾರ ಕುವರವ್ಯಾಸ","ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ" ಇತ್ಯಾದಿ ತುಳುಕದ ತುಂಬುಕೊಡದ ಮಾತನ್ನಾಡಿದರೂ ಅವನ ನಡುಗನ್ನಡದ ಶಬ್ದವೈಭವ,ಶಾಸ್ತ್ರಜ್ಞಾನ,ಭಕ್ತಿಯ ರಸಪಾಕ,ಅಪಾರ ಲೋಕಾನುಭವ,ವೇದಾಂತಜ್ಞಾನ ಇತ್ಯಾದಿಗಳು ಒಮ್ಮೊಮ್ಮೆ ಅತಿಮಾನುಷವಾಗಿ ಕಂಡರೆ ಆಶ್ಚರ್ಯವೇನಲ್ಲ.
ಒಬ್ಬ ಕವಿಯ ವೈಯುಕ್ತಿಕ ಜೀವನವು ಕಾವ್ಯರಸಾಸ್ವಾದಾನುಭವಿಯ ದೃಷ್ಟಿಯಿಂದ ಗೌಣವಾದುದರಿಂದಲೋ ಏನೋ ಮಹಾಕವಿಗಳು ತಮ್ಮ ವೈಯುಕ್ತಿಕ ಜೀವನದ ವಿಷಯಗಳನ್ನು ಅಜ್ಞಾತವಾಗಿಯೇ ಉಳಿಸಿ ಬಿಟ್ಟಿದ್ದಾರೆ.ಅವರ ಕಾವ್ಯ ರಚನೆಗಳು ಕೇವಲ "ಸ್ವಾಂತಃಸುಖಾಯ ಲೋಕಹಿತಾಯ"(ಸ್ವಾಂತಃಸುಖಾಯ-ಆತ್ಮಾನಂದಕ್ಕಗಿಯೂ,ಲೋಕಹಿತಾಯ-ಜನಗಳ ಹಿತದೃಷ್ಟಿಯಿಂದಲೂ) ಎಂಬ ತತ್ವಾಧಾರದಮೇಲೆಯೇ ನಿಂತಿರುತ್ತದೆ.ತನ್ನತನಕ್ಕೆ ಅಲ್ಲಿ ಲವಲೇಶವೂ ಅವಕಾಶವವೇ ಇರುವುದಿಲ್ಲವಾದ್ದರಿಂದ ಒಬ್ಬ ಕವಿಯು ದ್ವೈತಿಯೋ,ಅದ್ವೈತಿಯೋ,ವಿಶಿಷ್ಟಾದ್ವೈತಿಯೋ,ಬ್ರಾಹ್ಮಣನೋ, ಅಬ್ರಾಹ್ಮಣನೋ,ರಾಜಾನುಗ್ರಹಾರ್ಜಿತನೋ,ತದ್ವರ್ಜಿತನೋ,ನಮ್ಮದೇಶದವನೋ,ಪರದೇಶದವನೋ,ಇತ್ಯಾದಿ ಕ್ಷುಲ್ಲಕ ವಿಚಾರಗಳು ಕಾವ್ಯಾಮೃತ ರಸಾಸ್ವಾದ ಕುಶಲಿಗೆಂದೂ ಪ್ರಧಾನವಾಗದು.
ಡಿ.ವಿ.ಜಿ.ಯವರ "ದೇಶ ಕಾಲ ವಿಭಾಗ ಮನದ ರಾಜ್ಯದೊಳಿಲ್ಲ"
ಎಂಬ ಕಗ್ಗದ ಮಾತು ಇಲ್ಲಿ ಸ್ವೀಕಾರಾರ್ಹವಾಗುತ್ತದೆ.ಈ ದೃಷ್ಟಿಯಿಂದ ಕುಮಾರವ್ಯಾಸನನ್ನು ನೋಡಿದಾಗ ಅವನ ಕಾವ್ಯ ಶಕ್ತಿಯ ವ್ಯಾಪ್ತಿಯು ದೇಶಕಾಲಜಾತಿಗಳನ್ನು ಮೀರಿ ನಿಲ್ಲುವುದಲ್ಲದೇ ಅವನ ಅಪಾರ ಅಧ್ಯಯನಾನುಭವಗಳು ಅವನೇ ಹೇಳಿಕೊಂಡಂತೆ ದೈವಾನುಗ್ರಹದ ಮೂಸೆಯಿಂದಲೇ ಹೊರಹೊಮ್ಮಿರುವುದು ಸತ್ಯವೇನೋ ಎನ್ನಿಸಿದರೆ ಆಶ್ಚರ್ಯವಿಲ್ಲ.
ಭಗವದ್ಗೀತೆಯಲ್ಲಿಯೂ ಗೀತಾಚಾರ್ಯನಾದ ಶ್ರೀ ಕೃಷ್ಣನು "ಬುದ್ಧಿರ್ಬುದ್ಧಿಮತಾಮಸ್ಮಿ ತೇಜಸ್ತೇಜಸ್ವಿನಾಮಹಂ"(ಬುದ್ಧಿವಂತರ ಬುದ್ಧಿಯೂ ತೇಜಸ್ವಿಗಳ ತೇಜಸ್ಸೂ ನಾನೇ) ಎಂದು ಹೇಳಿದ್ದಾನೆ.ಆದ್ದರಿಂದಲೇ ಪ್ರಾಜ್ಞರಾದ ಪ್ರಾಚೀನಕವಿಗಳೆಲ್ಲರೂ ತಮ್ಮನ್ನು ತೃಣವಾಗಿಸಿಕೊಂಡು ಕಾವ್ಯವನ್ನು ಮಹತ್ತಾಗಿಸಿದ್ದಾರೆ.ಇಂಥ ಕಾವ್ಯಗಳು ಅಜರಾಮರವಾಗಿ ಸಮಾಜದಲ್ಲಿ ವಿರಾಜಮಾನವಾಗುತ್ತವೆ.
ರಾಷ್ಟ್ರ ಕವಿ ಕುವೆಂಪು ರವರು
"ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು"
ಎಂದು ಮನಸಾ ಹಾಡಿ ಹೊಗಳಿದ್ದಾರೆ.
ಈ ದೃಷ್ಟಿಯಿಂದ ಕುಮಾರವ್ಯಾಸನ ಪ್ರಗಲ್ಭ ಪಾಂಡಿತ್ಯವನ್ನು ದ್ರೌಪದೀ ಸ್ವಯಂವರ ಪ್ರಕರಣದಲ್ಲಿನ ಒಂದು ಭಾಮಿನಿಯಲ್ಲಿ ಸವಿಯೋಣ.
ಜನಪಕೇಳುಪಲಾಲಿತಾಂಜನ
ವೆನೆಜಿತಾಕ್ಷ ವಿಪಕ್ಷವಾದವು
ವಿನುತ ಕರ್ಣಪ್ರಣಯಗಳು ವೃಷಸೇನ ವೈರದಲಿ
ಜನವಿಡಂಬನ ತಾರಕಾಮಂ
ಡನ ಕದರ್ಥಿತ ಕುಮುದವೆನೆ ಲೋ
ಚನಯುಗಳವೊಪ್ಪಿದವು ವರ ಪಾಂಚಾಲನಂದನೆಯ
ಇಲ್ಲಿ "ಉಪಲಾಲಿತ"ವೆಂದರೆ "ಪ್ರೇಮದಿಂದ ಬೆಳೆಸಲ್ಪಟ್ಟ,ಪೋಷಿಸಲ್ಪಟ್ಟ"-ಎಂಬುದು ಸಾಮಾನ್ಯಾರ್ಥ.
ಈ ದೃಷ್ಟಿಯಿಂದ ಅರ್ಥೈಸಿದರೆ ಭಾಮಿನಿಯ ನೈಜಾರ್ಥ ಗೋಚರವಾಗದು.ಇಲ್ಲಿ ಕವಿಯು ಅಂಜನಶಾಸ್ತ್ರವಿಚಾರವನ್ನು ಹೇಳುತ್ತಿದ್ದಾನೆ.ಅಂಜನ ಎಂದರೆ ಕಣ್ಣಿಗೆ ಹಚ್ಚುವ ಕಾಡಿಗೆ.
ಅಂಜನದಲ್ಲಿ ಎರಡು ವಿಧ ಮೊದಲೆನೆಯದು "ಉಪಲಾಲಿತಾಂಜನ".ಎರಡನೆಯದು "ಮಹಾಲಾಲಿತಾಂಜನ".ಇವು ಮಂತ್ರಸಿದ್ಧವಾದುವುಗಳು "ಮಹಾಲಾಲಿತಾಂಜನವನ್ನು"ಕಣ್ಣಿಗೆ ಹಚ್ಚಿಕೊಂಡರೆ ನೋಡಿದವರು ಎಚ್ಚರತಪ್ಪಿಬಿಡುತ್ತಾರೆ.
ಉಪಲಾಲಿತಾಂಜನವನ್ನು ಹಚ್ಚಿಕೊಂಡರೆ ಆಕರ್ಷಿತರಾಗಿಬಿಡುತ್ತಾರೆ.ದ್ರೌಪದಿಯು ಉಪಲಾಲಿತಾಂಜನವನ್ನು ಕಣ್ಣಿಗೆ ಲೇಪಿಸಿಕೊಂಡಿರಬೇಕು.ಏಕೆಂದರೆ ಜಿತಾಕ್ಷ ವಿಪಕ್ಷ ವಾದವು.ಇಲ್ಲಿ ಅಕ್ಷವೆಂದರೆ ಪಗಡೆಯ ವಿಷಯವಲ್ಲ.ಅಕ್ಷ ಎಂದರೆ ಗಾಡಿಯ ಚಕ್ರಗಳೆರಡನ್ನು ಕೂಡಿಸುವ ಅಚ್ಚಿನ ಮರವೂ ಅಲ್ಲ.ಅಕ್ಷ ಎಂದರೆ ಇಂದ್ರಿಯಗಳು ಎಂದರ್ಥ.ಜಿತಾಕ್ಷ ವಿಪಕ್ಷವಾದವು ಎಂದರೆ ಇಂದ್ರಿಯಗಳು ವೈಕಲ್ಯ ಹೊಂದಿದವು ಅರ್ಥಾತ್ ಜಿತೇಂದ್ರಿಯರಾದ ಎಷ್ಟೋ ಋಷಿಗಳು ಸಭೆಯಲ್ಲಿದ್ದರು.ಅಂತಹ ಮಹನೀಯರುಗಳೂ ದ್ರೌಪದಿಯ ಕಂಗಳ ಸೌಂದರ್ಯವನ್ನು ನೋಡಿ ತಮ್ಮ ಇಂದ್ರಿಯಗಳ ಮೇಲಿನ ಹತೋಟಿಯನ್ನು ಕ್ಷಣಕಾಲ ಕಳೆದುಕೊಂಡು ಬಿಟ್ಟರು ಎಂಬುದು ನೈಜಾರ್ಥ.
ಇನ್ನು-" ಕರ್ಣ ಪ್ರಣಯಗಳು ವೃಷಸೇನ ವೈರದಲಿ"-
ವೃಷಸೇನ ಎಂದರೆ .ವೃಷಸೇನನು ಕರ್ಣನ ಮಗ ಎಂಬುದು ಮೇಲ್ನೋಟಕ್ಕೆ ಥಟ್ಟನೆ ಹೊಳೆವುದಾದರೂ,ಕರ್ಣ ಪ್ರಣಯ ಎಂದರೆ ಕಿವಿಯಲ್ಲಿ ನೇತಾಡುವ ಆಭರಣ ಎಂದು ಊಹಿಸಬಹುದಾದರೂ ಇದು ಅದರ ನೈಜಾರ್ಥವಲ್ಲ.ಕಣ್ಣಿನನರೆಪ್ಪೆ ಹಾಗೂ ಹುಬ್ಬನ್ನು ಕಪ್ಪಿನಿಂದ ಚೆನ್ನಾಗಿ ತಿದ್ದಿ ,ತೀಡಿ ಕಿವಿಯ ಸಮೀಪದವರೆಗೂ ಕೊಂಡೊಯ್ದರೆ ಅದು ಕರ್ಣಪ್ರಣಯ
(ಕಿವಿಯ ಪ್ರಿಯತಮ) ವಾಗುವುದು.ಇನ್ನು ವೃಷ ಎಂದರೆ ಭುಜ ,ಧರ್ಮ ಎಂದು ಅರ್ಥವಾಗುವುದು.ಭುಜ ಪ್ರಧಾನವಾದ್ದರಿಂದಲೇ ಎತ್ತಿಗೆ ವೃಷಭ ಎಂದು ಹೆಸರು.ಶಿವನಿಗೆ ವೃಷಧ್ವಜನೆಂಬ ಹೆಸರಿದೆ.ವೃಷ ಎಂದರೆ ಭುಜವೆಂದೂ ಸೇನ ಎಂದರೆ ಬಲವೆಂದೂ ಅರ್ಥೈಸಿದಾಗ ಕಣ್ಣಿಗೆ ಹಚ್ಚಿದ ಕಪ್ಪು ಕಿವಿಯ ಸಮೀಪದವರೆಗೂ ಹೋಗಿ ಭುಜಬಲದ ವೈರಿಯೋ ಎಂಬಂತೆ ನಿನಗೆ ನಾನೇನು ಕಡಿಮೆ ಎಂದು ಅದರೊಡನೆ ಸೆಣಸಲು ಹೊರಟಿದೆಯೋ ಎಂದು ಕಾಣಿಸುತ್ತಿತ್ತು ಎಂಬುದು ನೈಜಾರ್ಥ.
ಜನವಿಡಂಬನ ತಾರಕಾ ಮಂಡನ ಎಂದರೆ ಸ್ವಯಂವರಕ್ಕೆ ಬಂದು ಸೇರಿದ್ದ ರಾಜರೆಲ್ಲರೂ ನಕ್ಷತ್ರಗಳ ಸಮೂಹದಂತಿದ್ದರೂ ದ್ರೌಪದಿಯ "ಲೋಚನಯುಗಳ ಕದರ್ಥಿತ ಕುಮುದ" ಎಂದರೆ ಆ ನಕ್ಷತ್ರಗಳನ್ನು ತಿರಸ್ಕರಿಸುವ ಕುಮುದ ಪುಷ್ಪಗಳಂತಿದ್ದವು ಎನ್ನುವುದು ಕವಿಯ ಆಶಯ.ಈ ಭಾಮಿನಿಯಲ್ಲಿ ಕೇವಲ ದ್ರೌಪದಿಯ ನಯನಗಳು ವರ್ಣಿತವಾಗಿವೆ...
....ಮುಂದುವರಿಯುವುದು
. . .
Comments
ಉ: ಕನ್ನಡ ಕುವರ ಕುಮಾರವ್ಯಾಸ
ಉ: ಕನ್ನಡ ಕುವರ ಕುಮಾರವ್ಯಾಸ
In reply to ಉ: ಕನ್ನಡ ಕುವರ ಕುಮಾರವ್ಯಾಸ by anant pandit
ಉ: ಕನ್ನಡ ಕುವರ ಕುಮಾರವ್ಯಾಸ
ಉ: ಕನ್ನಡ ಕುವರ ಕುಮಾರವ್ಯಾಸ
In reply to ಉ: ಕನ್ನಡ ಕುವರ ಕುಮಾರವ್ಯಾಸ by raghumuliya
ಉ: ಕನ್ನಡ ಕುವರ ಕುಮಾರವ್ಯಾಸ
In reply to ಉ: ಕನ್ನಡ ಕುವರ ಕುಮಾರವ್ಯಾಸ by haridasaneevan…
ಉ: ಕನ್ನಡ ಕುವರ ಕುಮಾರವ್ಯಾಸ
In reply to ಉ: ಕನ್ನಡ ಕುವರ ಕುಮಾರವ್ಯಾಸ by narabhangi
ಉ: ಕನ್ನಡ ಕುವರ ಕುಮಾರವ್ಯಾಸ
ಉ: ಕನ್ನಡ ಕುವರ ಕುಮಾರವ್ಯಾಸ
In reply to ಉ: ಕನ್ನಡ ಕುವರ ಕುಮಾರವ್ಯಾಸ by manju787
ಉ: ಕನ್ನಡ ಕುವರ ಕುಮಾರವ್ಯಾಸ
ಉ: ಕನ್ನಡ ಕುವರ ಕುಮಾರವ್ಯಾಸ
In reply to ಉ: ಕನ್ನಡ ಕುವರ ಕುಮಾರವ್ಯಾಸ by kpbolumbu
ಉ: ಕನ್ನಡ ಕುವರ ಕುಮಾರವ್ಯಾಸ
ಉ: ಕನ್ನಡ ಕುವರ ಕುಮಾರವ್ಯಾಸ
In reply to ಉ: ಕನ್ನಡ ಕುವರ ಕುಮಾರವ್ಯಾಸ by sada samartha
ಉ: ಕನ್ನಡ ಕುವರ ಕುಮಾರವ್ಯಾಸ
ಉ: ಕನ್ನಡ ಕುವರ ಕುಮಾರವ್ಯಾಸ
In reply to ಉ: ಕನ್ನಡ ಕುವರ ಕುಮಾರವ್ಯಾಸ by ಗಣೇಶ
ಉ: ಕನ್ನಡ ಕುವರ ಕುಮಾರವ್ಯಾಸ
ಉ: ಕನ್ನಡ ಕುವರ ಕುಮಾರವ್ಯಾಸ
ಉ: ಕನ್ನಡ ಕುವರ ಕುಮಾರವ್ಯಾಸ
In reply to ಉ: ಕನ್ನಡ ಕುವರ ಕುಮಾರವ್ಯಾಸ by hamsanandi
ಉ: ಕನ್ನಡ ಕುವರ ಕುಮಾರವ್ಯಾಸ
ಉ: ಕನ್ನಡ ಕುವರ ಕುಮಾರವ್ಯಾಸ