ಕೃಷ್ಣನ ಕೊಳಲಿನಾ ಕರೆ

ಕೃಷ್ಣನ ಕೊಳಲಿನಾ ಕರೆ

ಭಾರತೀಯ ಸಂಗೀತ ಸಾವಿರಾರು ವರ್ಷಗಳ ಪರಂಪರೆಯನ್ನು ಹೊಂದಿರುವುದು ತಿಳಿದ ವಿಷಯವೇ. ರಾಮಾಯಣದ ರಾವಣ ವೀಣೆ ನುಡಿಸುತ್ತಿದ್ದನೆಂದೂ, ಹನುಮಂತ ಗುಂಡಕ್ರಿಯ ರಾಗವನ್ನು ಹಾಡಿ ಕಲ್ಲು ಬಂಡೆಯನ್ನೇ ಕರಗಿಸಿದನೆಂಬುದು ಪ್ರತೀತಿ. ಅಲ್ಲದೇ, ಕುಶಲವರು ವೀಣೆಯನ್ನು ನುಡಿಸುತ್ತ, ರಾಮನ ಮುಂದೆ ರಾಮಾಯಣವನ್ನು ಹಾಡಿದರೆಂಬ ಸಂಗತಿ ರಾಮಾಯಣದ ಉತ್ತರಕಾಂಡದಲ್ಲಿದೆ. ಹಾಗಾಗಿ, ನಮ್ಮ ಸಂಗೀತದ ಆದಿಯನ್ನು ಕಡಿಮೆಯೆಂದರೆ ಎರಡುಸಾವಿರ ವರ್ಷಗಳ ಹಿಂದೆ ಎಂದಾದರೂ ಊಹಿಸಬೇಕಾಗುತ್ತೆ. ಏಕೆಂದರೆ, ವಾಲ್ಮೀಕಿರಾಮಾಯಣದ ಪ್ರಕ್ಷಿಪ್ತಭಾಗಗಳೂ (ಬಾಲಕಾಂಡ, ಉತ್ತರಕಾಂಡ) ಸುಮಾರು ಕ್ರಿಸ್ತನ ಕಾಲದ ಆಸುಪಾಸಿನವು ಎಂಬುದು ಗೊತ್ತಿರುವ ವಿಚಾರವೇ.

ಆದರೆ ಪುರಾಣ-ಪ್ರಸಿದ್ಧರಲ್ಲಿ ಸಂಗೀತಗಾರನೆಂದು ಜನಜನಿತವಾಗಿರುವುದು ಕೃಷ್ಣ. ಕೃಷ್ಣನ ಕೊಳಲು ವಾದನದ ಕೌಶಲ ಮಹಾಭಾರತದಲ್ಲಿ (ನನಗೆ ತಿಳಿದ ಮಟ್ಟ್ಟಿಗೆ) ಹೆಚ್ಚಾಗಿಲ್ಲವಾದರೂ, ನಂತರ ಬಂದ ಭಾಗವತ - ಗೀತಗೋವಿಂದದಿಂದ ಹಿಡಿದು ಕಳೆದ ಶತಮಾನದ ಗೋಕುಲನಿರ್ಗಮನ (ಪುತಿನ) ದ ವರೆಗೂ ಹಲವಾರು ಕವಿಗಳು ಕೃಷ್ಣನ ಕೊಳಲಿನ ಕರೆಯನ್ನು ಬಣ್ಣಿಸಿದ್ದಾರೆ.

ಹರಿದಾಸರಿಗೆ ಕೃಷ್ಣ ಪರಮದೈವವಲ್ಲವೇ ? ವ್ಯಾಸರಾಯರು ಕೊಳಲನೂದುವ ಚದುರನಾರೇ ಪೇಳಮ್ಮ ಎನ್ನುವ ಹಾಡಿನಲ್ಲಿ ಹೇಗೆ ಕೃಷ್ಣನ ಕೊಳಲನ್ನು ಕೇಳುತ್ತ ಪ್ರಪಂಚವೆಲ್ಲ ಸ್ತಭ್ದವಾಯಿತು ಎನ್ನುವುದನ್ನು ಹೀಗೆ ಚಿತ್ರಿಸುತ್ತಾರೆ.

ಮೇವ ಮರೆತವು ಗೋವುಗಳೆಲ್ಲ

ಸಾವಧಾನದಿ ಹರಿದಳೆ ಯಮುನೆ

ಆವಕಾಯುತಲೆ ಪಶುಗಳ ಮರೆತರು

ಸಾವಧಾನದಲಿ ಬೃಂದಾವನದಿ || ಕೊಳಲನೂದುವ ಚದುರನಾರೇ ಪೇಳಮ್ಮ||

ಇನ್ನು ಇವರ ಶಿಷ್ಯರಾದ ಪುರಂದರ ದಾಸರನ್ನಂತೂ ಕೇಳಲೇ ಬೇಕಿಲ್ಲ. ಅವರೇ ಕರ್ನಾಟಕಸಂಗೀತ ಪಿತಾಮಹರಲ್ಲವೇ? ಹಾಗಾಗಿ ಕೃಷ್ಣನ ಕೊಳಲಿನ ವಾದನದ ವಿಧಾನವನ್ನು ತುತ್ತುರುತೂರೆಂದು ಬತ್ತಿಸ ರಾಗಗಳನ್ನು ಚಿತ್ತಜ ಜನಕ ತನ್ನ ಕೊಳಲಲ್ಲೂದಿದನು ಎನ್ನುವ ಹಾಡಿನಲ್ಲಿ, ಅವನ ಕೊಳಲ ನಾದದ ವಿಶೇಷತೆಯನ್ನೂ , ಅವನು ನುಡಿಸುವ ಸೊಬಗನ್ನೂ, ಅವನ ಪ್ರೀತಿಯ ರಾಗಗಳನ್ನೂ ಹೆಸರಿಸುತ್ತಾ ವರ್ಣಿಸುತ್ತಾರೆ.

ಇನ್ನೂ ಹೆಚ್ಚಿನ ವಿವರ ಇದ್ದರೆ ಚೆನ್ನಾಗಿರುತ್ತೆ ಅಲ್ಲವೇ ? ಹಾಗಾದರೆ ಈ ಕೆಳಗಿನ ಕೊಂಡಿ ನಿಮಗ ಖಂಡಿತ ಇಷ್ಟವಾಗುತ್ತೆ :) ಅಂತ ನನಗೆ ಗೊತ್ತು.

ಹಾಗಾದ್ರೆ ತಡ ಯಾಕೆ? ಕ್ಲಿಕ್ಕಿಸಿ!

ತುತ್ತುರು ತೂರೆಂದು ಬತ್ತಿಸರಾಗಗಳನ್ನು .......

-ಹಂಸಾನಂದಿ

 

 

Rating
No votes yet

Comments