ಏನೆಂದು ನಾ ಹಾಡಲಿ

ಏನೆಂದು ನಾ ಹಾಡಲಿ

ಏನೆಂದು ನಾ ಹಾಡಲಿ
ಅಪರಿಚಿತ ನೋಟದ ಆ ಸೆಳೆತಕೆ ಈ ಮನ ವಶವಾಯಿತು
ಭೇಟಿಯಾಗದ ಇಬ್ಬರ ಹೃದಯದ ಬೇಟೆ  ಶುರುವಾಯಿತು
ಪ್ರಣಯ ಕಾದಂಬರಿಗೊಂದು ಮುನ್ನುಡಿ ಬರೆದಂತಾಯಿತು
ಪಯಣಿಗ ನಾ ನಿಂತಾಗ ಜಗವೇ ಕೈಹಿಡಿದು ಮುನ್ನಡೆಸಿದಂತಾಯಿತು || ಏನೆಂದು ನಾ ಹಾಡಲಿ ||


ಕಣ್ಣು ಹುಡುಕುತಿದೆ ಹುದುಗಿಟ್ಟ ಪ್ರೀತಿಪಾಠದ ಸಂಚಿಯ
ಕಾಲು ಹಾತೊರೆಯುತಿದೆ ಹರಿದಾಟದ ಆ ತಿಳಿ ಸಂಜೆಯ
ತುಟಿಯಂಚು ತುದಿಗಾಲಲಿ ನಿಂತಿದೆ ಪ್ರಣಯದ ಮಾತು ಉದುರಿಸಲು
ಗುಳಿಯೊಂದು ಕಾರಣ ಹೇಳದೆ ಮೊಗ್ಗಿನ ಗಲ್ಲದಲಿ ಅರಳಿತು || ಏನೆಂದು ನಾ ಹಾಡಲಿ  ||


ಮುಂಗುರುಳ ಲಾಲಿಗೆ ಚಂದಿರ ಮಲಗಿದ ಮೇಘಚಾದರಹೊದ್ದು
ನಯನಶರ ಧಾಳಿಗೆ ಬಿಲ್ಲೊಂದು ಕಳಚಿತು ಬಣ್ಣವ ಮಳೆಯಲಿ ಮಿಂದು 
ಗೆಜ್ಜೆಯ ಝೇಂಕಾರಕೆ ಭ್ರಮರವು ಕಮಲದೊಡಲಲಿ ಮಂಪರು
ಲಜ್ಜೆಯ ವೈಯ್ಯಾರಕೆ ನವಿಲು ಸ್ಥಪತಿರಚಿತ ಒಂಟಿಕಾಲ ಶಿಲ್ಪ || ಏನೆಂದು ನಾ ಹಾಡಲಿ ||

ನಿಮ್ಮ
ಕಾಮತ್ ಕುಂಬ್ಳೆ

Rating
No votes yet

Comments