ಕನ್ನಡದ ಕಂದ

ಕನ್ನಡದ ಕಂದ

ನಾವು ಕಲಿತವರು / ನಗರಗಳಲ್ಲಿರುವ ಜನರು ಕನ್ನಡವನ್ನು ಹೆಚ್ಚು ಹೆಚ್ಚು ಕೈಬಿಡುತ್ತಿದ್ದೇವೆ.

ಬೆಂಗಳೂರಿನಲ್ಲಿ ನಮ್ಮ ಮನೆಗೆ ಒಬ್ಬ ೪-೫ ವರ್ಷದ ಒಬ್ಬ ಹುಡುಗ ಮನೆಗೆ ಬಂದಿದ್ದ ಅವನು ಗೋಕಾಕದ ನುಡಿಯನ್ನು ಆಡುತ್ತಿದ್ದ . ಹೀಗಿರುವಾಗ ನಮ್ಮ ಮನೆಯಲ್ಲಿ ನನ್ನ ಹೆಂಡತಿ ನೆರೆಮನೆಯವರು ಅವನನ್ನು ಮಾತನಾಡಿಸಿ ಅವನ ಮಾತಿನಿಂದ ಮೋಜು ಅನುಭವಿಸುತ್ತಿದ್ದರು. ನನ್ನ ಹೆಂಡತಿ ಅವನಿಗೆ ಚಾಕೊಲೇಟೊಂದನ್ನು ಕೊಟ್ಟಳು. ಚಾಕೊಲೇಟ್ ಅನ್ನು ಅವನು ಬಿಚ್ಚಿದ. ಚಾಕೊಲೇಟ್ ನ್ ಮೇಲಿನ ರ್‍ಯಾಪ್ಪರ್ ( ಅದಕ್ಕೆ ನೀವೇನು ಎನ್ನುವಿರಿ - ಕನ್ನಡ ಪಂಡಿತರೇ , ವಿದ್ಯಾವಂತರೇ , ಕನ್ನಡಾಭಿಮಾನಿಗಳೇ , ವಿಚಾರ ಮಾಡದೆ / ವಿಚಾರ ಮಾಡಿ ಹೇಳಿ ನೋಡೋಣ ) ಅನ್ನು ಅವನಿಗೆ ಚೆಲ್ಲ ಬೇಕಿತ್ತು.
.
.
.
.
.
.
.
.
.
.
.
.
.
.
.
.
.

ಗೊತ್ತಾಯಿತೇ?

ಅವನು ಕೇಳಿದ - ಈ ಸಿಪ್ಪೆಯನ್ನು ಎಲ್ಲಿ ಚೆಲ್ಲಬೇಕು? ಅಂತ . ಎಲ್ಲರೂ ನಕ್ಕರು. ಅದೇ ಸರಿ ಅಲ್ಲವೇ ? ಸಾವಿರಾರು ವರ್ಷಗಳ ಕನ್ನಡದ ಶಕ್ತಿ ನಮ್ಮ ಹಳ್ಳಿಯ ಜನರಲ್ಲಿದೆ.ಅವರ ಬಳಕೆಯ ಭಾಷೆಯಲ್ಲಿದೆ. ನಾವು ಇರುವ ಶಬ್ದ ಬಿಟ್ಟು ಸಂಸ್ಕೃತ ಮೂಲದ ಶಬ್ದ ಹುಡುಕುತ್ತೇವೆ. ಅಥವಾ ಕನ್ನಡದಲ್ಲಿ ಸರಿಯಾದ ಶಬ್ದ ಇಲ್ಲ / ಸರಿಯಾಗಿ ಅಭಿವ್ಯಕ್ತಿಸಲಾಗದು/ ಗ್ರಾಂಥಿಕವಾಗುತ್ತದೆ/ ಬಳಕೆಯಲ್ಲಿ ತರಲು ಆಗುವದಿಲ್ಲ ಎಂದೆಲ್ಲ ಹೇಳುವ ನಮಗೆ ಒಂದು ಮುಖ್ಯ ಪಾಠ ಇಲ್ಲಿದೆ. ಅಲ್ಲವೇ ?

ನನ್ನ ಹೆಂದತಿ ಡಸ್ಟ್‍ಬಿನ್ನಲ್ಲಿ ಹಾಕು ಎಂದು ಕಳಿಸಿದಳು. ಪಾಪ ಈ ಹುಡುಗನಿಗೆ ಡಸ್ಟ್ ಬಿನ್ ಅಂದರೇನು ಗೊತ್ತಿಲ್ಲ . ಅಲ್ಲೇ ಇದೆ ನೋಡು ಸಿಂಕ್ ಹತ್ತಿರ, ವಾಷಿಂಗ್ ಬೇಸಿನ್ ಹತ್ರ ಎಂದಳು. ಅವನು (ಸಹಜ ಅಲ್ವೇ) ಗುರುತಿಸದಾದಾಗ ಎದ್ದು ತೋರಿಸಿದಳು. ಅವನು ' ಐ, ಕಸದ ಪುಟ್ಟಿ ಅಂತ ಹೇಳಬಾರದೇನ್ರಿ? ' ಅಂಥ ಹೇಳಿದಾಗ ನನ್ನ ಹೆಂಡತಿ ಸುಸ್ತು! .

ಸಂಜೆ ನಾನು ಮನೆಗೆ ಬಂದ ಮೇಲೆ ನನ್ನ ಹೆಂಡತಿ ಈ ವಿಷಯ ಹೇಳಿದಾಗ- ' ನಿಮಗೆ ನಾಚಿಕೆ ಆಗ್ಬೇಕು - ಕನ್ನಡ ಕೈಬಿಟ್ಟಿದ್ದೀರಿ. ಆ ಹುಡುಗನಿಂದ ಕಲ್ತೋಬೇಕು' ಅಂದು ' ಶಭಾಶ್ ! ಕನ್ನಡದ ಕಂದ' ಎಂದು ಮೆಚ್ಚಿಕೊಂಡೆ.

Rating
No votes yet

Comments