ರಿಮೋಟ್ ಅರಣ್ಯೀಕರಣ (ಭಾಗ ೨)
ನನ್ನ ಈ (http://www.sampada.net/blog/vasanth-kaje/29/11/2007/6456) ಬ್ಲಾಗಿಗೆ ಹಲವಾರು ಧನಾತ್ಮಕ ಪ್ರತಿಕ್ರಿಯೆಗಳೂ, ತೀವ್ರ ಋಣಾತ್ಮಕ ಪ್ರತಿಕ್ರಿಯೆಗಳೂ ಬಂದಿವೆ. ಎಲ್ಲರಿಗೂ ವಂದನೆಗಳು.
hpn, ಫೊಟೊ ಮೇಲೆ ಕಟ್ ಆಗಬಾರದಿತ್ತು ಅನ್ನುವುದು ನಿಜ. ನನಗೇ ಹಾಗೆ ಅನ್ನಿಸಿದೆ. ನೀವು ಚಿತ್ರಗಳನ್ನು ಚೆನ್ನಾಗಿ ವಿಮರ್ಶಿಸುತ್ತೀರಿ.
ಮುರಳಿಯವರ ಪ್ರತಿಕ್ರಿಯೆಯ ಬಗ್ಗೆ, ಸ್ವಲ್ಪ ಬರೆಯುವುದು ಇದೆ. ಆದ್ದರಿಂದ ಇದನ್ನು ಹೊಸ ಬ್ಲಾಗ್ ಆಗಿ ಪೋಸ್ಟುತ್ತಿದ್ದೇನೆ.
ಮುಂದುವರೆದ ದೇಶಗಳು ಕಲ್ಮಶವನ್ನು ನಮ್ಮಲ್ಲಿಗೆ ಸಾಗಹಾಕುತ್ತವೆ ಎನ್ನುವುದನ್ನು ನಾನೂ ಕೇಳಿದ್ದೇನೆ. ಸುಧಾದ ಸುದ್ದಿ ಸ್ವಾರಸ್ಯದಲ್ಲಿ ಓದಿದ ನೆನಪು. ತಮಿಳ್ನಾಡಿನಲ್ಲಿ ಪ್ರಪಂಚದಲ್ಲಿಯೇ ಅತಿ ದೊಡ್ಡ ಪಾದರಸ ಆಧಾರಿತ ಥರ್ಮಾಮೀಟರ್ ಕಾರ್ಖಾನೆ ಇದೆಯಂತೆ - ಸಂತೋಷ ಪಡುವ ವಿಷಯವಲ್ಲ - ಏಕೆಂದರೆ, ಮುಂದುವರೆದ ದೇಶಗಳು ಪಾದರಸದ ಉಪಯೋಗವನ್ನು ಬಿಟ್ಟು ಬೇರೇನೋ ಉಪಯೋಗಿಸಿದ ಥರ್ಮಾಮೀಟರ್ ಉತ್ಪಾದಿಸುತ್ತಿವೆ ಮತ್ತು ಅಲ್ಲಿಂದ ಪಾದರಸ (ಇತರ ಮೂಲಗಳಿಂದ ಬಿಸಾಡಲ್ಪಟ್ಟದ್ದು) ನಮ್ಮಲ್ಲಿಗೆ ರಫ್ತಾಗುತ್ತಿದೆ!. ಆದ್ದರಿಂದ ಮುರಳಿಯವರ ಈ ಆರೋಪವನ್ನು ಅಲ್ಲಗಳೆಯಲಾಗದು.
ಆದರೆ, ನನ್ನ ಗೆಳತಿ ರಶ್ಮಿಯ ಪ್ರಾಮಾಣಿಕ ಮತ್ತು ನಿಷ್ಕಲಂಕವಾದ ಹಸುರು ಪ್ರೀತಿಯನ್ನು ನೀವು ಗುರುತಿಸಿಲ್ಲ ಎಂಬುದು ನನಗೆ ಬಹಳ ನೋವು ತಂದಿದೆ. ಕರ್ನಾಟಕದ ಕೊಡಗಿನಲ್ಲಿ ಹುಟ್ಟಿ ಬೆಳೆದು ಈಗ ಹೆಚ್ಚಿನ ಕಲಿಕೆ ಮತ್ತು ಅವಕಾಶಗಳ ನಿಮಿತ್ತ ಅಮೆರಿಕೆಯಲ್ಲಿರುವ ಅವಳಿಗೆ ಎಲ್ಲಿಯೋ ದೂರದ ಅಮೆರಿಕದ ಕಾಡುಗಳಲ್ಲಿ ಗಿಡನೆಡುವುದು ಖಂಡಿತ ಸಂತೃಪ್ತಿ ನೀಡಲಾರದು. ಆದ್ದರಿಂದ ಅವಳು ನನ್ನ ಮೂಲಕ ಗಿಡ ನೆಡುವ ಕಾರ್ಯಕ್ಕೆ ಹೊರಟಿದ್ದಾಳೆಯೇ ಹೊರತು, ಅವಳಿಗೆ ಅಮೆರಿಕ ಮಾಡುವ ತಪ್ಪುಗಳ ಬಗ್ಗೆ ಯಾವುದೇ ಪಶ್ಚಾತ್ತಾಪ ಇಲ್ಲ!. ಏಕೆಂದರೆ ಅವಳು ಭಾರತೀಯಳು.
ಅಲ್ಲದೆ,
"ಅದೂ ಅಲ್ಲದೇ ಇವೆಲ್ಲಾ "ಪಾಶ್ಚಾತ್ತ್ಯ ದೇಶದ ಮನೋಬುದ್ಧಿಯ" ಪಶ್ಚಾತ್ತಾಪದ ಕಾರ್ಯಗಳೇ ಹೊರತು , ದಾರಿ/ದರ್ಶನ ಮೂಡಿಸುವ ಕೆಲಸಗಳಲ್ಲಾ.." -
ಒಳ್ಳೆಯ ವಿಷಯಗಳನ್ನು ನಾವು ಯಾರಿಂದಲಾದರೂ ಕಲಿಯಬಹುದು; ಪಾಶ್ಚಾತ್ಯರು ಪಶ್ಚಾತ್ತಾಪ ಪಟ್ಟು ಯಾವುದಾದರೂ ಒಳ್ಳೆಯ ಕೆಲಸವನ್ನು ಮಾಡಿದರೂ ಸರಿಯೇ - ಅದು ಸರಿಯಾದ ದಾರಿಯೆಂದಾದರೆ ಅನುಸರಣೀಯ.
ಹಾಗೂ,
"ಆಮೇಲೆ ಮರ ಗಿಡ ಬೆಳೆಸೋಕ್ಕೆ "ಡಾಲರ್ " ಸಹಾಯ ಬೇಕಿಲ್ಲಾ ಅ೦ದ್ಕೊ೦ಡಿದ್ದೇನೆ."
ನಾನು ’ಅಮೆರಿಕದವರು ದುಡ್ಡು ಕೊಟ್ಟು ನಾವು ಗಿಡ ಬೆಳೆಸುವ’ ಒಂದು general model of afforestation ಅನ್ನು ಇಲ್ಲಿ advocate ಮಾಡಿಲ್ಲ. ನನ್ನ ಗೆಳತಿ ರಶ್ಮಿ ತನ್ನೂರಿನಲ್ಲಿ ಈ ರೀತಿ ಗಿಡ ಬೆಳೆಸಲು ಬಯಸುತ್ತಾಳೆ ಎಂದಷ್ಟೇ ಹೇಳಿದ್ದೇನೆ.
ಆದರೆ, ಇನ್ಯಾರಾದರೂ ಪ್ರಾಮಾಣಿಕವಾಗಿ ಸದುದ್ದೇಶದಿಂದ ಸಹಾಯ ಮಾಡಲು ಬಂದರೆ ನಾವು ಏಕೆ ಬೇಡ ಎನ್ನಬೇಕು?. ನಮ್ಮ ಸಂಪದದಲ್ಲಿ ’ನಿಮ್ಮ ಸಹಾಯದ ಅಗತ್ಯವಿದೆ’ ಎಂದು ಬರೆದು ಸಂದಾಯವಾದ ಮೊತ್ತವನ್ನು ’ಡಾಲರ್’ ನಲ್ಲಿ ಬರೆದಿದೆ. ಭಾರತೀಯರು ಮಾತ್ರ (ಬಹುಶ: ಕನ್ನಡಿಗರು ಮಾತ್ರ!) ಸಹಾಯ ಮಾಡಬಹುದು ಎಂದು ಬರೆದಿದೆಯೇ?. ಒಳ್ಳೆಯ ಕೆಲಸಕ್ಕೆ ಸಹಾಯ ಎಲ್ಲಿಂದಾದರೂ ಹರಿದು ಬರಲಿ, ನಮಗೇನು?. ನೀವು ಈ ಬಗ್ಗೆ ಸುಮ್ಮನೆ ಮಕ್ಕಳಂತೆ ರೊಚ್ಚಿಗೇಳುತ್ತಿದ್ದೀರಿ.
"ಪ್ರಕೃತಿಗೆ ತನ್ನದೇ ಆದ ಶಕ್ತಿ ಚೈತನ್ಯವಿದೆ - ಗಮನಿಸಿ."
ಇದು ನನಗೆ ಅತ್ಯಂತ ಆತಂಕ ಉಂಟು ಮಾಡಿದ ವಾಕ್ಯ. ನೀವೇನನ್ನುತ್ತೀರಿ?. ಅರಣ್ಯ ನಾಶ ಆಗುತ್ತಾ ಹೋಗಲಿ, ಕೈಕಟ್ಟಿ ಕೂರೋಣ ಅನ್ನುತ್ತೀರೋ?. ಪ್ರಕೃತಿ ತನ್ನಿಂತಾನಾಗಿ ಸರಿಪಡಿಸಿಕೊಳ್ಳ ಬಲ್ಲದು - ಆದರೆ ಅವಳಿಗೆ ತನ್ನದೇ ಆದ ಒಂದು ಮಿತಿ ಇದೆ. ನಿನ್ನೆ London eye ಮೇಲೆ ನಿಂತಿದ್ದೆ, ಕಣ್ಣಿಗೆ ಕಾಣಿವಷ್ಟು ದೂರವೂ ಮಾನವ ನಿರ್ಮಿತ! (ಕಟ್ಟಡಗಳು, ವಾಹನಗಳು ಇತ್ಯಾದಿ). ಈ ಸಂಖ್ಯೆಯಲ್ಲಿ ಇನ್ನಾವ ಪ್ರಾಣಿ/ಪಕ್ಷಿ/ಗಿಡ/ಮರ ಭೂಮಿಯಲ್ಲಿ ಹಬ್ಬಿದೆ?.ಪ್ರಕೃತಿ ತಾನೇ ಇಷ್ಟೆಲ್ಲವನ್ನು ಹೇಗೆ ಸರಿಪಡಿಸಿಕೊಂಡಾಳು?.
ಅಲ್ಲದೆ, ನಿಮ್ಮ ಈ ವಾಕ್ಯ ’ನಾವು active ಆಗಿ ಇವನ್ನೆಲ್ಲ ಸರಿಪಡಿಸಬೇಕಾಗಿಲ್ಲ, ಪ್ರಕೃತಿ ತಾನೇ ಮಾಡಿಯಾಳು’ ಎಂಬರ್ಥ ದಲ್ಲಿದ್ದರೆ ಅದಕ್ಕಿಂತ ಮೊದಲು ನೀವೇ ’ಅ೦ದರೆ ಇಲ್ಲಿಯ ಜನಕ್ಕೆ ಯಾವುದಕ್ಕೂ ಆಸ್ತೆ ಇಲ್ಲಾ...ಎಲ್ಲಕ್ಕೂ ನಿರ್ಲಕ್ಷ್ಯ ಇದಕ್ಕಿನ್ನಾ ಶೋಕದಾಯಕವಾದದ್ದು ಯಾವುದಿದೆ ?’ ನಿರ್ಲಕ್ಷ್ಯ ಸಲ್ಲದು ಎನ್ನುವ ಥರ ಬರೆದಿದ್ದೀರಿ!.
ನಾನಿಷ್ಟೇ ಹೇಳಲು ಬಯಸುತ್ತೇನೆ. ಪರಿಸ್ಥಿತಿ ನಿಧಾನವಾಗಿಯಾದರೂ ನಮ್ಮ ಕೈಮೀರಿ ಹೋಗುತ್ತಿದೆ. ನಮ್ಮ ಪ್ರಕೃತಿಯ ರಕ್ಷಣೆ ನಮ್ಮ ಕೈಯಲ್ಲಿದೆ. ಸಾಧ್ಯವಾದಷ್ಟು ಬೇಗ ಇದನ್ನು ಪ್ರಪಂಚ ಅರ್ಥಮಾಡಿಕೊಳ್ಳಬೇಕಿದೆ.
ವಂದನೆಗಳು,
ವಸಂತ್ ಕಜೆ.
Rating
Comments
ಉ: ರಿಮೋಟ್ ಅರಣ್ಯೀಕರಣ (ಭಾಗ ೨)
ಉ: ರಿಮೋಟ್ ಅರಣ್ಯೀಕರಣ (ಭಾಗ ೨)
ಉ: ರಿಮೋಟ್ ಅರಣ್ಯೀಕರಣ (ಭಾಗ ೨)
In reply to ಉ: ರಿಮೋಟ್ ಅರಣ್ಯೀಕರಣ (ಭಾಗ ೨) by muralihr
ಉ: ರಿಮೋಟ್ ಅರಣ್ಯೀಕರಣ (ಭಾಗ ೨)