ಹೊಸ ಐಪ್ಯಾಡ್:ಹೆಚ್ಚು ಆಕರ್ಷಕ
ಹೊಸ ಐಪ್ಯಾಡ್:ಹೆಚ್ಚು ಆಕರ್ಷಕ
ಟ್ಯಾಬ್ಲೆಟ್ ಸಾಧನಗಳ ಮಾರುಕಟ್ಟೆಯಲ್ಲಿ ಇನ್ನೇನು ಸ್ಯಾಮ್ಸಂಗ್ನ ಗ್ಯಾಲಕ್ಸಿ,ಮೊಟೊರೊಲಾದ ಕ್ಸೂಮ್,ಬ್ಲ್ಯಾಕ್ಬೆರಿ ಕಂಪೆನಿಯ ಪ್ಲೇಬುಕ್ ಮುಂತಾದ ವಿವಿಧ ಉತ್ಪನ್ನಗಳ ಆಯ್ಕೆ ಲಭ್ಯವಾಗಿ ಸ್ಪರ್ಧೆ ಕಾವೇರಿದೆ.ಆಪಲ್ ಕಂಪೆನಿಯು ಈ ಸ್ಪರ್ಧೆಯನ್ನು ಎದುರಿಸಲು ಎರಡನೇ ಆವೃತ್ತಿಯ ಐಪ್ಯಾಡ್ಗಳ ಸುಧಾರಿತ ಉತ್ಪನ್ನಗಳನ್ನು ಹೊರತರುವುದರಲ್ಲಿದೆ.ಮಾರ್ಚ್ ಅಂತ್ಯದ ವೇಳೆ ಅಮೆರಿಕಾ,ಯುರೋಪುಗಳಲ್ಲಿವು ಲಭ್ಯವಾಗುವ ನಿರೀಕ್ಷೆಯಿದೆ.ಹಳೆ ಬೆಲೆಗೆ ಹೆಚ್ಚು ಹಗುರ,ತೆಳು ಮತ್ತು ಹೆಚ್ಚು ಸಂಸ್ಕರಣ ಸಾಮರ್ಥ್ಯವಿರುವ ಐಪ್ಯಾಡ್2 ಎಂಬ ಹೆಸರಲ್ಲಿ ಬಿಡುಗಡೆಯಾಗಲಿದೆ.ಡ್ಯುಲ್ ಕೋರ್ ಸಂಸ್ಕಾರಕವು ಎರಡು ಪಟ್ಟು ಹೆಚ್ಚು ವೇಗದ್ದಾಗಿದ್ದು,ಹಳೆಯ ಐಪ್ಯಾಡುಗಳಿಗಿಂತ ಮೂವತ್ತಮೂರು ಶೇಕಡಾ ತೆಳುವಾಗಿ,ಹದಿನೈದು ಶೇಕಡಾ ಹಗುರದ್ದಾಗಿರುತ್ತದೆ.ಗ್ರಾಫಿಕ್ಸ್ ಸಾಮರ್ಥ್ಯವು ಹಳೆಯವುಗಳ ಹದಿನೈದು ಪಟ್ಟು ಉತ್ತಮವಾಗಿರುತ್ತದೆ.ಮುಂಭಾಗ ಮತ್ತು ಹಿಂಭಾಗದಲ್ಲಿ-ಹೀಗೆ ಎರಡು ಕ್ಯಾಮರಾಗಳಿವೆ.ಎದುರಿನದ್ದು ವಿಡಿಯೋ ಚ್ಯಾಟಿಂಗ್ಗೆ ಅನುಕೂಲಕರವಾದರೆ,ಹಿಂದಿನದ್ದು ವಿಡಿಯೋ ಮತ್ತು ಚಿತ್ರಗ್ರಹಣಕ್ಕೆ ಅನುಕೂಲಕರವಾಗಿದೆ.ಐಪ್ಯಾಡಿನ ಮುಚ್ಚಿಕೆಯು ಅದನ್ನು ತೆರೆದಿಟ್ಟಾಗ,ನೇರ ನಿಲ್ಲಿಸಲು ಆಧಾರವಾಗಿಯೂ ಕೆಲಸ ಮಾಡುತ್ತದೆ.ಎಚ್ ಡಿ ಎಂ ಐ ಪೋರ್ಟ್ ಬಳಸಿಕೊಂಡು ಎಚ್ ಡಿ ಟಿ ವಿ ತೆರೆಯಲ್ಲಿ ಐಪ್ಯಾಡ್ನ ತೆರೆಯಲ್ಲಿ ಕಾಣುತ್ತಿರುವುದರ ದರ್ಶನಕ್ಕೆ ಅನುಕೂಲ ಕಲ್ಪಿಸುತ್ತದೆ.ತೆರೆಯು ಹತ್ತಿಂಚಿಗಿಂತ ತುಸುವಷ್ಟೇ ಕಡಿಮೆ.ತೂಕ ಆರುನೂರು ಗ್ರಾಮಿನಷ್ಟು.ಹದಿನಾರು ಜೀಬಿ ಸಾಮರ್ಥ್ಯದ್ದಕ್ಕೆ ಐನೂರು ಡಾಲರು ಬೆಲೆ.ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಐಪ್ಯಾಡ್ ಖರೀದಿ ಆಯ್ಕೆ ಗ್ರಾಹಕನಿಗೆ ಸಿಗಲಿದೆ.ಇದರಲ್ಲಿ ಲಭ್ಯವಿರುವ ರಾಮ್ ಸ್ಮರಣ ಸಾಮರ್ಥ್ಯದಲ್ಲಿ ವೃದ್ಧಿಯಾಗಿಲ್ಲ.ತೆರೆಯ ಸ್ಪಷ್ಟತೆಯಲ್ಲೂ ಹೆಚ್ಚಳವಾಗಿಲ್ಲ.ಆದರೂ ಜನರು ಹೊಸ ಐಪ್ಯಾಡ್ ಬಗ್ಗೆ ಹುಚ್ಚು ಕಟ್ಟಿದ್ದಾರೆ ಎಂದು ಅಮೆರಿಕಾ,ಯುರೋಪುಗಳ ವರದಿಗಳು ತಿಳಿಸುತ್ತವೆ.ಐಪ್ಯಾಡ್2 ಬಗ್ಗೆ ಮಾಹಿತಿ ನೀಡಲು ಜಡ್ಡು ಹಿಡಿದು ಮಲಗಿದ್ದರೆನ್ನಲಾದ ಸ್ಟೀವ್ ಜಾಬ್ಸ್ ಹಾಜರಾಗಿ ಅಚ್ಚರಿ ಮೂಡಿಸಿದರು.
----------------------------------------------
ಪಿಸಿ ಮಾರಾಟ:ಇಳಿಕೆ
ಐಪ್ಯಾಡ್ ಸಾಧನಗಳ ಬಗ್ಗೆ ಗರಿಗೆದರಿರುವ ಉತ್ಸಾಹದಿಂದಾಗಿ ಕಂಪ್ಯೂಟರ್ ಪಿಸಿಗಳ ಮಾರಾಟ ಇಳಿಕೆ ಕಂಡು ಬಂದಿದೆ.ಕಿರಿದು ಗಾತ್ರ,ಸಾಮರ್ಥ್ಯದಲ್ಲಿ ಹಿರಿದು ಎಂಬ ಅಗ್ಗಳಿಕೆಯ ಐಪ್ಯಾಡ್ಗಳ ಇದುವರೆಗೆ ಹದಿನೈದು ದಶಲಕ್ಷ ಐಪ್ಯಾಡುಗಳು ಮಾರಾಟವಾಗಿವೆ. ಈ ವರ್ಷ ಐವತ್ತು ದಶಲಕ್ಷ ಐಪ್ಯಾಡುಗಳು ಮಾರಾಟವಾಗುವ ನಿರೀಕ್ಷೆಯಿದೆ.ಇದು ಖಂಡಿತವಾಗಿಯೂ ಪಿಸಿ ಮಾರಾಟದಲ್ಲಿ ಇಳಿಕೆಗೆ ಕಾರಣವಾಗಲಿದೆಯೆನ್ನುವುದು ಕಂಪ್ಯೂಟರ್ ಕ್ಷೇತ್ರದ ಗಾರ್ಟನರ್ ಸಂಸ್ಥೆಯ ಎಣಿಕೆ.ಬ್ಯಾಟರಿ ಬ್ಯಾಕಪ್ ಲಭ್ಯತೆಯ ಕಾರಣ ಎಲ್ಲೆಂದರಲ್ಲಿಗೆ ಎತ್ತಿ ಒಯ್ದು ಬಳಸಲಾಗುವ ಅನುಕೂಲತೆ ಮತ್ತು ಅಂತರ್ಜಾಲ ಮೂಲಕ ಹೆಚ್ಚಿನ ಕೆಲಸಗಳನ್ನು ಮಾಡಿಕೊಳ್ಳಲು ಸಾಧ್ಯವಾಗಿರುವ ಸದ್ಯದ ಕ್ಲೌಡ್ ಕಂಪ್ಯೂಟಿಂಗಿನ ಜನಪ್ರಿಯತೆ,ಇದಕ್ಕೆ ಕಾರಣವಾಗ ಬಲ್ಲ ಅಂಶಗಳೆಂದು ಗಾರ್ಟನರ್ ಗುರುತಿಸಿದೆ.
-------------------------------------------
ಸೌರಶಕ್ತಿಚಾಲಿತ ಕಂಪ್ಯೂಟರ್ ಕೀಲಿಮಣೆ
ಲಾಜಿಟೆಕ್ ಕಂಪೆನಿಯು ಬೆಳಕಿನಿಂದ ಚಾರ್ಜ್ ಆಗಬಲ್ಲ, ಬ್ಯಾಟರಿಯಿಂದ ಚಾಲಿತ ನಿಸ್ತಂತು ಕೀಲಿಮಣೆಯನ್ನು ಅಭಿವೃದ್ಧಿಪಡಿಸಿದೆ.ಇದನ್ನು ಕಂಪ್ಯೂಟರ್ ಅಥವಾ ಲ್ಯಾಪ್ಟಾಪಿಗೆ ನಿಸ್ತಂತು ಮೂಲಕ ಸಂಪರ್ಕಿಸಿ ಬಳಸಬಹುದು.ಕೀಲಿಮಣೆಯ ವಿನ್ಯಾಸವು ಕೈಬೆರಳುಗಳಿಗೆ ಆರಾಮದಾಯಕ ಅನುಭವ ನೀಡುವಂತಿದೆ.ಬಲ್ಬಿನ ಬೆಳಕಿನಲ್ಲಿ ಟೈಪಿಸಿದರೂ ಬ್ಯಾಟರಿ ರಿಚಾರ್ಜ್ ಆಗಲು ಸಮರ್ಥವಾಗಿದೆ.ಆಗೊಮ್ಮೆ ಈಗೊಮ್ಮೆ ಹೆಚ್ಚಿನ ಬೆಳಕಿಗೊಡ್ಡಿದರೂ ಸಾಕಾಗುತ್ತದಂತೆ.ವಾರಗಟ್ಟಲೆ ಬಳಸದೆ ಮೂಲೆಯಲ್ಲಿಟ್ಟಾಗಲೂ ಬ್ಯಾಟರಿ ಬರಿದಾಗದೆನ್ನುವುದು ಕೀಲಿಮಣೆಯ ಹೆಗ್ಗಳಿಕೆ.
-----------------------------------------
ಕೊರಿಯಾ:ಸೈಬರ್ ವಾರ್
ದಕ್ಷಿಣ ಕೊರಿಯಾದ ಕೆಲವಾರು ಬ್ಯಾಂಕಿಂಗ್,ಸರಕಾರಿ,ಮಿಲಿಟರಿ ಅಂತರ್ಜಾಲ ತಾಣಗಳು ದಾಳಿಗೀಡಾಗಿವೆ.ಇದರಿಂದ ತಾಣಗಳ ಸೇವೆಯು ಬಾಧಿತವಾಯಿತು ಎಂದು ವರದಿಯಾಗಿದೆ.ದೇಶದ ಶೇರು ಮಾರುಕಟ್ಟೆಯ ವ್ಯವಹಾರವೂ ತುಸು ಹೊತ್ತು ನಿಂತಿತ್ತು.ಕಳೆದ ವರ್ಷದಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ ದಾಳಿಗಳಂತೆ ಇವೂ,ಕಡತ ವರ್ಗಾವಣೆಗೆ ಅನುಕೂಲ ಕಲ್ಪಿಸುವ ತಾಣಗಳ ಮೂಲಕ ನಡೆದ ದಾಳಿಗಳಾಗಿದ್ದುವು.ಕಡತ ಇಳಿಸಿಕೊಂಡವರ ಕಂಪ್ಯೂಟರುಗಳನ್ನು ವಶೀಕರಿಸಿಕೊಂಡು,ಅವುಗಳ ಮೂಲಕ ನಡೆದ ದಾಳಿಗಳಿವು.ಈ ದಾಳಿಗಳ ಮೂಲಗಳ್ಯಾವುವು ಎನ್ನುವುದಿನ್ನೂ ಪತ್ತೆ ಹಚ್ಚಬೇಕಿದೆ.
---------------------------------------------
ತುಷಾರ:ವಾರ್ಷಿಕ ಚಂದಾ ಗೆಲ್ಲಿ!
ಈ ಪ್ರಶ್ನೆಗಳಿಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಉಡುಪಿ ಬ್ರಹ್ಮಗಿರಿಯ ಡಾ.ಶ್ರೀನಿವಾಸ್ ರಾವ್,ಪ್ರೊಫೆಸರ್,ನಿಟ್ಟೆ.
*ಲೀನಕ್ಸ್ ಮೂಲದ ಸ್ಮಾರ್ಟ್ ಫೋನ್ ಆಪರೇಟಿಂಗ್ ವ್ಯವಸ್ಥೆ ಯಾವುದು?
*ನಮ್ಮಲ್ಲಿ ಬಳಕೆಯಾಗುವ ಮತದಾನ ಯಂತ್ರದ ಅತ್ಯುತ್ತಮ ಗುಣ ಏನು?
(ಉತ್ತರಗಳನ್ನು nistantusansaara@gmail.comಗೆ ಮಿಂಚಂಚೆ ಮಾಡಿ,ವಿಷಯ:NS21 ನಮೂದಿಸಿ.)
ಕಳೆದ ವಾರದ ಸರಿಯುತ್ತರಗಳು:
*ಕೇರಳದಲ್ಲಿ ಶಿಕ್ಷಣಕ್ಕೆ ಲೀನಕ್ಸ್ ಆಪರೇಟಿಂಗ್ ವ್ಯವಸ್ಥೆ ಬಳಸುವ ಯೋಜನೆ ಐಟಿ@ಸ್ಕೂಲ್.
*ಮೈಂಡ್ಮ್ಯಾಪಿಂಗಿಗೆ ಬಳಸಬಹುದಾದ ಜನಪ್ರಿಯ ತಂತ್ರಾಂಶ ಫ್ರೀಮೈಂಡ್.ಬಹುಮಾನ ಗೆದ್ದವರು ಅಶೋಕ್ ಶೆಟ್ಟಿಗಾರ್,ಅಲೆವೂರು,ಉಡುಪಿ.ಅಭಿನಂದನೆಗಳು.
-------------------------------------------------
ಟ್ವಿಟರ್ ಚಿಲಿಪಿಲಿ
*ರಸ್ತೆಯ ಎರಡೂ ಪಕ್ಕಗಳ ಮರ ಕಡಿಯುವ ಬದಲಿಗೆ,ಅಗಲೀಕರಣವನ್ನು ಒಂದೇ ಬದಿಗೆ ಸೀಮಿತಗೊಳಿಸಬಹುದಲ್ಲಾ?
*ತಪ್ಪು ಮಾಡಬಹುದೆಂಬ ಭಯವನ್ನು ಸದಾ ಹೊಂದುರುವುದೇ ದೊಡ್ಡ ತಪ್ಪು..
*ಅಧಿಕಾರ ಬಿಡಲೊಲ್ಲದ ರಾಜಕಾರಣಿ ಬಗ್ಗೆ ಕುಹಕ: ನೀವು ಫೆವಿಕಾಲ್ ಜಾಹೀರಾತಿಗೆ ಮಾಡೆಲ್ ಆಗಲು ಸೂಕ್ತರು......
*ಅಶೋಕ್ಕುಮಾರ್ ಎ
Comments
ಉ: ಹೊಸ ಐಪ್ಯಾಡ್:ಹೆಚ್ಚು ಆಕರ್ಷಕ
In reply to ಉ: ಹೊಸ ಐಪ್ಯಾಡ್:ಹೆಚ್ಚು ಆಕರ್ಷಕ by abdul
ಉ: ಹೊಸ ಐಪ್ಯಾಡ್:ಹೆಚ್ಚು ಆಕರ್ಷಕ
In reply to ಉ: ಹೊಸ ಐಪ್ಯಾಡ್:ಹೆಚ್ಚು ಆಕರ್ಷಕ by hamsanandi
ಉ: ಹೊಸ ಐಪ್ಯಾಡ್:ಹೆಚ್ಚು ಆಕರ್ಷಕ