’ಸೂಪರ್ ಮೂನ್’ ಅಪಾಯಕಾರಿಯಲ್ಲ

’ಸೂಪರ್ ಮೂನ್’ ಅಪಾಯಕಾರಿಯಲ್ಲ

ಮೊದಲಿಗೆ ಜಪಾನ್’ನ ಭೂಕಂಪ ಮತ್ತು ಅದರಿಂದ ಉಂಟಾದ ತ್ಸುನಾಮಿಯ ಅವಘಡದಲ್ಲಿ ಮಡಿದ ಸಾವಿರಾರು ಜನರಿಗೆ ಶ್ರದ್ಧಾಂಜಲಿ ಅರ್ಪಿಸೋಣ. ಲೆಕ್ಕಕ್ಕೆ ಸಿಗದಿರುವಷ್ಟು ಜನರ ಮರಣ, ಸಮುದ್ರದ ಅಲೆಗಳಲ್ಲಿ ಕೊಚ್ಚಿಹೋದ ಬದುಕು, ಕುಟುಂಬದವರನ್ನು, ಬಂಧುಗಳನ್ನು, ಸ್ನೇಹಿತರನ್ನು ಕಳೆದುಕೊಂಡ ನತದೃಷ್ಟರ ದುಖಃದ ಜೊತೆಗೆ ನಾವು ಭಾಗಿಯಾಗೋಣ. ಇವಿಷ್ಟೇ ಅಲ್ಲದೇ ಸ್ಫೋಟಗೊಂಡ ಪರಮಾಣು ಸ್ಥಾವರ, ಬೆಂಕಿಯ ಅನಾಹುತಗಳು, ಇವೆಲ್ಲವುಗಳಿಂದ ಪುಟ್ಟರಾಷ್ಟ್ರ ಜಪಾನ್ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಆಶಿಸೋಣ.

 
ಇವೆಲ್ಲವುಗಳ ಹಿಂದೆ ಕೇಳಿ ಬರುತ್ತಿರುವ ವಿದ್ಯಮಾನ ಇದೇ ತಿಂಗಳ 19ರಂದು ಸಂಭವಿಸಲಿರುವ ’ಸೂಪರ್ ಮೂನ್’. ಏನಿದು ಸೂಪರ್ ಮೂನ್?
 
ನಮಗೀಗ ತಿಳಿದಿರುವಂತೆ ನಮ್ಮ ಗೆಲಾಕ್ಸಿಯಲ್ಲಿ ಎಲ್ಲಾ ನಕ್ಷತ್ರಗಳು ಗೆಲಾಕ್ಸಿಯ ಕೇಂದ್ರದ ಸುತ್ತ, ಗ್ರಹಗಳು ನಕ್ಷತ್ರಗಳ ಸುತ್ತ, ಆ ಗ್ರಹಗಳನ್ನು ಕೆಲವು ಉಪಗ್ರಹಳು ಸುತ್ತುತ್ತಾ ಎಲ್ಲವೂ ಸತತ ಚಲನೆಯಲ್ಲಿವೆ. ನಮ್ಮ ಸೌರವ್ಯೂಹದ ಮಟ್ಟಿಗೆ ಹೇಳುವುದಾದರೆ ಸೂರ್ಯನ ಸುತ್ತ ಪ್ರಮುಖವಾಗಿ ಎಂಟು ಗ್ರಹಗಳು, ಕುಬ್ಜಗ್ರಹಗಳು (Dwarf Planets – Pluto ಈಗ ಒಂದು ಕುಬ್ಜಗ್ರಹ ಪಟ್ಟಿಯಲ್ಲಿರುವ ಗ್ರಹ), ಧೂಮಕೇತುಗಳು, ಅನೇಕ ಕ್ಷುದ್ರಗ್ರಹಗಳು (ಮಂಗಳ ಮತ್ತು ಗುರು ಗ್ರಹದ ನಡುವೆ ಇರುವ ಪಟ್ಟಿ), ಸುತ್ತುತ್ತಿವೆ. ಆದರೆ ಇವುಗಳ ಕಕ್ಷೆಗಳೆಲ್ಲಾ ವೃತ್ತಾಕಾರವಾಗಿಲ್ಲ. ಹೆಚ್ಚಿನವು ದೀರ್ಘವೃತ್ತಾಕಾರದ ಕಕ್ಷೆ. ನಮ್ಮ ಭೂಮಿಯ ಸೂರ್ಯನ ಸುತ್ತ ಕಕ್ಷೆಯೂ ಸಹಾ ದೀರ್ಘವೃತ್ತಾಕಾರ. ಅದೇ ರೀತಿ ಚಂದ್ರನ ಕಕ್ಷೆಯೂ ಸಹಾ. ಭೂಮಿಯಿಂದ ನೋಡುವಂತೆ ಚಂದ್ರನ ಚಲನೆಯಲ್ಲಿ ತುಂಬಾ ಕ್ಷೋಭೆಯಿರುತ್ತದೆ. ಇದಕ್ಕೆ ಕಾರಣಗಳು ಚಂದ್ರನ ಕಕ್ಷೆ ಭೂಮಿಯ ಕಕ್ಷಾತಲ ಅಥವಾ ಕಾಂತಿವೃತ್ತಕ್ಕೆ (Ecliptic) ಸುಮಾರು 5 ಡಿಗ್ರಿಯಷ್ಟು ಓರೆಯಾಗಿರುವುದು ಮತ್ತು ಚಂದ್ರನ ಕಕ್ಷೆ ದೀರ್ಘವೃತ್ತಾಕಾರವಾಗಿರುವುದು. ಇದರಿಂದ ಭೂಮಿಯಿಂದ ಕಾಣುವಂತೆ ನಿಯಮಿತವಾಗಿ ಕೆಲವು ಘಟನೆಗಳು ಸಂಭವಿಸುತ್ತಿರುತ್ತವೆ.
 
  1. ಸೂರ್ಯನ ದಿಕ್ಕಿನಿಂದ ಹೊರಟು ಮತ್ತೆ ಸೂರ್ಯ ಇರುವ ದಿಕ್ಕಿನಲ್ಲಿಯೇ ಚಂದ್ರ ಬರಲು ಸುಮಾರು 29.53 ದಿನಗಳನ್ನು ತೆಗೆದುಕೊಳ್ಳುತ್ತದೆ. ಇದನ್ನು ಯುತಿಮಾಸ (Synodic Month) ಎನ್ನಲಾಗುತ್ತದೆ. ಇದು ಹುಣ್ಣಿಮೆಯಿಂದ ಹುಣ್ಣಿಮೆಗೆ ಅಥವಾ ಅಮಾವಾಸ್ಯೆಯಿಂದ ಅಮಾವಾಸ್ಯೆಗೆ ಇರುವ ಅವಧಿ.
  2. ಯಾವುದೇ ಒಂದು ನಕ್ಷತ್ರದ ದಿಕ್ಕಿನಿಂದ ಹೊರಟು ಮತ್ತೆ ಅದೇ ನಕ್ಷತ್ರದ ದಿಕ್ಕಿಗೆ ಚಂದ್ರ ಬರುವ ಅವಧಿ ಸುಮಾರು 27.32 ದಿನಗಳು. ಇದನ್ನು ನಾಕ್ಷತ್ರಿಕ ಮಾಸ (Orbital Period or Sidereal Month) ಎನ್ನಲಾಗುತ್ತದೆ. ಇದು ಚಂದ್ರ ಭೂಮಿಯನ್ನು ಒಂದು ಬಾರಿ ಪರಿಭ್ರಮಿಸು ಅವಧಿ.
  3. ದೀರ್ಘವೃತ್ತಾಕಾರದ ಕಕ್ಷೆಯಲ್ಲಿ ಸುತ್ತುತ್ತಿರುವ ಚಂದ್ರ ಯಾವಾಗಲೂ ಭೂಮಿಯಿಂದ ಒಂದೇ ದೂರದಲ್ಲಿರುವುದಿಲ್ಲ. ಚಂದ್ರ ಭೂಮಿಗೆ ಅತಿ ಹತ್ತಿರವಾಗಿ ಹಾಯುವ ಬಿಂದುವನ್ನು ಪುರಭೂ ಎಂದು ಗುರುತಿಸಲಾಗುತ್ತದೆ. ಒಂದು ಪೂರಭೂ ಬಿಂದುವಿನಿಂದ ಹೊರಟು ಮತ್ತೆ ಅದೇ ಬಿಂದುವಿಗೆ ಚಂದ್ರ ಬರಬೇಕಾದ ಅವಧಿಗೆ ಅಸಂಗತ ಮಾಸ (Anomalistic Month) ಎನ್ನಲಾಗುತ್ತದೆ. ಇದು ಸುಮಾರು 27.55 ದಿನಗಳ ಅವಧಿ.
  4. ಭೂ ಕಕ್ಷಾತಲವನ್ನು ಚಂದ್ರನ ಕಕ್ಷೆ ಎರಡು ಬಾರಿ ಸಂಧಿಸುತ್ತದೆ. ಈ ಬಿಂದುಗಳಿಗೆ ಪರ್ವಗಳೆಂದು ಹೆಸರು. ಒಂದು ಪರ್ವಬಿಂದುವಿನಿಂದ ಹೊರಟು ಮತ್ತೆ ಅದೇ ಪರ್ವಬಿಂದುವಿಗೆ ಚಂದ್ರ ಬರಲು ತೆಗೆದುಕೊಳ್ಳುವ ಅವಧಿ 27.21 ದಿನಗಳು. ಇದಕ್ಕೆ ಡ್ರಾಕೋನಿಕ್ ಮಾಸ (Draconic Month) ಎನ್ನಲಾಗುತ್ತದೆ.
 
ಇದೇ 19ನೇ ತಾರೀಖಿನಂದು ಸಂಭವಿಸುವ ವಿದ್ಯಮಾನಕ್ಕೆ ಕಾರಣ ಚಂದ್ರನ ದೀರ್ಘವೃತ್ತಾಕಾರದ ಕಕ್ಷೆ. ಭೂಮಿಯಿಂದ ಚಂದ್ರನ ಸರಾಸರಿ ದೂರ ಸುಮಾರು 384400 ಕಿಮೀ ಇದ್ದರೂ ಅದರ ಕನಿಷ್ಟ ದೂರ ಮತ್ತು ಗರಿಷ್ಟ ದೂರ ಮೇಲೆ ತಿಳಿಸಿದಂತೆ ಪ್ರತಿ 27.55 ದಿನಗಳಿಗೊಮ್ಮೆ ಬದಲಾಗುತ್ತಿರುತ್ತದೆ. ಈ ಕನಿಷ್ಟ ಮತ್ತು ಗರಿಷ್ಟ ದೂರಗಳು ಹುಣ್ಣಿಮೆ ಅಮಾವಾಸ್ಯೆಗಳಂದೇ ಸಂಭವಿಸಬೇಕೆಂದೇನು ಇಲ್ಲ. ಕೆಳಗಿನ ಪಟ್ಟಿಯಲ್ಲಿ 2010 ರ ಜನವರಿ 1ನೇ ತಾರೀಖಿನಿಂದ ಈ ತಿಂಗಳ 19ನೇ ತಾರೀಖಿನವರೆಗೆ (ಎಂದರೆ 2011ರ ಮಾರ್ಚ್ 19ನೇ ತಾರೀಖಿನವರೆಗೆ) ಎಲ್ಲಾ ಕನಿಷ್ಟ ಮತ್ತು ಗರಿಷ್ಟ ದೂರಗಳ ವಿವರ ನೀಡಲಾಗಿದೆ:
ದಿನಾಂಕ
(dd/mm/yyyy)
ಸಮಯ
(ಗಂ.ನಿ)
ಕನಿಷ್ಟ ದೂರ
(ಕಿಮೀ ಗಳಲ್ಲಿ)
ದಿನಾಂಕ
(dd/mm/yyyy)
ಸಮಯ
(ಗಂ.ನಿ)
ಗರಿಷ್ಟ ದೂರ
(ಕಿಮೀ ಗಳಲ್ಲಿ)
01/01/2010
20.37
358682
17/01/2010
01.41
406433
30/01/2010
09.04
356592
13/02/2010
02.07
406541
27/02/2010
21.41
357831
12/03/2010
10.08
406009
28/03/2010
04.57
361876
09/04/2010
02.46
404997
24/04/2010
21.00
367141
06/05/2010
21.54
404230
20/05/2010
08.40
369728
03/06/2010
16.52
404264
15/06/2010
14.55
365936
01/07/2010
10.13
405035
13/07/2010
11.22
361114
28/07/2010
23.51
405954
10/08/2010
17.57
357857
25/08/2010
05.52
406389
08/09/2010
04.02
357191
21/09/2010
08.04
406167
06/10/2010
13.42
359452
18/10/2010
18.19
405432
03/11/2010
17.23
364188
15/11/2010
11.48
404633
30/11/2010
19.10
369438
13/12/2010
08.36
404407
25/12/2010
12.25
368462
10/01/2011
05.39
404975
22/01/2011
00.11
362792
06/02/2011
23.14
405923
19/02/2011
07.28
358246
06/03/2011
07.51
406582
19/03/2011
19.10
356577
 
 
 
 
ಈಗ ಒಂದು ವಿಷಯ ನಿಮಗೆ ಸ್ಪಷ್ಟವಾಗಿರಬಹುದು. ಭೂಮಿ ಚಂದ್ರನ ನಡುವೆ ಕನಿಷ್ಟ ದೂರವೆನ್ನುವುದು ಪ್ರತಿ 27.55 ದಿನಗಳಿಗೆ ಸಂಭವಿಸುವ ಒಂದು ಸಾಮಾನ್ಯ ಘಟನೆ ಮತ್ತು ಕನಿಷ್ಟ ದೂರಗಳಲ್ಲಿನ ವ್ಯತ್ಯಾಸಗಳು ಭೂಮಿ ಮತ್ತು ಚಂದ್ರನ ದೂರಕ್ಕೆ ಹೋಲಿಸಿದರೆ ತುಂಬಾ ನಗಣ್ಯವೆನ್ನುವುದು ತಿಳಿಯುತ್ತದೆ. ಜನವರಿ 2010ರ ಚಂದ್ರನ ಕನಿಷ್ಟ ದೂರ ಮತ್ತು ಈ ಬಾರಿಯ ಚಂದ್ರನ ಕನಿಷ್ಟ ದೂರಗಳ ನಡುವೆ ಕೇವಲ 15 ಕಿಮೀ ವ್ಯತ್ಯಾಸವಿದೆ. ಡಿಸೆಂಬರ್ 2008ರಲ್ಲಿ ಈಗಿನ ಕನಿಷ್ಟದೂರಕ್ಕಿಂತ ಕನಿಷ್ಟ ಅಂದರೆ 356567 ಕಿಮೀನಷ್ಟಾಗಿತ್ತು. ಆದರೆ ಆಗ ಹುಣ್ಣಿಮೆಯಾಗಿರಲಿಲ್ಲ. ಈಗಿನ ವಿಶೇಷವೆಂದರೆ ಕನಿಷ್ಟದೂರ ಮತ್ತು ಹುಣ್ಣಿಮೆ ಎರಡೂ ಒಟ್ಟಿಗೆ ಸಂಭವಿಸುತ್ತಿರುವುದು. ಈ ಹಿಂದೆ 2005ರಲ್ಲಿ ಕನಿಷ್ಟದೂರ ಮತ್ತು ಹುಣ್ಣಿಮೆ ಎರಡೂ ಒಟ್ಟಿಗೆ ಬಂದಿದ್ದವು. ಆಗ ಚಂದ್ರನ ದೂರ 356571 ಕಿಮೀ ಆಗಿತ್ತು.
 
ಚಂದ್ರನ ಈ ರೀತಿಯ ಪುರಭೂ ವಿದ್ಯಮಾನದಿಂದ ಭೂಮಿಯ ಮೇಲೆ ಏನು ಪರಿಣಾಮವಾಗಬಹುದು? ಚಂದ್ರನ ಕೋನಿಯ ಗಾತ್ರದಲ್ಲಿ ವ್ಯತ್ಯಾಸ ಉಂಟಾಗಬಹುದಾದರೂ ಅದನ್ನು ಬರಿಗಣ್ಣಿನಲ್ಲಿ ಗುರುತಿಸುವುದು ಸಾಧ್ಯವಿಲ್ಲ. ಇನ್ನು ಸಮುದ್ರದ ಉಬ್ಬರ ಸ್ವಲ್ಪ ಹೆಚ್ಚಾಗಬಹುದು. ಎಷ್ಟು ಹೆಚ್ಚಾಗಬಹುದೆಂದರೆ ನಿಮಗೆ ಸಾಮಾನ್ಯ ದಿನಗಳಲ್ಲಿನ ಸಮುದ್ರದ ಉಬ್ಬರ-ಇಳಿತದ ಪರಿಚಯವಿದ್ದರೆ, ಆಗ ಅದರ ಪ್ರಮಾಣ ಎಷ್ಟು ಹೆಚ್ಚಾಗಿರಬಹುದೆಂದು ತಿಳಿಯಬಹುದೇ ಹೊರತು, ಅದರ ಪರಿಣಾಮ ನಗಣ್ಯವೆಂದೇ ಹೇಳಬಹುದು.
 
ಚಂದ್ರ ಭೂಮಿಯ ಹತ್ತಿರ ಬಂದಾಗ ಪ್ರಾಕೃತಿಕ ವಿಕೋಪಗಳಾಗುತ್ತವೆ, ಕೆಡುಕುಂಟಾಗುತ್ತದೆ, ಎಂಬುದೆಲ್ಲ ಮತ್ತೊಂದು ಮೂಢನಂಬಿಕೆ. ಹಾಗಾಗಿ ಅನಾವಶ್ಯಕವಾಗಿ ಭಯಪಡಬೇಡಿ. ಗಾಳಿಸುದ್ದಿಗಳನ್ನು ನಂಬಬೇಡಿ. ಈ ’ಸೂಪರ್ ಮೂನ್’ ವಿದ್ಯಮಾನ ಒಂದು ಸಾಮಾನ್ಯ ಘಟನೆ. ಇದರಿಂದ ಭೂಮಿಯಮೇಲೆ ಯಾವುದೇ ಅನಾಹುತ ಸಂಭವಿಸುವುದಿಲ್ಲ.
 
ಜಪಾನ್ ಭೂಕಂಪವನ್ನು ಈ ಸೂಪರ್ ಮೂನ್ ವಿದ್ಯಮಾನದೊಂದಿಗೆ ಅನಾವಶ್ಯಕವಾಗಿ ತಳಕು ಹಾಕಲಾಗುತ್ತಿದೆ. ಜಪಾನ್ ದ್ವೀಪಗಳು ಭೂಮಿಯ ಎರಡು ಶಿಲಾಫಲಕಗಳಾದ, ಫೆಸಿಫಿಕ್ ಸಾಗರವನ್ನು ಹೊತ್ತಿರುವ ಶಿಲಾಫಲಕ ಮತ್ತು ಏಷ್ಯಾ ಖಂಡವನ್ನು ಹೊತ್ತಿರುವ ಶಿಲಾಫಲಕ ಇವುಗಳ ತಿಕ್ಕಾಟದ ಜಾಗದಲ್ಲಿರುವ ದ್ವೀಪ. ಜಪಾನ್ ದ್ವೀಪಗಳು ಹುಟ್ಟಿಕೊಂಡದ್ದೇ ಇಂತಹ ತಿಕ್ಕಾಟದ ಫಲವಾಗಿ. ಅಲ್ಲಿ ಭೂಕಂಪಗಳು ಸಾಮಾನ್ಯ. ಅಲ್ಲಿ ಈ ಸಮಯದಲ್ಲಿ ಭೂಕಂಪ ಸಂಭವಿಸಿರುವುದು ಕೇವಲ ಕಾಕತಾಳಿಯ. ಪ್ರಕೃತಿ ವಿಕೋಪಗಳನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ. ಈ ಹೊತ್ತಿನಲ್ಲಿ ನಾವು ಮೌಢ್ಯದ ಹೊಳೆಯಲ್ಲಿ ಕೊಚ್ಚಿಹೋಗುವುದಕ್ಕಿಂತ, ಸಮುದ್ರದ ಅಲೆಗಳಲ್ಲಿ ಬದುಕು ಕೊಚ್ಚಿಹೋದವರಿಗೆ ಸಾಂತ್ವನ ಹೇಳಬೇಕಿದೆ.

Comments