ದಿ ಪರ್ಫೆಕ್ಟ್ ಕಿಲ್ಲಿಂಗ್.....

ದಿ ಪರ್ಫೆಕ್ಟ್ ಕಿಲ್ಲಿಂಗ್.....

ಮೂಲ : Denis R. Soreng

(.........)

ಎಂದಿನಂತೆ ನಾನು ಹಾವ್ಡಾ ಸ್ಟೇಸನ್ ತಲುಪಿದಾಗ ಸಂಜೆಯ ಮಬ್ಬುಗತ್ತಲು ಕವಿದಿತ್ತು. ಸ್ಟೇಸನ್ ಇಡೀ ದಿನವೆಲ್ಲ ದುಡಿದು ಮನೆಗೆ ಹೋಗಲು ಹಾತೊರೆಯುತ್ತಿದ್ದ ದೇಹ, ಮನಸ್ಸುಗಳಿಂದ ಗಿಜಿಗುಡುತ್ತಿತ್ತು. ನನಗೆ ಮನೆಗೆ ಹೋಗಲು ಒಂಚೂರೂ ಮನಸ್ಸಿರಲಿಲ್ಲ. ನನ್ನ ಗಂಡ,ನನ್ನ ನಡುವೆ ಪ್ರೀತಿ ಅನ್ನುವದು ಸತ್ತು ಮಲಗಿತ್ತು. ನಾವಿಬ್ಬರೂ ಪ್ರೀತಿಯಿಂದ ಮಾತಾಡಿ ವರುಸಗಳೇ ಆಗಿದ್ದವು. ಆಪೀಸಿನಲ್ಲಿ ನಡಿಯುವ ಲಗು ಹಾಸ್ಯಗಳೇ ನನ್ನ ನೀರಸ ಜೀವನಕ್ಕೆ ತುಸು ಜೀವ ತುಂಬುತ್ತಿದ್ದುದು. ಇನ್ನು ಕೆಲವೇ ದಿನಗಳಲ್ಲಿ ನಾವಿಬ್ಬರೂ ಬೇರೆಯಾಗುವವರಿದ್ದೇವೆ, ಅದಕ್ಕೆ ನನ್ನ ಗಂಡ ಕೊಡುವ ಸಬೂಬು ನನ್ನ ತಲೆ ಸರಿ ಇಲ್ಲ ಎಂಬುದು, ಬೇರೆ ಕಾರಣವೇ ಹೊಳೆಯದೆ ಹೋಯ್ತೆ??

ನಾನು ಆಗ ತಾನೆ ಬಂದ ರೈಲಿನೊಳಗೇ ಹೇಗೋ ತೂರಿಕೊಂಡೆ. ಕಾಲಿ ಇದ್ದ ಸೀಟು ಅದೇಗೋ ಸಿಕ್ಕು ಬಿಟ್ಟಿತು. ನನಗೆ ಸೀಟು ಸಿಕ್ಕಿದ್ದು ತುಂಬಾ ಸಮಾದಾನ ಆಯಿತು. ನೋಡ ನೋಡುತ್ತಿದ್ದಂತೆ ರೈಲು ಜನರಿಂದ ತುಂಬಿ ತುಳುಕತೊಡಗಿತು. ಆ ದಾರಿಯಲ್ಲಿ ಸಾಗುವ ದಿನದ ಕೊಟ್ಟ ಕೊನೆಯ ರೈಲು ಅದಾಗಿತ್ತು. ಗಿಜಿಗುಡುವ ಜನರಿಂದಾಗಿ ಗಾಳಿ ಆಡದೆ ಉಸಿರುಗಟ್ಟಿಸುವ ವಾತಾವರಣ ಉಂಟಾಯ್ತು. ಅದು ಜೂನ್ ತಿಂಗಳು. ಕಲ್ಕತ್ತೆಯ ಅತೀ ಬಿಸಿ ತಿಂಗಳು ಅದು. ಇದ್ದ ತುಸುವೇ ಗಾಳಿಯೊಳಗೆ ಜನರ ಬೆವರಿನ ವಾಸನೆ ಸೇರಿಕೊಂಡು ಎಲ್ಲ ಕಡೆ ಕೆಟ್ಟ ವಾಸನೆ ಹರಡಿತು. ನನಗೆ ವಾಂತಿ ಬಂದಂತಾಯ್ತು, ಹೇಗೋ ತಡೆದುಕೊಂಡೆ.

ನಾನು ಸೀಟಿಗೆ ಒರಗಿಕೊಂಡು ಸೀಲಿಂಗ್ ಕಡೆ ಕಣ್ಣಾಡಿಸಿದೆ, ಹಳೆಯ ಸೀಲಿಂಗ್ ಪ್ಯಾನು ಮಿಸುಕಾಡದೇ ಇತ್ತು. ಜಾಡುಗಟ್ಟಿದ ಅದರ ಸ್ತಿತಿ ನೋಡಿದರೆ ಅದು ತಿರುಗಿ ವರ್ಶಗಳೇ ಆಗಿರಬೇಕೆಂದು ಯಾರಿಗಾದರೂ ಅನಿಸದಿರದು. ನಾನು ಹಾಗೇ ನಿದ್ದೆಗೆ ಜಾರಿದೆ.

ನಾನು ಕಣ್ಣು ಬಿಟ್ಟಾಗ ರೈಲು ಹಲವಾರು ಮೈಲಿ ನಗರದ ಆಳಕ್ಕೆ ನುಗ್ಗಿತ್ತು. ನನ್ನ ಪಕ್ಕದ ಸೀಟಿನಲ್ಲಿ ಸುಂದರ ಹರೆಯದ ಹುಡುಗಿ ಕುಳಿತಿದ್ದಳು. ಅವಳ ಕಣ್ಣುಗಳಲ್ಲಿ ಆತಂಕದ ನೆರಳಿತ್ತು. ಅವಳ ಆತಂಕಕ್ಕೆ ಕಾರಣ ನಮ್ಮ ಎದುರು ಕುಳಿತಿದ್ದ ವ್ಯಕ್ತಿ. ಅವನ ಕೆಂಪು ಕಣ್ಣುಗಳನ್ನು ನೋಡಿದರೆ ಅವನು ಕುಡಿದಿರುವದು ನಿಚ್ಚಳವಾಗುತ್ತಿತ್ತು. ಅವನ ವಿಕಾರವಾದ ಮೂತಿ ಎಂತವರಲ್ಲೂ ಅಂಜಿಕೆ ಮೂಡಿಸುವಂತಿತ್ತು. ಅವನ ಕಣ್ಣುಗಳು ಒಂದೇ ಸವನೆ ಆ ಹುಡುಗಿಯನ್ನೆ ತಿನ್ನುವಂತೆ ನೋಡುತ್ತಿತ್ತು.

ಆ ಯುವತಿಯೊಂದಿಗೆ ನನಗೂ ಆತಂಕ ಸುರು ಆಯಿತು. ನಾನು ಕಂಪಾರ್ಟ್ಮೆಂಟಿನಲ್ಲಿ ಸುತ್ತ ಕಣ್ಣಾಡಿಸಿದೆ, ನಾವು ಮೂವರನ್ನು ಹೊರತುಪಡಿಸಿ ಅಲ್ಲಿ ಇನ್ನೊಂದು ನರಪಿಳ್ಳೆ ಇರಲಿಲ್ಲ!. ನನಗ್ಯಾಕೋ ಎನೋ ವಿಚಿತ್ರ ತಳಮಳ ಉಂಟಾಗತೊಡಗಿತು. ಯುವತಿ ನನ್ನ ಕೈ ಮೆಲ್ಲಗೆ ಅದುಮಿ ಪೇಪರೊಂದನ್ನು ಮುಂದೆ ಹಿಡಿದಳು, ಮುಕಪುಟ ಸುದ್ದಿಯೊಂದರ ಕಡೆ ಬೆರಳು ಮಾಡಿ ತೋರಿಸದಳಾಕೆ. ಅದು ಹಲವು ವಾರಗಳಿಂದ ಕಲ್ಕತ್ತಿಗರನ್ನು ಕಾಡುತ್ತಿರುವ ಸೀರಿಯಲ್ ಕಿಲ್ಲರ್ ಬಗಗಿನ ಸುದ್ದಿ.ನಗರದ ಬೇರೆ ಬೇರೆ ಕಡೆಗಳಲ್ಲಿ ಆರು ಹರೆಯದ ಹುಡುಗಿಯರ ದಾರುಣ ಹತ್ಯೆಗಳಾಗಿತ್ತು. ಅವರೆಲ್ಲರನ್ನು ಕುತ್ತಿಗೆ ಸೀಳಿ ಕೊಲೆ ಮಾಡಲಾಗಿತ್ತು. ಪೋಲಿಸರು ಯಾವೊಂದು ಸುಳಿವೂ ಸಿಗದೇ ಹೈರಾಣಾಗಿ ಹೋಗಿದ್ದರು, ತೊಂಬತ್ತರ ಡಿಕೇಡಿನಲ್ಲಿ ಎಲ್ಲರ ನಿದ್ದೆ ಕೆಡಿಸಿದ್ದ ನಿಗೂಡ ’ಸ್ಟೋನ್ ಮ್ಯಾನ್’ ನಂತೆಯೇ ಈ ಕೇಸೂ ಎಲ್ಲರ ನಿದ್ದೆ ಕೆಡಿಸಿತ್ತು.

ಹುಡುಗಿ ಕಂಗಾಲಾಗಿ ಬೆವೆತು ಹೋಗಿದ್ದಳು.ಆ ಕಿಲ್ಲರ ಅವನೇ ಇರಬೇಕೆಂದು ಆಕೆ ಕಣ್ಣಿನಲ್ಲೇ ಸಣ್ಣೆ ಮಾಡಿದಳು. ಅವಳ ಗಾಬರಿ ನೋಡಿ ನನಗೂ ನನ್ನ ಬಗೆಗೆ ಚಿಂತೆ ಆಯ್ತು. ಅಸ್ಟರಲ್ಲಿ ರೈಲು ನಿದಾನವಾಯ್ತು; ಮುಂದೆ ಬಂದ ಸ್ಟೇಶನ್ನಿನಲ್ಲಿ ನಿಲ್ಲಲು. ನನ್ನ ಇಳಿಯುವ ಜಾಗ ಇನ್ನೂ ದೂರ ಇದ್ದರೂ ಇಲ್ಲೇ ಇಳಿದು ಬಿಡಬೇಕು ಅಂತ ಇಳಿಯಲು ಅನುವಾಗುವಸ್ಟರಲ್ಲಿ ಆ ವ್ಯಕ್ತಿ ಎದ್ದು ನಿಂತಿತು, ಸರಸರನೆ ಇಳಿದು ಆತ ಹೋಗೇ ಬಿಟ್ಟ. ಹುಡುಗಿ ನನ್ನ ಕಡೆ ನೋಡಿದಳು, ಇಬ್ಬರೂ ಒಟ್ಟಿಗೆ ನಿಡಿದಾದ ಒಂದು ದೊಡ್ಡ ನಿಟ್ಟುಸಿರು ಬಿಟ್ಟೆವು. ಬಂದೊದಗಿದ ದೊಡ್ಡ ಗಂಡಾಂತರವೊಂದು ತಪ್ಪಿತ್ತು, ಹುಡುಗಿ ಸಂತಸದಿಂದ ಕುಲು ಕುಲು ನಗತೊಡಗಿದಳು, ಅವಳ ಅಕಾರಣ ನಗುವಲ್ಲಿ ನಾನೂ ಕೂಡಿಕೊಂಡೆ, ಕೊಂಚ ಹೊತ್ತಿನಲ್ಲೇ ನಾವಿಬ್ಬರೂ ಗಹಗಹಿಸಿ ನಗತೊಡಗಿದೆವು.

ಒಂದು ಸಣ್ಣ ನೂಕಿನೊಂದಿಗೆ ರೈಲು ಮತ್ತೆ ಹೊರಟು ನಿಂತಿತು. ಬಹು ಬೇಗ ರೈಲು ವೇಗ ಪಡೆದುಕೊಂಡು ಬಾಣ ಬಿಟ್ಟಂತೆ ಓಡತೊಡಗಿತು. ಆತಂಕವೆಲ್ಲ ಇಳಿದು ಹೋಗಿದ್ದರಿಂದ ಹುಡುಗಿ ತನ್ನ ಸೀಟಿನಲ್ಲಿ ತೂಕಡಿಸತೊಡಗಿದ್ದಳು. ಹರೆಯದ ಹುಡುಗಿಯರು ಎಸ್ಟೊಂದು ನಂಬುತ್ತಾರಲ್ಲ ಅಂತ ಅವಳನ್ನೆ ನಾನು ನೋಡುತ್ತ ಬೆರಗುಗೊಂಡೆ. ನನ್ನ ಬ್ಯಾಗಿನಲ್ಲಿ ಕೈ ಹಾಕಿ,ನಾನು ಯಾವಾಗಲೂ ಒಯ್ಯುತ್ತಿದ್ದ ನನ್ನ ಚಾಕುವಿನ ಹಿಡಿಯನ್ನು ಬಲವಾಗಿ ಹಿಡಿದೆ. ಕೈ ಯಾಕೋ ಮರಗಟ್ಟಿದಂತಾಯ್ತು, ಆದರೆ ನಾನಿದನ್ನು ಮಾಡಲೇಬೇಕಿತ್ತು. ಅಸ್ಟಕ್ಕೂ ಆಕೆಯ ಕುತ್ತಿಗೆ ಮೋಡಿ ಮಾಡುವಸ್ಟು ಸುಂದರವಾಗಿತ್ತು!, ಪಾಪ!!

Rating
No votes yet

Comments