ಹುಡುಕಿಕೊಡಬಲ್ಲಿರಾ

ಹುಡುಕಿಕೊಡಬಲ್ಲಿರಾ

ಕವನ

 


ಹುಡುಕಿಕೊಡಬಲ್ಲಿರಾ

ಇದ್ದಕಿದ್ದಹಾಗೆ ನನ್ನ

ಮನಸ್ಸಿನ ಮಾಲೀಕ

ಕಾಣೆಯಾಗಿದ್ದಾನೆ

ಹುಡುಕಿಕೊಡಬಲ್ಲಿರಾ?

 

ಸ೦ಜೆ ಸೂರ್ಯ  ಮುಳುಗಿದ

ಮೇಲೆ ನನ್ನನು ಬಸ್ಸಿನಲ್ಲಿ

ಕುಳ್ಳಿರಿಸಿ ಬಿಟ್ಟುಹೋಗಿದ್ದಾನೆ

ಮಗ, ಹುಡುಕಿಕೊಡಬಲ್ಲಿರಾ?

 

ಘನ ಘೋರ ಕತ್ತಲ ರಾತ್ರಿ

ಸಿಡಿಲು ಗುಡುಗುಗಳಬ್ಬರದ

ಮಳೆ ಸುರಿದು ನಮ್ಮ

ಜೋಪಡಿ ನೀರು ಪಾಲಾಗಿದೆ

ಹುಡುಕಿಕೊಡಬಲ್ಲಿರಾ?

 

 

ಕೈ ಮುಗಿದು, ಅ೦ಗಲಾಚಿ

ಮತಪಡೆದು ಗದ್ದುಗೆಯನೇರಿದ

ನಮ್ಮ ಸೇವಕ ನಿರ್ಜೀವವಾಗಿದ್ದಾನೆ

ಬದುಕಿಸಿಕೊಡಬಲ್ಲಿರಾ?

 

ಹುಲುಸಾಗಿ

ಬೆಳೆ ಬೆಳೆಯುತ್ತಿದ್ದ

ನನ್ನಮ್ಮ  ಭೂತಾಯಿಗೆ  ವಿಷವಿಕ್ಕಿದ

ರಕ್ಕಸರನ್ನ ಗುರುತಿಸಬಲ್ಲಿರಾ?

 

ಸದ್ದಿಲ್ಲದೆ ನನ್ನೂರಿನ

ಗುಡ್ಡವನ್ನೇ ಹೊತ್ವೈದ ಕಧೀಮರಿಗೆ

ಹೊ ಹಾರ ತುರಾಯಿಗಳ ತೊಡಿಸಿ

ಮೆರವಣೆಗೆ ಮಾಡುವ ನನ್ನೂರಿನ ಜನಕ್ಕೆ

ಬೈದು ಬುದ್ದಿಹೇಳಬಲ್ಲಿರಾ?

  

ಯ್ಯೋ, ತು೦ಬು ತಿ೦ಗಳ

ಬಸುರಿ, ದಯಮಾಡಿ

ಬದುಕಿಸಿ ಎರಡು ಜೀವಗಳನ್ನ

ಎ೦ದು ವೈದ್ಯನಿಗೆ ಕೈ

ಮುಗಿದರೆ, ಕುತ್ತಿಗೆಯಲಿ

ನೇತಾಡುವ ಲೋಹಕ್ಕೆ

ಕಣ್ಣಿಕ್ಕುವ ತಿರುಕನಿಗೆ

ಭಿಕ್ಷಾನ್ನವನಿಕ್ಕುವಿರಾ?!

 

ಹೆದ್ದಾರಿಗಳಲ್ಲಿ ಹೆಣವಾಗುವ

ನನ್ನೂರಿನ ಎಮ್ಮೆಗಳಹಾಗೆ

ಅ೦ತ್ಯಸ೦ಸ್ಕಾರವನ್ನೇ ನೋಡದ

ಭಿಕ್ಷುಕರ ಕಳೆಬರ

ಕೊಳೆತು ನಾರುತ್ತಿದೆ

ಮುಕ್ತಿ ಕೊಡಬಲ್ಲಿರಾ?

 

ಮನಸ್ಸಿನ ಸೂರ್ಯನಿಗೆ

ಗ್ರಹಣವಿಡಿದಿದೆ, ಬಿಡಿಸಿ

ಬೆಳಕ

ಬರಮಾಡಿಕೊಡಬಲ್ಲಿರಾ?

 

ಒ೦ದರೆಕ್ಷಣ ನಿಲ್ಲಿಸಿ

ಓಡುವ ತಮ್ಮತಮ್ಮ ಗಡಿಯಾರದ ಮುಳನ್ನ

ತಿರುಗಿಸಿ ಓಡಿಸಿ, ಪ್ರವಾಹಕ್ಕೆದುರಾಗಿಸಿ    

ಕ೦ಡರೂ ಕಾಣಬಹುದು

ಕಳೆದುಕೊ೦ಡದ್ದನ್ನ

ಹುಡುಕಬೇಕಾದದ್ದನ್ನ

ಪಡೆಯಬೇಕಾದದ್ದನ್ನ

 

 

 

 

Comments