ಬದುಕೆಂಬುದು ಉಳಿವಿನ ಹೋರಾಟ

Submitted by thesalimath on Wed, 03/23/2011 - 09:23ಮಾನವ ಬದುಕಿನಿಂದ ಬೇಸತ್ತು
ಬೇರೆಯದೇ ಜೀವವಾಗ ಬಯಸಿದೆ.

ಕಾಡಲ್ಲಿ ನೆಗೆನೆಗೆದು ಉಲ್ಲಾಸದಿ ಓಡುವ
ಜಿಂಕೆಯಾಗಿ ಹುಲ್ಲು ಸೊಪ್ಪು ತಿನ್ದುಕೊಂಡಿದ್ದೆ.
ಒಮ್ಮೆ ಹುಲಿಯು ಹಿಂದೆ ಮತ್ತೊಮ್ಮೆ ಕಿರುಬಗಳ ಮಂದೆ
ತೋಳಗಳ ಊಳಿಡುವ ಸದ್ದು ಕೇಳಿ ಜೀವ ಭಯದಿ ಬೆಚ್ಚಿಬಿದ್ದೆ!

ಇದಕಿಂತ ಬಲಶಾಲಿ ಹುಲಿಯು ಸುಖವಾಗಿರಬೇಕೆಂದು ಕೊಂಡೆ
ಯಾವಾಗಲೂ ಒಂಟಿ ಜೀವನ ತಿಂಗಳುಗಟ್ಟಲೆ ಊಟವಿಲ್ಲ
ಹೆಂಡತಿಗಾಗಿ ಪರರೊಡನೆ ಕಾದಾಟ
ಮುದಿಯಾಡೋದೇ ಬೇಟೆಗೂ ಬಲವಿಲ್ಲ. ಸೊಪ್ಪು ಹೊಟ್ಟೆಯಲಿ ನುರಿಯುವುದಿಲ್ಲ.

ಆಗಸದಿ ಗಾಳಿಯಲಿ ಹಾರಬಯಸಿದೆ ಹಕ್ಕಿಯಂತೆ
ಮಾಂಸಕೆ ಕಾದಿರುವ ಹದ್ದುಗಳ ಭಯ ಮಾನವನ ಬಲೆಯ ಭಯ 
ಮಕ್ಕಳ ಸಾಕಲು ಊರೂರು ಅಳೆದು ಗೂಡು ಕಟ್ಟಬೇಕು ಗೂಡಿಗೆ ನುಗ್ಗುವ ಹಾವುಗಳ ಭಯ
ವಾಯುಗುಣ ಪಲ್ಲಟದೊಡನೆ ವಲಸೆಯ ತಲೆನೋವು.

ಗಿಡವಾಗಿ ಮರವಾಗಿ ಪೋದೆಯಾಗಿ ಬದುಕುವೇನು ಸುಖವಾಗಿ
ಬೇರೆ ಮರದ ನೆರಳಲ್ಲಿ ಬೆಳೆಯಲಾಗುವುದಿಲ್ಲ
ಒಮ್ಮೊಮ್ಮೆ ಕಾಲ್ಗಿಚು ಒಮ್ಮೊಮ್ಮೆ ಬರದ ರೊಚ್ಚು
ಕಾಪಿಟ್ಟ ಹಣ್ಣನ್ನು ತಿನ್ನುವ ಹಕ್ಕಿಗಳು  ರಕ್ತ ಹೀರಿ ಬದುಕುವ ಪರಾವಲಂಬಿ ಬಳ್ಳಿಗಳು
 ನೇಸರನ ಬೆಳಕಿಗಾಗಿ ಪಕ್ಕದ ಮರಗಳೊಡನೆ ಬಡಿದಾಟ
 
ತಿರುಗಿ ಬಂದೆನು ನನ್ನ ಲೋಕಕೆ ಜೀವನವಲ್ಲ ಸುಲಭ
ಎಲ್ಲರಿಗು ತಮ್ಮ ಬದುಕಿಗಾಗಿ ಕಿತ್ತು ತಿಂದಿದ್ದೆ ಲಾಭ
ಬದುಕಲ್ಲ ಆರಾಮದ ಚದುರಂಗದಾಟ
ಅದೊಂದು ಉಳಿವಿಗಾಗಿ ನಡೆಯುವ ದೊಡ್ಡ ಹೋರಾಟ!

Rating
No votes yet

Comments