ಅರಿವಿನ ಮಾನಸ ಗಾನ

ಅರಿವಿನ ಮಾನಸ ಗಾನ

ಅವಳು ಮೊದಲು ಎದುರಾಗಿದ್ದು
ನಾ ಕೆಲಸ ಮಾಡುವಲ್ಲೆ
ಯಾರನ್ನೊ ಹುಡುಕುವಾಗ ಕಣ್ಣ
ಮಿಂಚ ತೋರಿ ಮಾಯವಾದಳು
ಮತ್ತೆ ಎದುರಾದಾಗ ನನ್ನ ನೋಡಿ
ಹೆಸರ ಕೇಳಿ ಅಚ್ಚರಿ ಮೂಡಿಸಿದಳು
ಕೆಲಸದ ನಡುವೆ ಪದೆ ಪದೆ ಎಂಬಂತೆ
ಅವಳು ಹತ್ತಿರ ಬಂದು ನಿಂತಾಗ
ನನಗೆಂತದೊ ಮುಜುಗರ
ಯಾರಾದರು ಕಂಡು ನೋಡಿ
ಏನಾದರು ಭಾವಿಸಿದರೆ ಎಂಬ ಸಂಕಟ
ಅವಳಿಗೇನು ಆ ಸಂಕೋಚವಿದ್ದಂತಿಲ್ಲ
ಯಾರು ಕಂಡರೆ ನನಗೇನು ಎಂಬ ಬಿಂಕ
ನನಗೂ ಅವಳು ಸ್ವಲ್ಪ ಅತಿ ಅನ್ನಿಸಿದ್ದು
ನನ್ನ ಜೊತೆ ಮನೆಗೆ ಬರುವನೆಂದಾಗ
ಬಿಡದೆ ಜೊತೆಗೆ ಹೊರಟಳು
ಗೃಹಲಕ್ಷ್ಮಿಯ ಜೊತೆ ಮಗಳ ಕಂಡು ನಕ್ಕಳು
ಮೊದಮೊದಲು ಎಂಬಂತೆ ಸುಮ್ಮನಿದ್ದ
ಮನೆಯಾಕೆ ಈಗದೇಕೊ ತೋರುವಳು
ಪದೆ ಪದೆ ಅಸಹನೆ ಅಶಾಂತಿ
ಮಗಳಿಗೂ ಏಕೊ ಅದೇ ಭಾವ
ನನ್ನ ನೀವು ದೂರಮಾಡಿದಿರಿ ಎಂಬ ರಾಗ
’ನಮ್ಮ ಜೊತೆ ಹೆಚ್ಚು ಸೇರರೆಂಬ’
ಅದೇ ಜೋಡಿ ತೋಡಿ ರಾಗ
ಹೀಗೆ ಸಾಗಿದೆ ಸಂಬಂಧಗಳ
ಹರಿವುಗಳ ಸಾಮಗಾನ
ನನ್ನ ಹಾಗು ಸಂಪದದ ನಡುವಿನ
ಅರಿವಿನ ಮಾನಸ ಗಾನ

 

Rating
No votes yet

Comments