ಹಸಿ ರೆಂಬೆಯ ಹೊಡೆತವೂ, ಒಣ ಸೌದೆಯ ಲತ್ತೆಯೂ...

ಹಸಿ ರೆಂಬೆಯ ಹೊಡೆತವೂ, ಒಣ ಸೌದೆಯ ಲತ್ತೆಯೂ...

ನ್ನಡದಲ್ಲಿ ಪಾರಿಭಾಷಿಕ ಪದಗಳು - ಹೆಚ್ಚಾಗಿ ಅದರಲ್ಲೂ ವಿಜ್ಞಾನ ಮತ್ತೆ ಭಾಷೆಯ ಸಂಬಂಧೀ ವಿಷಯಗಳಲ್ಲಿ ಸರಿ ಇಲ್ಲ ಅಂತ ಒಂದು ದೂರಿದೆ.

ಇದೇನೂ ಹುರುಳಿಲ್ಲದ ಮಾತಲ್ಲ. ಒಪ್ಪಬೇಕಾದ್ದೇನೇ, ಒಂದು ಅಳವಿಗೆ. ಮಹತ್ತಮ ಸಾಮಾನ್ಯ ಅಪವರ್ತ್ಯ, ಮರ್ಕೇಟರ್ ಪ್ರಕ್ಷೇಪಣ - ಅನ್ನೋ ತರಹದ ಕೆಲವು ಪಾರಿಭಾಷಿಕ ಪದಗಳನ್ನ ಹೇಳಿ ಮುಗಿಸೋ ಹೊತ್ತಿಗೆ, ಅದನ್ನ ಹೇಗೆ ಶುರು ಮಾಡಿದ್ವಿ ಅನ್ನೋದೇ ಮರೆತು ಹೋಗಿರತ್ತೆ.

ಇದೇ ತರಹ ಅಲ್ಪಪ್ರಾಣ, ಮಹಾಪ್ರಾಣ ಮೊದಲಾದ ಭಾಷೆಗೆ ಸಂಬಂಧ ಪಟ್ಟ ಪಾರಿಭಾಷಿಕ ಪದಗಳು ಸರಿ ಇಲ್ಲ ಅಂತ ಹೇಳೋದನ್ನ ಕೇಳ್ತಿದ್ದೇನೆ. ಹಾಗೇ ಆಗಲಿ ಅಂತ ಒಪ್ಪೋಣ. ಎಷ್ಟೇ ಅಂದ್ರೂ ಕನ್ನಡ ಮೂಲದ ಪದಗಳಲ್ಲ ಅವು.

ಇವಕ್ಕೆ ಬದಲಾಗಿ ಕೊರಳಿಸಿದ, ಕೊರಳಿಸದ ಅನ್ನೋ ಬಳಕೆಯನ್ನ ನೋಡ್ತಿದ್ದೇನೆ. ಹೊಸ ಪಾರಿಭಾಷಿಕ ಪದಗಳನ್ನ ಹುಟ್ಟುಹಾಕೋದು ಒಳ್ಳೇದೇ. ಅಲ್ಲದೇ, ಕೊರಳು ಅನ್ನೋದು ಕನ್ನಡವೇನೇ.

ಆದರೆ ಕೊರಳಿಸಿದ, ಕೊರಳಿಸದ ಅನ್ನೋದು voiced consonant, voiceless consonant ಅನ್ನೋದರ ಕನ್ನಡ ಅನುವಾದ ತಾನೇ?

ಹಸೀ ಕೊಂಬೇಲಿ ಹೊಡೆಸಿಕೊಂಡ್ರೂ, ಒಣಗಿದ ಸೌದೇಲಿ ಹೊಡೆಸಿಕೊಂಡ್ರೂ, ಏಟು ಏಟೇನೇ. ಅಲ್ವಾ?

ಇದರ ಬದಲು ’ಒತ್ತಿ ಹೇಳುವ’, ’ಒತ್ತಿ ಹೇಳದ’ ಅಂತ ಹೇಳಬಹುದು ಅಂತ ಎಣಿಸ್ತಿದ್ದೆ. ಅಚ್ಚ ಕನ್ನಡ, ಮತ್ತೆ ಬೀದೀಲಿ ಹೋಗೋ ಮಗೂನ ಕರೆದು ಹೇಳಿದರೂ ಸುಲಭವಾಗಿ ತಿಳಿಯೋ ಅಂತಹ ಬಳಕೆ ಅಂತ ಅನ್ನಿಸ್ತು.

ಅಷ್ಟರಲ್ಲೇ ತಲೆಯಲ್ಲೊಂದು ದೀಪ ಜಗ್ಗನೆ ಹತ್ತಿಕೊಂಡಿತು. ಭಾಷೆಯ ಬಗ್ಗೆ ಹೀಗೆ ಹಾಗೆ ಅಂತ ಹೇಳೋದಕ್ಕೆ, ಹೊಸ ಹೊಸ ಕಲಿಕೆಯ ಪದಗಳನ್ನ ಹುಟ್ಟಿಸೋದಕ್ಕೆ, ನಾನೇನು ಕನ್ನಡದಲ್ಲಿ ಮಾಸ್ಟರ್ಸ್ ಪದವಿಯನ್ನೋ, ಡಾಕ್ಟರೇಟನ್ನೋ ಪಡ್ಕೊಂಡಿದೀನಾ? ಇಲ್ವಲ್ಲಾ?

ಕನ್ನಡ ಬೇಡ, ಇಂಗ್ಲಿಷ್ ನಲ್ಲಾದ್ರೂ ಯಾವ್ದಾದ್ರೂ ಡಿಗ್ರಿ ಗಳಿಸಿದ್ದೀನಾ? ಹೋಗ್ಲಿ, ಅದಲ್ಲದೇ ಇದ್ರೆ ಸ್ವಾಹಿಲೀನಲ್ಲೋ, ಗೊಂಡಿನಲ್ಲೋ, ಬ್ರಾಹುಯಿನಲ್ಲೋ ಪರಿಣತಿ ಪಡೆದಿದೀನಾ? ಅದೂ ಇಲ್ಲ, ಅಂದ್ರೆ Comparative linguistics ಬಗ್ಗೆ ಶಾಸ್ತ್ರೋಕ್ತವಾಗಿ ಏನಾದ್ರೂ ಓದಿದ್ದೀನಾ? ಒಂದೂ ಇಲ್ಲ.

ನನಗ್ಯಾಕಪ್ಪ ಇಲ್ಲದ ಉಸಾಬರಿ? ಈಗಾಗಲೇ ಅವರಿವರು ಮನೆಮಾತು ಕನ್ನಡವಲ್ಲದವರು, ಕನ್ನಡದ ಬಗ್ಗೆ ಮಾತಾಡೋಕೆ ಅಯೋಗ್ಯರು ಅನ್ನೋ ತೀರ್ಪು ಕೊಟ್ಟು ಡಂಗೂರ ಸಾರಿಯೂಬಿಟ್ಟಿದ್ದಾರಲ್ಲ!

ಬಡವಾ ನೀ ಮಡಗಿದ್ ಹಾಗಿರು ಅಂತ ತೆಪ್ಪಗೆ ಇರ್ತೀನಿ. ಅದೇ ಒಳ್ಳೇದಲ್ವೇ? ಇವತ್ತು ಮನೆಗೆ ಹೋದ ತಕ್ಷಣ ಮಾಡೋ ಕೆಲಸ ಅಂದ್ರೆ, ಪುಸ್ತಕದ ಕಪಾಟಿನಲ್ಲಿರೋ ಮಾಸ್ತಿ ವೆಂಕಟೇಶಯ್ಯಂಗಾರರ ಚೆನ್ನಬಸವನಾಯಕ, ಚಿಕವೀರರಾಜೇಂದ್ರ, ಮತ್ತೊಂದಷ್ಟು ಸಣ್ಣಕತೆಗಳು, ಡಿವಿಜಿ ಅವರ ಒಂದೆರಡು ಪುಸ್ತಕಗಳು, ಇದನ್ನೆಲ್ಲ ಕಣ್ಣಿಗೆ ಕಾಣದಂತೆ ಅಡಗಿಸಿಬಿಡ್ತೀನಿ. ಕನ್ನಡ ಮನೆ ಮಾತಲ್ಲದ ಇವರೆಲ್ಲ ಬರೆದಿರೋದನ್ನ ಓದಿ, ಆಮೇಲೆ ಬರೋ ಅಲ್ಪ ಸ್ವಲ್ಪ ಕನ್ನಡವೂ ಮರೆತು ಹೋದರೆ ? ಅಲ್ವಾ?

-ಹಂಸಾನಂದಿ

Rating
No votes yet

Comments