ಏಕೆ ನಕ್ಕೆ..??

ಏಕೆ ನಕ್ಕೆ..??

ಏಕೆ ನಕ್ಕೆ..??

ಏಕೆ ನಕ್ಕೆ ಹೇಳು ಚೆನ್ನೆ
ಶೋಕ ನೀಗುವ ತೆರದಲಿ
ಎಲ್ಲ ಮರೆತು ಸ್ತಬ್ಧನಾದೆ
ನಿನ್ನ ನಗುವಿನ ಸಿರಿಯಲಿ

ಎಂದೂ ಕಣ್ಣಿಟ್ಟು ನೋಡಿದವಳಲ್ಲ
ಇಂದೇಕೆ ನನ್ನನೇ ದಿಟ್ಟಿಸಿರುವೆ
ನಾನೂ ಯಾರನು ನೋಡಿದವನಲ್ಲ
ನಿನ್ನನೇ ಕಾಣುತ ಏಕೆ ನಿಂತಿರುವೆ

ಯಾವುದಾಶಕ್ತಿ ನಿನ್ನ ಕಂಗಳಲಿ
ಮಾಡುತಿವೆನಗೆ ಸೆಳಕಿನ ಮೋಡಿ
ಮೀಟುತಿವೆ ಮನದ ತಂತುಗಳ
ನಸುನಗೆಯ ಮಾಟವ ಮಾಡಿ

ತಿಳಿಯಾಗಿದ್ದ ಮನದ ಕೊಳದಲ್ಲಿ
ಎಣಿಸದಷ್ಟು ಅಲೆಗಳು ಮೂಡಿವೆ
ಪ್ರತಿಯಲೆಯ ನಾದ ನೂರು ಮಾತನು
ಹೇಳಿ ಹೊಸ ಕನಸುಗಳ ಹುಟ್ಟಿಸಿವೆ

ಬೇಕಂತಲೇ ಇವೆಲ್ಲವನು ಮಾಡಿಸಿ
ನೀ ಏಕೆ ಏನನೂ ಹೇಳುತಿಲ್ಲ
ಹೇಳಿಬಿಡು ಏನುಂಟು ನಿನ್ನ ಮನದಲಿ
ಈ ಹೃದಯ ಕ್ಷಣಕಾಲವೂ ತಾಳುತಿಲ್ಲ

ನೋಡುನೋಡುತಾ ನಗುನಗುತಾ
ನೀ ದೂರ ಸರಿದೆಯೇಕೆ
ನಾಳೆಯೂ ನೀ ಬರುವೆ ತಾನೆ
ಬರದೆ ನೋಯಿಸದಿರು ಈ ಹೃದಯಕೆ

ಒಲುಮೆ ಬೆರೆತಿದ್ದ ನಿನ್ನ ನಗೆಯಿಂದ
ಈ ಹೃದಯ ಜೋರಾಗಿ ಬಡಿದಿದೆ
ಪ್ರತಿದಿನ ನಿನ್ನ ಕುಡಿನೋಟ
ನಸುನಗೆ ಕಾಣಬೇಕೆಂದು ಮಿಡಿದಿದೆ

ನನ್ನಲಿ ಕೊರೆಯುತಿರುವ ನೋವು
ನಿನ್ನಲೂ ಇರಬಹುದೇ
ನಿನ್ನ ಕಾಣಬೇಕೆಂಬ ಆತುರ ಕಾತರ
ನನ್ನಂತೆ ನಿನ್ನೊಳೂ ಇರಬಹುದೇ

ಇಲ್ಲದಿರೆ ನೀ ಹೀಗೇಕೆ ನನ್ನೆಡೆ
ಸವಿನೋಟಗಳ ಬೀರಿದೆ
ದೂರದಲೆ ನೀ ನಿಂತು
ಹೀಗೇಕೆ ನನ್ನನು ಕಾಡಿದೆ

ಈ ಹೃದಯ ಸ್ಪರ್ಶಿಸಿದ ನಿನ್ನ
ನನ್ನವಳೆಂದರೆ ಅನ್ಯಾಯವೇ ಕಾಂತೆ
ನೀನೆ ನಿರ್ಣಯಿಸಿಬಿಡು
ನಿನ್ನ ಮನದ ಇಚ್ಚೆಯಂತೆ.

Rating
No votes yet

Comments