ಕಣಿಯ ನೋಡಲು ಬನ್ನಿರಿ
ಕಣಿಯ ನೋಡಲು ಬನ್ನಿರಿ|ವಿಷುವಿನ
ಕಣಿಯ ನೋಡಲು ಬನ್ನಿರಿ ||
ಸೌರಮಾನ ಯುಗಾದಿ ಬಂದಿದೆ
ಜನತೆ ತೋರಿದೆ ಸಡಗರ
ಉಚ್ಚ ರಾಶಿಯನೇರಿ ರಾಜಿಪ
ಸೂರ್ಯದೇವನಿಗಾದರ [೧]
ಚಳಿಯು ಓಡಿದೆ ಸೆಕೆಯು ಮೂಡಿದೆ
ಋತು ವಸಂತವು ತೊಡಗಿದೆ
ತಳಿರು ತುಂಬಿದ ಗಿಡ ಮರಗಳಲಿ
ಹಕ್ಕಿಯುಲಿತವು ಹರಡಿದೆ [೨]
ಮನೆಯ ಮುಂದಿದೆ ರಂಗವಲ್ಲಿಯು
ಹೊಸಿಲು ಹೊಸಿಲಲಿ ಚಿತ್ತರ
ದೀಪ ಬೆಳಗಿದೆ ಕರೆಯುತಿದೆ ,ಬಾ
ಪೂಜಿಸುವ ಮನೆದೇವರ [೩]
ದೇವನೆದುರಿವೆ ನಾಗಸಂಪಿಗೆ
ಬಣ್ಣ ಬಣ್ಣದ ಹೂಗಳು
ತೆಂಗು ಹಲಸಿನ ,ಮಾವು ಕದಳಿಯ
ಸ್ವಾದ ತುಂಬಿದ ಫಲಗಳು [೪]
ಮಂಗಳದ ಬೆಳೆ ಬೆಳೆದು ನಿಂತಿದೆ
ಸಂಪದದ ತುಣುಕಿಲ್ಲಿದೆ
ದ್ವೇಷ ಭಾವನೆ ಕಾಲು ಕಿತ್ತಿದೆ
ಸ್ನೇಹಕಲಶವು ತುಂಬಿದೆ [೫]
ದೇವ,ಗುರು,ಹಿರಿಯರಿಗೆ ವಂದಿಸಿ
ಕಾಣಿಕೆಯನರ್ಪಿಸುತಲಿ
ಒಲುಮೆ ಹರಕೆಯ ಪಡೆದು ವಿಷುವಿನ
ದಿನದಿ ನಾಡಿದು ನಲಿಯಲಿ [೬]
ಕಣಿಯ ನೋಡಲು ಬನ್ನಿರಿ |ವಿಷುವಿನ
ಕಣಿಯ ನೋಡಲು ಬನ್ನಿರಿ ||
[ಈ ವರ್ಷದ ಸೌರ ಯುಗಾದಿ-೧೫-೪-೨೦೧೧ -ಎಲ್ಲಾ ಸಂಪದಿಗರಿಗೂ ಶುಭಾಶಯಗಳು}
Comments
ಉ: ಕಣಿಯ ನೋಡಲು ಬನ್ನಿರಿ
ಉ: ಕಣಿಯ ನೋಡಲು ಬನ್ನಿರಿ