ಸಂಪೂರ್ಣತೆ

ಸಂಪೂರ್ಣತೆ

ಕವನ

 ***ಸಂಪೂರ್ಣತೆ ***

ಹುಡುಕುವುದೆಲ್ಲಿ ಸಂಪೂರ್ಣತೆಯನ್ನು
ಎತ್ತ ನೋಡಿದರೂ ಕಾಣಿಸದೆನಗಿನ್ನು.
ಬಾಳ ಬಗೆದಿಣುಕಿದರೂ ತೋರದಾ  ಮೊಗವು
ಜಗದರ್ಪಣದಲ್ಲಿಯೂ ಕಾಣದಾ ಬಿಂಬವು
ಕಂಡು ಕಾಣದಹಾಗೆ ಮೃಗಜಲವಾಗಿ
ಬಂದು ಬಾರದಹಾಗೆ ಮಾಯಾಮೃಗವಾಗಿ
ಮರೆಯಾಗಿ ಮತ್ತೆ ಮರುಕಳಿಸಿ ಕ್ಷಣಭಂಗುರವಾಗುತಲಿದೆ
ಬಾಳ ಸಂಪೂರ್ಣತೆ...
ಧ್ಯಾನವನ ತಿಳಿಕೊಳದೊಳರಳಿ ನಿಂತ,
ಙ್ನಾನಸುಮಸುಗಂಧದೊಳದರ ಕಂಪಿಲ್ಲ.
ತಪಃಶೃಂಗಶಿರದಿ ಶೋಭಿಪ ಭಕ್ತಿಗುಡಿಯ
ಘಂಟಾನಾದದೊಳದರ ರಾಗವಿಲ್ಲ.
ತಿರುವಿ ತಿರುವಿ ನೋಡಿದರು, ಪುಸ್ತಕದ
ಮಸ್ತಕದೊಳದರ ತಿರುಳಿಲ್ಲ.
ನಡೆವ ದಾರಿಯಲಿ ಸಿಗುವ ತೃಪ್ತಿಕುಸುಮದಂತೆ,
ದಿನಕದನದೊಳು ಸಿಗುವ ಕ್ಷಣಿಕವಿಜಯದಂತೆ,
ಭವಸಾಗರದಿ ಬರೆದ ಜಲಲಿಪಿಯಂತೆ ಮೈದೋರಿ
ಮರೆಯಾಗುತಲಿದೆ ಬಾಳ ಸಂಪೂರ್ಣತೆ....
ಕನಸ ಮಡಿಲಲ್ಲಿ ನಿದ್ರಿಸುತಿಹ
ನನಸ ಕಣ್ ತಪ್ಪಿಸಿ ಓಡುತಿಹ
ಪೂರ್ಣತೆಯನು ಹಿಡಿಯುವ ಬಗೆ ಹೇಗೆ?
ಬೊಗಸೆಕೈಗಳಲಾಸೆ ಹೂಗಳ ಹಿಡಿದು,
ಧಿವ್ಯದರ್ಶನಕೆ ಭಕ್ತನಂದದಿ ಕಾದು,
ನಿಂತಿರುವೆನು ನಾನದರ ಬಾಗಿಲ ಹೊರಗೆ.
ಭಾವ ಅನುಭಾವಗಳಂತರಾಳದಿಂದುದ್ಭವಿಸಿ,
ಎಂದು ದರ್ಶನವೀಯುವುದಾ  ಸಂಪೂರ್ಣತೆಯೆನಗೆ?

- ಚಂದ್ರಹಾಸ

Comments