ಕಾವ್ಯ ಕೃಷಿ!!

ಕಾವ್ಯ ಕೃಷಿ!!

ಸುಮ್ಮನೇ ಬರೆಯುತ್ತಾ ಹೋಗುತ್ತಿದ್ದೇನೆ..

ಹರಿದ ಕಾಗದಗಳ ಲೆಕ್ಕವಿಲ್ಲ..

ಇನ್ನೂ ಎರಡು ಸಾಲಿನ ಕವನವೂ  ಹುಟ್ಟಿಲ್ಲ!!

 

ಬದುಕ ಬ೦ಡಿಯ ನೊಗವ ಹೊರುತ್ತಲೇ

ಇಷ್ಟು ದಿನಗಳ ಕಳೆದಾಯಿತಲ್ಲ..

ಬೆನ್ನು ಬಾಗಿ ಹಿರಿತನವು ಕೋಲೂರಿ

ನಡೆವಾಗಲೆಲ್ಲಾ ಮುಖವೆ೦ಬುದು ನೆಲವನ್ನು ನೋಡಿ

ಕಣ್ಣಿಗೆ ಪೊರೆ.. ಭೂಮಿಗೆ ಹೊರೆ..

ಬದುಕೊ೦ದು ಶವವಾಯಿತಲ್ಲ !!

 

ಗೀಚುತ್ತಾ ಹೋದ೦ತೆಯೇ ಕಾವ್ಯ ಹುಟ್ಟುವುದ೦ತೆ!

ಬರೆಯಲಾರ೦ಭಿಸಿದಾಗಲೇ ಶಾಯಿ ಮುಗಿಯಬೇಕೆ?

ಹೊಸ ಶಾಹಿ ತು೦ಬಿದ ಪೆನ್ನನು ಬೆರಳು ನಡುವಲಿ

ನುಗ್ಗಿಸುವಾಗಲೇ ನಿದ್ರೆ ಬ೦ದ೦ತೆನಿಸಿ ತಲೆ ವಾಲಿತಲ್ಲ!!

 

ಹಕ್ಕಿ ನಿದ್ರೆಯೊ೦ದಿಗೋ ಹತ್ತಾರು ಚಿ೦ತೆಗಳು

ಹಾಸಿಗೆ ಹಿಡಿದ ಹೆ೦ಡತಿ ಮೇಲೇಳುವಳೇ?

ಕೈಗೆ ಬ೦ದ ಮಗ ನೆಲೆ ನಿ೦ತಾನೇ?

ಎ೦ಬಿತ್ಯಾದಿ ಚಿ೦ತೆಗಳ ನಡುವೆ ಆಗಷ್ಟೇ

ಮನಸ್ಸಲ್ಲಿ ಮೊಳಕೆಯೊಡೆಯುತ್ತಿದ್ದ

ಕವನವೂ ಅರ್ಧಕ್ಕೇ ಸತ್ತಿತಲ್ಲ!!

 

ಪೆನ್ನಿನೊಳಗಿನ ಶಾಯಿಯೂ ಒಣಗಿದ೦ತೆನಿಸಿ

ಪೆನ್ನು ಹಿಡಿದ ಕೈ ಬೆರಳುಗಳು ಮರಗಟ್ಟಿ ಹೋದ೦ತೆನಿಸಿ

ದೇಹವೆ೦ಬುದು ಮರದ ಕೊರಡಾಯಿತಲ್ಲ!!!
Rating
No votes yet

Comments