ನಾ ಹೋಗುವ ದಾರಿಯಲಿ - ಕಥನ ಕವನ
ಒಂದು ಕಥನ ಕವನ ಬರೆಯಬೇಕೆಂಬ ಅಸೆ ಬಹುದಿನಗಳಿಂದಲೂ ಮನದಲ್ಲಿತ್ತು. ಅದುದರಿಂದ ನನ್ನ ಮೊದಲ ಕಥನ ಕವನದ ಪ್ರಯೋಗ ಇಲ್ಲ್ಲಿದೆ
----------------
ನಾ ಹೋಗುವ ದಾರಿಯಲಿ
-----------------------
ಮುಂಜಾನೆಯ ತಿಳಿಬೆಳಕು ಹಿನ್ನಿರುಳ ಕರಿ ಮಸಿಯನು,
ಬಿಸಿಲು ಮಂಜನು ಕರಿಗುಸುವಂತೆ ಕರಗಿಸುತ ತನ್ನ
ದಿನ ಕಾರ್ಯವನ್ನೆಸಗುತ್ತ ನಿಮಗ್ನದಿಂದಿರಲು,
ಬಿಮ್ಮೆನುವ ನಿಶಾಮೌನದ ನೀರವತೆಗೆ ಮೃತ್ಯುವಾಗಿ
ಐ.ಟಿ, ಬಿ.ಪಿ.ಒ ಗಾಡಿಗಳು ಶರವೇಗದಲಿ ಶಹರದೆಲ್ಲೆಡೆ
ಭೋರೆಂದು ಕರ್ಕಶಧನಿಯನೆಬ್ಬಿಸಿ ನುಗ್ಗುತ್ತಿರಲು,
ಅಳಿದುಳಿದ ಮರಗಿಡಗಳಲಿ ಎಣಿಕೆಮಾತ್ರ ಪಕ್ಷಿಸಮೂಹ
ಪ್ರಾತಃಕಾಲದ ಸುಪ್ರಭಾತವನೆ ಇಂಪಿನಿಂದುಲಿಯತಿರಲು,
ಮನೆ ಮನೆಯ ಬಾಗಿಲಿನ ತಂಪು ಕಲ್ಚಪ್ಪಡಿಗಳ ಮೇಲೆ
ಕಸದ ಬುಟ್ಟಿಗಳು ತನ್ನೊಡೆಯನಿಗೆ ಕಾದು ಕೂತಿರಲು,
ಕಸದವನ ಗಾಡಿಯ ಘಳ ಘಳ ಘಂಟೆಯ ಶಬ್ಧದೀಟಿಯು
ನನ್ನ ನಿದ್ರೆಯನು ತಿವಿಯಲು, ನಾನೆದ್ದೆ ಮೈಮುರಿದು ನರಳುತ.
ದಣಿದ ನಾನು ಬಿಸಿನೀರಿನಿಂದೆಚ್ಚೆತ್ತು, ಜಡತನವನಲ್ಲೇ,
ಬಚ್ಚಲಲಿ ಬಿಚ್ಚಿ, ಸ್ವಚ್ಚ ಸುಶುಭ್ರನಾಗಿ, ಗರಿಗರಿ ಇಸ್ತ್ರಿ
ಬಟ್ಟೆಗಳಿಂದ ಸುಶೋಭಿತನಾಗಿ, ಮನೆಯೊಳಗಿನ
ಗುಡಿಯೊಡೆಯರಿಂದಾಶೀರ್ವಾದಿತನಾಗಿ, ಹೊಸದಿನವನಾನಂದದಲಿ
ಆಲಿಂಗಿಸಲನುವಾದೆ. ಎಂತ ಸೊಬಗು, ಎಂತ ಚೆಲುವು,
ಹಸಿರು ಬಣ್ಣದ ಮುದದ ಗೆಲುವು, ನೆರಳ ಚೆಲ್ಲಿ ನಿಂತ
ಹೊಂಗೆಯ ನಿಲುವು; ಮನೆಯ ಮುಂಬಾಗಿಲಿನಲಿ ಅದರ
ಸೊಂಪೆಲೆಗಳ ಚಾಮರದಿಂದ್ಭುವಿಸಿಹ ಪೃಥುಲ ತಂಗಾಳಿ
ಬೀಸುವಾಗ,ನನ್ನ ಮೈಯ್ಯನದಕೊಡ್ಡಿ ನಾ ನಿಂತಾಗ,
ಮನವದು ಧುಮಿಕಿತು ಪರಮಾಹ್ಲಾದದ ಸರೋವರದ ತುದಿಗೆ.
ಕಾಗೆಯೊಂದಲ್ಲಿ ಮರದಿಂದ ಹಾರಿ, ನನ್ನ ಬೈಕಿನ ಕನ್ನಡಿಯೊಳಗೆ
ತನ್ನ ರೂಪ ಲಾವಣ್ಯದ,ಸೌಂದರ್ಯವನಾಸ್ವಾದಿಸುವಲ್ಲಿ ಮಗ್ನ.
ಬೈಕೇರಿ ಹೊರಡಲಣಿಯಾಗಲು ಕೂಗಿ ಕರೆದು ಕುಣಿಯುತ,
ನನ್ನ ನಗಿಸಲೆತ್ನಿಸಿದ ಎದುರು ಮನೆ ಮಗುವದು ಅರೆನಗ್ನ.
"ಹಿಡಿದುಕೊಳ್ಳಿ." ಎಂದು ನಾನದಕೆ ಹೆದರಿಸಲು, ಅಮ್ಮಾ!!
ಎಂದರಚುತ ತಾಯಿ ಕಾಲ್ಗಳ ಹಿಂದೆ ಅವಿತಿಣುಕಿದಾಗ ಕಂಡ
ಅದರ ಭಯ ಮಿಶ್ರಿತ ನಗುವೆ ನನ್ನ ದಿನಾರಂಭಕೆ ಶುಭ ಲಗ್ನ.
ಸುಪ್ತಚೇತನ ಮುದ್ರಿತ ಮಹಾನಗರ ಸಂಕ್ಲಿಷ್ಟ ನಕ್ಷೆಯ ನೆನೆದು
ಆಫೀಸಿಗೆ ಪಶ್ಚಿಮದಿಕ್ಕಿನೆಡೆ ನನ್ನ ಬೆಳಗಿನ ಪಯಣ ಬೆಳೆಸಲು,
ನನ್ನ ಸುಪ್ತಚೇತನದಾದೇಶವನೊತ್ತು ತನ್ನಷ್ಟಕ್ಕೆ ತಾನೆ
ಎಲ್ಲ ತಿರುವುಗಳ ದಾಟಿ ಗಾಡಿ ನಿಷ್ಠೆಯಲಿ ಸಾಗುತಿರಲು,
ಬಾಹ್ಯಲೋಕದಂತರಂಗದ ವೀಣೆಯ ಮೀಟುವ ವೈಣಿಕನಾನಾದೆ.
ದೃಷ್ಟಿಸೀಮಾ ಭೂಮಿಕೆಯಲಿ ನಡೆಯುವ ಜೀವನ ಆಟದ
ಆಂತರ್ಯವನ್ನರಿಯುವ ಆಶಾತಪೋವನದಲ್ಲಿ ಕುಳಿತು
ತಪಿಸುವ ಧ್ಯಾನಸ್ತ ಮುನಿಯಾದೆ.
ಕಂಡೆನಾಗ ಬಳಿಯೆ ಬಂದ ತರಕಾರಿ ಗಾಡಿಯಲಿ
ಕಂಗೊಳಿಸಿ ಹರಡಿದ್ದ, ಕೆಂಪು, ಬಿಳಿ, ತಿಳಿ ಹಸಿರು,
ಗುಲಾಬಿ, ತರಕಾರಿ ರಾಶಿಯು, ಹನಿ ನೀರಿನಲಿ ತೊಯ್ದು,
ನೀರ್ಮಣಿಗಳ ಪರೆದೆಯನೊತ್ತು, ಭಾಸ್ಕರನ ಬಾಲಕಿರಣಗಳ
ಲೀಲೆಗೆ ಹೊಳೆಯುವ ರೀತಿ, ಗಾಡು ಸಾಗುವ ಕಂಪನಕೆ ಕುಣಿಯುವ
ರೀತಿ. ಹೇಳುವುದೇ ಅವು ತಾನ್ ಬೆಳೆದವನ ಜಾತಿ, ಮುಂದೆ ಹೋಗಿ
ಸೇರುವನ ಜಾತಿ? ಮೊಗದ ಮುಗಿಲಲಿ ಮಿಸುನಗೆಯು ಮಿಂಚಿತು :-).
ಪ್ರಸವ ಬೇನೆಯ ಆರ್ತನಾದದಂತೆ ಕೂಗಿದ ರೈಲೊಂದು
ಮಲ್ಲೇಶ್ವರಂ ರೈಲುನಿಲ್ದಾಣದಲಿ ತನ್ನೊಡಲಿಂದ ಹಡೆದಿಹುದು
ನೂರಾರು ಜನರ, ಬಿಡುತಿಹುದು ದಣಿದು ಏದುಸಿರಮೇಲೊಂದುಸಿರ.
ಪರಿಮಿತ ಭೋಗಿಯೊಡಲಿಂದ ಜನಿಸಿದ ನವಜಾತ ಪ್ರಯಾಣಿಕರು
ಅಮಿತ ಲೋಕವ ಹೊಕ್ಕು, ದಿನನವ್ಯದ ನವಿರಾದ ಗಾಳಿಯ ಸೇವಿಸಿ,
ಮಿಕ ಮಿಕನೆ ಕಣ್ಣರಳಿಸಿ ನೋಡುತಿಹರು ಬಸ್ಸು ಆಟೋಗಳನೀಕ್ಷಿಸಿ.
ಘೀಳಿಟ್ಟ ರೈಲಿನಾಘೋಶಕೆ ಬೆದರಿದ ಹೊಸಹಕ್ಕಿಗಳು ಬೆದರಿ
ಹಾರಾಡುತಿರಲು, ಹಳೆಯ ಹಕ್ಕಿಗಳು ಅಚಲ ತಂತಿಯ ಮೇಲೆ
ಕೂತು, ಸುತ್ತಲಿನ ಮನೆಯ ಜನರ ನಿದ್ರೆಯಂತೆ ಮೈಮರೆತು,
ಆ ದಿನದ ಹೊಟ್ಟೆಪಾಡಿಗೆ ತಂತ್ರವನು ರೂಪಿಸುತಿವೆ.
ಘಟನೆಯೊಂದು ನಿರೀಕ್ಷಿತವು ಹಲವರಲಿ, ಅನಿರೀಕ್ಷಿತವು
ಕೆಲವರಲಿ; ಭಾವ, ಭಯ, ವಿಧಿ, ಸ್ಪಂದನಗಳೂ ಹಾಗೆ ನಮ್ಮ
ಮನೋರಥದ ಎಣಿಕೆಗೆಟಕುವುದೊಮ್ಮೆ ಮಗದೊಮ್ಮೆ ಇಲ್ಲ.
ಸ್ವಲ್ಪ ದೂರದಲಿ ಕಂಡೆ ತಿರುವಿನಲಿ ವಾಹನಗಳ ಮಂದೆ,
ನೆನಪಿಗೆ ತರುತಿದೆ ಕೊಟ್ಟಿಗೆಯ ಕಿರುಬಾಗಿಲಲಿ ನಿಂದ ಕುರಿಮಂದೆ,
ಕೊಸರಾಡುತಿಹುರೆಲ್ಲ ಸಿಕ್ಕಿ ದಟ್ಟಣಯಲಿ ಸಾಗಲಾರದೆ ಮುಂದೆ,
ತಾಳ್ಮೆ ಪರೀಕ್ಷಿಸುತ ನಿಂತಿದೆ ಮೆಟ್ರೋರೈಲಿಗಾಗಿ ಕಟ್ಟಿದ
ಸುತ್ತುಗೋಡೆ ನಿರ್ಧಾಕ್ಷಿಣ್ಯವಾಗಿ ಅವರ ಮುಂದೆ. ಈ ಅಚೇತನ
ಮೂರ್ತಿಯ ಜರೆಯಲಾಗದೆ ಸಂಧಿಗಳಲಿ ಹತಾಶೆಯ ಹೊರೆಯನೊತ್ತು
ಸಾಗುತಿದೆ ವಾಹನ ದಂಡು, ಶಾಲೆಯ ಮಕ್ಕಳು ಅಜ್ಜ ಅಜ್ಜಿಯರ
ಬಿಗಿಮುಷ್ಟಿಯಲಿ ದಾಟುತಿಹರು ರಸ್ತೆಯ ಹೊಗೆಯನ್ನುಂಡು,
ಮೇಲೆ ಮೆಟ್ರೋಕಂಬದ ತುತ್ತತುದಿಯಲಿ ನಿಂತು ಕಾರ್ಮಿಕನೊಬ್ಬ
ಕಾರ್ಯಮಗ್ನನಾಗಿಹನಲ್ಲಿ, ಎಳೆ ಬಿಸಿಲಿಗೆ ಮಿನುಗಿ ಪ್ರತಿಫಲಿಸಿದ
ಜಾಹಿರಾತಿನ ಕೆಂಬೆಳಕು ಅವನ ಮುಖದಲಿ, ಉತ್ಸುಕದಿ
ದಿಟ್ಟಿಸಿದೆ ಮೇಲಿರುವ ಅವನನ್ನು, ಬಸ್ಸಿನ ಕಿಟಕಿಬಳಿಯಲಿ ಕೂತ
ಶಿಶುವೊಂದರ ನೋಟ, ಶಿಶುಸ್ಮೃತಿಗರಿವಿಲ್ಲ ಮೆಟ್ರೋಕಾರ್ಯ
ಕ್ಲೇಶದ ವಿಹ್ವಲದಾಟ. ಚಾಲಕರೇ ಬಲ್ಲರು ಮೆಟ್ರೋ
ನಿರ್ಮಾಣದಿಂದ್ಭುವಿಸಿಹ ಸಂಚಾರ ದುಸ್ಥಿತಿಯ ಕಹಿಯ,
ಎಂದು ಸವಿವೆವು ನಿರಾಯಾಸ ನಿರಾತಂಕದ ಸುಗಮ
ಸಂಚಾರದ ಸವಿಯ? ನನಸಾಗುವುದೆಂದು ಈ ಕನಸು ?
ತುಡಿಯುತಿದೆ ಮನವು ಧೂಳು,ಧೂಮ, ದಟ್ಟಣೆಗಳಿಲ್ಲದ,
ಪ್ರಶಾಂತ ವಿಸ್ತಾರ ರಸ್ತೆಯ. ಹಕ್ಕಿಯಂತೆ ನಿರಾಳವಾಗಿ
ತಂಗಾಳಿಯನು ಸವಿದು, ಸಾಗಲು; ಗುರಿಯನು ಮುಟ್ಟಿ ಮರಳಿ
ಗೂಡು ಸೇರಲು. ಒಂದರ ಹಿಂದೊಂದರಂತೆ ಅಪ್ರತಿಹತ ವಾಹನಗಳ
ಗುಂಪು ಕಲೇಟಿನಿಂದ ಸಿಡಿದ ಜೇನುಗೂಡಿನಿಂದೊರಟ ಭೃಂಗಸ್ತೋಮವಂದದಿ,
ಕಿರುಹಾದಿಯಿಂದ ಬಿತ್ತರ ಬೀದಿಯತ್ತ ಮುನ್ನುಗ್ಗಿದ ಚಾಲಕರೆಲ್ಲರಲು
ಸಂತಸದುದ್ವೇಗ, ಕ್ಷಣಿಕ ಸ್ವಚ್ಚಂದ ಸ್ವಾತಂತ್ರೋಲ್ಲಾಸ,
ನಿರಪರಾದಿಯು ಸೆರೆಯಾಗದೆ ಬಿಡುಗಡೆಯದ ಸಂಭ್ರಮ.
ಉತ್ಸಾಹದುಮ್ಮನ್ನಿಸ್ಸಿನಿಂದ ವಾಹನಗಳ ವೇಗವನ್ನೇರಿಸುತ,
ಧರಧುರದಿ ಹೊರಟಿಹರೆಲ್ಲ ತಮ್ಮ ಗುರಿಯನರಸುತ.
ನಾನು ಅವರಲ್ಲಿ ಒಬ್ಬ, ಸಂತೆಯಲಿ ನಡೆವ ಗ್ರಾಹಕನಂತೆ.
ಎಲ್ಲ ವಾಹನಗಳನು ಬಳಸಿ, ಸೇತುವೆ ಮೇಲೆ ಕೆಳಗೆ ದಾರಿ
ಸವೆಸಿ, ಹಳ್ಳಕೊಳ್ಳದಲಿ ಗಾಡಿ ಇಳಿಸಿ, ಹಂಪಿನಲಿ ಎಗರಿಸಿ.
ಕಲ್ಲಿನಲಿ ಮುಗ್ಗರಿಸಿ, ಸಗಣಿಯ ತಪ್ಪಿಸಿ, ಒಮ್ಮೊಮ್ಮೆ ವೇಗದಲಿ
ಮತ್ತೊಮ್ಮೆ ಮಂದಗತಿಯಲಿ ಸಾಗಿದೆ ಗಾಡಿ ಹರಸಾಹಸ ಮಾಡಿ.
ಬಂದು ನಿಂತಿಹನು ನಾ ಕೆಂಪು,ಕೇಸರಿ ಹಸಿರು ವರ್ಣವೇಷ
ವ್ಯತ್ಯಾಸಿ ಸಿಗ್ನಲ್ ದೀಪದ ಬಳಿ. ನೂರಾರು ವಾಹನ ಚಲನ
ವಲನಗಳ ಮೇಲೆ ಕಣ್ಣಿಟ್ಟಿಹ ಪೋಲಿಸಿನವನ ಅಂಗಿಯದು ಬಿಳಿ.
ಕಪಟತಂತ್ರದಿ ಕಣ್ ತಪ್ಪಿಸಿ ನುಗ್ಗಲೋದ ಬೈಕಿನೈದನನಿಡಿದು
ಹೆದರಿಸಿದೆ ಪೋಲಿಸಿನವನ ಅಕ್ರೋಷ ಮಂತ್ರ. ಈ ತಂತ್ರ ಮಂತ್ರಗಳ
ಜೂಜಿನಲಿ ಕಂಡಿದೆ ಸುತ್ತಲಿದ್ದವರಿಗೆ ಮೋಜು. ತಾವು ಜೂಜಿನ
ಬಲೆಯಲಿ ಬೀಳಲಿಲ್ಲವಲ್ಲಾ ಎಂಬ ಅಮೂರ್ತ ಆನಂದವ ಉರಿಸಿದೆ
ಎದೆಯ ಪಂಜು. ಓ ಹಸಿರು ದೀಪವುರಿದೆ, ಸರ್ವ ನಿರ್ವೇಗ ವಾಹನಗಳ
ಇಂಜಿನ್ ಝೇಂಕರಿಸಿ ಸಚಲವಾಗಿದೆ, ಬೆದರಿದ ಕುರಿಮಂದೆಯಂತೆ
ನುಗ್ಗಿದೆ. ಚಾಲಕರೋ ಸಿಕ್ಕ ಸಂದಿಗಳಲಿ ನುಗ್ಗಿಸಿ, ಆತುರಾತುರದಿ
ನುಸುಳುತ, ದೂರದಿನ್ನೊಂದು ದೀಪದ ಬಣ್ಣವ ಔತ್ಸುಕದಿ ನೋಡುತ,
ಕೆಂಪು ಹಸಿರಾಗುವ ಸುವರ್ಣಾವಕಾಶವನು ಕಾಯುತ ವೇಗಾವೇಗಗಳನು
ನಿಯಂತ್ರಿಸುತಿಹರು. ಒಮ್ಮೆ ಅಶ್ವಹೃದಯಿಗಳಾಗಿ ಮತ್ತೆ ಕೂರ್ಮಹೃದಯಿ
-ಗಳಾಗಿ ದಟ್ಟಣೆಗೆ ತಕ್ಕಂತೆ ಭಾವಗಳನ್ನು ನಿಯಂತ್ರಿಸುತಿಹರು.
ಅಬ್ಬಾ ಮೆದುಳಿಗೂ ಕೈಕಾಲುಗಳಿಗೂ ಎಂತಹ ಕಸರತ್ತಿನ ವ್ಯಾಯಾಮ.
ಅಚೇತನ ಯಂತ್ರಕ್ಕೂ ಭಾವಗರ್ಭಿತ ಚೇತನಕ್ಕೂ ಎಂತಹ ಸಂಯಮ.
ಇನ್ನೊಂದು ಸಿಗ್ನಲ್ ದೀಪದ ಕೆಂಪಿನಾದೇಷದ ಮೇಲಿನ
ಭಯಪೂರ್ಣಗೌರವಕ್ಕೆ ಎಲ್ಲ ವಾಹನಗಳು ಚಲನಧಾರೆಯಿಂದ
ಅಚಲ ಸರೋವರಕ್ಕೆ ಧುಮಿಕಿವೆ.
ಅಲ್ಲೆ ನಿಂತ್ತಿದ್ದನು ಬಿಕ್ಷುಕನೊಬ್ಬ ಹೊಗೆ,ಧೂಳಿನಿಂದ
ಕಪ್ಪಿಡಿದಿದ್ದು ಸೊರಗಿ ಬದುಕಲು ಹವಣಿಸುತ್ತಿದ್ದ ಚಿಕ್ಕ
ಮರದ ಬಳಿ, ಮರದ ದುಸ್ಥಿತಿಯನ್ನೆ ಹಂಚುಕೊಂಡಂತ್ತಿತ್ತು ಮಾಸಿ
ಹರಿದ ಕಂಬಳಿಯಿಂದ, ಅಂಟು ಅಂಟಾದ ಕುರುಚಲು ಗಡ್ಡ,
ಕೆದರಿದ ಕೂದಲಿಂದ, ಸೀದು ಕಪ್ಪಿಟ್ಟ ಮೈ ತೊಗಲಿಂದ,
ನೀರಸ ಕಾಂತಿವಿಹೀನ ಖೇದ ಕಣ್ಗಳಿಂದ ತುಂಬಿದ್ದ ಅವನ ಕೃಶವಾದ
ನಿಲುವು. ವಿಕಂಪಿತ ನಿರ್ವೀರ್ಯ ದೇಹವು ಅಸಹಾಯಕ ರೋಧನ ಭಾವವೊತ್ತು
ಕೈಯೊಡ್ಡಿ ಕಾಸು ಕೇಳಲು, ಕಮರಿದ ಜೀವದ ನಿರ್ಜೀವ ಕಳೆ ಕದಡಿತಲ್ಲಿ
ಹಲವರ ಮನವ. ಮತ್ತಲವರ ಔದಾಸಿನ್ಯವೂ ಮೂದಲಿಸಿತು ಅವನ
ನಿರ್ಭಾಗ್ಯ ನಿಲುವ. ಎಲ್ಲ ಮುಖಗಳನು ನೋಡುತ ದಾನ ಛಾಯೆಯನುಡುಕುತ
ಒಬ್ಬರಿಂದೊಬ್ಬರಿಗೆ ಬೇಡಿ ಸಾಗುತಲಿದ್ದ ಧರಿದ್ರೆಯ ನಲ್ಲ. ದಾನಿ
ಅದಾನಿಗಳ ಸೊಡಗನ್ನು ಅರಿಯುವ ಮರ್ಮಕಲೆಯನ್ನು ಅನುಭದಿಂದಲೇ ಬಲ್ಲ.
ಹಾಗೆ, ಕೆಲವರ ಬಳಿ ಹೋದರೆ, ಕೆಲವರ ಬಳಿ ಹೋಗಲೇ ಇಲ್ಲ.
ಅಲ್ಲಿ ನಿಂತಿತ್ತೊಂದು ತಿಳಿ ನೀಲಿ ಬಣ್ಣದ ಬೆನ್ಜ಼್ ಕಾರು ನೂರರಲ್ಲೊಬ್ಬನಂತೆ
ಅರಸ ಕಳೆಯ ಠೀವಿಯಿಂದ, ಗೌರವ ಗಾಂಭೀರ್ಯ ಘನೆತೆಯಿಂದ. ಶುಭ್ರ
ಶ್ವೇತ ತಲೆ,ಗಡ್ಡ, ಹೊಳೆವ ಹಣ್ಣು ಕಣ್ಗಳು, ಸುಕ್ಕಿದ ಮೊಗದ ನಿರ್ಮಲ
ಓಜಸ್ಸಿನ ಹಣ್ಣಾದ ಮುದುಕನೋರ್ವ ಕಾರಿನ ಗಾಜಿಳಿಸಿ ಬಿಕ್ಷುಕನನ್ನು
ಕಣ್ಣಿನಿಂದ ಕರೆದನು. ಒಡನೆಯೇ ಅವನ ಕರುಣೆಯ ಶ್ರೀಮಂತಿಕೆಯ
ತೇಜಸ್ಸು ಬಿಕ್ಷುಕನ ಮುಖದಲ್ಲಿ ಪ್ರತಿಫಲಿಸಿ ಮಿನುಗಿ ಹರುಷದೊನಲು
ಹರಿಸಿತು. ಹತ್ತು ರೂಪಾಯಿಯ ನೋಟು ಮುದುಕ ಕೊಟ್ಟಾಗ, ಕುಬೇರನ
ಕುಚೇಲನ ಕ್ಷಣಿಕ ಸಂಭಂದ ಆ ಗಿಜಿಗುಡುವ ಸಂತೆಯಲ್ಲಿ ಹುಟ್ಟಿ
ಮಾಯವಾಯಿತು. ಭಿಕ್ಷುಕನ ಧನ್ಯತೆಯ ನೋಟ , ವರುಷಗಳ ಜೀವನ
ಅನುಭವದಿಂದುದಯಿಸಿ ಮೆರೆದ ಮುದುಕನ ಸಹಾನಭೂತಿಯ ದೃಷ್ಟಿಗೆ
ಸಂಘರ್ಷಿಸಿ ಸಂಘಜೀವನ ಮೌಲ್ಯದ ಸುವರ್ಣತೇರನು ಮಹಾನಗರದ
ಮುಖ್ಯಬೀದಿಯಲ್ಲಿ ಎಳೆಯಿತು. ಧನ್ಯವಾಯಿತು ಸೃಷ್ಟಿ, ಸ್ಥಿತಿ, ಲಯಗಳು.
ಅಲ್ಲಿ ನಗರಪ್ರದಕ್ಷಿಣೆಗೆ ಬಂದ ಬೌದ್ದ ಬಿಕ್ಷುಗಳು ಸುತ್ತಲಿನ
ಕಾಂಪ್ಲೆಕ್ಸ್ಗಳನ್ನು, ವೈವಿದ್ಯವರ್ಣಮಯ ಅಂಗಡಿಗಳನ್ನು ನೋಡಿ
ವಿಸ್ಮಿತಚಕಿತರಾಗಿ ನಿಂತಿರಲು, ಎದುರಿಗೆ ಬಂದ ಎಳೆ ಯುವಕ
ಯುವತಿಯರ ವೇಷಭೂಷಣ ನಡತೆಯಲಿ ಹೊಸಪೀಳಿಗೆಯ
ನವ್ಯಸಂಸ್ಕೃತಿಯ ಮೌಲ್ಯಗಳು ಅವರ ಸ್ಮೃತಿಯಲಿ
ಗೊಂದಲವನೆಬ್ಬಿಸುತಿರಲು, ಯುವಕ ಯುವತಿಯರ ಸ್ಮೃತಿಯಲಿ
ಬೌದ್ಧಬಿಕ್ಷುಗಳ ಸಂಸ್ಕೃತಿಯು ಗೊಂದಲಕ್ಕೆ ಸಿಕ್ಕಿವೆ.
ಇಲ್ಲಿ ಸಂಸ್ಕೃತಿಗಳೆರಡು ಅಭಿಮುಖವಾಗಿ ಅಪ್ರತಿಭವಾಗಿರಲು,
ಮೇಲೆ ಭಾಸ್ಕರನು ಬಾಲಾವಸ್ಥೆಯಿಂದ ಪ್ರೌಡನಾಗಿ ತನ್ನ ಅನಂತ
ಶಕ್ತಿಯಲ್ಲಿ ಬಿಂದು ಮಾತ್ರವೇ ವ್ಯಯಿಸಿ, ಅಸ್ಖಲಿತ ಕಿರಣ ರೇಖೆಗಳ
ಪ್ರಖರತೆಯನು ತೀವ್ರಗೊಳಿಸಿ ತಂಗಾಳಿಯ ಪವನ ಸೈನ್ಯದೊಂದಿಗೆ
ಯುದ್ಧಕ್ಕಿಳಿಯುವ ಸನ್ನಾಹದಲ್ಲಿರುವನು. ಬಿಸಿಲ ತಾಪವೆಚ್ಚಿ
ಶೆಕೆಸುತ ಬೆವರಿನ ಹನಿಯೊಂದು ಶಿರಸ್ತ್ರಾಣ ಗರ್ಭದಿಂದೊರಹೊಮ್ಮಿ
ರೋಮದಾರಿಯಲ್ಲಿಳಿದು ಕೆನ್ನೆಯ ತುದಿಯಲ್ಲಿ ಬಿಸಿಲ್ಗೋಲುಗಳಿಗೆ
ಹೊಳೆಯುತ ನಿಂತಿದೆ. ಬಾಹ್ಯತಾಪ ಸುಡುತಿರಲು, ಹೊಗೆಯ
ಕಪ್ಪು ಹೊಳೆಯಲ್ಲಿ ಎಲ್ಲರೂ ಮುಳುಗಿರಲು, ಕಾದ ಭೀಮಗಾತ್ರ
ವಾಹನಗಳು ಬಿಸಿಗೊಂಡ ರಣಗಾಳಿ ಬೀಸುತಿರಲು,
ನಿಸ್ಸಹಾಯಕತೆಯ ಮಡಿಲಲ್ಲಿ ಮಲಗಿಹುದು ದೇಹಗಳು. ಎಲ್ಲವನು
ಸಹಿಸಿ ನಾ ಮುಂದೆ ಹೋಗುತ ಬರುವ ಸಿಗ್ನಲ್ ಗಳನು ದಾಟಿ,
ಬಿಸಿಲಲ್ಲಿ ಬೇಯುತ, ಅದೃಷ್ಟದಲಿ ಮರದ ನೆರಳಿನಲಿ ನಿಲ್ಲುತ,
ಸಾಗುತಲೇ ಇದ್ದೆ ಮುಂದೆ. ಓ!!! ಸಿಕ್ಕೆತೆನಗೆ ಮರಳುಗಾಡಿನಲಿ
ಸರೋವರದಂತೆ, ಬಳಲಿ ಬಾಯಾರಿದವನಿಗೆ ಸಿಹಿನೀರಿನ ಕೊಳದಂತೆ,
ದೃಷ್ಟಿಶಸುಂದರ ಸ್ಪರ್ಶಮೋಹಕ ಉಲ್ಲಾಸದಾಯಕ ಸೊಬಗಿನ
ದಾರಿ, ನದಿಯೊಂದು ಹಾದು ಹೋದ ನೆನಪು ತರಿಸುತಿದೆ
ಎದುರಿಗಿರುವ ಈ ದಾರಿ, ಹೆಮ್ಮರಗಳಿಕ್ಕೆಲದಲಿ ಹಸಿರನುಕ್ಕಿಸಿ
ಹರಿಸುತಿದೆ ಧವಲ ದಿವ್ಯ ದೃಶ್ಯಸಿಂಧು, ಪವನಮೃದಂಗಕೆ
ಮೈಮರೆತು ನರ್ತಿಸುತಿದೆ ಎಲೆ ಗೊಂಚಲದು ತಂಗಾಳಿಯ ಬಂಧು,
ಹಸಿರ ನಡುವೆ ಕೊಂಬೆ ರೆಂಬೆಗಳಲಿ ಜೋಕಾಲಿಯಾಡುತಿವೆ
ಪಕ್ಷಿಗಳು ನಿಂದು. ಮೆಟ್ರೋರೈಲು ಸೇತುವೆಯ ಕಾರ್ಯದ ಕಾಟವಿಲ್ಲಿಲ್ಲ,
ಬೀಷಣ ಭೀಕರ ಹೊಗೆಪಿಶಾಚಿಯ ಮಾಟವಿಲ್ಲಿಲ್ಲ, ತಾಪಕೂಪದಲಿ
ಬೆಂದು ನರಳುವ ಶಾಪವಿಲ್ಲಿಲ್ಲ, ಮಾವು,ಬೇವು,ಅಶೋಕ, ಆಲ,
ಅರಳಿ, ಹೊಂಗೆ, ಸಂಪಿಗೆ ಬಂದು ತಬ್ಬಿಹರು ಸಂಚಾರಿಗಳನಿಲ್ಲಿ,
ಅಡಿಗಡಿಗೂ ಚಿತ್ರಿಸಿಹ ನೆರಳ ಕುಂಚಕಲೆ ತಂಪೆರೆಯುತಿಹುದಿಲ್ಲಿ,
ಎಲ್ಲ ವೇದನೆ, ಎಲ್ಲ ರೋದನೆ, ಎಲ್ಲ ಹಿಂಸೆಗಳು ತಂಗಾಳಿಯ
ಸಿರಿಸುಖಕೆ ಸೋತು ಮಡಿದಿಹುದಿಲ್ಲಿ, ನರಕಯಾತನೆಯ ಸಂಚಾರ
ಬಂಧನ ವಿಮುಕ್ತ ದೇಹ ಸರಾಗ ಸ್ವಚ್ಚಂದ ಸ್ವಾತಂತ್ರ್ಯದಿಂದ
ಎದೆಯುಬ್ಬಿಸಿ ಪರಮಾನಂದ ಮುಗಿಲಿನಲಿ ತೇಲುತಿಹುದಿಲ್ಲಿ.
ಮುಟ್ಟಿದೆ ಅಂತು ನನ್ನ ಗುರಿಯ ಈ ದಾರಿಯ ಕೊನೆಯಲ್ಲಿ, ಅನ್ನ
ನೀಡುವ ದಿವ್ಯ ಮಂದಿರಕೆ, ತರ್ಕ,ಚರ್ಚೆಗಳ ಮಹಾಸಮುಚ್ಚಯಕ್ಕೆ.
ಜ್ನ್ಯಾನವೀಯುವ ಗುರುಕುಲಕೆ, ನೋವುನಲಿವಿನ ಕಾರ್ಯಮಂಟಪಕೆ.
ಎಂತ ಸೋಜಿಗವೀ ನನ್ನ ಬೆಳಗಿನ ಪಯಣ, ಪ್ರತಿಫಲಿಸುತಿಹುದೆ
ಜೀವಜಾತ್ರೆಯ ಹೂರಣ? ಸುಖದುಃಖ ಬೆರೆತ ಜೀವನಯಾತ್ರೆಯಾಗಿ
ಕಲಿಕೆಗೆ ಅನುಭವಶಾಲೆಯಾಗಿ ದಿನವೂ ನನ್ನ ಬಳಿಯಿರುವುದು
ಈ ನನ್ನ ಪಯಣ......
Comments
ಉ: ನಾ ಹೋಗುವ ದಾರಿಯಲಿ - ಕಥನ ಕವನ
In reply to ಉ: ನಾ ಹೋಗುವ ದಾರಿಯಲಿ - ಕಥನ ಕವನ by ನಂದೀಶ್ ಬಂಕೇನಹಳ್ಳಿ
ಉ: ನಾ ಹೋಗುವ ದಾರಿಯಲಿ - ಕಥನ ಕವನ