ಪಾಪ
ಅವನನ್ನು ಒಮ್ಮೆಯೂ ಕಾಡದ ಚಿಂತೆಯೊಂದು ಇದ್ದಕ್ಕಿದ್ದಂತೆ ಬಂದು ಒಕ್ಕರಸಿತ್ತು. ಅಪ್ಪನ ಆಕ್ಸಿಡೆಂಟಿನ ಮೂಲಕ! ಜಹಾಂಗೀರ್ ಆಸ್ಪತ್ರೆಯ ಹೊರಗೆ ನಿಂತಿದ್ದವನ ತಲೆಯೊಳಗೆ ಏನೇನೋ ಯೋಚನೆಗಳು ಮತ್ತೆ ಕಾಡತೊಡಗಿ ತಲೆನೋವಾದಂತೆ ಅನಿಸಿ ಹೊರಗೆ ಹೋಗಿ ಮತ್ತೊಂದು ಸಿಗರೇಟು ಎಳೆಯತೊಡಗಿದ. ಈ ರೀತಿ ಅನಿಶ್ಚಿತತೆಗೆ ದೂಡಿದ ಬದುಕಿನ ರೂಪಕ್ಕೆ ಬೆರಗಾಗದೆ ವ್ಯಗ್ರಗೊಂಡ. ಆಫೀಸಿಗೆ ಬೇರೆ ರಜೆ ಹಾಕಿ ಒಂದು ವಾರ ಕಳೆದಿತ್ತು. ಇಲ್ಲಿಯವರೆಗಿನ ಖರ್ಚೇ ಮೂರು ಲಕ್ಷ ದಾಟಿದೆ. ಅದರ ಮೇಲೆ ಪೋಲೀಸ್ ಅಲೆದಾಟ ಬೇರೆ. ಇನ್ಶುರೆನ್ಸ್ ಕೂಡ ಸಿಗುವುದೋ ಇಲ್ಲವೋ ಎಂಬುದು ಅಸ್ಪಷ್ಟ, ಸರಕಾರದ ಪಾಲಿಸಿ ಮತ್ತು ಅದರ ಪ್ರೊಸೀಜರುಗಳ ಮೇಲೆ ಅವನಿಗೆ ಇದ್ದ ನಂಬಿಕೆ ಅಷ್ಟಕ್ಕಷ್ಟೇ. ಇದ್ದ ಸೇವಿಂಗ್ಸುಗಳೆಲ್ಲವನ್ನೂ ಬ್ರೇಕ್ ಮಾಡಿದ್ದರಿಂದ ಅದು ಹಣದ ಅಗತ್ಯವನ್ನು ಈಡೇರಿಸುತ್ತಿತ್ತು. ಹಾಗೆಯೇ ಕಂಪನಿಯ ಮೆಡಿಕಲ್ ಯೋಜನೆಯಡಿ ಅಪ್ಪನ ಹೆಸರನ್ನೂ ಹಾಕಿದ್ದರಿಂದ ಖರ್ಚು ಮಾಡಿದ್ದರಲ್ಲಿ ಬಹುಪಾಲು ಹಣ ವಾಪಸ್ ಬೇರೆ ಸಿಗಲಿದೆ ಆದರಿಂದ ಹಣವೆನ್ನುವುದು ಅವನ ಚಿಂತೆಗೆ ಕಾರಣವಲ್ಲ. ಆದರೂ ಚಿಂತಿತನಾಗಿದ್ದ, ಕಾರಣ ಡಾಕ್ಟರ್ ಹೇಳಿದ ಮಾತುಗಳು. ಒಂದು ದಿನದ ಅವಧಿ ಕೇಳಿದ್ದರೂ ಇವತ್ತೂ ಅವನಿಗೆ ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಲಿಲ್ಲ.
ನಿಂತಲ್ಲಿಯೇ ಬಂದು ಹೊಡೆದಿದ್ದ ವ್ಯಾನಿನಿಂದ ಬೈಕಿನ ಮೇಲೆ ಕೂತಿದ್ದ ಅವನ ಅಪ್ಪನ ಸ್ಥಿತಿ ಗಂಭೀರಗೊಂಡದ್ದು ಮಾತ್ರವಲ್ಲ ಅವರು ಕೋಮಾಕ್ಕೆ ಜಾರಿದ್ದು ಪರಿಸ್ಥಿತಿಯ ಇಷ್ಟು ಗಂಭೀರತೆಗೆ ಕಾರಣ. ಅದರಿಂದಾಗಿ ಆಗಿರುವ ಗಾಯಗಳಿಗೆ ಶುಶ್ರೂಷೆ ಮಾಡಿದರೂ ದೇಹ ಪ್ರತಿಕ್ರಿಯಿಸದಿರುವುದು ಡಾಕ್ಟರಿಗೂ ದೊಡ್ಡ ಸಮಸ್ಯೆಯಾಗಿತ್ತು. ಅದಕ್ಕೇ ಡಾಕ್ಟರ್ ಒಂದು ಸಲಹೆ ಕೊಟ್ಟಿದ್ದು, ’ಒಂದು ವೇಳೆ ಏನಾದರೂ ಬೆಳವಣಿಗೆ ಕಂಡು ಬರದಿದ್ದರೆ ಅವರ ಬಗ್ಗೆ ನೀವೇ ನಿರ್ಧಾರ ಮಾಡಬೇಕು, ನನಗೆ ಸುಮ್ಮನೆ ಪೇಶಂಟ್ಸ್ ಗಳನ್ನ ಆಸ್ಪತ್ರೆಯಲ್ಲಿಡಲು ಮನಸ್ಸಿಲ್ಲ, ನಿಮಗೂ ತೊಂದರೆ ನಮಗೂ ತೊಂದರೆ’. ಅವರು ಹೇಳಿದ ಪ್ರಕಾರ ಒಮ್ಮೆ ಕೋಮಾಕ್ಕೆ ಹೋದ ಬಳಿಕ ಮರಳಿ ಬರುವುದು ಬಹುತೇಕ ಅಸಾಧ್ಯದ ಮಾತೇ. ಅದೂ ತಂದೆಗೆ ಪೆಟ್ಟು ಬಿದ್ದಿರುವುದು ತಲೆಗೆ. ಏನೆಲ್ಲಾ ಶುಶ್ರೂಷೆ ಮಾಡಿದರೂ ಮೆದುಳು ದೇಹಕ್ಕೆ ಸಂಕೇತಗಳನ್ನು ನೀಡಿದರೆ ಮಾತ್ರ ಯಾವುದೇ ಔಷಧಿ ಪರಿಣಾಮ ಬೀರಲು ಸಾಧ್ಯ. ಗಾಯಗಳಿಗೆಲ್ಲ ಸ್ಟಿಚಿಂಗ್ ಆಗಿದ್ದರೂ ದೇಹದಲ್ಲಿ ಚೈತನ್ಯವೇ ಇಲ್ಲದಿದ್ದಲ್ಲಿ ಎಷ್ಟು ಗುಣವಾಗಿದ್ದರೇನು? ಆದರೆ ಅಸಾಧ್ಯ ಎಂದು ಅಪ್ಪನನ್ನು ಕೊಲ್ಲಲಾದೀತೇ? ಇವೇ ಪ್ರಶ್ನೆಗಳು ಒಂದಕ್ಕೊಂದು ಸಿಕ್ಕಿ ಹಾಕಿಕೊಂಡು ಅವನ ತಲೆಯೆನ್ನುವುದು ಬಿಡಿಸಲಾಗದ ಕಗ್ಗಂಟಾಗಿತ್ತು. ಸಿಗರೇಟು ಇದರಿಂದ ಮುಕ್ತಿ ಪಡೆಯುವ ಸಾಧನ ಎಂದು ಕಳೆದೆರಡು ದಿನಗಳಿಂದ ಬೂದಿಯಾದ ಸಿಗರೇಟುಗಳಿಗೆ ಲೆಕ್ಕವಿರಲಿಲ್ಲ. ತಾನು ಚೈನ್ ಸ್ಮೋಕರ್ ಆದ ಪರಿಗೆ ಅವನಿಗೇ ನಗು ಬಂತು.
ತಲೆ ಸ್ವಲ್ಪ ನಿರಾಳವಾದಂತನಿಸಿ ಅಕ್ಕ ಪಕ್ಕ ದೃಷ್ಟಿ ಹಾಯಿಸಿದ. ಧೋಲೆ ಪಾಟೀಲ್ ರೋಡ್ ಎಂದಿನಂತೆ ವಾಹನಗಳಿಂದ ತುಂಬಿತ್ತು. ಅದ್ಯಾವ ಸ್ಥಳದಲ್ಲಿ ಆಸ್ಪತ್ರೆ ಕಟ್ಟಿದ್ದಾರೋ ಎಂದೆನಿಸಿತು. ಹಿಂದೆ ರೈಲ್ವೇ ಟ್ರ್ಯಾಕು, ಎದುರು ಸಿಕ್ಕಾಪಟ್ಟೆ ಟ್ರಾಫಿಕ್! ಒಂದು ಕ್ಷಣ ತನ್ನ ತಂದೆ ಗಂಭೀರ ಪರಿಸ್ಥಿತಿಯಲ್ಲಿದ್ದಾರೆ ಎಂಬುದು ಅವನಿಗೆ ಮರೆತು ಹೋಗಿತ್ತು. ಆದರೆ ಮೊಬೈಲ್ ರಿಂಗಾದಾಗ ತಾನಿಲ್ಲಿ ಬಂದು ತುಂಬಾ ಹೊತ್ತಾಯಿತು ಎಂದೆನಿಸಿ ಹೊರಟ. ಕರೆ ಅಮ್ಮನದ್ದಾಗಿತ್ತು. ಅಪ್ಪನ ಅಪಘಾತದ ಬಳಿಕ ಅಮ್ಮನಿಗೆ ತಾನು ಮೂರೂ ಹೊತ್ತು ಬಳಿಯಲ್ಲಿರಬೇಕು, ಇಲ್ಲವಾದಲ್ಲಿ ಅವಳಿಗೆ ಏನೋ ಭಯ ಕಾಡತೊಡಗುತ್ತದೆ. ಅವನು ತನ್ನ ಆಫೀಸಿಗೆ ರಜೆ ಹಾಕಿದ್ದೂ ಇದೇ ಕಾರಣಕ್ಕಾಗಿ.
ಅಮ್ಮನೊಡನೆ ಮಾತಾಡಿ ಅಲ್ಲೇ ಪೇಪರ್ ಓದುತ್ತಾ ಕುಳಿತಂತೆ ಅವನ ಗೆಳೆಯ ನೆನಪಾದ, ನಿನ್ನೆಯ ಮಾತುಕತೆಯೂ ನೆನಪಾಯಿತು.
’ಸತ್ತರೆ ಮಾತ್ರ ಸಾವಲ್ಲ ಕಣೋ, ಬದುಕದಿರುವುದೂ ಸಾವೇ’ ಎಂದು ಹೇಳಿದ್ದ ಆತನ ಮಾತುಗಳು ನಿನ್ನೆ ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಬಿಟ್ಟಿದ್ದರೂ ಮನಸ್ಸಿನಲ್ಲಿ ಅದು ಉಳಿದ ಬಗೆಗೆ ಅವನಿಗೆ ಆಶ್ಚರ್ಯವಾಯಿತು. ಇಂದು ಕಾಡತೊಡಗಿದ ಪ್ರಶ್ನೆಗೆ ಏನಾದರೂ ಉತ್ತರ ಸಿಗಬಹುದು ಎಂದುಕೊಂಡು ಮತ್ತೆ ಆ ಮಾತುಕತೆಯನ್ನು ಮೆಲುಕು ಹಾಕತೊಡಗಿದ.
’ಅಪ್ಪಾ ಮಾರಾಯ! ಪುರಾಣ ಕುಯ್ಯಬೇಡ, ನಿನ್ನ ತತ್ವಜ್ಞಾನ ಕೇಳುವ ಪರಿಸ್ಥಿತಿಯಲ್ಲಿ ಇಲ್ಲ ನಾನು’
’ಸರಿ ಬಿಡು, ಒಂದು ವೇಳೆ ಅವರು ಇದೇ ರೀತಿ ವರ್ಷಾನುಗಟ್ಟಲೆ ಬದುಕುತ್ತಾರೆ ಅಂದ್ಕೋ, ಯಾವತ್ತೂ ಕೋಮಾದಿಂದ ಹೊರಗೆ ಬರುವುದೇ ಇಲ್ಲ ಅಂದುಕೋ ಆಗ ನೀನು ಕಾದದ್ದಕ್ಕೆ ಏನಾದರೂ ಫಲವುಂಟೇ?’
’ಇಲ್ಲ, ಆದರೆ ಅದಕ್ಕಾಗಿ ಅವರನ್ನು... ಅವರನ್ನು... ತಪ್ಪಲ್ವಾ?’
’ತಪ್ಪು ಸರಿ ಎಲ್ಲವೂ ಅವರವರ ದೃಷ್ಟಿಕೋನದ ಮೇಲಿರುವುದು, ಯಾವ ಯಾವ ಪರಿಸ್ಥಿತಿಯಲ್ಲಿ ಎನೇನು ಮಾಡಬೇಕು ಅದನ್ನೇ ಮಾಡಬೇಕು, ಸರಿ ತಪ್ಪು ಎನ್ನುವ ಮಣ್ಣು-ಮಸಣ ಎಲ್ಲಾ ಯೋಚನೆ ಮಾಡಬಾರದು’
ಅವನು ಉತ್ತರಿಸಿರಲಿಲ್ಲ. ವಿಚಾರವಾದಿ ಸಂಘಕ್ಕೆ ಯಾವಾಗ ಸೇರಿಕೊಂಡನೋ ಅಲ್ಲಿಂದ ಅವನು ಮಾತಾಡುವುದೆಲ್ಲಾ ತನ್ನ ಮಟ್ಟದಿಂದ ಮೇಲೆಯೇ ಆಗಿರುತ್ತದೆ ಎಂದು ಅವನಿಗನಿಸಿತು.
’ನೋಡು ನಾನು ಮೂರನೇ ವ್ಯಕ್ತಿಯಾಗಿ ನನಗೆ ಇದೆಲ್ಲಾ ಹೇಳುವುದು ತುಂಬಾ ಸುಲಭ. ಏನು ನಿರ್ಧಾರ ತೆಗೆದುಕೊಳ್ಳುವುದಾದರೂ ಯೋಚಿಸಿ ತೆಗೆದುಕೋ’
ಕುರ್ಚಿಗೆ ತಲೆಯಾನಿಸಿ ಮಲಗಿದವನಿಗೆ ಒಮ್ಮೆ ಅಮ್ಮನೊಡನೆ ಮಾತಾಡಲೇ ಎಂದೆನಿಸಿ ಮತ್ತೆ ಬೇಡವೆನಿಸಿತು. ತನ್ನ ಮನಸ್ಸಿನಲ್ಲಿ ಕಾಡುತ್ತಿರುವ ಸಮಸ್ಯೆಗೆ ಅವಳನ್ನು ಏಕೆ ಎಳೆಯುವುದು ಎಂದು ಸುಮ್ಮನಾದ. ಹಾಗೆ ನೋಡುವುದಾದರೆ ತಾನು ತೆಗೆದುಕೊಳ್ಳಲಿರುವ ನಿರ್ಧಾರದಲ್ಲಿ ಆಕೆಯದೂ ಪಾಲಿದೆ ಅಲ್ಲವೇ ಎಂದೂ ಅನಿಸಿತು. ನನಗಿಂತ ಹೆಚ್ಚು ಅಧಿಕಾರ ಆಕೆಗೆ ಇರುವುದಲ್ಲವೇ! ಅವಳತ್ತ ನೋಡಿದ, ಆಕೆ ಕಣ್ಣು ಮುಚ್ಚಿ ಯಾವುದೋ ಮಂತ್ರವನ್ನು ಜಪಿಸುತ್ತಿರುವುದು ಕಾಣಿಸಿದಾಗ ಅವನು ಗದ್ಗದಿತನಾದ. ಇನ್ನೊಬ್ಬರ ಬದುಕಿನ ಬಗ್ಗೆ ತೆಗೆದುಕೊಳ್ಳಬಹುದಾದ ನಿರ್ಧಾರ ಎಷ್ಟು ಕಠಿಣ ಎಂದೆನಿಸಿತು. ಅವಳಿಗೆ ಹೇಳುವುದು ಬೇಡವೆಂದು ಸುಮ್ಮನೆ ಕಣ್ಣು ಮುಚ್ಚಿದ. ಹಾಗೆಯೇ ಡಾಕ್ಟರಿಗೆ ಏನು ಉತ್ತರ ಕೊಡುವುದೆಂಬುದೂ ಅವನಿಗೆ ಗೊತ್ತಾಗಲಿಲ್ಲ. ಸಂಜೆ ಡಾಕ್ಟರ್ ಬಳಿ ಮಾತಾಡುತ್ತಾ ತನ್ನ ನಿರ್ಧಾರವನ್ನು ಹೇಳಿದ. ಅಯಾಚಿತವಾಗಿ ಅವನ ಬಾಯಿಯಿಂದ ಹೊರಟ ಮಾತುಗಳನ್ನು ಅವನಿಗೇ ನಂಬಲಾಗಲಿಲ್ಲ. ಡಾಕ್ಟರ್ ಅವನ ಭುಜವನ್ನು ಸಹಾನುಭೂತಿಯಿಂದ ಅದುಮಿದಾಗ ಅವನೊಮ್ಮೆ ಅತ್ತ.
ನಂತರ ಮನೆಗೆ ಹೋಗುವ ತನಕ ಅಮ್ಮ ಮಾತನಾಡಿರಲಿಲ್ಲ. ಅಪ್ಪನ ಸಾವಿನ ವಿಷಯವನ್ನು ಡಾಕ್ಟರ್ ಅಮ್ಮನಿಗೆ ಹೇಳಿದಾಗಲೂ ಅವಳೇನೂ ಅಳಲಿಲ್ಲ. ಇವನಿಗೂ ಮಾತನಾಡುವ ಧೈರ್ಯವಿರಲಿಲ್ಲ. ಅವನಿಗೆ ಅಮ್ಮನಿಗೆ ಗೊತ್ತಾಗುವುದು ಬೇಡ ಎಂದು ಹೇಳಲು ಮರೆಯದ ಕಟುಕುತನಕ್ಕೆ ಅವನ ಮೇಲೆಯೇ ಅವನಿಗೆ ರೇಜಿಗೆ ಹುಟ್ಟಿತ್ತು. ಅದರ ನಂತರ ಅಮ್ಮ ಹೆಚ್ಚೇನೂ ಮಾತನಾಡುತ್ತಿರಲಿಲ್ಲ. ಅವನಿಗೂ ಅವಳ ಕಣ್ಣಲ್ಲಿ ಕಣ್ಣಿಟ್ಟು ಇನ್ನೆಂದೂ ಮಾತಾಡಲಾರೆ ಎಂದು ಅರಿವಾಗಿತ್ತು.
ಆದರೆ ಎರಡು ದಿನಗಳ ನಂತರ ಒಂದು ರಾತ್ರಿ ಅಮ್ಮ ಅವನನ್ನೇ ನೋಡುತ್ತಿರುವಂತೆ ಅವನಿಗೆ ಭಾಸವಾಯಿತು. ಅವಳ ದೃಷ್ಟಿ ಶೂನ್ಯದೆಡೆಗೆ ನೆಟ್ಟಿತ್ತು. ಆದರೆ ತುಸು ಕ್ಷಣದ ನಂತರ ಬಿಕ್ಕಳಿಸುತ್ತಾ, "ಹೆತ್ತ ತಂದೆಯನ್ನೇ ಕೊಂದು ಬಿಟ್ಟೆಯಲ್ಲೋ" ಎನ್ನುತ್ತಾ ಗೋಳಿಟ್ಟಳು. ಆ ಧ್ವನಿ ಯಾವುದೋ ತೀಕ್ಷ್ಣ ಕಿರಣದಂತೆ ಅವನ ಮನಸ್ಸನ್ನು ನಾಟಿತು. ಅವನ ನರಗಳೆಲ್ಲಾ ಥರಗುಟ್ಟಿದವು. ಅವಳಿಗೆ ಆ ವಿಷಯ ಹೇಗೆ ಗೊತ್ತಾಯಿತು ಎಂದೂ ಅರಿವಾಗಲಿಲ್ಲ. ಅವಳನ್ನು ಎದುರಿಸಲಾರೆನೆಂಬ ಭಯ ವಿರಾಟ್ ರೂಪ ಪ್ರದರ್ಶಿಸುತ್ತಾ ಅವನ ಎದುರು ನಿಲ್ಲತೊಡಗಿತು. ಅವಳ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಬೇರೆ ಕಡೆಗೆ ನೋಡಿದರೂ ಆ ಕಣ್ಣೀರು ತುಂಬಿದ ಕಣ್ಣುಗಳು, ಆ ಮಾರ್ಮಿಕ ಧ್ವನಿ ಅವನು ಬದುಕಿರುವವರೆಗೆ ಅವನಿಗೆ ಮರೆಯಲು ಸಾಧ್ಯವಿರಲಿಲ್ಲ. ಮನೆಯಲ್ಲಿರಲು ಸಾಧ್ಯವಾಗದೇ ಹೊರಗೆ ಬಂದು ನಿಂತ. ಇನ್ನೊಂದು ಸಿಗರೇಟು ಹಚ್ಚಿ ಎಳೆಯತೊಡಗಿದ. ಮತ್ತೊಂದು ಸಿಗರೇಟು ಅವನ ಮನಸ್ಸಿನ ತುಮುಲವನ್ನು ಪರಿಹರಿಸುವ ವ್ಯರ್ಥ ಪ್ರಯತ್ನದಲ್ಲಿತ್ತು.
Comments
ಉ: ಪಾಪ
ಉ: ಪಾಪ
ಉ: ಪಾಪ
ಉ: ಪಾಪ
In reply to ಉ: ಪಾಪ by vani shetty
ಉ: ಪಾಪ
ಉ: ಪಾಪ
In reply to ಉ: ಪಾಪ by partha1059
ಉ: ಪಾಪ
ಉ: ಪಾಪ
In reply to ಉ: ಪಾಪ by kavinagaraj
ಉ: ಪಾಪ
ಉ: ಪಾಪ
In reply to ಉ: ಪಾಪ by Iynanda Prabhukumar
ಉ: ಪಾಪ