ತಪ್ಪು ಯಾರದು? - ಕಥೆ - ಕೊನೆಯ ಭಾಗ.

ತಪ್ಪು ಯಾರದು? - ಕಥೆ - ಕೊನೆಯ ಭಾಗ.

ಈ ಅನಿರೀಕ್ಷಿತವಾದ ಮಾತಿನಿಂದ ಕಂಗಾಲಾದ ಮಿಥಿಲ ಸಂಜಯ್ ಒಮ್ಮೆ ಸುತ್ತಲೂ ನೋಡಿ ಯಾರೂ ತಮ್ಮನ್ನು ಗಮನಿಸುತ್ತಿಲ್ಲವೆಂದು ಖಚಿತವಾದ ಮೇಲೆ ಸ್ವಲ್ಪ ಸಮಾಧಾನಗೊಂಡು ಸಂಜಯ್, ನಿನಗೇನೂ ತಲೆ ಕೆಟ್ಟಿದ್ಯ? ಇಂದು ನನ್ನ ಹುಟ್ಟಿದ ಹಬ್ಬ ಸುಮ್ಮನೆ ಏನೆನ್ನೋ ಮಾತಾಡಿ ನನ್ನ ತಲೆ ಕೆಡಿಸಬೇಡ ತಗೋ ನಿನ್ನ ಉಡುಗೊರೆ ನೀನೆ ಇಟ್ಟುಕೋ ಎಂದು ಕೋಪದಿಂದ ನುಡಿದು ಹೊರಡಲನುವಾದಳು. ಕೂಡಲೇ ಸಂಜಯ್, ಮಿಥಿಲ ಇದು ತಮಾಷೆ ಅಲ್ಲ ನಾನು ಸೀರಿಯಸ್ ಆಗಿ ಹೇಳ್ತಾ ಇದ್ದೀನಿ ನೀನಂದ್ರೆ ನಂಗೆ ತುಂಬಾ ಇಷ್ಟ. ನಿನ್ನ ಬಿಟ್ಟಿರೋಕೆ ಆಗಲ್ಲ ದಯವಿಟ್ಟು ನನ್ನ ಪ್ರೀತಿನ ಒಪ್ಪಿಕೊ ಎಂದ. ಮಿಥಿಲ ಏನೂ ಮಾತಾಡದೆ ಹೊರಟು ತನ್ನ ಆಸನದತ್ತ ತೆರಳಿದಳು. ಅಷ್ಟರಲ್ಲೇ ಅಲ್ಲಿಗೆ ಬಂದ ಕುಮಾರ್ ಮಿಥಿಲ ಬಳಿ ಹೋಗಿ ಹುಟ್ಟು ಹಬ್ಬದ ಶುಭಾಶಯಗಳು ಹೇಳಿ ಸುಮಾರು ಹೊತ್ತು ನಗುನಗುತ್ತ ಮಾತಾಡುತ್ತಿದ್ದರು. ಇದನ್ನು ನೋಡಿ ಸಂಜಯ್ ಗೆ ಮೈ ಮೇಲೆ ಇರುವೆ ಬಿಟ್ಟ ಹಾಗೆ ಆಯಿತು. ಆ ಘಟನೆ ನಡೆದು ಒಂದು ತಿಂಗಳವರೆಗೂ ಮಿಥಿಲ ಸಂಜಯ್ ಬಳಿ ಮಾತಾಡಲಿಲ್ಲ. ಸಂಜಯ್ ಹಲವು ಬಾರಿ ಮಾತಾಡಲು ಪ್ರಯತ್ನಿಸಿದರೂ ಮಿಥಿಲ ಸೋತಿರಲಿಲ್ಲ.

ಅಂದು ಸಂಜಯ್ ಹುಟ್ಟಿದ ಹಬ್ಬ. ಆದರೆ ಸಂಜಯ್ ಗೆ ಯಾವುದೇ ಸಂಭ್ರಮವಿರಲಿಲ್ಲ. ಆ ಒಂದು ತಿಂಗಳಿನಿಂದ ಶೇವ್ ಮಾಡಿರದ ದಾಡಿ ಯಾವುದೋ ಒಂದು ಬಟ್ಟೆ ಹಾಕಿಕೊಂಡು ಕೆಲಸಕ್ಕೆ ಬಂದಿದ್ದ. ತನ್ನ ಪಾಡಿಗೆ ತಾನು ಕೆಲಸದಲ್ಲಿ ಮಗ್ನನಾಗಿದ್ದ ಇದ್ದಕ್ಕಿದ್ದಂತೆ ಸಂಜಯ್ ಎಂಬ ಕೂಗು ಕೇಳಿ ಮೈಯಲ್ಲಿ ವಿದ್ಯುತ್ ಸಂಚರಿಸಿದಂತೆ ಭಾಸವಾಗಿ ತಿರುಗಿ ನೋಡಿದ. ಎದುರುಗಡೆ ಮಿಥಿಲ ಕೈಯಲ್ಲಿ ಉಡುಗೊರೆ ಹಿಡಿದು ನಿಂತಿದ್ದಾಳೆ. ಸಂಜಯ್ ಹುಟ್ಟು ಹಬ್ಬದ ಶುಭಾಶಯಗಳು ಎಂದು ಕೈಯಲ್ಲಿ ಉಡುಗೊರೆ ಇಟ್ಟಳು. ಸಂಜಯ್ ಏನೋ ಮಾತಾಡಲು ಬಾಯಿ ತೆರೆಯುವಷ್ಟರಲ್ಲಿ, ಸಂಜಯ್ ಈ ಪ್ರೀತಿ ಪ್ರೇಮ ಎಲ್ಲ ಆಗಲ್ಲ ಕಣೋ ಮುಂಚೆ ಹೇಗಿದ್ದೇವೋ ಈಗಲೂ ಹಾಗೆ ಇರುತ್ತೀನಿ ಎನ್ನುವ ಹಾಗಿದ್ದರೆ ನಿನ್ನ ಬಳಿ ಮಾತು ಮುಂದುವರೆಸುತ್ತೇನೆ ಇಲ್ಲವಾದರೆ ಇಲ್ಲ ಎಂದಳು. ಅದಕ್ಕೆ ಸಂಜಯ್, ಮಿಥಿಲ ಯಾವ ಕಾರಣಕ್ಕೆ ಪ್ರೀತಿ ಪ್ರೇಮ ಆಗಲ್ಲ ಎನ್ನುತ್ತಿದ್ದೀಯ? ಎಂದು ಕೇಳಿದ್ದಕ್ಕೆ, ಮೊದಲ ಕಾರಣ ನನಗೆ ನಿನ್ನ ಮೇಲೆ ಆ ಭಾವನೆ ಇಲ್ಲ, ಎರಡನೆಯದು ನಮ್ಮಿಬ್ಬರ ಜಾತಿ ಬೇರೆ ನೀನು ಬ್ರಾಹ್ಮಣ ನಾವು ಗೌಡರು, ನಮ್ಮಪ್ಪ ನನ್ನ ಸಾಯಿಸೇಬಿಡುತ್ತಾರೆ. ಹಾಗಾಗಿ ಇದು ಆಗದೆ ಇರುವುದು ಎಂದಳು ಮಿಥಿಲ. ನೋಡು ಮಿಥಿಲ ಇದೆಲ್ಲ ಕಾರಣಗಳೇ ಅಲ್ಲ. ಭಾವನೆ ಇಲ್ಲ ಎಂದರೆ ಬೆಳೆಸಿಕೊ ಅಥವಾ ಅದಕ್ಕೆ ನಾನು ಏನು ಮಾಡಬೇಕು ಹೇಳು, ಇನ್ನು ಜಾತಿ ವಿಷಯ ನನಗೆ ಬಿಡು ನಾನು ಬಂದು ನಿಮ್ಮಪ್ಪನ ಬಳಿ ಮಾತಾಡುತ್ತೇನೆ. ಆದರೆ ಇಲ್ಲವೆಂದು ಮಾತ್ರ ಹೇಳಬೇಡ ನಿನ್ನ ಬಿಟ್ಟಿರಲು ಸಾಧ್ಯವಿಲ್ಲ. ಅಥವಾ ಬೇರೆ ಯಾರನ್ನಾದರೂ ನೀನು ಇಷ್ಟ ಪಡುತ್ತಿದ್ದೀಯ ಹೇಳು ನಾನು ಸುಮ್ಮನಾಗಿ ಬಿಡುತ್ತೇನೆ ಎಂದ. ಸಂಜಯ್ ನನಗೆ ಯಾರ ಮೇಲೂ ಇಷ್ಟವಿಲ್ಲ, ನಮ್ಮಪ್ಪ ಯಾರನ್ನು ತೋರಿಸಿ ಮದುವೆ ಆಗು ಎನ್ನುವರೋ ಅವರನ್ನೇ ಮದುವೆ ಆಗುವುದು ಎಂದು ಹೇಳಿದಳು. ಸರಿ ಮಿಥಿಲ ಇನ್ನು ಮುಂದೆ ನಾನು ನಿನ್ನನ್ನು ಬಲವಂತ ಮಾಡುವುದಿಲ್ಲ ಆದರೆ ನನ್ನ ಬಳಿ ಮಾತಾಡದೆ ಮಾತ್ರ ಇರಬೇಡ ನನಗೆ ಏನೋ ಸಂಕಟವಾಗುತ್ತದೆ ಎಂದಾಗ ಮಿಥಿಲ ನಕ್ಕು ಇಂದು ಮಧ್ಯಾಹ್ನ ಊಟಕ್ಕೆ ಆಚೆ ಹೋಗೋಣ ಎಂದಳು.

ಅಂದಿನಿಂದ ಮತ್ತೆ ಮೊದಲಿನಂತೆ ಇರಲು ಶುರು ಮಾಡಿದರು. ಒಮ್ಮೊಮ್ಮೆ ಮಿಥಿಲ ಸಂಜಯ್ ನನ್ನು ನೀವಿಬ್ಬರೂ ಏಕೆ ಮಾತಾಡುತ್ತಿಲ್ಲ ಎಂದು ಕೇಳಿದಾಗ ಏನೋ ಒಂದು ಸಬೂಬು ಕೊಟ್ಟು ಸುಮ್ಮನಾಗಿಬಿಡುತ್ತಿದ್ದ ಸಂಜಯ್. ಮೊದಲಿಗಿಂತ ಹೆಚ್ಚಾಗಿ ಹೊಂದಿಕೊಳ್ಳುತ್ತಿದ್ದರು ಮಿಥಿಲ ಮತ್ತು ಸಂಜಯ್. ಮಿಥಿಲ ಮನೆ ಪರಿಸ್ಥಿತಿ ಮುಂಚಿನಿಂದ ಆರ್ಥಿಕವಾಗಿ ಅಷ್ಟು ಚೆನ್ನಾಗಿ ಇಲ್ಲದಿದ್ದರ ಅರಿವಿದ್ದ ಸಂಜಯ ಅವಾಗವಾಗ ಅವರ ಮನೆಗೆ ಸ್ವಲ್ಪ ಸಹಾಯ ಮಾಡುತ್ತಿದ್ದ. ಮಿಥಿಲ ಎಷ್ಟೇ ನಿರಾಕರಿಸಿದರೂ ಬಲವಂತವಾಗಿ ಅವಳ ಕೈಯಲ್ಲಿ ಹಣ ತುರುಕುತ್ತಿದ್ದ. ಮಿಥಿಲ ಏನೂ ಮಾತಾಡದೆ ಸುಮ್ಮನೆ ಧನ್ಯವಾದ ಸೂಚಿಸುತ್ತಿದ್ದಳು. ಒಮ್ಮೊಮ್ಮೆ ಮನೆಯ ಪರಿಸ್ಥಿತಿ ನೆನೆಸಿಕೊಂಡು ಇವನ ಭುಜದ ಮೇಲೆ ತಲೆ ಇಟ್ಟು ಅತ್ತುಬಿಡುತ್ತಿದ್ದಳು. ಒಂದು ದಿನ ಹೀಗೆ ಅಳುತ್ತಿದ್ದಾಗ ಸಂಜಯ್ ಐ ಲವ್ ಯು ಎಂದಳು. ಸಂಜಯ್ ಏನೂ ಮಾತಾಡದೆ ಏನಾಯ್ತು ಮಿಥಿಲ ಎಂದಾಗ ನನಗೆ ಮೊದಲಿಂದಲೂ ನಿನ್ನ ಕಂಡರೆ ಇಷ್ಟ ಆದರೆ ನಮ್ಮ ಪರಿಸ್ಥಿತಿ ಇಂದ ನಿನಗೆ ತೊಂದರೆ ಕೊಡಬಾರದೆಂದು ಸುಮ್ಮನಿದ್ದೆ. ಆದರೆ ಈಗ ತಡೆಯದೆ ಹೇಳುತ್ತಿದ್ದೇನೆ ಸಂಜಯ್ ನನಗೆ ನೀನೆಂದರೆ ಬಹಳ ಇಷ್ಟ. ಸಂಜಯ್ ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆಗಸದಲ್ಲಿ ತೇಲುತ್ತಿರುವಂತೆ ಭಾಸವಾಗುತ್ತಿತ್ತು ಅವನಿಗೆ. ಆ ಖುಷಿಯಲ್ಲಿ ತೇಲುತ್ತಿದ್ದ ಸಂಜಯ್ ನನ್ನು ಎಚ್ಚರಿಸಿದ ಮಿಥಿಲ ಆದರೆ ನನ್ನ ಕ್ಷಮಿಸು ಸಂಜಯ್ ಮುಂದಿನ ವಾರ ಕುಮಾರ್ ಜೊತೆ ನನ್ನ ಮದುವೆ. ಮುಂಚೆ ಇಂದ ಕುಮಾರ್ ನನ್ನ ಇಷ್ಟ ಪಡುತ್ತಿದ್ದನಂತೆ ಅವನೇ ಬಂದು ನಮ್ಮ ಅಪ್ಪನ ಬಳಿ ಮಾತನಾಡಿ ಅವರನ್ನು ಒಪ್ಪಿಸಿದ್ದಾನೆ. ಕುಮಾರ್ ನಮ್ಮದೇ ಜಾತಿ ಅದೂ ಅಲ್ಲದೆ ಆತ ಸಿರಿವಂತ. ನಮ್ಮ ಅಪ್ಪ ಕೂಡಲೇ ಒಪ್ಪಿಕೊಂಡುಬಿಟ್ಟಿದ್ದಾರೆ. ಮುಂದಿನ ವಾರವೇ ಸರಳವಾಗಿ ಮದುವೆ ಮಾಡಿಕೊಡಿ ಎಂದು ಹೇಳಿದನಂತೆ ಕುಮಾರ್. ಯಾವ ಮಾತು ಕುಮಾರ್ ಕಿವಿಗೆ ಬೀಳುತ್ತಿರಲಿಲ್ಲ. ಸುತ್ತಲಿನ ಜಗತ್ತು ಜೋರಾಗಿ ತಿರುಗುತ್ತಿರುವಂತೆ ಭಾಸವಾಗುತ್ತಿತ್ತು ಸಂಜಯ್ಗೆ. ಮಿಥಿಲ ಸಂಜಯ್ ಸಂಜಯ್ ಎಂದು ಕೂಗುತ್ತಿದ್ದರೂ ಸೀದಾ ಎದ್ದು ನಡೆಯುತ್ತಿದ್ದ.

ಆ ಊರನ್ನೇ ಬಿಟ್ಟು ಹೋಗಲು ನಿರ್ಧರಿಸಿ ಸಂಜಯ್ ರೈಲ್ವೆ ನಿಲ್ದಾಣಕ್ಕೆ ಬಂದು ನಿಂತಿದ್ದಾನೆ.ಜೋರಾದ ಮಳೆಯಲ್ಲಿ ನೆನೆಯುತ್ತ ತನ್ನ ಕಣ್ಣೀರನ್ನು ಹರಿಸುತ್ತಿದ್ದಾನೆ. ರೈಲು ಮಾಹಿತಿಯ ಅನೌನ್ಸೆಮೆಂಟ್ ಕೇಳಿ ಎಚ್ಚೆತ್ತ ಸಂಜಯ್ ಎದುರಿಗೆ ಹಾಡು ಹೋಗುತ್ತಿದ್ದ ರೈಲಿಗೆ ಎದುರು ನಿಂತು ಕ್ಷಣಮಾತ್ರದಲ್ಲೇ ಎಲ್ಲವನ್ನೂ ಮರೆತು ಹೋಗಿಬಿಟ್ಟ..... 

 

Comments