ತಿಂಗಳಿಗೊಂದು ದೆವ್ವದ ಕಥೆ : ಸ್ನೇಹ ಬಂಧ
ತಿಂಗಳಿಗೊಂದು ದೆವ್ವದ ಕಥೆ : ಸ್ನೇಹ ಬಂಧ
ರಜಾದಿನ ಜಿಟಿಜಿಟಿ ಮಳೆ, ತಿಂಡಿ ಮುಗಿಸಿ ಕೂತಾಗ ಎಲ್ಲಿಗಾದರು ಹೋದರಾಗದೆ ಎನ್ನುವ ಭಾವ. ಆಗ ಮನುವಿನ ದೂರವಾಣಿಯ ಕರೆ "ಮನೆಗೆ ಬಂದು ಹೋಗು ,ಎಂತದೊ, ಅಜ್ಜಿ ನಿನ್ನ ನೆನೆಯುತ್ತಿದ್ದಾರೆ' ಅಂದ. ಸರಿ ಹೋಗಿ ತಿಂಗಳಾಯ್ತು ಹೋದರಾಯ್ತು ಅಂದುಕೊಳ್ಳುವಾಗಲೆ ಒಳಗೆಲ್ಲೊ ಆಸೆ ಅಜ್ಜಿ ಯಾವುದಾದರು ದೆವ್ವದ ಕಥೆ ಹೇಳಿಯಾರ? ಎಂದು. ಮನೆ ತಲುಪುವಾಗ ಬಾಗಿಲು ತೆರೆದೆ ಇತ್ತು, ಒಳಗೆ ಹೊಕ್ಕರೆ ಯಾರು ಕಾಣಿಸರು, ಅಜ್ಜಿಯೊಬ್ಬರೆ ಸೋಫದಲ್ಲಿ ಕುಳಿತ್ತಿದ್ದಾರೆ. ಮಕ್ಕಳ ಗಲಾಟೆಯಿಲ್ಲ. "ಏನಿದು" ಅಂದುಕೊಳ್ಳುವಾಗ ಮನು ಅಡುಗೆಮನೆಯಿಂದ ಹೊರಬಂದ. "ಏನೊ ಗಲಾಟೆಯಿಲ್ಲ ಮಕ್ಕಳೆಲ್ಲಿ ? ಸುಮಾ ಅವರೆಲ್ಲಿ ? ಹೊರಬಾಗಿಲು ತೆರೆದೆ ಇದೆ" ಅಂದೆ.
ಅದಕ್ಕೆ ಮನು "ಬೇಸಿಗೆ ರಜಾ ಅಲ್ಲವೇನಪ್ಪ ಮಕ್ಕಳನ್ನು ಎಳೆದುಕೊಂಡು ಅವಳ ತವರಿಗೆ ಹೋಗಿದ್ದಾಳೆ, ಬಂದಾಳೂ ನಾಳೆ ಬಾನುವಾರದ ಒಳಗೆ, ನಿನಗೆ ಕಾಫಿ ಆದೀತ"ಅಂದ. ನಾನು ಗಾಭರಿಯಿಂದ "ನೀನು ಮಾಡ್ತೀಯ ಬೇಡಪ್ಪ" ಎಂದೆ. ಅದಕ್ಕವನು "ಅಷ್ಟು ಗಾಭರಿ ಬೇಡಪ್ಪ, ನಾನು ಚೆನ್ನಾಗಿಯೆ ಮಾಡ್ತೀನಿ, ನೋಡು ನನ್ನ ಅಡುಗೆ ತಿಂದು ಮೂರೆ ದಿನದಲ್ಲಿ ಅಜ್ಜಿ ಎಷ್ಟು ದಪ್ಪ ಆಗಿದ್ದಾರೆ" ಎಂದ. ನಾನು ನಗುತ್ತ ಸುಮ್ಮನಾದೆ.
ಅಜ್ಜಿ ಅವರಾಗೆ ವಿಷಯ ತೆಗೆದರು " ನಾನು ಹೇಳಿದ ತೊಟ್ಟಿಲು ತೂಗಿದ ದೆವ್ವದ ಕಥೆಯನ್ನ ನಿನ್ನ ಪತ್ರಿಕೆಲಿ ಹಾಕಿದೆಯ?" ಎಂದರು. ನಾನು ಸಂತೋಷವಾಗಿ "ಹೌದಜ್ಜಿ ಎಲ್ಲರು ತುಂಬಾ ಇಷ್ಟ ಪಟ್ಟರು, ಕೆಲವರು ಪ್ರತಿಕ್ರಿಯೆನು ಬರೆದಿದ್ದಾರೆ. ವಿನಯ್ ಎಂಬುವರು ಮಾತ್ರ ನಿಮ್ಮ ಅಜ್ಜಿಯ ಹೆಸರು ಹಾಕದೆ ಅಜ್ಜಿಯ ಹಕ್ಕಿಗೆ ಚುತಿಮಾಡಿದ್ದೀರಿ ಅಂತ ಅಪಾದನೆ ಮಾಡಿದ್ದಾರೆ , ನಿಮ್ಮ ಹೆಸರು ಹೇಳಿಬಿಡಿ ಅಜ್ಜಿ ಈ ಬಾರಿ ಹಾಕಿಬಿಡುತ್ತೇನೆ" ಅಂದೆ ಉಪಾಯವಾಗಿ.
ಸ್ವಲ್ಪ ಹೊತ್ತು ಸುಮ್ಮನಿದ್ದ ಅವರು"ನೋಡಪ್ಪ ಇಂತ ಕಥೆಗಳಿಗೆ ಹಕ್ಕು ಅಂತ ಏನಿರಲ್ಲ ಬಾಯಿಂದ ಬಾಯಿಗೆ ಹರಡುತ್ತೆ ಅಷ್ಟೆ, ನಾನು ಎಲ್ಲೊ ಕೇಳಿದ ನೋಡಿದ ಕಥೆ ನಿನಗೆ ಹೇಳ್ತಿನಿ ಅಷ್ಟೆ ಅದಕ್ಕೆ ಯಾವ ಹಕ್ಕು" ಅಂದವರು ಮತ್ತೆ ಮುಂದುವರೆದು " ಇನ್ನು ವಿಷಯವಿದೆ ನೋಡು ನೀನು ನನ್ನ ಹೆಸರು ಹಾಕಿಬಿಟ್ಟರೆ ನಿನಗೆ ಮಾತ್ರ ಅಜ್ಜಿ ಆಗಿಬಿಡ್ಟೀನಿ ಆದರೆ ಬರಿ ಅಜ್ಜಿ ಅಂತ ಹಾಕು ಆಗ ಓದುವರಿಗೆಲ್ಲ ಅವರ ಅಜ್ಜಿಯ ಮುಖವೆ ನೆನಪಿಗೆ ಬಂದು ಅವರ ಅಜ್ಜಿ ಹೇಳಿದಂತೆ ಅನ್ನಿಸುತ್ತಲ್ವ?" ಎಂದರು.
ನಾನು ಮನಸಿನಲ್ಲಿಯೆ ಪರವಾಗಿಲ್ಲ ಅಜ್ಜಿ ಮನಶಾಸ್ತ್ರ ಹೇಳುತ್ತಾರೆ ಅಂದುಕೊಳ್ಳುವಾಗಲೆ ಅವರು "ನೋಡಪ್ಪ ನಮಗೆ ಹೆಸರಿನ ವ್ಯಾಮೋಹವಾಗಲಿ ಇನ್ನಾವುದೆ ವ್ಯಾಮೋಹವಾಗಲಿ ಇರಬಾರದು. ಅತಿಯಾದರೆ ಅದು ಎಷ್ಟೆ ಒಳ್ಳೆಯದಾದರು ಕಡೆಯಲ್ಲಿ ಅದರ ಪರಿಣಾಮ ಮಾತ್ರ ಕೆಟ್ಟದ್ದೆ. ಸಂಬಂದಗಳು ಅಷ್ಟೆ ಅತಿಯಾಗಿ ಹಚ್ಚಿಕೊಂಡರೆ ಕಡೆಯಲ್ಲಿ ಅಷ್ಟೆ, ಅದಕ್ಕೆ ಸಂಬಂದಿಸಿದಂತೆ ಒಂದು ಕಥೆ ಹೇಳ್ತಿನಿ ಕೇಳು" ಅಂದರು ನಾನು ಕಥೆ ಅನ್ನುತ್ತಲೆ ಕಿವಿಗಳೆರಡನ್ನು ಅಗಲ ಮಾಡಿ ಕುಳಿತೆ ಮತ್ತೆ ನೀವು ?.....
.........
ಅಚ್ಚಮ್ಮ ಮತ್ತು ಅಕ್ಕಮ್ಮ ಇಬ್ಬರು ಬಾಲ್ಯ ಸ್ನೇಹಿತೆಯರು, ಕೊರಟಗೆರೆ ಹತ್ತಿರದ ಹಳ್ಳಿ ತುಂಬಾಡಿಯಲ್ಲಿ ಹುಟ್ಟಿಬೆಳೆದ ಅವರು ತುಮಕೂರಿನ ಹತ್ತಿರದ ನಾರುವಂಗಲ ಗ್ರಾಮದ ಗಂಡುಗಳನ್ನು ಮದುವೆಯಾಗಿ ಒಂದೆ ಹಳ್ಳಿಯ ಅಕ್ಕಪಕ್ಕದ ಮನೆ ಸೇರಿದರು. ಗೆಳತಿಯರಿಗೆ ಆನಂದ ಮದುವೆಯಾಗಿ ಗಂಡನ ಮನೆಗೆ ಬಂದರು ದೂರವಾಗುವ ಸಂದರ್ಪ ಬರಲಿಲ್ಲ ಅಂತ. ಅತ್ತೆ ಮನೆಯಲ್ಲಿ ಹೊಂದಿಕೊಂಡು ಯಾವ ಕೆಲಸಕ್ಕು ಚುತಿ ಬಾರದಂತೆ ನಡೆಸಿಕೊಂಡು ಹೋಗುತ್ತಿದ್ದರು.ನೀರಿಗೆ ಹೊರಟರೆ ಜೊತೆ ,ಬಟ್ಟೆಗೆ ಜೊತೆ, ದೇವಾಲಯಕ್ಕೆ ಜೊತೆ ಎಂಬಂತೆ ಇದ್ದವರು. ಊರಿನಲ್ಲಿ ಎಲ್ಲರು ಅವರ ಸ್ನೇಹವನ್ನು ಗುರುತಿಸಿದ್ದರು. ಮಕ್ಕಳಿಗೆ ಹೇಳುವಾಗಲು ನೋಡು ಇದ್ದರೆ ಅಚ್ಚಮ್ಮ ,ಅಕ್ಕಮ್ಮನಂತೆ ಇರಬೇಕು ಅಂತ ಹೋಲಿಕೆ ಮಾಡುತ್ತಿದರು, ಅವರ ಗಂಡಂದಿರು, ಅವರ ಮನೆಯವರು ಸಹ ಇವರ ಸ್ನೇಹವನ್ನು ಛೇಡಿಸಿದರೆ ವಿನಃ ಎಂದು ಅಡ್ಡಿಪಡಿಸಲಿಲ್ಲ.
ಹೀಗಿರುವಾಗ ಎಂತದೊ ಒಂದು ದಿನ ಬಿಸಿಲಿಗೆ ಹೆದರಿ ಊರೆ ಮದ್ಯಾನದ ಊಟದ ನಂತರ ಬೀಸಣಿಗೆ ಬೀಸುತ್ತ ಮನೆಯಲ್ಲಿ ವಿರಮಿಸುತ್ತಿದ್ದರೆ, ಊಟ, ಕೆಲಸ ಮುಗಿಸಿದ ಗೆಳತಿಯರು ಹಿತ್ತಲ ಮರದ ಕೆಳಗೆ ಸೇರಿ ಕಾಡು ಹರಟೆ ಹೊಡೆಯುತ್ತಿದ್ದರು. ಅಚ್ಚಮ್ಮನ ಅತ್ತೆ ಏತಕ್ಕೊ ಹಿಂದೆ ಬಂದವರು ಇವರನ್ನು ನೋಡಿ "ಏನೆ ಹುಡುಗೀರ, ಊಟದ ನಂತರ ಒಂದೆರಡು ತಾಸು ಮಲಗಿ ವಿರಮಿಸಬಾರದ? ಎಂತ ಸ್ನೇಹವಪ್ಪ ನಿಮ್ಮದು. ಒಂದು ವೇಳೆ ಒಬ್ಬರನ್ನೊಬ್ಬರು ಅಗಲುವ ಸಂದರ್ಪ ಬಂದಲ್ಲಿ ಹೇಗೆ ಮಾಡುತ್ತೀರಿ?. ಎಂದು ನಗುನಗುತ್ತ " ಸರಿ ಮುಂದುವರೆಸಿ ನಿಮ್ಮ ಮಾತುಕತೆಯನ್ನು ನಾನು ಅಡ್ಡಿ ಬಂದು ಏಕೆ ಪಾಪ ಕಟ್ಟಿಕೊಳ್ಳಲಿ" ಎನ್ನುತ್ತ ಒಳ ಹೋದರು.
ಏಕೊ ಗೆಳತಿಯರಿಬ್ಬರು ಮಂಕಾದರು, ಅಚ್ಚಮ್ಮ ಕೇಳಿದಳು "ಹೌದೆ, ನಾವಿಬ್ಬರು ಬೇರೆಯಾದರೆ ಬದುಕೋದು ಹೇಗೆ ಅನ್ನಿಸುತ್ತಲ್ವ?" ಅಂದಳು. ಅದಕ್ಕೆ ಅಕ್ಕಮ್ಮ "ನನಗು ಹಾಗೆ ಅನ್ನಿಸುತ್ತೆ ಆದರೆ ನಾವು ಬೇರೆಯಾದರು ಯಾಕಾಗ್ತೀವಿ? ಅಮ್ಮನ ಮನೆಗೆಹೋದರು,ಗಂಡನ ಮನೆಲಿದ್ದರು ಒಂದೆ ಊರು. ನಮ್ಮ ಗಂಡಂದಿರಾಗಲಿ ಏನು ಅನ್ನಲ್ಲ ನಾವು ದೂರಾಗುವ ಸಂದರ್ಪವೆ ಬರಲ್ಲ" ಎಂದಳು. ಸ್ವಲ್ಪ ಸುಮ್ಮನಿದ್ದ ಅಚ್ಚಮ್ಮ "ಅದೇನೊ ಸರೀನೆ ಆದರೆ ಅಕಸ್ಮಾತಾಗಿ ಏನಾದರು ಆಗಿ ಒಬ್ಬರು ಮುಂಚೆಯೆ ಸತ್ತು ಹೋದರೆ?" ಎಂದಳು.
ಸ್ಥಬ್ದಳಾದ ಅಕ್ಕಮ್ಮ ಪುನಃ " ನೀನು ಹೇಳಿದಂತೆ ಆದರೆ ಏನು ಮಾಡುವುದು? ನಾನಂತು ಸಹಿಸಲಾರೆ, ನಿನ್ನ ಜೊತೆಗೆ ಪ್ರಾಣ ಬಿಡುತ್ತೇನೆ ಅಷ್ಟೆ" ಎಂದಳು. ಅಚ್ಚಮ್ಮ ನಗುತ್ತ "ನಿಂದೊಳ್ಳೆ ಕತೆಯಾಯಿತು ಇಬ್ಬರು ಅರ್ದವಯಸ್ಸಿನಲ್ಲಿ ಸತ್ತರೆ ಪುನಃ ದೆವ್ವಗಳಾಗುತ್ತೇವೆ ಅಷ್ಟೆ. ಎದುರಿಗೆ ಕಾಣುತ್ತಿದೆಯಲ್ಲಿ ಹುಣಸೆಮರ ಅದರಲ್ಲಿ ಜೊತೆಯಾಗಿರುವುದು" ಎಂದಳು. ಅದಕ್ಕೆ ಅಕ್ಕಮ್ಮ "ಅಚ್ಚು ನೀನು ಈ ದೆವ್ವ ಮೈಮೇಲೆ ಬರುವುದು ಎಲ್ಲವನ್ನು ನಂಬುತ್ತೀಯ?" ಎಂದಳು. ಸ್ವಲ್ಪ ಆಶ್ಚರ್ಯದಿಂದ ಎಂದಳು ಅಚ್ಚಮ್ಮ "ಏನೊ ನನಗೆ ಗೊತ್ತಿಲ್ಲಪ್ಪ".
ಅಕ್ಕಮ್ಮ "ನಾವು ಒಂದು ಕೆಲಸ ಮಾಡೋಣ, ಒಂದು ವೇಳೆ ನೀನು ಮೊದಲು ಸತ್ತು ದೆವ್ವವಾದರೆ ನನ್ನಲ್ಲಿ ಬಂದು ಇದ್ದುಬಿಡು. ನಾನು ಸತ್ತರೆ ನಿನ್ನ ಮೇಲೆ ಬಂದು ಇರ್ತೀನಿ, ಇದಕ್ಕೆ ನೀನು ಒಪ್ಪಿಗೆ ಅಂತ ಮಾತು ಕೊಡು" ಎಂದಳು. ಅಚ್ಚಮ್ಮ " ನೀನು ಇವತ್ತು ಏನೇನೊ ಮಾತಾಡ್ತಿದ್ದಿ, ಹಾಗೆಲ್ಲ ಏನು ಆಗಲ್ಲ ಬಿಡು" ಎಂದಳು. ಅಕ್ಕಮ್ಮ ಒಪ್ಪದೆ "ನೀನು ಸುಮ್ಮನೆ ಹೆದರುತ್ತಿದ್ದಿ. ನನ್ನ ಮಾತಿಗೆ ಒಪ್ಪಿಕೊ, ನಾನೇನಾದರು ಸತ್ತರೆ ದೆವ್ವಗಾಗಿ ಬಂದು ನಿನ್ನಲ್ಲಿ ಇರುವವಳೆ, ನಿನ್ನನ್ನೇನು ಬಾದಿಸಲಾರೆ, ನೀನೇನು ಹೇಳ್ತಿ?" ಎಂದಳು. ಕಡೆಗೆ ಸೋತ ಅಚ್ಚಮ್ಮ "ಆಗಲೇಳು, ಅಂತ ಸಂದರ್ಪ ಬರೋದು ಬೇಡ, ಬಂದರೆ ನೀನು ಹೇಳಿದಂತೆ ಮಾಡೋಣ" ಎಂದಳು.
ಹಳ್ಳಿಗಳಲ್ಲಿ ಆಗಿನ ಕಾಲಕ್ಕೆ ಮಾತುಗಳು ಶಿಲಾಶಾಸನದಂತೆ, ಲಿಖಿತ ಒಪ್ಪಂದೆವೇನು ಬೇಕಿರಲಿಲ್ಲ. ಅದ್ಯಾವ ಗಳಿಗೆಯಲ್ಲಿ ಮಾತನಾಡಿದರೊ ಯಾವ ದುಷ್ಟಶಕ್ತಿ ಅಸ್ತು ಎಂದಿತೊ!, ತಿಂಗಳಲ್ಲೆ ಶೀತಜ್ವರ ಬಂದ ಅಕ್ಕಮ್ಮ ನ್ಯೂಮೋನಿಯಗೆ ತಿರುಗಿ ಆ ವಯಸ್ಸಿಗೆ ಅವನು ಸತ್ತು ಹೋದಳು.ಹಳ್ಳಿಯೆಲ್ಲ ಅಕ್ಕಮ್ಮನ ಮರಣಕ್ಕೆ ಮರುಗುವರೆ, ಹಾಗೆ ಅಚ್ಚಮ್ಮನನ್ನು ಕಂಡು ಅಯ್ಯೊ ಎನ್ನುವರೆ. ಅಚ್ಚಮ್ಮನಿಗೆ ಗೆಳತಿಯ ಮರಣದಿಂದ ದಿಗ್ಭ್ರಮೆಯಾಯಿತು. ಇಂತಹ ಗಳಿಗೆ ಜೀವನದಲ್ಲಿ ಬಂದೀತೆಂದು ಎಂದು ಎಣಿಸದವಳು ಗೆಳತಿಯ ಅಗಲಿಕೆ ಸಹಿಸದೆ ಕಂಗೆಟ್ಟಳು. ಊಟ ನಿದ್ದೆ ತೊರೆದಳು. ಅವಳ ಮನಸಿನ ಮಥನ ಯಾರು ಅರಿಯರು. ಮನೆಯವರೆಲ್ಲ ಸಮಾದಾನ ಹೇಳಿ ಕೈಚೆಲ್ಲಿದ್ದರು. ಗಂಡನಂತು ಅನುನಯದಿಂದ, ಪ್ರೀತಿಯಿಂದ ಕಡೆಗೆ ದರ್ಪದಿಂದ ಎಲ್ಲ ರೀತಿ ಹೇಳಿ ಸೋತುಹೋದ. ಅವಳು ಹಾಗೆಯೆ ಉಳಿದಳು.
ಅಕ್ಕಮನ ತಿಥಿಕೆಲಸಗಳೆಲ್ಲ ಮುಗಿಯುತ್ತ ಬಂದು ಕಡೆಯದಿನ ಹಳ್ಳಿಯವರನ್ನೆಲ್ಲ ಊಟಕ್ಕೆ ಕರೆದಿದ್ದರು. ಅವಳಿಗಿಷ್ಟ ಅಂತ ಬೇಳೆಯ ಒಬ್ಬಟ್ಟು ಮಾಡಿಸಿದ್ದರು. ಊರಜನರೆಲ್ಲ ಬಂದು ಊಟಕ್ಕೆ ಕುಳಿತಾಗ ನಡುವೆ ಅಚ್ಚಮ್ಮನ ಮನೆಯವರು ಇದ್ದರು. ಬಲವಂತಕ್ಕೆ ಊಟಕ್ಕೆ ಬಂದಿದ್ದ ಅಚ್ಚಮ್ಮ ಹೇಗೇಗೊ ಆಡುತ್ತಿದ್ದಳು. ಅವಳ ಜೋರಾದ ನಗು ಮಾತು ಕಂಡ ಜನ ಗಂಭೀರವಾದ ಹುಡುಗಿ ಹೀಗೇಕೆ ಅಂದುಕೊಳ್ಳುವಾಗಲೆ, ಅಡುಗೆಯ ರಾಮಜ್ಜ ಮರದಲ್ಲಿ ಒಬ್ಬಟ್ಟು ಹಿಡಿದು ಬಡಿಸುತ್ತ ಬಂದರು. ಬಡಿಸಿಹೋದ ಅವರಿಗೆ ಅಚ್ಚಮ್ಮ ಸರಿಯಾಗಿ ಜೋರುಮಾಡಿದಳು "ಎರಡು ಒಬ್ಬಟ್ಟು ಹಾಕಿ ಹೋದರೆ ಹೇಗೆ ನನಗೆ ಸಾಲುತ್ತ. ನನಗೆ ಅಂತ ಮಾಡಿಸಿದ್ದಾರೆ ಜಾಸ್ತಿ ಹಾಕು ನಿನ್ನದೇನು ಹೋಗಲ್ಲ" ಅಂದಳು. ರಾಮಜ್ಜ ಅವಳ ದ್ವನಿಗೆ ಮಾತಿಗೆ ಗಲಿಬಿಲಿಗೊಂಡು, ಸರಿಯಮ್ಮ ತಗೊ ಇನ್ನೊಂದು ಹಾಕಲ? ಅಂತ ಹತ್ತಿರ ಬಂದಂತೆ, "ಎಂತದಯ್ಯ ಅದು ಒಂದು ಎರಡು ಎನ್ನುತ್ತ ಬುದ್ದಿ ಇಲ್ವಾ?" ಅಂದವಳೆ ತನ್ನ ಎಡಕೈಯಿಂದ ಒಬ್ಬಟ್ಟಿನ ಮರವನ್ನು ಕಿತ್ತು ಅದರಲ್ಲಿದ್ದ ಮೂವತ್ತು ನಲವತ್ತು ಒಬ್ಬಟ್ಟನು ತನ್ನ ಎಲೆಗೆ ಸುರಿದುಕೊಂಡಳು.
ರಾಮಜ್ಜ ಹೆದರಿಹೋದ, ಸುತ್ತಲಿದ್ದ ಹೆಂಗಸರೆಲ್ಲ ಹೆದರಿ ಎದ್ದುನಿಂತರು.ಅವಳು ಮಾತ್ರ ಎಲೆಯಲ್ಲಿದ್ದ ಒಬ್ಬಟ್ಟನ್ನು ತಿನ್ನಲು ಶುರುಮಾಡಿ, ಸುತ್ತಲು ನೋಡಿ "ಏಕೆ ಎದ್ದು ಬಿಟ್ಟಿರಿ ಎಲ್ಲರು ತಿನ್ನಿ ಪರವಾಗಿಲ್ಲ" ಎಂದು ನಗುತ್ತ ನುಡಿದಳು. ಅವಳ ಅತ್ತೆ ಸೀತಮ್ಮನಿಗೆ ಅರಿವಾಯಿತು ತನ್ನ ಸೊಸೆ ಅಚ್ಚಮ್ಮನಿಗೆ ಏನೊ ಆಗಿದೆ ಎಂದು. ಅವಳು ಹೊರಬಂದು ಗಂಡಸರ ಪಂಕ್ತಿಯಲ್ಲಿ ಕುಳಿತ್ತಿದ್ದ ಗಂಡ ಹಾಗು ಮಗನನ್ನು ಕರೆದು ವಿಷಯ ತಿಳಿಸಿ ಹೇಗೊ ಮಾಡಿ ಸೊಸೆಯನ್ನು ಮನೆಗೆ ಕರೆತಂದಳು.ಚಿಕ್ಕ ಹಳ್ಳೀ ವಿಷಯ ಬೇಗ ಹರಡಿ ಬಿಡುತ್ತದೆ. ಅಕ್ಕಪಕ್ಕದವರೆಲ್ಲ ಸೇರಿ ಅವಳಿಗೆ ಗ್ರಹದೋಷವೊ ಮತ್ತೇನೊ ಆಗಿದೆ ಎನ್ನುತ್ತ ಅವಳ ಲಕ್ಷಣಗಳನ್ನು ನೋಡಿ ಅವಳ ಮಾವ ಸದಾಶಿವರಾಯರಿಗೆ "ನಿಮ್ಮ ಸೊಸೆಯ ಮೈಮೇಲೆ ಗಾಳಿಯೊ, ದೆವ್ವವೊ ಎಂತದೊ ಮೆಟ್ಟಿಕೊಂಡಿದೆ ವಿಚಾರಿಸಿ" ಎನ್ನುತ್ತ ಸಲಹೆ ಕೊಟ್ಟರು. ಕೆಲವರು ದೃಷ್ಟಿಯಾಗಿರಬೇಕೆಂದರೆ, ಸನ್ನಿಬಡಿದೆದೆ ಎಂದು ಕೆಲವರಂದರು. ದೇವರಿಗೆ ಹರಕೆ ಕಟ್ಟಿ ಎಂದು ಕೆಲವರು, ಹನುಮನಗುಡಿ ಪೂಜಾರಿ ಶೇಷಪ್ಪನನ್ನು ಕರೆಸಿ ಅಂತ ಕೆಲವರು ಸಲಹೆ ಕೊಟ್ಟರು.
ಸದಾಶಿವರಾಯರು ಸೊಸೆಯನ್ನು ಕರೆದು ಕೂಡಿಸಿಕೊಂಡು ಬುದ್ದಿ ಹೇಳಿದರು "ಅಚ್ಚಮ್ಮ ಏಕೆ ಹೀಗೆಲ್ಲ ಆಡ್ತೀಯ, ಗೆಳತಿ ಸಾವಿನಿಂದ ನಿನಗೆ ನೋವಾಗಿದೆ ನಿಜ, ಹಾಗಂತ ಹೀಗೆಲ್ಲ ಆಡಿದರೆ ನೋಡಿದವರು ಏನನ್ನಲ್ಲ, ಮನೆ ಮರ್ಯಾದೆ ಏನು" ಎಂದರು. ಮಾವನ ಹತ್ತಿರ ಎಂದು ತಲೆಯಿತ್ತೆ ಮಾತಾಡದ ಅಚ್ಚಮ್ಮ ನಗುತ್ತ ನಿಂತು ಜೋರಾಗಿ ನುಡಿದಳು "ಸ್ವಾಮಿ ಸದಾಶಿವರಾಯರೆ, ನಾನು ಅಚ್ಚಮ್ಮ ಅಲ್ಲ. ನಿಮಗೆ ಅಷ್ಟು ತಿಳಿಯದೆ ನಾನು ಅಕ್ಕಮ್ಮ, ಸುಮ್ಮನೆ ಹೀಗೆ ಅಚ್ಚಮ್ಮನ ಜೊತೆ ಇದ್ದೀನಿ ಅಷ್ಟೆ" ಎಂದಳು. ಸದಾಶಿವರಾಯರು ಈಗ ಗಾಭರಿಗೊಂಡರು. ಕಡೆಗೆ ಪೂಜಾರಿ ಶೇಷಪ್ಪನಿಗೆ ಹೇಳಿಕಳಿಸಿದರು. ಅವನು ಹನುಮನ ಗುಡಿಯ ಜಗಲಿಗೆ ಅವಳನ್ನೆ ಕರೆತರಲು ತಿಳಿಸಿದ. ಅವಳನ್ನು ಅಲ್ಲಿಗೆ ಕರೆದು ಹೋಗುವಾಗಲೆ ಹಳ್ಳಿಯ ಜನರೆಲ್ಲ ಅಲ್ಲಿ ನೆರೆದಿದ್ದರು. ಎಲ್ಲರಿಗು ಎಂತದೊ ಭಯ ಕುತೂಹಲ.
ಅಚ್ಚಮ್ಮನೇನು ಹೆದರಿ ಬರಲಿಲ್ಲ ಸಾವದಾನವಾಗಿ ನಗುತ್ತಲೆ ಬಂದಳು. ಶೇಷಪ್ಪ ತನ್ನ ಎಲ್ಲ ಪರಿಕರಗಳೊಡನೆ ಜಗಲಿಯಲ್ಲಿ ಸಿದ್ದನಾಗಿದ್ದನು ಅವಳನ್ನು ಅತ್ತ ಬರುವಂತೆ ಕರೆದ. ಅಚ್ಚಮ್ಮ ನಗುತ್ತಲೆ "ಏನೊ ಶೇಷ ನನ್ನ ಹತ್ತಿರ ನಿನ್ನ ಆಟವೇನು ನಡೆಯದು. ನನ್ನ ಕಣ್ಣ ಮುಂದಿನ ಹುಡುಗ ನೀನು ನೀನು ಹೇಳುವ ಮಂತ್ರವನ್ನೆಲ್ಲ ನಾನು ಹೇಳಬಲ್ಲೆ. ನೀನು ನನ್ನನ್ನೇನು ಮಾಡಲಾರೆ. ನಾನು ನಿನಗೆ ಹೆದರಿ ಬರಲಿಲ್ಲ. ಇವರೆಲ್ಲ ಕರೆದರು ಅಂತೆ ಬಂದೆ ತಿಳಿದುಕೊ" ಅಂದಳು. ಎಲ್ಲರಿಗು ಆಶ್ಚರ್ಯ ಇವಳೇನು ಮಾತಾಡುತ್ತಿದ್ದಾಳೆ ಅಂತ. ಶೇಷಪ್ಪ ಪ್ರಶ್ನಿಸಿದ ನೀನು ಯಾರು ಅಂತ ಅದಕ್ಕವಳು "ಅಯ್ಯೂ ಮಂಕ, ಊರಿಗೆಲ್ಲ ತಿಳಿದಿದೆ ನಾನು ಅಕ್ಕಮ್ಮ ಅಂತ ಮತ್ತೇಕೆ ಅದನ್ನು ಕೇಳ್ತೀಯ, ನಾನು ಅಚ್ಚು ಅತ್ಮೀಯ ಗೆಳತಿಯರು ಒಟ್ಟಿಗಿದ್ದೇವೆ. ನಿನ್ನ ಕೆಲಸವೇನು ಇಲ್ಲ ನಡಿ" ಎಂದಳು.
ಶೇಷಪ್ಪನೇನು ಸೋಲುವನೆ ಕೈಯಲ್ಲಿ ಬೇವಿನ ಸೊಪ್ಪು ಹಿಡಿದು ಮಂತ್ರ ಹೇಳಲು ಪ್ರಾರಂಬಿಸಿದ. ನಗುತ್ತಿದ್ದ ಅಚ್ಚಮ್ಮ ಅವನಿಗಿಂತ ಜೋರಾಗಿ ಅವನು ಹೇಳುತ್ತಿದ್ದ ಮಂತ್ರ ಹೇಳುತ್ತಿದ್ದಳು. ಜೊತೆಗೆ ನಗುತ್ತ "ನಾನು ಮೊದಲೆ ಹೇಳಲಿಲ್ಲವೇನೊ ನಿನ್ನ ಕೈಯಲ್ಲಿ ನನ್ನನ್ನು ಉಚ್ಚಾಟಿಸುವ ಶಕ್ತಿ ಇಲ್ಲವೆಂದು" ಎಂದಳು. ಶೇಷಪ್ಪ ಸಹನೆ ಮೀರಿ ಅವಳ ಮುಖಕ್ಕೆ ಬೇವಿನ ಸೊಫ್ಫಿನಿಂದ ಹೊಡೆಯಲು ಪ್ರಾರಂಬಿಸಿದ. ಅವಳ ಕೋಪ ಬುಗಿಲ್ ಎಂದಿತು. ಎಡಕೈಯಿಂದ ಅವನ ಬೇವಿನ ಸೊಪ್ಪು ಕಿತ್ತುಕೊಂಡವಳೆ , ಬಲಕೈಯಲ್ಲಿ ಅವನನ್ನು ನೂಕಿದಳು. ಅವಳಲ್ಲಿ ಅದ್ಯಾವ ಶಕ್ತಿ ಕೂಡಿಕೊಂಡಿತ್ತೊ, ಶೇಷಪ್ಪ ಎದುರಿನ ಗೋಡೆಗೆ ಅಪ್ಪಳಿಸಿದಂತೆ ಬಿದ್ದುಹೋದ. ಅವನ ಹತ್ತಿರ ಹೋದವಳೆ ಕಾಲಿನಿಂದ ಅವನನ್ನು ಜಾಡಿಸಿ "ಪಾಪಿ ನನ್ನ ಕಣ್ಣ ಮುಂದಿನ ಹುಡುಗ ನನ್ನ ಹೊಡೆಯುತ್ತೀಯ? ಇನ್ನೆಂದು ನನ್ನ ತಂಟೆಗೆ ಬರಬೇಡ" ಎಂದವಳೆ ದಡ ದಡ ಎಂದು ಮೆಟ್ಟಲಿಳಿದು ತನ್ನ ಮನೆ ಕಡೆ ಹೊರಟಳು.
ಹಳ್ಳಿಯ ಜನರೆಲ್ಲ ಗರಬಡಿದವರಂತೆ ನೋಡುತ್ತಿದ್ದರು. ತಾವೆಲ್ಲ ಶಕ್ತಿವಂತನೆಂದು ನಂಬಿದ ಶೇಷಪ್ಪನಿಗಾದ ಅವಸ್ತೆ ಕಂಡು ಅವರೆಲ್ಲ ಹೆದರಿಹೋದರು. ಶೇಷಪ್ಪ ತಲೆತಗ್ಗಿಸಿ ಕುಳಿತಿದ್ದ. ಹಳ್ಳಿಯ ಜನರ ಮುಂದೆ ಒಬ್ಬಳು ಹೆಂಗಸಿನಿಂದಾದ ಅವಮಾನ ಅವನನ್ನು ಕೆರಳಿಸಿತ್ತು. ಆ ರಾತ್ರಿ ಆ ಚಿಕ್ಕ ಹಳ್ಳಿಯಲ್ಲಿ ವಿಷೇಶವೊಂದು ನಡೆಯಿತು. ಶೇಷಪ್ಪ ಯಾರಿಗು ತಿಳಿಸದೆ, ಎಲ್ಲಿಗೆ ಅಂತ ಮನೆಯವರಿಗು ಹೇಳದೆ ಹಳ್ಳಿಯನ್ನು ಬಿಟ್ಟು ಹೊರಟುಹೋದ. ದೆವ್ವಕ್ಕೆ ಹೆದರಿದ ಅಂತ ಕೆಲವರಂದರೆ, ಮಲೆಯಾಳಕ್ಕೆ ಹೋಗಿ ಮಂತ್ರ ಕಲಿಯಲು ಅಂತ ಕೆಲವರಂದರು.
ಮುಂದಿನ ದಿನಗಳು ಅಚ್ಚಮ್ಮನ ಮನೆಯಲ್ಲಿ ವಿಚಿತ್ರ ಪರಿಸ್ಥಿಥಿ. ಕೆಲವೊಮ್ಮೆ ತುಂಬ ಸಹಜವಾಗಿ ಇರುತ್ತಿದ್ದ ಅಚ್ಚಮ್ಮ ತನ್ನ ಅತ್ತೆ ಮಾವ, ಗಂಡ ಇವರ ಸೇವೆ ಮಾಡಿಕೊಂಡಿರುತ್ತಿದ್ದಳು. ಒಮ್ಮೆ ಮೈಮೇಲೆ ಅವಾಹನೆಯಾದರೆ ಆಯಿತು ಮನೆ ಮುಂದಿನ ಜಗಲಿಯಲ್ಲಿ ಎರಡುಕಾಲು ಇಳಿಬಿಟ್ಟು ಕುಳಿತು ಮನಸಾರೆ ಹರಟುತ್ತಿದ್ದಳು.ಅವಳ ನಗು ಎದುರಿನವರ ಎದೆಯಲ್ಲಿ ಛಳಕು ಹುಟ್ಟಿಸುತ್ತಿತ್ತು.
ಮನೆಯವರು ಎನೇನೊ ಪ್ರಯತ್ನ ನಡೆಸಿದರು, ಯಾರಾರನ್ನೊ ಕರೆಸಿದರು, ವೈದ್ಯರಿಗೆ ತೋರಿಸಿದರು. ಆದರೆ ಪರಿಣಾಮ ಮಾತ್ರ ಶೂನ್ಯ. ಅವಳಿಂದ ತೀರ ತೊಂದರೆಯು ಇರಲಿಲ್ಲ, ಮೈಮೇಲೆ ದೆವ್ವವಿರುವಾಗ ಅವಳು ಕೆಲಸಕ್ಕೆ ಇಳಿದಲೂ ಅಂದರೆ ಹತ್ತು ಜನರ ಕೆಲಸ ಒಬ್ಬಳೆ ಮಾಡಿ ಮುಗಿಸುತ್ತಿದ್ದಳು. ಊಟವು ಅಷ್ಟೆ ವಿಪರೀತ. ಮನೆಯಲ್ಲಿ ಬೇಳೆ ಒಬ್ಬಟ್ಟು ಮಾಡಿದರು ಅಂದರೆ ಮುಗಿಯಿತು ಅವಳೆ ತಿಂದು ಮುಗಿಸುತ್ತಿದ್ದಳು. ಅತ್ತೆ ಮಾವ ನಿಗೆ ಮನದಲ್ಲೆ ಮೌನ ಕೊರಗು ತಮ್ಮ ಮಗನ ಸಂಸಾರ ಹೀಗಾಯಿತೆ ಅಂತ. ಇಂತಾ ಹುಡುಗಿ ಜೊತೆ ಅವನಾದರು ಹೇಗೆ ಸಂಸಾರ ನಡೆಸಿಯಾನು.
ಮೊದ ಮೊದಲು ಇವಳಿಗೆ ಅಂಜುತ್ತಿದ್ದ ಹುಡುಗರು ಈಗ ದೈರ್ಯವಾಗಿ ಅವಳ ಜೊತೆ ಕುಳಿತು ಹರಟುವರು, ಕುತೂಹಲಕ್ಕೆಂಬಂತೆ "ಅಲ್ಲ ಅಕ್ಕಮ್ಮ ನೀನು ಅಚ್ಚಮ್ಮನಿಂದ ಕೆಲವು ಸಾರಿ ದೂರ ಇರುತ್ತಿಯಲ್ಲ ಆಗೆಲ್ಲ ಎಲ್ಲಿ ಇರುತ್ತಿ" ಎಂದರೆ ಅವಳು ನಗುತ್ತ ತೆಂಗಿನ ಮರ ತೋರಿಸಿ "ಅಗೋ ಆ ತೆಂಗಿನಮರದ ತುದಿಯಲ್ಲಿರುತ್ತೀನಿ" ಅನ್ನುತ್ತಿದ್ದಳು. ಹೀಗೆ ವರುಷ ಒಂದೊ ಎರಡೊ ಕಳೆಯಿತು. ಒಮ್ಮೆ ಹುಡುಗರ ಜೊತೆ ಕುಳಿತು ಹರಟೆ ಹೊಡೆಯುತ್ತಿದ್ದ ಅಚ್ಚಮ್ಮ ಇದ್ದಕಿದ್ದಂತೆ ಗಾಭರಿಯಾಗಿ "ಬಂದ ಅವನು ಬಂದು ಬಿಟ್ಟ" ಅನ್ನುತ್ತಿದ್ದಳು. ಹುಡುಗರೆಲ್ಲ ಕುತೂಹಲದಿಂದ "ಯಾರು ಅಕ್ಕಮ್ಮ ಯಾರು ಬಂದಿದ್ದು?" ಅಂತ ಪ್ರಶ್ನಿಸಿದರೆ "ಅವನೆ ಶೇಷ, ಹಾಳಾದವನು ಬರುತ್ತಿದ್ದಾನೆ.ಕೆರೆಕೋಡಿ ದಾಟಿ ಊರ ಹತ್ತಿರ ಬಂದು ಬಿಟ್ಟ. ಎಲ್ಲ ಕಲಿತು ಬರುತ್ತಿದ್ದಾನೆ ನಾನಿನ್ನು ಅಚ್ಚುವನ್ನು ಬಿಟ್ಟು ಹೊರಡಬೇಕು" ಎಂದು ಅಳತೊಡಗಿದಳು.
ಅದು ನಿಜವೆ ಆಗಿತ್ತು. ಸಂಜೆಯೊಳಗೆ ಶೇಷಪ್ಪ ಬಂದ ಸುದ್ದಿ ಹಳ್ಳಿಯಲ್ಲೆಲ್ಲ ಹರಡಿತ್ತು. ಮರಳಿ ಬಂದ ಶೇಷಪ್ಪನ ಮುಖದಲ್ಲಿ ಎಂತದೊ ನಿರ್ಧಯ ಭಾವ.ಅಂದು ರಾತ್ರಿಯೆ ದೇವಾಲಯದ ಜಗುಲಿಗೆ ಅವಳನ್ನು ಕರೆತರಬೇಕೆಂದು ಅವನು ಸೂಚನೆ ಕಳಿಸಿದ. ಈ ಬಾರಿ ಅವಳು ಕೊಸರಾಡುತ್ತಲೆ ಬಂದಳು ಅಚ್ಚಮ್ಮ ದೇವಾಲಯಕ್ಕೆ. ಶೇಷಪ್ಪನನ್ನು ನೋಡುವಾಗಲೆ ಅವಳು ಚೀರಾಡತೊಡಗಿದಳು. ಅವನು ಅವಳನ್ನು ಹಿಡಿದು ಕೂಡಿಸಿದ.ಕೈಯಲ್ಲಿ ಬೇವಿನ ಸೊಪ್ಪು. ಬಾಯಲ್ಲಿ ಮಂತ್ರೋಚ್ಚಾರಣೆ ಪ್ರಾರಂಬವಾದಗಲೆ ಊರಿನವರಿಗೆ ಅರಿವಾಗಿತ್ತು ಇವನು ಮೊದಲಿನ ಶೇಷಪ್ಪನಲ್ಲ ಎಂದು. ಎಷ್ಟೆ ಮೊಂಡಾಟ ಮಾಡಿದರು ಕಡೆಗೆ ಅಕ್ಕಮ್ಮ ಅಚ್ಚಮ್ಮನನ್ನು ಬಿಟ್ಟುಹೋಗಲು ಒಪ್ಪಲೇ ಬೇಕಾಯಿತು. ಆದರೆ ಅವಳು ಒಂದು ನಿರ್ಭಂದ ಹಾಕಿದಳು.ನನಗೆ ಮುತ್ತೈದೆ ಪೂಜೆ ಮಾಡಿಸಿ ಒಬ್ಬಟ್ಟಿನ ಊಟ ಹಾಕಿಸಿ ತಿಂದು ಹೋಗುತ್ತೇನೆ ಎಂದು.
ಮರುದಿನವೆ ಅವಳಂದಂತೆ ಪೂಜೆ ನಡೆಸಲಾಯಿತು. ಊರ ಹೆಂಗಸರೆಲ್ಲ ಸೇರಿ ಅಚ್ಚಮ್ಮನ ಮನೆಯಲ್ಲಿ ಒಬ್ಬಟ್ಟು ಅಡುಗೆ ಮಾಡಿದರು. ಅಚ್ಚಮ್ಮ ಒಬ್ಬಳನ್ನೆ ಕೂಡಿಸಿ ಬಡಿಸಿದರು. ಅವಳು ಎಷ್ಟು ಒಬ್ಬಟ್ಟು ತಿಂದಳೊ ಅವರೆಷ್ಟು ಬಡಿಸಿದರೊ, ಹೊರಗಿನ ಜನ ಕಾಣರು, ಒಳಗಿದ್ದವರು ಹೊರಗಿನವರಿಗೆ ಹೇಳರು. ಅಂತು ಅಚ್ಚಮ್ಮ ಪಾಪ ಮೊದಲಿನಂತಾದಳು ಎಂದು ಕಥೆ ಮುಗಿಸಿದರು ಅಜ್ಜಿ.
ನನಗೆ ಮನದಲ್ಲೆಂತದೊ ಭಾವ ಅವರಿಬ್ಬರ ಸ್ನೇಹಬಂಧ ಇನ್ನೆಂತ ದೊಡ್ಡದಿರಬೇಕು, ಪಾಪ ಅಕ್ಕಮ್ಮನ ದೆವ್ವ ಅಚ್ಚಮ್ಮನನು ಬಿಟ್ಟು ಹೋಗಲು ಎಷ್ಟು ನೊಂದಿರಬೇಕು ಅನ್ನಿಸಿತು. ಕಡೆಗೆ ಅಜ್ಜಿಗೆ ಕೇಳಿದೆ "ಅಜ್ಜಿ ಈ ಮೈಮೇಲೆ ಬರುವುದು ಇದನ್ನೆಲ್ಲ ಈಗಲು ನಂಬಬಹುದಾ?" ಎಂದು. ಒಂದು ಕ್ಷಣ ಸುಮ್ಮನಿದ್ದ ಅಜ್ಜಿ "ನೀನನ್ನುವುದು ಸಮವೆ, ಈಗೆಲ್ಲ ವಿಚಾರವಂತರು ವಿಧ್ಯಾವಂತರು ಇದನ್ನೆಲ್ಲ ನಂಬುವುದು ಕಷ್ಟವೆ ಅನ್ನು, ಆದರು ಈ ಪ್ರಪಂಚದಲ್ಲಿ ನಮ್ಮ ಜ್ಞಾನಕ್ಕೆ ನಿಲುಕದ ತರ್ಕಕ್ಕೆ ಸಿಗದ ಅನುಭವಗಳು ಇರುತ್ತವೆ ಅಂತ ತಿಳಿಯಬೇಕು " ಎಂದರು. ನಾನು ಸರಿ ಅಜ್ಜಿ ಅಂತ ತಿಳಿಸಿ ಹೊರಟೆ.
ಹೊರಟು ಗೇಟಿನ ಹತ್ತಿರ ಬರುವಾಗಲೆ ಹಿಂದಿನಿಂದ ಬಂದ ಮನು,ನಗುತ್ತ "ಏನಪ್ಪ ನಾವು ಹಾಗೆ ಒಪ್ಪಂದಕ್ಕೆ ಬರೋಣವೆ ನೀನು ಮೊದಲು ಸತ್ತರೆ ನನ್ನ ಮೇಲೆ ಬರುವಿಯಂತೆ ನಾನು ಸತ್ತರೆ ದೆವ್ವವಾಗಿ ನಿನ್ನ ಮೇಲೆ ಬರುತ್ತೇನೆ ಆಗದೆ" ಎಂದ.ನಾನು ಗಾಬರಿಬಿದ್ದು "ಅಯ್ಯೊ ಸುಮ್ಮನಿರು ಮಾರಯ, ಒಂದು ಹೋಗಿ ಇನ್ನೊಂದು ಆದೀತು.ಹುಚ್ಚುಚ್ಚಾಗಿ ಆಡಬೇಡ" ಅಂದವನೆ, ದಡ್ ಅಂತ ಎಗರಿ ನನ್ನ ಸ್ಕೂಟರ್ ಮೇಲೆ ಕುಳಿತು ವೇಗವಾಗಿ ಮುಂದಕ್ಕೆ ಓಡಿಸಿದೆ.
Comments
ಉ: ತಿಂಗಳಿಗೊಂದು ದೆವ್ವದ ಕಥೆ : ಸ್ನೇಹ ಬಂಧ
In reply to ಉ: ತಿಂಗಳಿಗೊಂದು ದೆವ್ವದ ಕಥೆ : ಸ್ನೇಹ ಬಂಧ by Jayanth Ramachar
ಉ: ತಿಂಗಳಿಗೊಂದು ದೆವ್ವದ ಕಥೆ : ಸ್ನೇಹ ಬಂಧ
ಉ: ತಿಂಗಳಿಗೊಂದು ದೆವ್ವದ ಕಥೆ : ಸ್ನೇಹ ಬಂಧ
In reply to ಉ: ತಿಂಗಳಿಗೊಂದು ದೆವ್ವದ ಕಥೆ : ಸ್ನೇಹ ಬಂಧ by kavinagaraj
ಉ: ತಿಂಗಳಿಗೊಂದು ದೆವ್ವದ ಕಥೆ : ಸ್ನೇಹ ಬಂಧ
ಉ: ತಿಂಗಳಿಗೊಂದು ದೆವ್ವದ ಕಥೆ : ಸ್ನೇಹ ಬಂಧ
In reply to ಉ: ತಿಂಗಳಿಗೊಂದು ದೆವ್ವದ ಕಥೆ : ಸ್ನೇಹ ಬಂಧ by asuhegde
ಉ: ತಿಂಗಳಿಗೊಂದು ದೆವ್ವದ ಕಥೆ : ಸ್ನೇಹ ಬಂಧ
ಉ: ತಿಂಗಳಿಗೊಂದು ದೆವ್ವದ ಕಥೆ : ಸ್ನೇಹ ಬಂಧ
In reply to ಉ: ತಿಂಗಳಿಗೊಂದು ದೆವ್ವದ ಕಥೆ : ಸ್ನೇಹ ಬಂಧ by Jayanth Ramachar
ಉ: ತಿಂಗಳಿಗೊಂದು ದೆವ್ವದ ಕಥೆ : ಸ್ನೇಹ ಬಂಧ
In reply to ಉ: ತಿಂಗಳಿಗೊಂದು ದೆವ್ವದ ಕಥೆ : ಸ್ನೇಹ ಬಂಧ by gururajkodkani
ಉ: ತಿಂಗಳಿಗೊಂದು ದೆವ್ವದ ಕಥೆ : ಸ್ನೇಹ ಬಂಧ
In reply to ಉ: ತಿಂಗಳಿಗೊಂದು ದೆವ್ವದ ಕಥೆ : ಸ್ನೇಹ ಬಂಧ by Jayanth Ramachar
ಉ: ತಿಂಗಳಿಗೊಂದು ದೆವ್ವದ ಕಥೆ : ಸ್ನೇಹ ಬಂಧ
ಉ: ತಿಂಗಳಿಗೊಂದು ದೆವ್ವದ ಕಥೆ : ಸ್ನೇಹ ಬಂಧ
In reply to ಉ: ತಿಂಗಳಿಗೊಂದು ದೆವ್ವದ ಕಥೆ : ಸ್ನೇಹ ಬಂಧ by vinay_2009
ಉ: ತಿಂಗಳಿಗೊಂದು ದೆವ್ವದ ಕಥೆ : ಸ್ನೇಹ ಬಂಧ
In reply to ಉ: ತಿಂಗಳಿಗೊಂದು ದೆವ್ವದ ಕಥೆ : ಸ್ನೇಹ ಬಂಧ by partha1059
ಉ: ತಿಂಗಳಿಗೊಂದು ದೆವ್ವದ ಕಥೆ : ಸ್ನೇಹ ಬಂಧ
In reply to ಉ: ತಿಂಗಳಿಗೊಂದು ದೆವ್ವದ ಕಥೆ : ಸ್ನೇಹ ಬಂಧ by ksmanjunatha
ಉ: ತಿಂಗಳಿಗೊಂದು ದೆವ್ವದ ಕಥೆ : ಸ್ನೇಹ ಬಂಧ