ಹಾವುಗಳ ಪ್ರಕರಣ
ನಮ್ಮ ಹಳ್ಳಿಮನೆಯಲ್ಲಿ ಹಾವುಗಳೆಂದರೆ, ಒಂದು ರೀತಿ ಕರೆಯದೇ ಅನಿಯಮಿತವಾಗಿಬರುವ ಅತಿಥಿಗಳೇ ಸರಿ. ಮನೆಯೊಳಗೆ ಬೆಕ್ಕುಗಳು, ಮನೆ ಮುಂದೆ ನಾಯಿ ಇದ್ದಂತೆ, ಹಾವುಗಳೂ ಮನೆಯ ಫಾಸಲೆಯ ಜೀವಿಗಳೆಂದೇ ಹೇಳಬಹುದಾದಷ್ಟು ಅವು ಸಾಮಾನ್ಯವಾಗಿದ್ದವು. ಒಂದೇ ಮುಖ್ಯ ವ್ಯತ್ಯಾಸವೆಂದರೆ, ಬೆಕ್ಕು - ನಾಯಿಗಳನ್ನು ಸಾಕುತ್ತಿದ್ದೆವು, ಹಾವುಗಳೂ ಸಾಕು ಪ್ರಾಣಿಗಳಾಗಿರಲಿಲ್ಲ, ಅಷ್ಟೆ. ಮನೆ ಒಳಗೂ ಸಹಾ ನಮ್ಮನ್ನು ಕೇಳದೇ ಒಳಗೆ ಬರುತ್ತಿದ್ದ ಹಾವುಗಳನ್ನು ನಾವು ಹೊರಗೆ ಓಡಿಸುತ್ತಿದ್ದುದಂತೂ ಖಚಿತ.
"ಏ ಮಕ್ಕಳೇ, ಕಪ್ಪೆನ ಬೆರ್ಸಕಂಡ್ ಹೈಸಾರ ಹಾವು ಮನೆ ಹತ್ರ ಬತ್ತಾ ಇತ್, ಕಾಣಿ! ಅದನ್ನು ದೂರ ಓಡ್ಸಿಯಾ!" ಎಂದು ಹಟ್ಟಿ ಕಡೆಯಿಂದ ಅಮ್ಮಮ್ಮ ಕೂಗು ಹಾಕುವಾಗಲೇ, ಅಂಗಳದಲ್ಲಿ ಕಪ್ಪೆಯೊಂದು ಕುಪ್ಪಳಿಸುತ್ತಾ ಮನೆಯತ್ತ ಬರುತ್ತಿರುವುದು ಕಾಣುತ್ತಿತ್ತು. ಅದರ ಹಿಂದೆಯೇ, ಮಾರುದ್ದದ ಹೈಸಾರ ಹಾವು ಅದನ್ನು ಅಟ್ಟಿಸಿಕೊಂಡು ಬರುತ್ತಿತ್ತು. ಮನೆಯೊಳಗೆ ಕುಪ್ಪಳಿಸಿಕೊಂಡು ಒಮ್ಮೆ ಸೇರಿಬಿಟ್ಟರೆ, ತನಗೆ ಮನೆಯವರು ರಕ್ಷಣೆಕೊಡುತ್ತಾರೊ ಎಂಬ ಭ್ರಮೆಯಿಂದಲೋ ಏನೊ, ಅದು ಶಕ್ತಿ ಮೀರಿ ಮನೆಯತ್ತ ನೆಗೆದುನೆಗೆದು ಬರುತ್ತಾ, ಇನ್ನೇನು ಚಪ್ಪರ ದಾಟಿ, ಮನೆಯೊಳಗೆ ಅಡಗಬೇಕು, ಅಷ್ಟರಲ್ಲಿ, ಚಿಟ್ಟೆಯ ಹತ್ತಿರ ಹೈಸಾರ ಹಾವಿನ ಬಾಯೊಳಗೆ ಕಪ್ಪೆಬಂಧಿ!
"ಕೇಂ, ಕೇಂ" ಎಂದು ಕಪ್ಪೆ ಕೂಗುತ್ತಿರುವಂತೆಯೇ, ಅದನ್ನು ಹಿಡಿದ ಹಾವು, ಕಪ್ಪೆಯ ಮಿಸುಕಾಟ ಮತ್ತು ತಪ್ಪಿಸಿಕೊಳ್ಳುವ ಯತ್ನದನಡುವೆಯೇ, ಅದನ್ನು ಬಾಯಲ್ಲಿ ಕಚ್ಚಿಕೊಂಡು ವಾಪಸಾಗುವ ದೃಶ್ಯ ಕಂಡು, ಮಕ್ಕಳಿಗೆಲ್ಲಾ ಬೆರಗು, ದಿಗಿಲು. "ಅದನ್ನು ಮನೆಯೊಳಗೆ ಹೋಗಲು ಬಿಡಬೇಡಿ" ಎನ್ನುತ್ತಲೇ, ಹಟ್ಟಿಯ ಕಡೆಯಿಂದ ಬೇಗನೆ ಬಂದ ಅಮ್ಮಮ್ಮನ ಕೈಯಲ್ಲಿ ಮಾರುದ್ದದ ಒಂದು ಕೋಲು. "ನೀವೆಲ್ಲ ಎಂತಕೆ? ಸುಮ್ಮೆ ಕಾಂಬುಕಾ? ಅದನ್ನು ಅತ್ತ, ದೂರ ಬೆರ್ಸುದು ಅಲ್ದಾ?" ಎಂದು ನಮ್ಮತ್ತ ಒಂದು ಗುಟುರು ಹಾಕಿ, ತಾವೆ ಕೋಲಿನ ಸಹಾಯದಿಂದ ಹಾವನ್ನು ದೂರ ಓಡಿಸತೊಡಗಿದರು. ಒದರಾಡುವ ಕಪ್ಪೆಯನ್ನು ಬಾಯಲ್ಲಿ ಕಚ್ಚಿಕೊಂಡ ಹಾವಿಗೆ, ಬೇಗನೆ ಚಲಿಸಲು ಆಗುತ್ತಿರಲಿಲ್ಲ. ನಯವಾಗಿ ಒರೆದಿದ್ದ ಅಂಗಳದ ಮೇಲೆ ಅದರ ಬಳಕುವ ದೇಹ ಜಾರಿ, ಜಾರುತ್ತಾ ಚಲನೆ ನಿಧಾನವಾಗುತ್ತಿತ್ತು. "ಹಚ, ಹಚ - ಹತ್!" ಎನ್ನುತ್ತಾ, ಅದರತ್ತ ಕೋಲನ್ನು ಬೀಸಿ, ಅದರ ಹತ್ತಿರವೇ ಕೋಲಿನ ತುದಿಯನ್ನು ನೆಲಕ್ಕೆ ಕುಟ್ಟಿ, ಕುಟ್ಟಿ, ಅದು ದೂರ ಹೋಗುವಂತೆ ದೂಡುತ್ತಿದ್ದ ಅಮ್ಮಮ್ಮ, ಅಪ್ಪಿ ತಪ್ಪಿಯೂ ಅದಕ್ಕೆ ಏಟನ್ನು ಹಾಕುತ್ತಿರಲಿಲ್ಲ. ಹಾವನ್ನು ಹೊಡೆಯಬಾರದು ಎಂಬ ಅಹಿಂಸಾ ಹಿನ್ನೆಲೆಯ ನಂಬಿಕೆಗಿಂತಲೂ ಹೆಚ್ಚಾಗಿ, ಅದಕ್ಕೆ ಏಟಾಗಿ ಅರೆಜೀವವಾದರೆ ಕಷ್ಟ ಎಂಬ ರೇಜಿಗೆಯಿಂದ ಅದಕ್ಕೆ ಅವರು ಹೊದೆಯುತ್ತಿರಲಿಲ್ಲ. ಜೊತೆಗೆ, ನಿರಪಾಯಕಾರಿ ಹೈಸಾರ ಹಾವನ್ನು ನಮ್ಮ ಊರಿನಲ್ಲಿ ಯಾರೂ ಸಾಯಿಸುತ್ತಿರಲಿಲ್ಲ. ಬೇರೆ ಊರಿಂದ ಬರುವ ಹಾವು ಹಿಡಿಯುವವರು ಮಾತ್ರ ಅಂತ ಪಾಪದ ಕೆಲಸ ಮಾಡುತ್ತಿದ್ದರು.
ಆದರೆ, ಅಮ್ಮಮ್ಮ ಹಾವನ್ನು ಸಾಯಿಸಿದ ಒಂದು ಸಂದರ್ಭ ನೆನಪಿದೆ - ಬಿರು ಬೇಸಿಗೆಯಲ್ಲಿ , ಮನೆಯೊಳಗೆ ತುಂಬಾ ಸೆಕೆ ಎಂದು, ಅಮ್ಮಮ್ಮ ಮನೆಯ ಎದುರು, ಚಪ್ಪರದ ಅಡಿ ಮಲಗುತ್ತಿದ್ದರು. ಸರಳ ಹಲಗೆಯಿಂದ ಮಾಡಿದ ಒಂದಡಿ ಅಗಲದ ಎರಡು ಬೆಂಚುಗಳನ್ನು ಜೋಡಿಸಿಕೊಂಡು, ಅದರ ಮೇಲೆ ಹಾಸಿಗೆ ಹಾಕಿಕೊಂಡು, ಮಲಗಿದಾಗ ಮೇಲ್ಭಾಗದಲ್ಲಿ ಅಡಿಕೆ ದಬ್ಬೆಗಳಿಂದ ಮಾಡಿದ ಚಪ್ಪರ, ಅದರ ಮೇಲೆ ಅಡಕೆಗಳನ್ನು ಒಣಗಿಸುವ ಪದ್ದತಿ. ನಡುರಾತ್ರಿಯಾದಂತೆಲ್ಲ, ವಾತಾವರಣ ತಂಪಾಗಿ, ಸೆಕೆ ಕಡಿಮೆಯಾದಾಗ, ಹೊದಿಕೆ ಹೊದ್ದು ಮಲಗುತ್ತಿದ್ದರು - ಮೈಮೇಲೆ ಏನೋ ಬಿದ್ದಂತಾಯಿತು. ಅವರ ಬಳಿಯಿದ್ದ ಬ್ಯಾಟರಿ ಬೆಳಕು ಬಿಟ್ಟು ನೋಡಿದರೆ, ಅದೊಂದು ಚಿಕ್ಕ ಹಾವು! ಕೂಡಲೆ, ಅದು ಬಿದ್ದಿದ್ದ ಹೊದಿಕೆಯನ್ನು ದೂರಕ್ಕೆ ಎಸೆದು, ಚಿಮಿಣಿ ಎಣ್ಣೆಯ ದೀಪ ಹಚ್ಚಿ, (ಆಗಿನ್ನು ವಿದ್ಯುತ್ ಸಂಪರ್ಕ ಬಂದಿರಲಿಲ್ಲ) ಕೋಲು ಹಿಡಿದು, ಹೊದಿಕೆಯನ್ನು ಕೋಲಿನ ಸಹಾಯದಿಂದ ಬಿಡಿಸಿ ನೋಡಿದರೆ, ಒಂದು ಕಡಂಬಳ್ಕ ಹಾವು (ಕಟ್ಟು ಹಾವು) ಮುದ್ದೆಯಾಗಿ ಬಿದ್ದಿದೆ! ಕೇವಲ ಒಂದೆರಡು ಅಡಿ ಉದ್ದವಿದ್ದ ಆ ಹಾವು ಕಚ್ಚಿದರೆ, ವಿಷ! ಕೋಲಿನಿಂದ ಬಡಿದು ಹಾವನ್ನು ಸಾಯಿಸಿ, ಹುಲ್ಲಿನ ಕಸದ ಜೊತೆ ಸುಟ್ಟು ಹಾಕಿ, ಮತ್ತೆ ಮಲಗಿದರು. ನಂತರ, ಹಲವು ತಿಂಗಳುಗಳ ತನಕ ಅಮ್ಮಮ್ಮನಿಗೆ ಮಾತಾಡಲು ಈ ಒಂದು ಸುದ್ದಿ ಸಿಕ್ಕಿತು - ಯಾರು ಸಿಕ್ಕಿದರೂ, ಮಾತಿನ ಮಧ್ಯೆ, ಹಾವು ತನ್ನ ಮೈಮೇಲೆ ಬಿದ್ದ ಕತೆಯನ್ನು ಬಣ್ಣಿಸದಿದ್ದರೆ ಅವರಿಗೆ ಸಮಾಧಾನವೇ ಇರುತ್ತಿರಲಿಲ್ಲ - " ಈ ಚಪ್ಪರದ ಅಡಿ, ಇಲ್ಲೇ ಕಾಣಿ, ಈ ಹೊಸ್ತಿಲಿನ ಹೊರಗೆ ರಾತ್ರಿ ಮಲ್ಕಂಡಿದ್ದೆ, ನಡೂ ರಾತ್ರಿ, ಮೈ ಮೇಲೆ "ದಪ್" ಅಂತ ಶಬ್ದ ಆಯ್ತು - ಬ್ಯಾಟ್ರಿ ಬೆಳಕು ಬಿಟ್ಟು ಕಂಡರೆ, ಅದು ಒಂದು ಕಡಂಬಳ್ಕ ಹಾವು, ಮಾರಾಯ್ರೆ!"
ನಮ್ಮ ಹಳ್ಳಿ ಮನೆಯ ಅಟ್ಟ ಮತ್ತು ಮಾಡಿನ ತುಂಬಾ ಯಾವಾಗಲೂ ಇಲಿಗಳ ಸಂಚಾರ! ಹಂಚಿನ ಮಾಡಿನ ಅಂಚಿನಲ್ಲಿ, ಮೇಲ್ಭಾಗದ ದೊಂಬೆ ಹಂಚಿನ ಸಾಲಿನಡಿ ಇಲಿಗಳು ಶಬ್ದ ಮಾಡುತ್ತಾ ಓಡಾಡುತ್ತಿದುದು ಸಾಮಾನ್ಯ. ಆಗಾಗ ಚಿಂವ್ ಚಿಂವ್ ಕೂಗುತ್ತಿದ್ದರೆ, ಹಕ್ಕಿ ಕೂಗನ್ನು ಅಣಕಿಸಿದಂತೆ ಅನಿಸುತ್ತಿತ್ತು. ಮನೆಯಲ್ಲಿ ಸಾಕಿದ ಬೆಕ್ಕುಗಳು ಚುರುಕಾಗಿದ್ದರೆ, ಅವುಗಳ ಸಂಖ್ಯೆ ಕಡಿಮೆಯಾಗುತ್ತಿತ್ತು. ಒಮ್ಮೊಮ್ಮೆ ಕೆಲವು ತಿಂಗಳುಗಳ ಕಾಲ ಬೆಕ್ಕುಗಳೇ ಮನೆಯಲ್ಲಿ ಇಲ್ಲವಾದಾಗ, ಇಡೀ ಮನೆಯು ಇಲಿಗಳ ಸಾಮ್ರಾಜ್ಯವಾಗುತ್ತಿತ್ತು. ಆಗ ಅವುಗಳನ್ನು ಅರಸಿ ಬರುವ ಹಾವುಗಳು ನಿಜವಾಗ್ಲೂ ನಮ್ಮ ಮನೆಗೆ ಕರೆಯದೇ ಬರುವ ಅತಿಥಿಗಳು! ನಿರಪಾಯಕಾರಿಯಾಗಿದ ಹೈಸಾರ ಬಡ್ಡಗಳು, ಇಲಿಗಳನ್ನು ಅರಸುತ್ತಾ ಉಪ್ಪರಿಗೆಯ ಹಂಚಿನ ಸಂದಿಯಲ್ಲಿ ಓಡಾಡುತ್ತಿದ್ದರೆ, ಸ್ವಲ್ಪ ಹೊತ್ತು ಗಮನಿಸಿ,ನಂತರ, ನಾವು ಆ ಕಡೆಗೆ ಗಮನವನ್ನೇ ಕೊಡುತ್ತಿರಲಿಲ್ಲ. ಹೈಸಾರ ಹಾವು ಇಲಿಯನ್ನು ಹಿಡಿದು, ಎಷ್ಟೋ ಹೊತ್ತಿನ ನಂತರ ತನ್ನ ಪಾಡಿಗೆ ತಾನು ಹೊರಟುಹೋಗುತ್ತಿತ್ತು. ಆದರೆ, ಅಪರೂಪಕ್ಕೆ, ಉಪ್ಪರಿಗೆ ಮಾಡಿನಲ್ಲಿ ನಾಗರಹಾವು ಬಂದುಬಿಡುತ್ತಿತ್ತು - ಆಗ ನಮಗೆಲ್ಲ ಗಾಬರಿ, ದಿಗಿಲು. ಉದ್ದನೆಯ ಕೋಲೊಂದನ್ನು ಹಿಡಿದು, ಅಲ್ಲಿ-ಇಲ್ಲಿ ಸದ್ದು ಮಾಡುತ್ತಾ, ಅದನ್ನು ದೂರ ಓಡಿಸುವ ಕೆಲಸ ಕೆಲವೊಮ್ಮೆ ತುಂಬಾ ಸಮಯ ತೆಗೆದುಕೊಳ್ಳುತ್ತಿತ್ತು. ನಾಗರಹಾವನ್ನು "ದೇವರಹಾವು" ಎಂದೇ ಕರೆಯುತ್ತಿದ್ದ, ಕರಾವಳಿಯ ಊರುಗಳಲ್ಲಿ ಯಾವುದೇ ಕಾರಣಕ್ಕೂ ಅದನ್ನು ಹೊಡೆದು ಹಾಕುತ್ತಿರಲಿಲ್ಲ. ವಿಪರೀತ ಭಯ-ಭಕ್ತಿಯಿಂದ ಅದನ್ನು ಬೆದರಿಸಿ, ದೂರ ಹೋಗುವಂತೆ ಮಾಡುವ ಕೆಲಸ ಸಾಮಾನ್ಯವಾಗಿ ಅಮ್ಮಮ್ಮನದ್ದೇ. ನಾಗರಹಾವು ಮನೆಯ ಹತ್ತಿರ ಬಂದಾಗ, ಅದನ್ನು ಗೌರವಪೂರ್ವಕವಾಗಿ ಬೈಯುತ್ತಲೇ, ಓಡಿಸುತ್ತಿದ್ದರು ಅಮ್ಮಮ್ಮ - " ಇಲ್ಲಿಗೆ ಯಾಕೆ ಬಂದೆ, ಮುಂದಿನ ಸೋಮವಾರ ನಾಗರ ಕಲ್ಲಿಗೆ ತನಿ ಹಾಕುತ್ತೇವೆ, ಈಗ ಹೋಗ್! ಸುಮ್ಮನೆ ತೊಂದರೆ ಕೊಡಬೇಡ, ಮಕ್ಕಳು ಹೆದರಿಕೊಂತಾವೆ!" "ಕಟ ಕಟಾ!" ಎಂದು ಕೋಲನ್ನು ಅಲ್ಲಲ್ಲಿ ನೆಲಕ್ಕೆ ಬಡಿದು ಬೆದರಿಸುತ್ತಿದ್ದರು. ಪ್ರತಿ ಸೋಮವಾರ ನಾಗರ ಕಲ್ಲಿಗೆ ಪೂಜೆ ಮಾಡುತ್ತಿದ್ದ, ಅಪ್ಪಯ್ಯ ಅದನ್ನು ದೂರ ಹೋಗಲು ಹೇಳುವ ಶೈಲಿಯೇ ಬೇರೆ - " ಹೋಗು, ಹಾಂ. ಇಲ್ಲೇನು ಕೆಲಸ, ಈ ಕಡೆ ನಡೆ" ಎಂದು, ಗಂಭೀರವಾಗಿ, ಅದು ತನ್ನ ಮಾತನ್ನು ಕೇಳುತ್ತಿದೆಯೇನೋ ಎಂಬಂತೆ, ಕೈ ತೋರಿಸುತ್ತಾ, ಪದೇ ಪದೇ ಒಂದು ದಿಕ್ಕಿಗೆ ಸನ್ನೆ ಮಾಡುತ್ತಾ ದೂರ ಹೋಗಲು ಹೇಳುತ್ತಿದ್ದರು. ಅದೂ, ಅತ್ತ ಸರಿದು ಹೋಗುತ್ತಿತ್ತು! ಹಿಂದೆಂದೋ, ಒಂದು ಹಠಮಾರಿ ಹಾವು, ಯಾರು ಹೆಳಿದರೂ ಜಪ್ಪಯ್ಯ ಅನ್ನದಿದ್ದುದು, ತಾನು ಹೇಳಿದ ರೀತಿಯೇ ಜಾಗ ಬಿಟ್ಟು ಹೋಗಿದ್ದ ಕತೆಯನ್ನೂ ಸಾಂದರ್ಭಿಕವಾಗಿ ಹೇಳುತ್ತಿದ್ದರು. ನಾಗರ ಹಾವುಗಳ ಕುರಿತು, ಅವುಗಳ ವರ್ತನೆಯ ಕುರಿತು ನಮ್ಮ ಊರಿನ ಕಡೆ ನೂರಾರು ಕತೆಗಳಿವೆ. ತಾರಿಕಟ್ಟೆಯ ನಮ್ಮ ಅತ್ತೆಮನೆಯಲ್ಲಿ, ನಾಗರಹಾವು ವರ್ತಿಸಿದ ರೀತಿ, ಪದೇ ಪದೇ ಅದು ಮನೆಯತ್ತ ಬರುತ್ತಿದ್ದ ಪರಿ, ಬಾವಿಗೆ ಬಿದ್ದದ್ದು, ಸುತ್ತ ಮುತ್ತ ಅದು ಓಡಾಡಿದ ಪರಿಯಕುರಿತು ಪುಟಗಟ್ಟಲೆ ಬರೆಯಬಹುದು! ಅವರು ಮನೆಯ ಹತ್ತಿರವೇ,ಹಾವಿಗಾಗಿ ಒಂದು ಗುಡಿಯನ್ನೂ ಕಟ್ಟಿಸಿದ್ದಾರೆ.
ಸಾಮಾನ್ಯವಾಗಿ ಗದ್ದೆ ಹತ್ತಿರ ಕಾಣಿಸುವ ಮತ್ತೊಂದು ಹಾವೆಂದರೆ, ಒಳ್ಳೆಹಾವು - ನಮ್ಮ ಬೈಲಿನಲ್ಲಿ ಮತ್ತು ಮನೆಯ ಸುತ್ತ ಈ ಒಳ್ಳೆಯ ಹಾವುಗಳು ಎಷ್ಟೊಂದು ಸಸಾರವಾಗಿದ್ದವೆಂದರೆ, ಅದು ಕಚ್ಚಿದರೂ ಯಾರೂ ತಲೆಬಿಸಿ ಮಾಡಿಕೊಳ್ಳುತ್ತಿರಲಿಲ್ಲ . ನಮ್ಮ ಮನೆಯ ಬಾವಿಯಲ್ಲಿ, ಬೈಲು ಬಾವಿಯಲ್ಲಿ ಹತ್ತಾರು ಒಳ್ಳೆಹಾವುಗಳು ಮಂಡೆ ಎತ್ತಿ ನೋಡುತ್ತಿರುವ ನೋಟ ಯಾವಾಗಲೂ ಸಿಗುತ್ತಿತ್ತು. ಮಳೆ ಜಾಸ್ತಿ ಬಂದು, ನೆರೆ ನೀರು ಬೈಲು ಬಾವಿಗೆ ನುಗ್ಗಿದಾಗ, ಅಲ್ಲಿದ್ದ ಒಳ್ಳೆಹಾವುಗಳೆಲ್ಲಾ ಪ್ರವಾಹದಲ್ಲಿ ಸೇರಿಕೊಳ್ಳುತ್ತಿದ್ದವು. ಮಳೆಯ ನೀರಿನ ರಭಸವಿದ್ದಾಗ, ಬೈಲಿನಲ್ಲಿ ನಡೆಯುವವರ ಕಾಲಿನ ಅಡಿಯೇ ಈ ಒಳ್ಳೆಹಾವುಗಳು ಬರುತ್ತಿದ್ದವು. " ಒಳ್ಳೆ ಹಾವು ಕಚ್ಚಿದರೆ, ಎಂತ ಅಪಾಯವೂ ಇಲ್ಲ - ಸ್ವಲ್ಪ ನಂಜು ಅಷ್ಟೆ. ನನಗೆ ಎರಡು ಸರ್ತಿ ಈ ಒಳ್ಳೆ ಹಾವು ಕಚ್ಚಿತ್, ಎಂತ ಆಯ್ಲೂ ಇಲ್ಲ. ಸ್ವಲ್ಪ ತುರಿಕೆ ಆಯ್ತು, ಅಷ್ಟೆ." ಎನ್ನುತ್ತಿದ್ದರು ಅಮ್ಮಮ್ಮ.
ಹಾಗಂತ, ನಮ್ಮ ಹಳ್ಳಿಯ ಎಲ್ಲ ಹಾವುಗಳೂ ನಿರಪಾಯಕಾರಿಯಲ್ಲ! ಕಟ್ಟು ಹಾವು, ಕನ್ನಡಿ ಹಾವುಗಳು ಕಚ್ಚಿದರೆ, ವಿಷದಿಂದ ಕಚ್ಚಿದ ಭಾಗ ಕೊಳೆಯುವಿಕೆ, ಮರಣದ ಸಾಧ್ಯತೆ ಉಂಟು. "ದೇವರಹಾವು" ಎಂದೇ ಭಯಭಕ್ತಿಯಿಂದ ಕರೆಯಿಸಿಕೊಳ್ಳುವ ನಾಗರಹಾವು ಅಕಸ್ಮಾತ್ ಕಚ್ಚಿದರೆ, ಉಳಿಗಾಲವಿಲ್ಲ. ನಮ್ಮ ಪಕ್ಕದ ಮನೆಯ ಸುಬ್ಬಣ್ಣನಿಗೆ, ನಾಗರಹಾವು ಕಚ್ಚಿತ್ತು - ಒಂದು ಸಂಜೆ ನಾವೆಲ್ಲ ಮನೆ ಎದುರಿನ ಬಾಗಾಳು ಮರದ ಅಡಿಯಲ್ಲಿ, ಅಗೇಡಿ ಗದ್ದೆಯಲ್ಲಿ ಆಟವಾಡುತ್ತಿದ್ದೆವು - ಸಂಜೆಗತ್ತಲ ಸಮಯ. ಗದ್ದೆಯಂಚಿನ, ತೋಡಿನಬದಿ ಆಟದ ಮಧ್ಯೆ ಓಡುತ್ತಾ ಹೋದ ಸುಬ್ಬಣ್ಣ ಕೂಗಿದ - "ಹಾವು ಕಚ್ಚಿತು!" ನಾವೆಲ್ಲಾ ಮಕ್ಕಳು ಕೂಗುತ್ತಾ ಮನೆಯತ್ತ ಓಡಿಬಂದೆವು - "ಸುಬ್ಬಣ್ಣನಿಗೆ ಹಾವು ಕಚ್ಚಿತೋ!!" ಅದಾಗಲೇ ಕತ್ತಲಾಗಿತ್ತು. ಆಸ್ಪತೆ, ಔಷಧ ಮೊದಲಾದವುಗಳ ಪರಿಚಯ ನಮ್ಮ ಹಳ್ಳಿಯಲ್ಲಿ ಆಗ ತುಂಬಾ ಕಡಿಮೆ. ಮದ್ದು ನೀಡುವ ಪಂಡಿತರು ಬಂದರು, ಅದೇನನ್ನೋ ರಸವನ್ನು ಸುಬ್ಬಣ್ಣನಿಗೆ ಕುಡಿಸಲು ಪ್ರಯತ್ನಿಸಿದರು. ಅವನು ಬಾಯಿ ತೆಗೆಯಲು ಕಷ್ಟಪಡುತ್ತಿದ್ದ. ತೆಂಗಿನ ಗರಿಯನ್ನು ಕತ್ತರಿಸಿ, ಒಂದು ತುದಿಯನ್ನು ಬಾಯಿಗೆ ಇಟ್ಟು, ಇನ್ನೊಂದು ತುದಿಯಲ್ಲಿ ಮದ್ದಿನ ರಸವನ್ನು ಹೊಯ್ದು ಕುಡಿಸಲು ಯತ್ನಿಸಿದರು. ಅವನೆಷ್ಟು ಕುಡಿದನೋ, ಬಿಟ್ಟನೊ, ಬೆಳಗಾಗುವಷ್ಟರಲ್ಲಿ ಸುಬ್ಬಣ್ಣನ ಪ್ರಾಣಪಕ್ಷಿ ಹಾರಿಹೋಗಿತ್ತು.
ಚಿತ್ರ: ಹರಿ ಪ್ರಸಾದ್ ನಾಡಿಗ್
Comments
ಉ: ಹಾವುಗಳ ಪ್ರಕರಣ
In reply to ಉ: ಹಾವುಗಳ ಪ್ರಕರಣ by vani shetty
ಉ: ಹಾವುಗಳ ಪ್ರಕರಣ
ಉ: ಹಾವುಗಳ ಪ್ರಕರಣ
ಉ: ಹಾವುಗಳ ಪ್ರಕರಣ
ಉ: ಹಾವುಗಳ ಪ್ರಕರಣ
ಉ: ಹಾವುಗಳ ಪ್ರಕರಣ