ಎರಡು ಸಾಲುಗಳು - ೭

ಎರಡು ಸಾಲುಗಳು - ೭

ಅವಳ ನೆನಪಿನ ಕಳೇಬರವನ್ನು ಹೊತ್ತು
ಜಗತ್ತನ್ನೇ ಉರಿಸಲು ಹೊರಟ ಅವನೀಗ ’ರುದ್ರ’

ನಿಲ್ಲಲು ಯತ್ನಿಸಿದಾಗ ಆಗಲೇ ಕಾಲೆಳೆಯಲು
ಹೊಂಚು ಹಾಕುತ್ತಿದ್ದವರ ಕಂಡ, ಕುಳಿತ, ಮತ್ತೆ ಏಳಲಿಲ್ಲ.

ಎಲ್ಲವನ್ನೂ ಎಲ್ಲರನ್ನೂ ನೀನೇ ನಿನ್ನ ಬದುಕಿಗೆ ಎಳೆದಿರಲು
ಈಗ ನಿನ್ನ ನೋವಿಗೆ, ಕಳೆದುಕೊಳ್ಳುವ ಭಯಕ್ಕೆ ನೀನೇ ಕಾರಣ

ಯೋಚಿಸುವ ಶಕ್ತಿ ಇರದ ಕನ್ನಡಿ ಉತ್ತರವಿಲ್ಲದ ಪ್ರಶ್ನೆಗಳನ್ನು ಕೇಳಿದೆ
ಉತ್ತರಗಳಿಲ್ಲದ ಪ್ರಶ್ನೆಗಳಿಲ್ಲ ಎಂದರಿತೂ ಮನಸ್ಸು ಖಿನ್ನವಾಗಿದೆ

ಪೂರ್ಣತೆಯನ್ನು ಪಡೆಯುವ ಆಸೆಯಿಂದ ಕನಸುಗಳು 
ಮತ್ತೊಮ್ಮೆ ರಾತ್ರಿಯ ನಿದ್ರೆಯನ್ನು ಅಪೂರ್ಣಗೊಳಿಸಿದವು

ಇಂದೇಕೋ ಪುನಃ ಮೌನ ಇಷ್ಟವಾಗತೊಡಗಿದೆ
ಇದೇ ರೂಢಿಯಾದರೆ ಕಷ್ಟ ಎಂದೂ ಅನಿಸತೊಡಗಿದೆ

ಸತ್ತವ ಪ್ರಶ್ನೆಗಳನ್ನು ಬಿಟ್ಟು ಹೋಗುತ್ತಾನೆ
ಬದುಕಿರುವವ ಅವುಗಳಲ್ಲಿ ಉತ್ತರ ಹುಡುಕುತ್ತಾ ಸಾಯುತ್ತಾನೆ

ಆತ ಜೋಗಿಯೋ ಜಂಗಮನೋ.. ಇದ್ದಕ್ಕಿದ್ದಂತೆ ಮಾಯವಾದ
ಮಾಯಾವಿ ಎಂದು ಜನ ಮಾತಾಡಿಕೊಂಡರು.

ಲೋಕವನ್ನು ಬದಲಾಯಿಸಲು ಹೊರಟ ಅವನದೊಂದು ಕನಸು
ಇಲ್ಲೇನೂ ಬದಲಾಗಲ್ಲ ಎಂಬ ಸತ್ಯಕ್ಕೆ ಅವನ ಮನಸ್ಸು ಈಗ ಹೊಸತು

ಮತ್ತೆ ಬೆಳಗಾಗುವುದು ಎಂದು ಆತ ಕಾತರದಿಂದ ಕಾಯತೊಡಗಿದ
ಪಕ್ಕದಲ್ಲಿನ ಕಂದೀಲು ಅವನಿಗೆ ಮರೆತೇ ಹೋಗಿತ್ತು!

Rating
No votes yet

Comments