ಸವಿ ಸವಿ ನೆನಪು

ಸವಿ ಸವಿ ನೆನಪು

ಏಯ್ ಇದು ನಾನು ಓದಿದ್ದು ಶಾಲೆ ಕಣೇ, ಇವರು ನಮ್ಮ ಮೇಸ್ಟ್ರು, ಅದೇ ಅವತ್ತು ಹೇಳಿರಲಿಲ್ಲವಾ, ಬಹಳ ಹೊಡಿತಾ ಇದ್ರು ಅಂತ, ಇವನೇ, ಅದೇ, ನಾನು ಶ್ರೀಧನ್ ಅಂತಿರ್ತಿನಲ್ಲಾ, ಇಲ್ಲೇ ಕಣೇ ನಾನು ಈಜು ಕಲಿತಿದ್ದು, ಅಯ್ಯೋ ಗೊತ್ತು ಬಿಡ್ರಿ ಅದೇನು ಹೇಳಿದ್ದನ್ನೇ ಹೇಳ್ತಾ ಇರ್ತೀರಿ ಅಂತ ಮಡದಿ ಉಗಿತಾ ಇದ್ರು, ನಾವು ಬೇಜಾರು ಮಾಡಿಕೊಳ್ಳುವುದೇ ಇಲ್ಲ. ಏನೋ ಕುತೂಹಲದಿಂದ ಹೇಳ್ತಾನೇ ಇರ್ತೀವಿ. ಅದೇನು ಬಹಳ ವಿಶೇಷವಾಗಿಲ್ಲ ಅಂದ್ರೂ ಹೇಳಬೇಕು ಎನ್ನುವ ಕೌತುಕ. ಇದೇ ರೀತಿಯ ಘಟನೆಗಳು ಅವರ ಜೀವನದಲ್ಲೂ ಇರುತ್ತದೆ ಎನ್ನುವುದು ಆ ಕ್ಷಣಕ್ಕೆ ನಮಗೆ ಮರೆತೇ ಹೋಗಿರುತ್ತದೆ.

ಊರು ಬದಲಾಗುತ್ತಿದೆ. ಹಂಚಿನ ಶಾಲೆಯ ಕಟ್ಟಡಗಳೆಲ್ಲಾ ಕಾಂಕ್ರೀಟ್ ರೂಪ ಪಡೆಯುತ್ತಿದೆ. ಕುಳಿತು ಹರಟುತ್ತಿದ್ದ ಜಾಗಗಳಲ್ಲಿ ರಸ್ತೆ ಬಂದಿದೆ. ಮರಕೋತಿಯಾಡಿದ ಮರಗಳ ಜಾಗದಲ್ಲಿ ಮನೆಗಳೆದ್ದಿವೆ, ಈಜುತ್ತಿದ್ದ ಚಾನಲ್ ಮುಚ್ಚಿದೆ.  ಈ ಮುಂಚೆ ರಸ್ತೆಯಲ್ಲಿ ಆಡುತ್ತಿದ್ದ ಆಟಗಳು ಈಗ ಕಾಣ್ತಾನೇ ಇಲ್ಲ. ಸಂಜೆಯಾದ ತಕ್ಷಣ ಬೀದಿಗಳು ಬಿಕೋ ಎನ್ನುತ್ತದೆ. ಹೀಗೆ ಊರನ್ನು ನೋಡಿದಾಗ ಬೇಸರವಾಗುತ್ತದೆ. ನಾವೇನೂ ಯಾವುದೋ ಮಹಾನಗರದಲ್ಲಿ ಇಲ್ಲ. ಆದರೂ ನಮ್ಮ ಊರು ಬದಲಾಯಿತಾ, ಇಲ್ಲಾ ನಾವೇ ಬದಲಾದೆವಾ ಎನ್ನುವ ಪ್ರಶ್ನೆಯಂತೂ ಕಾಡುತ್ತಲೇ ಇರುತ್ತದೆ. ನನ್ನ ಏಕಾಂತ ಹಿಂದಕ್ಕೆ ಕರೆದೊಯ್ಯುತ್ತಿರುತ್ತದೆ.ಮತ್ತೆ ಅದೇ ಹಳೆಯ ಸಿಹಿ ನೆನಪುಗಳು.

ಮನೆಯಲ್ಲಿರುವ ಹರಿದ ಚೆಡ್ಡಿ, ಬಣ್ಣ ಮಾಸಿದ ಅಂಗಿಗಳನ್ನು ನೋಡಿದಾಗಲೆಲ್ಲಾ ಶಾಲೆಯ ದಿನಗಳು ಚಿತ್ರದ ಮೂಲಕ ಕಣ್ಣ ಮುಂದೆ ಬಂದು ನಿಲ್ಲುತ್ತದೆ, ಅಮ್ಮ ತಲೆ ಸವರಿ, ಎಣ್ಣೆ ಹಾಕಿ ತಲೆ ಬಾಚಿದ್ದು, ಚಳಿಯಾಗುತ್ತದೆಂದು ಅಂಗಿ ಮೇಲೆ ಅಂಗಿ ಹಾಕಿದ್ದು, ಶಾಲೆಯಲ್ಲಿ ಗೋಧಿ ಉಪ್ಪಿಟ್ಟಿಗಾಗಿ ಹೊಡೆದಾಡಿದ್ದು, ನೀನೇನಾದರೂ ತಪ್ಪು ಮಾಡಿದರೆ ಯಮ ಬಂದು ನಿನ್ನನ್ನು ಸಾಯಿಸಿ, ಅಮ್ಮ, ಅಜ್ಜಿಯಿಂದ(ದೂರವಾಗಿದ್ದಾರೆ) ದೂರ ಮಾಡುತ್ತಾರೆ ಎಂದು ಹೆದರಿಸಿದಾಗ ದಿನಗಟ್ಟಲೆ ಅತ್ತಿದ್ದು,ಶಾಲೆ ಬಿಟ್ಟಾಕ್ಷಣ ಚೀಲವನ್ನು ಮಂಚದ ಮೇಲೆ ಎಸೆದು ಚಿಣ್ಣಿ ದಾಂಡು,ಲಗೋರಿ,ಗೋಲಿ,ಮರಕೋತಿ,ಸರಗೋಲು ಆಡಿದ್ದು, ನಂತರ ಕೈ ಕಾಲು ತೊಳೆದು ದೇವರ ಮುಂದೆ ಕುಳಿತು ಬರುವ ಒಂದೆರೆಡು ಶ್ಲೋಕಗಳನ್ನು ಹೇಳಿದ ನೆನಪುಗಳು ಹಾಗೇ ಇದೆ. ಇನ್ನು ಪೇಂಟ್ ಡಬ್ಬಿಯ ಮುಚ್ಚಳ ಕಂಡರೆ, ದೀಪಾವಳಿಯಲ್ಲಿ ಇದ್ದಿಲು ಕುಟ್ಟಿ, ಅದಕ್ಕೆ ಕಾಯಿ ಜುಂಗು ಹಾಕಿ ಮಾಡಿದ ಬೆಂಕಿಯ ಮಂಡಕ್ಕಿ ಪುರಿ ನೆನಪಿಗೆ ಬರುತ್ತದೆ.  ಇದೀಗ ಸ್ನೇಹಿತರೆಲ್ಲಾ ಒಳ್ಳೆಯ ಕೆಲಸಗಳಲ್ಲಿದ್ದಾರೆ. ಸಾಫ್ಟ್ ವೇರ್ನಲ್ಲಿ ಇದ್ದಾರೆ. ರಕ್ಷಣಾ ಪಡೆಗಳಲ್ಲಿದ್ದಾರೆ. ರಾಜಕಾರಣಿಗಳಾಗಿದ್ದಾರೆ, ಗುತ್ತಿಗೆದಾರರಾಗಿದ್ದಾರೆ. ಸಿಕ್ಕಾಗಲೆಲ್ಲಾ ಅದೇ ನೆನಪು ಮೆಲುಕು ಹಾಕುವುದು. ಯಡಿಯೂರಪ್ಪನವರ ಮಗ ವಿಜಯೇಂದ್ರ, ಆಗ ಅವರ ತಂದೆ ಪುರಸಭೆ ಅಧ್ಯಕ್ಷರು, ಗೋಲಿ ಆಡಲು ನಮ್ಮ ಮನೆಯಲ್ಲೇ ಇರುತ್ತಿದ್ದ, ಸಂಜೆಯಾಯಿತೆಂದರೆ ನಮ್ಮ ವಟಾರ ಸಣ್ಣ ಮೈದಾನ ಆಗುತ್ತಿತ್ತು. ವಿಜಯೇಂದ್ರ ರಾತ್ರಿಯಾದರೂ ನಮ್ಮ ಮನೆಯಲ್ಲೇ ಇರುತ್ತಿದ್ದ. ಈಗಲೂ ಎದುರಿಗೆ ಸಿಕ್ಕಾಗ ಅವನು ನೆನಪಿಸಿಕೊಳ್ಳುವುದು ಅದೇ ಗೋಲಿಯಾಟವನ್ನು.

ಇನ್ನು ಶಾಲೆಯ ದಿನಗಳ ಶಿಕ್ಷಕರು ಕೆಲವರು ಬದುಕಿದ್ದಾರೆ. ದೂರವಾದವರನ್ನು ನಾವೇ ಆಗಾಗ್ಗ ನೆನಪಿಸಿಕೊಳ್ಳುತ್ತೇವೆ. ಎದುರಿಗೆ ಸಿಕ್ಕಾಗ  ಮಣೆಯ ಮೇಲೆ ಕುಳಿತು ಪಾಠ ಕೇಳಿದ ದಿನಗಳು, ಅವರ ಬೆತ್ತದ ರುಚಿ ನೆನಸಿಕೊಂಡರೆ ತಾನಾಗಿಯೇ ಕೈ ಆ ಜಾಗಕ್ಕೆ ಹೋಗುತ್ತದೆ. ಲೇ ಅವಾಗೆಲ್ಲಾ ಏನು ತರಲೆನೋ ನೀನು ಎಂದಾಗ ನಮ್ಮಲ್ಲಿ ಏನೋ ಸಂತೋಷ, ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ. ಈ ರೀತಿಯ ಸಿಹಿ ನೆನಪುಗಳು ಎಲ್ಲರ ಜೀವನದಲ್ಲೂ ಇದ್ದೇ ಇರುತ್ತದೆ. ಈ ನೆನಪುಗಳೇ ಕೆಲವೊಮ್ಮೆ ನಮಗೆ ಬೇಸರವಾದಾಗ ಮತ್ತೆ ನಮ್ಮನ್ನು ಹುರಿದುಂಬಿಸುತ್ತದೆ ಎಂದರೆ ತಪ್ಪಾಗಲಾರದು.

 

Comments