ನಮ್ಮೂರಿಗೆ ಸಿ.ಎಂ ಹೀಗೆ ಬರ್ತಾರೆ

ನಮ್ಮೂರಿಗೆ ಸಿ.ಎಂ ಹೀಗೆ ಬರ್ತಾರೆ

ಶಿಕಾರಿಪುರಕ್ಕೆ ಹೆಲಿಕಾಪ್ಟರ್ ಅಂತ ಬಂದಿದ್ದು, ಇಂದಿರಾಗಾಂಧಿ ಪ್ರಧಾನ ಮಂತ್ರಿಯಾಗಿದ್ದಾಗ. ಆಗ ನಮ್ಮ ತಂದೆ ಅದನ್ನು ತೋರಿಸಲೆಂದು ಅಕ್ಕ,ಅಣ್ಣ, ನನ್ನನ್ನು ನಾಲ್ಕಾರು ಕಿ.ಮೀ ದೂರು ಕರೆದುಕೊಂಡು ಹೋಗಿ ತೋರಿಸಿದ್ದರು. ಆ ನಂತರ ಚುನಾವಣೆ ಸಂದರ್ಭದಲ್ಲಿ ವಿಜಯಮಲ್ಯ ತಂದಿದ್ದು, ಈಗಂತೂ ಹೆಲಿಕಾಪ್ಟರ್ ಎಂದರೆ, ಇಲ್ಲಿನ ಜನಕ್ಕೆ ಸಾಮಾನ್ಯವಾಗಿ ಬಿಟ್ಟಿದೆ. ಕಾರಣ ಶಿಕಾರಿಪುರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರು ಬರುವುದೇ ಹೆಲಿಕಾಪ್ಟರ್್ನಲ್ಲಿ. ವಾರಕ್ಕೊಮ್ಮೆ ಅಲ್ಲದಿದ್ದರೂ ತಿಂಗಳಿಗೆ ಎರಡು ಬಾರಿಯಾದರೂ ಬಂದೇ ಬರುತ್ತದೆ.

ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುವುದಕ್ಕೆ ಮುನ್ನ ಅಂದರೆ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾಗ ಅವರದೊಂದು ಅಂಬಾಸಿಡರ್ ಕಾರ್ ಸಿಕೆಆರ್ - 555 ಇತ್ತು. ಅದರಲ್ಲೇ ಅವರು ಊರುಗಳನ್ನು ಸುತ್ತುತ್ತಿದ್ದರು. ಅದು ಈಗಲೂ ಇದೆ. ಇದೀಗಲೂ ಅವರು ತಮ್ಮ ತೋಟದ ಮನೆಗೆ ಹೋಗಬೇಕಾದಾಗ ಅದೇ ಕಾರನ್ನೇ ಬಳಸುತ್ತಾರೆ. ಈಗ ಮನೆಮುಂದೆ ಅವರ ಸಾಕಷ್ಟು ವಾಹನಗಳು ಇರುತ್ತದೆ, ಅದು ಬಿಡಿ. ಆದರೆ ಇವರ ಹಲವು ವಾಹನಗಳಲ್ಲಿ 5 ಅಂತೂ ಕಾಣಸಿಗುತ್ತದೆ.ಲಕ್ಕಿ ನಂಬರ್ ಅಂತೆ.

ಇದೀಗ ಮುಖ್ಯಮಂತ್ರಿಗಳು, ರಸ್ತೆ ಮಾರ್ಗದಲ್ಲಿ ಬರುವುದು ಕಡಿಮೆಯಾಗಿದೆ. ಶಿಕಾರಿಪುರಕ್ಕೆ ಹೆಲಿಕಾಪ್ಟರ್ ಸಾಮಾನ್ಯವಾಗಿ ಬಿಟ್ಟಿದೆ. ಚಿಕ್ಕ ವಯಸ್ಸಿನಲ್ಲಿ ಎಲ್ಲೋ ಪ್ಲೇನಿನ ಸೌಂಡ್ ಬಂದರೆ, ಮನೆಯಿಂದ ಹೊರ ಬಂದು ಬಿಸಿಲಿನಲ್ಲೇ ಮೇಲೆ ನೋಡುತ್ತಿದ್ದೆವು. ಪ್ಲೇನ್ ಕಾಣುತ್ತಿತ್ತೋ ಇಲ್ಲವೋ ಸೀನಂತು ನಿಶ್ಚಿತವಾಗಿ ಬರುತ್ತಿತ್ತು. ಈಗ ಹೆಲಿಕಾಪ್ಟರ್ ಸೌಂಡ್ ಹತ್ತಿರದಲ್ಲೇ ಬಂದರೂ ಹೊರ ಬರುವುದಿರಲಿ, ನಿಂತ ಜಾಗದಿಂದ ಮೇಲೆ ನೋಡುವುದೂ ಇಲ್ಲ. ಏ ವಾರಕ್ಕೊಂದು ಸಾರಿ ಬರುತ್ತೆ ಬಿಡು ಅಂತಾರೆ ಜನ. ಇದಕ್ಕೆಂದೇ ಲಕ್ಷಾಂತರ ರೂಗಳನ್ನು ರುದ್ರಭೂಮಿ ಬಳಿ ಖರ್ಚು ಮಾಡಿ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಇವರು ಬಂದು ಇಳಿದ ನಂತರ ಅದು ಶಿವಮೊಗ್ಗ ಅಥವಾ ಬೆಂಗಳೂರಿಗೆ ಹಿಂತಿರುಗುತ್ತದೆ. ಈ ಸಮಯದಲ್ಲಿ ಶಿಕಾರಿಪುರದ ಎಷ್ಟೋ ಜನ ಹೆಲಿಕಾಪ್ಟರ್ ಹತ್ತುವ ಆಸೆ ತೀರಿಸಿಕೊಂಡಿದ್ದಾರೆ.

ಇದರ ಮುಂದೆ ಪೋಟೋ ತೆಗೆಸಿಕೊಳ್ಳುವವರ ಸಂಖ್ಯೆಯೂ ಕಡಿಮೆ ಇಲ್ಲ. ಬಹಿರಂಗ ಸಭೆ, ಮತ್ತಿತರೆ ವಿಶೇಷ ಕಾರ್ಯಕ್ರಮಗಳು ಇದ್ದಾಗ, ಪಟ್ಟಣದಲ್ಲಿ ಒಂದು ರೌಂಡ್ ಹಾಕಿಸಿ ಲ್ಯಾಂಡಿಂಗ್ ಮಾಡಲಾಗುತ್ತೆ.

ಪಾಪ ಪೊಲೀಸ್ನೋರಿಗೆ ಏನಪ್ಪಾ ತೊಂದರೆ ಅಂದರೆ, ಹೆಲಿಪ್ಯಾಡ್ ಪೂರ್ತಿಯಾಗಿ ಸಿಮೆಂಟ್ ನಿಂದ ಮಾಡಿರುವ ಕಾರಣ ಸುತ್ತಮುತ್ತಲಿನ ರೈತರು ಮೆಕ್ಕೆ ಜೋಳ, ಶುಂಠಿ ಹರವಿರುತ್ತಾರೆ. ಸಿ.ಎಂ ಬರ್ತಾ ಇದಾರೆ ಎಂದಾಗ ಕೆಲವೊಮ್ಮೆ  ಪೊಲೀಸ್ನೋರೆ ಟ್ರಾಕ್ಟರ್್ಗೆ ತುಂಬಿದ್ದೂ ಇದೆ. ಅಂತೂ ಶಿಕಾರಿಪುರಕ್ಕೆ ಹೆಲಿಕಾಪ್ಟರ್ ಕಾಮನ್ ಆಗಿದೆ.

Comments