ಗೆಳೆಯ ಮತ್ತೆ ಹುಟ್ಟಿ ಬಾ

ಗೆಳೆಯ ಮತ್ತೆ ಹುಟ್ಟಿ ಬಾ

ಸ್ನೇಹಿತರು ನೂರಾರು ಜನ ಇರುತ್ತಾರೆ. ಆದರೆ ಅದರಲ್ಲಿ ಆತ್ಮೀಯರು ಕೆಲವರು ಮಾತ್ರ. ನಮ್ಮ ಕಷ್ಟ, ಸುಖಗಳಲ್ಲಿ ಭಾಗಿಯಾಗುವವರು ಕೂಡ ಕೆಲವೇ ಮಂದಿ. ನನ್ನ ವೃತ್ತಿ ಜೀವನದಲ್ಲಿ ಮೊದಲು ಪರಿಚಿತನಾದವನು ಗಿಡ್ಡಪ್ಪ. ಈತನ ಮತ್ತು ನನ್ನ ಸ್ನೇಹ 10ವರ್ಷಕ್ಕೂ ಹೆಚ್ಚು. ಹಲವರು ನಮ್ಮಿಬ್ಬರನ್ನು ನೋಡಿ ಹೊಟ್ಟೆಕಿಚ್ಚು ಪಟ್ಟಿದ್ದು ಉಂಟು. ನಮ್ಮಿಬ್ಬರ ಸ್ನೇಹದಲ್ಲಿ ಜಾತಿಯ ಬೇಧ ಭಾವ ಇರಲಿಲ್ಲ. ಹಣಕಾಸಿನ ತಾರತಮ್ಯವರಿಲಿಲ್ಲ. ವೃತ್ತಿಯಿಂದ ಹೊರೆತಾಗಿತ್ತು. ಇಂತಹ ಜೀವದ ಗೆಳೆಯ ನಮ್ಮನ್ನೆಲ್ಲಾ ಬಿಟ್ಟು ಅಗಲಿದ್ದಾನೆ. ಇದು ನನ್ನ ಜೀವನದ ದೊಡ್ಡ ದುರಂತವಾಗಿದೆ. ನಿನ್ನೆಯ ದಿನ ಜೀವನದಲ್ಲಿ ಮರೆಯಲು ಅಸಾಧ್ಯವಾದ ದಿನವಾಗಿದೆ.

ಗೆಳೆಯ ನನ್ನನ್ನು ಬಿಟ್ಟು ದೂರ ಹೋಗಿದ್ದಾನೆ. ಮತ್ತೆ ಗಿಡ್ಡಪ್ಪನಂತಹ ಗೆಳೆಯರು ಸಿಗುತ್ತಾರೆ ಎನ್ನುವ ನಂಬಿಕೆ ಖಂಡಿತ ಇಲ್ಲ. ಈತ ತನ್ನ 12ನೇ ವಯಸ್ಸಿನಲ್ಲೇ ಪತ್ರಿಕೆಯನ್ನು ಹಂಚುತ್ತಿದ್ದನು. ನಂತರದ ದಿನಗಳಲ್ಲಿ ಸುದ್ದಿಗಳನ್ನು ಬರೆಯುವ ಮೂಲಕ ಪತ್ರಕರ್ತನಾದ. ಗಿಡ್ಡಪ್ಪ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಕಾರಣ ಈತನ ಪ್ರೀತಿಯ ಒಡನಾಟ. ಹಾಸ್ಯದ ಪ್ರವೃತ್ತಿ, ವೃತ್ತಿಯಲ್ಲಿ ಬಡಗಿಯಾಗಿದ್ದ , ಇತ್ತೀಚಿನ ದಿನಗಳಲ್ಲಿ ಪತ್ರಿಕೆಯಿಂದ ಹೊರಗುಳಿದಿದ್ದ. ಸಣ್ಣ ವಯಸ್ಸಿನಲ್ಲೇ ಅತಿ ಹೆಚ್ಚು ಜನರನ್ನು ಸಂಪಾದಿಸಿದ್ದ ಗಿಡ್ಡಪ್ಪ.

ಅಯ್ಯಪ್ಪಸ್ವಾಮಿಯ ಪರಮ ಭಕ್ತನಾಗಿದ್ದ. ಪ್ರತೀ ವರ್ಷ ಅಯ್ಯಪ್ಪ ದೇವರ ಪ್ರಸಾದ ನನಗೆಂದೇ ವಿಶೇಷವಾಗಿ ತರುತ್ತಿದ್ದ.  ನನ್ನ ಕಷ್ಟದ ದಿನಗಳಲ್ಲಿ ಆಸರೆಯಾಗಿದ್ದವನು ಇದೇ ಗಿಡ್ಡಪ್ಪ. ಆತ್ಮೀಯತೆಯಿಂದ ಗಿಡ್ಡ ಎಂದೇ ಕರೆಯುತ್ತಿದ್ದೆ. ಸಂಜೆ ಸಮಯದಲ್ಲಿ ಕನಿಷ್ಟ ಪಕ್ಷ ಅರ್ಧ ಗಂಟೆಯಾದರೂ ಮಾತನಾಡಿ ಮುಂದಿನ ಕಾರ್ಯಕ್ಕೆ ಹೋಗುತ್ತಿದ್ದೆವು.  ತಾಯಿ ಮತ್ತು ಗಿಡ್ಡಪ್ಪ ಪಟ್ಟಣದಲ್ಲೇ ವಾಸವಾಗಿದ್ದರು. ತಾಯಿಗೆ ಬ್ರೇನ್ ಹೆಮರೇಜ್ ಆಗಿದೆ. ಇವನ ದುಡಿಮೆಯಲ್ಲೇ ಜೀವನ ಸಾಗಿಸಬೇಕು. ಸಾಕಷ್ಟು ಕಷ್ಟಪಡುತ್ತಿದ್ದಂತಹ ವ್ಯಕ್ತಿ. ನನ್ನ ಜಮೀನಿನಲ್ಲಿ ಬೋರು ಹಾಕಿಸಿದ್ದೇನೆ ಸೂರಿ, ನಾನು ಇನ್ನು ಲೈಫಲ್ಲಿ ಸೆಟ್ಲಾಗುತ್ತಿದ್ದೇನೆ. ಮತ್ತೆ ನನ್ನ ಹಳ್ಳಿಗೆ ವಾಪಾಸ್ಸಾಗುತ್ತಿದ್ದೇನೆ ಎಂದು ಹೇಳಿದ್ದ. ನಾನು ನಿನ್ನೊಂದಿಗೆ ಬರುತ್ತೇನೆ ಎಂದು ತಮಾಷೆ ಮಾಡಿದ್ದೆ. ಇತ್ತೀಚೆಗೆ ಹೆಣ್ಣನ್ನು ನೋಡಿದ್ದ. ಅವನ ಸಾವಿನ ದಿನದ ಸಂಜೆ ಹೆಣ್ಣಿನ ಮನೆಯವರೊಂದಿಗೆ ಮಾತುಕತೆ ನಡೆಸಬೇಕಾಗಿತ್ತು. ಇನ್ನು ಅಲ್ಲಿ ಏನು ಅಘಾತವಾಗಿಉದೆಯೋ ಆ ದೇವರಿಗೆ ಗೊತ್ತು.

ಇವನಿಗಿದ್ದ ಕೆಟ್ಟ ಖಯಾಲಿಯೆಂದರೆ ಬೈಕನ್ನು ಅತಿ ಹೆಚ್ಚು ವೇಗವಾಗಿ ಓಡಿಸುವುದು. ಸಾಯುವ ಮುನ್ನಾ ದಿನ ಬಸ್ಟಾಂಡ್ ಹೋಟೆಲ್್ನಲ್ಲಿ ಕೂರಿಸಿಕೊಂಡು, ಇಷ್ಟೆಲ್ಲಾ ಸ್ಪೀಡಾಗಿ ಬೈಕ್ ಓಡಿಸಬೇಡ. ಇದೇ ನಿನ್ನ ಮೃತ್ಯುವಿಗೆ ಕಾರಣವಾಗುತ್ತದೆ ಎಂದಿದ್ದಕ್ಕೆ ಹಣೆಯಲ್ಲಿ ಇದ್ದಂತೆ ಆಗುತ್ತದೆ ಬಿಡು ಎಂದಿದ್ದ. ಮಾರನೆಯ ದಿನ ಬೆಳಗ್ಗೆ ಬೈಕ್ ನಲ್ಲಿ ತೆರಳುತ್ತಿದ್ದ ಗಿಡಪ್ಪ ಲಾರಿಯೊಂದಕ್ಕೆ ಡಿಕ್ಕಿ ಹೊಡೆದು ಮೃತನಾದ ಎನ್ನುವ ಸುದ್ದಿ ಬಂತು. ನಂಬಲು ಸಾಧ್ಯವಾಗಲಿಲ್ಲ. ದೇಹ ಲಾರಿಯ ಗಾಲಿಗೆ ಸಿಕ್ಕು ಛಿದ್ರಗೊಂಡಿತ್ತು. ಇವನೇ ಗಿಡ್ಡಪ್ಪನಾ ಎನ್ನುವಂತಿತ್ತು.

ಇದೀಗ ಜೀವದ ಗೆಳೆಯ ಇಲ್ಲ. ನಮ್ಮ ಮನೆಯಲ್ಲೂ ಸೂತಕದ ಛಾಯೆ ಆವರಿಸಿದೆ. ಗಿಡ್ಡಪ್ಪ ಇದೀಗ ಕೇವಲ ನೆನಪಾಗಿದ್ದಾನೆ ಮಾತ್ರ. ನನ್ನ ಮಗಳು, ಅಪ್ಪ ಗಿಡ್ಡಪ್ಪ ಅಂಕಲ್ ಯಾಕೆ ಬಂದಿಲ್ಲ ಎಂದು ಬೆಳಗ್ಗೆಯಿಂದ ಹತ್ತಾರು ಬಾರಿ ಕೇಳುತ್ತಲೇ ಇದ್ದಾಳೆ. ಮಾತುಬಾರದಂತಾಗಿದೆ. 

Comments