ನತದೃಷ್ಟ - ಕಥೆ.

ನತದೃಷ್ಟ - ಕಥೆ.

ಅಂದು ಅಮಾವಾಸ್ಯೆ. ಸಂಪೂರ್ಣ ಕತ್ತಲಾವರಿಸಿತ್ತು. ಜೊತೆಗೆ ಆ ಬೀದಿಯಲ್ಲಿ ವಿದ್ಯುತ್ ಬೇರೆ ಇರಲಿಲ್ಲ. ಆ ಬೀದಿಯ ತುದಿಯಲ್ಲೊಂದು ರುದ್ರಭೂಮಿ. ಅಲ್ಲಲ್ಲಿ ನಾಯಿಗಳು ಊಳಿಡುತ್ತಿದ್ದವು. ಆ ರುದ್ರಭೂಮಿಯ ಕೊನೆಯ ಸಮಾಧಿಯ ಮೇಲೆ ಒಬ್ಬ ಕುಳಿತಿದ್ದಾನೆ. ಅವನೇ ಕ್ಯಾತ.


ಕ್ಯಾತ ಬಡತನಕ್ಕೆ ಬಡತನ ಎಂಬುವಷ್ಟು ಬಡವ. ಅವನಿಗೆ ಯಾವಾಗಲಾದರೂ ಬೇಸರ ಬಂದಾಗ ಹೀಗೆ ರುದ್ರಭೂಮಿಗೆ ಬಂದು ಅಲ್ಲಿ ತನ್ನ ತಾಯಿಯ ಸಮಾಧಿಯ ಬಳಿ ಒಂದಷ್ಟು ಹೊತ್ತು ಕುಳಿತು ಅತ್ತು ನಂತರ ಹೊರಡುತ್ತಿದ್ದ. ಆ ರೀತಿ ಮಾಡುವುದರಿಂದ ಅವನಿಗೆ ಏನೋ ಸಮಾಧಾನ ಸಿಗುತ್ತಿತ್ತು. ಆದರೆ ಇಂದು ಕ್ಯಾತ ಮುಂಚಿಗಿಂತ ಹೆಚ್ಚು ಬೇಸರವಾಗಿದ್ದ, ಬಿಕ್ಕಿ ಬಿಕ್ಕಿ ಅಳುತ್ತಿದ್ದ. ಅವನ ನೋವಿಗೆ ಕಾರಣವಿಲ್ಲದಿರಲಿಲ್ಲ.


ಕ್ಯಾತ ಒಂದು ಭೀಕರ ಬಡ ಕುಟುಂಬದಲ್ಲಿ ಹುಟ್ಟಿದ ಹುಡುಗ. ಕ್ಯಾತನೊಟ್ಟಿಗೆ ಇಬ್ಬರು ಅಕ್ಕಂದಿರು. ತಾಯಿ ತಂದೆ ಅಕ್ಕಂದಿರು ಎಲ್ಲರೂ ಕಲ್ಲು ಒಡೆಯುವ ಕೂಲಿ ಕಾರ್ಮಿಕರು. ನಗರದ ಕೊನೆಯಲ್ಲಿದ್ದ ಸ್ಲಂ ಒಂದರಲ್ಲಿ ಅವರ ವಾಸವಾಗಿತ್ತು. ಕ್ಯಾತ ಬೆಳೆಯುತ್ತಾ ಬೆಳೆಯುತ್ತಾ ತನ್ನ ಬಡತನದ ಅರಿವಾಗತೊಡಗಿತು. ಅವರ ಸ್ಲಂ ಇಂದ ಸ್ವಲ್ಪ ದೂರದಲ್ಲೇ ಒಂದು ರೆಸಿಡೆನ್ಶಿಯಲ್ ಶಾಲೆಯಿತ್ತು. ಅಲ್ಲಿ ಓದುತ್ತಿದ್ದ ಮಕ್ಕಳೆಲ್ಲರೂ ಬಹುತೇಕ ಸಿರಿವಂತರ ಮಕ್ಕಳು. ಪ್ರತಿದಿನ ಅವರನ್ನು ನೋಡಿ ಕ್ಯಾತ ತಾನೂ ಅವರ ಹಾಗೆ ಶಾಲೆಗೆ ಹೋಗಬೇಕು ರಂಗು ರಂಗಿನ ಬಟ್ಟೆಗಳನ್ನು ತೊಡಬೇಕು, ಅವರ ಹಾಗೆ ಆಟಗಳನ್ನು ಆಡಬೇಕು, ವಿಧ ವಿಧವಾದ ತಿಂಡಿಗಳನ್ನು ತಿನ್ನಬೇಕು ಹೀಗೆ ಕನಸುಗಳ ಗೋಪುರವನ್ನು ಕಟ್ಟುತ್ತಿದ್ದ. ಒಮ್ಮೆ ತನ್ನ ತಾಯಿಯ ಬಳಿ ಅಮ್ಮ ನಮಗೇಕೆ ಈ ಬಡತನ, ನಮ್ಮ ಬಳಿ ಏಕೆ ಹಣವಿಲ್ಲ, ನನಗೂ ಶಾಲೆಗೆ ಹೋಗಬೇಕೆನಿಸುತ್ತಿದೆ ಎಂದಿದ್ದಕ್ಕೆ ಕ್ಯಾತನ ಬಳಿ ಅಳುವನ್ನು ಬಿಟ್ಟು ಬೇರೇನೂ ಉತ್ತರವಿರಲಿಲ್ಲ.


ಕ್ಯಾತನ ತಂದೆಗೆ ಇಲ್ಲದ ಚಟವಿರಲಿಲ್ಲ. ಒಮ್ಮೊಮ್ಮೆ ಕಂಠಪೂರ್ತಿ ಕುಡಿದು ಬಂದು ಮನೆಯಲ್ಲಿ ಹೆಂಡತಿ ಮಕ್ಕಳನ್ನು ಯದ್ವಾತದ್ವಾ ಹೊಡೆಯುತ್ತಿದ್ದ. ಆದರೆ ಕ್ಯಾತನನ್ನು ಮಾತ್ರ ಹೊಡೆಯುತ್ತಿರಲಿಲ್ಲ. ಅವನಿಗೆ ಕ್ಯಾತನ ಮೇಲೆ ಅದೇನೋ ಪ್ರೀತಿ, ಮಮತೆ. ಕ್ಯಾತ ಎಷ್ಟಾದರೂ ಗಂಡುಮಗ ನಾಳೆ ದುಡಿದು ನನ್ನನ್ನು ಸಾಕುತ್ತಾನೆ ಎಂಬ ಆಸೆಯೋ ಏನೋ ಒಟ್ಟಿನಲ್ಲಿ ಅವನನ್ನು ಹೊಡೆಯುತ್ತಿರಲಿಲ್ಲ.


ದಿನದಿನ ಅವರ ಬಡತನ ಹೆಚ್ಚುತ್ತಿತ್ತೇ ಹೊರತೂ ಕಡಿಮೆಯಾಗುತ್ತಿರಲಿಲ್ಲ. ಒಂದು ಹೊತ್ತು ತಿಂದರೆ ಇನ್ನೊಂದು ಹೊತ್ತು ಉಪವಾಸ, ಒಂದೊಂದು ದಿನ ಕ್ಯಾತನ ತಾಯಿ ಗಂಡ ಮಕ್ಕಳಿಗೆ ಹಾಕಿ ಸಾಲದೆ ತಾನು ಉಪವಾಸ ಮಲಗುತ್ತಿದ್ದರೆ ಒಂದೊಂದು ದಿನ ಇಡೀ ಕುಟುಂಬ ಉಪವಾಸ. ಆದರೆ ಕ್ಯಾತನ ತಂದೆ ಮಾತ್ರ ಇದ್ಯಾವುದರ ಅರಿವೇ ಇಲ್ಲದೆ ದಿನ ಬರುತ್ತಿದ್ದ ಕೂಲಿ ಹಣದಿಂದ ಕುಡಿದು ಬಂದು ಮಲಗುತ್ತಿದ್ದ. ಹೀಗಿರುವಾಗ ಒಂದು ದಿನ ರಾತ್ರಿ ಎಲ್ಲರೂ ಮಲಗಿದ್ದಾಗ ರಾತ್ರಿ ಭೀಕರ ಗಾಳಿ, ಸಿಡಿಲು ಗುಡುಗು ಸಹಿತ ಮಳೆ ಶುರುವಾಗಿ ಇವರಿದ್ದ ಮನೆಯ ಗೋಡೆ ಕುಸಿದುಬಿದ್ದು ಕ್ಯಾತನ ತಾಯಿ, ಹಾಗೂ ಇಬ್ಬರು ಅಕ್ಕಂದಿರು ಆ ಗೋಡೆಯ ಅಡಿ ಸಿಲುಕಿ ಸಾವನ್ನಪ್ಪಿದರು. ಬೆಳಿಗ್ಗೆ ಎದ್ದು ಕ್ಯಾತ ಕುಸಿದ ಗೋಡೆಯ ಮುಂದೆ ಕುಳಿತು ಅಳುತ್ತಿದ್ದರೆ ಕ್ಯಾತನ ತಂದೆ ಏನೂ ನಡೆದೇ ಇಲ್ಲವೆಂಬಂತೆ ಕುಡಿದ ಅಮಲಿನಲ್ಲಿ ಒಂದು ಬಗಲಿನಲ್ಲಿ ಮಲಗಿ ಏನೇನೋ ಗೊಣಗುತ್ತಿದ್ದ. ಆ ಸ್ಲಂ ನ ಅಕ್ಕಪಕ್ಕದ ಜನ ಬಂದು ಗೋಡೆಯನ್ನು ಸರಿಸಿ ಅದರ ಅಡಿಯಲ್ಲಿ ಸಿಲುಕಿದ್ದ ಶವವನ್ನು ಆಚೆ ತೆಗೆದು ಅಲ್ಲಿನ ಜನರೆ ಅಲ್ಪಸ್ವಲ್ಪ ಹಣ ಸೇರಿಸಿ ಮೂರು ಜನರ ಅಂತಿಮ ಸಂಸ್ಕಾರವನ್ನು ಮಾಡಿ ಮುಗಿಸಿದರು.


ಸ್ವಲ್ಪ ದಿನಗಳ ನಂತರ ಸರ್ಕಾರದಿಂದ ಪರಿಹಾರ ಧನದಲ್ಲಿ ಅದೇ ಜಾಗದಲ್ಲೆ ಸಣ್ಣ ಗೂಡೊಂದನು ಕಟ್ಟಿಕೊಂಡು ಕ್ಯಾತ ಆತನ ತಂದೆ ವಾಸಿಸಲು ಶುರು ಮಾಡಿದರು. ಈಗ ಕ್ಯಾತನಿಗೆ ಹದಿನೆಂಟು ವರ್ಷ, ಕ್ಯಾತನೂ ತನ್ನ ತಂದೆ ಜೊತೆಯಲ್ಲೇ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾನೆ. ಈಗ ಕ್ಯಾತನಿಗೆ ಕೈಗೆ ಸ್ವಲ್ಪ ಕಾಸು ಸಿಗುತ್ತದೆ ಅದರಿಂದ ಆಚೆ ತನಗೆ ಏನು ಬೇಕೋ ಅದು ತಿಂದು ಮಿಕ್ಕಿದ ಹಣವನ್ನು ಸಣ್ಣ ಡಬ್ಬಿಯೊಂದರಲ್ಲಿ ತನ್ನ ತಂದೆಗೆ ಗೊತ್ತಾಗದ ಹಾಗೆ ಕೂಡಿಡುತ್ತಿದ್ದಾನೆ. ಕ್ಯಾತನ ತಂದೆ ಮಾತ್ರ ದಿನ ದಿನ ಕೃಶವಾಗುತ್ತ ಜೀವಂತ ಶವದ ಹಾಗೆ ಸವೆಸುತ್ತಿದ್ದಾನೆ. ಒಂದೆರಡು ಬಾರಿ ಕ್ಯಾತ ತನ್ನ ತಂದೆ ಈ ಕುಡಿತದ ಚಟ ಬಿಡು ಎಂದು ಕೇಳಿದಾಗ ಹೊಡೆತವು ಬಿದ್ದಿದೆ. ಈಗ ಕ್ಯಾತನ ತಂದೆಗೆ ಮುಂಚಿನ ಹಾಗೆ ಕ್ಯಾತನ ಮೇಲೆ ಪ್ರೀತಿ ಇಲ್ಲ. ಬದಲಿಗೆ ತನಗೆ ದುಡ್ಡು ಸಿಗದ ಹಾಗೆ ಮಾಡುತ್ತಿದ್ದಾನೆ ಎಂಬ ಕೋಪ. ಹೀಗಿರಲು ಒಂದು ದಿನ ಕ್ಯಾತ ಸ್ವಲ್ಪ ತಡವಾಗಿ ಕೂಲಿಗೆ ಹೋದಾಗ ಅಲ್ಲಿ ಜೋರಾಗಿ ಜನ ಕಿರುಚಾಡುತ್ತಿರುವುದನ್ನು ನೋಡಿ ಜೋರಾಗಿ ಅಲ್ಲಿ ಹೋಗಿ ನೋಡಲು ಕ್ಯಾತನ ತಂದೆಯನ್ನು ಒಂದು ಮರಕ್ಕೆ ಕಟ್ಟಿ ಹಾಕಿ ಸುತ್ತ ನೆರೆದಿದ್ದ ಜನ ತಲೆಗೊಂದರಂತೆ ಹೊಡೆಯುತ್ತಿದ್ದರು. ತಕ್ಷಣ ಕ್ಯಾತ ಹೋಗಿ ಅದನ್ನು ನಿಲ್ಲಿಸಿ ನಡೆದದ್ದಾರೂ ಏನು ಎಂದು ವಿಚಾರಿಸಿದ್ದಕ್ಕೆ ದಿನ ಇಲ್ಲಿಂದ ಕಬ್ಬಿಣದ ಸಾಮಾನುಗಳನ್ನು ಕದಿಯುತ್ತಿದ್ದಾನೆ ನಿಮ್ಮಪ್ಪ ಎಂದು ಹೇಳಿದರು. ಕ್ಯಾತನಿಗೆ ಏನೂ ಮಾಡಲೂ ತೋಚದೆ ಅಲ್ಲಿ ನೆರೆದಿರುವರನ್ನು ಬೇಡಿಕೊಂಡು ತನ್ನ ತಂದೆಯನ್ನು ಬಿಡಿಸಿಕೊಂಡು ಮನೆಗೆ ಕರೆದುಕೊಂಡು ಬಂದನು.


ರಾತ್ರಿ ಬರೀ ಒಂದು ಲೋಟ ನೀರು ಕುಡಿದು ತನ್ನ ತಂದೆಗೆ ಆಚೆಯಿಂದ ಇಡ್ಲಿಯನ್ನು ತಂದು ತಿನ್ನಿಸಿ ಮಲಗಿಕೊಂಡ. ಬೆಳಿಗ್ಗೆ ಎದ್ದು ಪಕ್ಕದಲ್ಲಿ ನೋಡಿದರೆ ತನ್ನ ತಂದೆ ಇನ್ನೂ ಮಲಗಿರುವುದನ್ನು ನೋಡಿ ಬಹುಷ: ರಾತ್ರಿಯ ಹೊಡೆತದಿಂದ ಆಯಾಸವಾಗಿ ಮಲಗಿದ್ದಾನೆ ಎಂದುಕೊಂಡು ಆಚೆ ಹೋಗಿ ತಿನ್ನಲು ತಿಂಡಿ ತೆಗೆದುಕೊಂಡು ಬಂದು ಮುಖ ತೊಳೆದು ತನ್ನ ತಂದೆಯನ್ನು ಎಬ್ಬಿಸಲು ಮುಂದಾದಾಗ ಕ್ಯಾತನ ತಂದೆ ರಾತ್ರಿಯೇ ನಿದ್ದೆಯಲ್ಲಿಯೇ ಪ್ರಾಣ ಕಳೆದುಕೊಂಡಿರುವುದು ತಿಳಿಯುತ್ತದೆ. ಕ್ಯಾತನಿಗೆ ದಿಕ್ಕೇ ತೋಚದಂತಾಗುತ್ತದೆ. ಅಕ್ಕಪಕ್ಕದವರನ್ನು ಕರೆದು ತನ್ನ ಬಳಿ ಕೂಡಿಟ್ಟಿದ್ದ ಹಣದಲ್ಲಿ ತನ್ನ ತಾಯಿಯ ಸಮಾಧಿಯ ಪಕ್ಕದಲ್ಲೇ ತಂದೆಯನ್ನು ಹೂಳಿ ಅಲ್ಲೇ ತನ್ನ ತಾಯಿಯ ಸಮಾಧಿಯ ಮೇಲೆ ಕುಳಿತು ಅಳುತ್ತಿದ್ದಾನೆ. ತನ್ನ ಕಷ್ಟಗಳನ್ನು ನೆನೆದು ದೇವರನ್ನು ನಿಂದಿಸುತ್ತಾ ಮುಂದೇನೂ ಎಂದು ಯೋಚಿಸುತ್ತಾ ಹಾಗೆ ರುದ್ರಭೂಮಿಯಿಂದ ಆಚೆ ನಡೆದು ಬರುತ್ತಿದ್ದಾಗ ಮೂತ್ರ ವಿಸರ್ಜಿಸಲೆಂದು ಅಲ್ಲೇ ಒಂದು ಪೊದೆಯ ಪಕ್ಕಕ್ಕೆ ಹೋಗುತ್ತಾನೆ ಮೂತ್ರವಿಸರ್ಜಿಸಿ ಹೆಜ್ಜೆ ಎತ್ತಿ ಈ ಕಡೆ ಇಡುತ್ತಾನೆ. ಒಂದು ದಪ್ಪನೆಯ ಪ್ಲಾಸ್ಟಿಕ್ ಕವರೊಂದು ಕಾಲಿಗೆ ತಗುಲಿ ಅದೇನೆಂದು ತೆಗೆದು ನೋಡುತ್ತಾನೆ. ತನ್ನ ಕಣ್ಣನ್ನು ತಾನೆ ನಂಬಲು ಸಾಧ್ಯವಾಗುವುದಿಲ್ಲ. ಸಾವಿರ ರೂಪಾಯಿಯ ಕಂತೆಗಳು. ಅವನಿಗೆ ಅಷ್ಟು ಹಣ ಒಟ್ಟಿಗೆ ನೋಡಿ ಆಶ್ಚರ್ಯ ಭಯ ಎಲ್ಲ ಒಟ್ಟಿಗೆ ಆಗುತ್ತಿದೆ. ದೇವರೇ ಸಧ್ಯ ಇನ್ನು ನನ್ನ ಕಷ್ಟಗಳೆಲ್ಲ ಪರಿಹಾರವಾಯಿತು ಎಂದುಕೊಳ್ಳುವಷ್ಟರಲ್ಲಿ.............................


ಮಾರನೇ ದಿನ ದಿನಪತ್ರಿಕೆಯಲ್ಲಿ ಮುಖ್ಯಾಂಶ ಹೀಗಿರುತ್ತದೆ. "ನಗರದ ಪ್ರತಿಷ್ಟಿತ ಬ್ಯಾಂಕೊಂದರಲ್ಲಿ ದರೋಡೆ, ದರೋಡೆಕೋರ ಹಣದ ಚೀಲದೊಂದಿಗೆ ಪರಾರಿಯಾಗುತ್ತಿದ್ದಾಗ ಹಾವು ಕಡಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ"

Comments