ಗೂಗಲ್ ಕ್ರೋಮ್ಬುಕ್
ಗೂಗಲ್ ಕ್ರೋಮ್ಬುಕ್
ಗೂಗಲ್ ತನ್ನದೇ ಆದ ಆಪರೇಟಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ ವಿಷಯ ಹಳೆಯದು.ಈಗದು ಸಿದ್ಧವಾಗಿದೆ.ಅಷ್ಟೇ ಅಲ್ಲ,ಅದನ್ನು ಅಳವಡಿಸಿದ,ಲ್ಯಾಪ್ಟಾಪ್ ಸಾಧನವನ್ನೂ ಗೂಗಲ್ ಕ್ರೋಮ್ಬುಕ್ ಎನ್ನುವ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.ಏಸರ್ ಮತ್ತು ಸ್ಯಾಮ್ಸಂಗ್ ಕಂಪೆನಿಗಳು ಈ ಲ್ಯಾಪ್ಟಾಪ್ ತಯಾರಿಸಿವೆ.ಎರಡು ನಮೂನೆಯ ಕ್ರೋಮ್ಬುಕ್ಗಳು ಲಭ್ಯ.ಕಡಿಮೆಯೆಂದರೆ ಮುನ್ನೂರೈವತ್ತು ಡಾಲರು ಬೆಲೆ.ಜೂನ್ ಮಧ್ಯಭಾಗದಿಂದ ಮಾರುಕಟ್ಟೆಯಲ್ಲೂ ಲಭ್ಯವಾಗುವ ನಿರೀಕ್ಷೆಯಿದೆ.ತ್ರೀಜಿ ಸಜ್ಜಿತ ಕ್ರೋಮ್ಬುಕ್ ಕೂಡಾ ಮಾರುಕಟ್ಟೇಯಲ್ಲಿ ಸಿಗುವ
ನಿರೀಕ್ಷೆಯಿದೆ.ಕ್ರೋಮ್ಬುಕ್ನ ವಿಶೇಷತೆಯೆಂದರೆ,ಇದನ್ನು ಬಳಕೆ ಮಾಡುವುದು ಬಹು ಸುಲಭ.ಕ್ರೋಮ್ಬುಕ್ನಲ್ಲಿ ಬ್ರೌಸರ್ ಹೊರತು ಇತರ ಯಾವುದೇ ತಂತ್ರಾಂಶ ಇರದು.ಕ್ರೋಮ್ಬುಕ್ ಏಳೆಂಟು ಸೆಕೆಂಡುಗಳಲ್ಲಿ ಬೂಟ್ ಆಗಿ,ಅಂತರ್ಜಾಲಕ್ಕೆ ಸಂಪರ್ಕ ಹೊಂದುತ್ತದೆ.ಎಲ್ಲಾ ಕೆಲಸಗಳಿಗೆ ಅಂತರ್ಜಾಲದಲ್ಲಿ ಲಭ್ಯವಿರುವ ತಂತ್ರಾಂಶಗಳನ್ನು ಬಳಸುವುದು ಕ್ರೋಮ್ಬುಕ್ನಲ್ಲಿ ಬಳಸಲಾಗಿರುವ ಮಾದರಿ.ಕ್ಲೌಡ್ಕಂಪ್ಯೂಂಟಿಂಗ್ ಆಧಾರಿತ ಸಾಧನವಾಗಿರುವ ಕ್ರೋಮ್ಬುಕ್,ಬಳಸುವುದು ಜನಸಾಮಾನ್ಯರಿಗೂ ಸುಲಭ ಸಾಧ್ಯ.ಕಂಪ್ಯೂಟರ್ ಬಳಸುವುದು ಗೋಜಲಾಗದೆ,ಸರಳೀಕೃತವಾಗಿದೆ ಎಂದು ಗೂಗಲ್ ಭಾವನೆ.ಯು ಎಸ್ ಬಿ ಸಾಧನಗಳನ್ನು ಸಂಪರ್ಕಿಸಿದಾಗ,ಕ್ರೋಮ್ಬುಕ್ ಅದನ್ನು ಗುರುತಿಸುವ ಸಾಮರ್ಥ್ಯ ಹೊಂದಿದೆ.ಕಡತಗಳ ವಿಲೇವಾರಿಗೂ ಅದರಲ್ಲಿ ಸವಲತ್ತಿದೆ.ಮೈಕ್ರೋಸಾಫ್ಟ್ ಕಂಪೆನಿಗೆ ಗೂಗಲ್ ಒಡ್ಡಿರುವ ಸವಾಲಿದು.ಜನಸಾಮಾನ್ಯರು ಯಾವ ಕಡೆ ವಾಲುತ್ತಾರೆ ಎನ್ನುವುದು ಕುತೂಹಲದ ವಿಷಯ.
---------------------------------------------------
ಸ್ಕೈಪ್ ಈಗ ಮೈಕ್ರೋಸಾಫ್ಟ್ ಬಗಲಲ್ಲಿ
ಸ್ಕೈಪ್ ಎನ್ನುವ ಸೇವೆಯ ಮೂಲಕ ಕರೆಗಳನ್ನು ಮಾಡುವ ಮಿಲಿಯಗಟ್ಟಲೆ ಬಳಕೆದಾರರಿದ್ದಾರೆ.ಅಂತರ್ಜಾಲ ಮೂಲಕ ಕಂಪ್ಯೂಟರ್ನಿಂದ ಕಂಪ್ಯೂಟರಿಗೆ,ಮೊಬೈಲಿಗೆ ಅಥವಾ ಲ್ಯಾಂಡ್ಲೈನಿಗೆ ಕರೆಗಳನ್ನು ಮಾಡುವುದು ಸಾಧ್ಯ.ಮೈಕ್ರೋಸಾಫ್ಟ್ ಇನ್ನು ತನ್ನ ಔಟ್ಲುಕ್,ಹಾಟ್ಮೈಲ್,ಎಕ್ಸ್ಬಾಕ್ಸ್ ಮುಂತಾದವುಗಳ ಜತೆಗೂ ಸ್ಕೈಪ್ ಬಳಕೆಯನ್ನು ಸಾಧ್ಯವಾಗಿಸುವ ಬದಲಾವನೆ ತರಬಹುದು.ಸ್ಕೈಪಿನ ಮಿಲಿಯಗಟ್ತಲೆ ಬಳಕೆದಾರರನ್ನು ಅಸಮಾಧಾನಕ್ಕೀಡು ಮಾಡದೆ,ಅವರಿಗೆ ಸ್ಕೈಪನ್ನು ಹಿಂದಿನಂತೆಯೇ ಬಳಸಲು ಬಿಡುವುದರಲ್ಲಿ ಮೈಕ್ರೊಸಾಫ್ಟಿನ ಯಶಸ್ಸು ಅಡಗಿದೆ ಎಂದು ತಜ್ಞರ ಅನಿಸಿಕೆ. ಇ-ಬೇ ಎನ್ನುವ ತಾಣದ ಸ್ವತ್ತನ್ನು ಈಗ ಮೈಕ್ರೋಸಾಫ್ಟ್ ಖರೀದಿಸುವುದರಲ್ಲಿದೆ.ಬೆಲೆ ಎಂಟೂವರೆ ಬಿಲಿಯನ್ ಡಾಲರುಗಳು.ಗೂಗಲ್ ಕೂಡಾ ಒಂದೊಮ್ಮೆ ಸ್ಕೈಪನ್ನು ಖರೀದಿಸುವ ಉದ್ದೇಶ ಹೊಂದಿತ್ತು.ಕೊನೆಗೆ,ಸ್ಕೈಪಿನ ಕಡತ ವಿನಿಮಯ ಸೇವೆಯು ಅದಕ್ಕಡ್ಡಿಯಾಯಿತು.ಈ ಸೇವೆಯು ಗೂಗಲ್ನ ಕ್ಲೌಡ್ ಕಂಪ್ಯೂಂಟಿಂಗ್ ಮಾದರಿಗೆ ಹೊಂದಿಕೆಯಾಗುತ್ತಿರಲಿಲ್ಲ.ಮಾತ್ರವಲ್ಲ,ತನ್ನ ಲಕ್ಷಾಂತರ ಬಳಕೆದಾರರು ಸ್ಕೈಪನ್ನು ಈಗಾಗಲೇ ಬಳಸುತ್ತಿರುವಾಗ,ಅದನ್ನು ಖರೀದಿಸಿ,ತನ್ನದಾಗಿಸಿ ಸಾಧಿಸುವುದೇನನ್ನು ಎನ್ನುವುದು ಗೂಗಲ್ ಕಂಪೆನಿಯ ಮುಂದೆದ್ದ ಪ್ರಶ್ನೆಯಾಗಿತ್ತು.
--------------------------------------------
ನಡಿಗೆ:ದಾಖಲೆ ನಿರ್ಮಿಸಿದ ರೊಬೋಟ್
ಕೋರ್ನೆಲ್ ರೇಂಜರ್ ಎಂಬ ರೊಬೋಟ್ ನಲುವತ್ತೂವರೆ ಮೈಲು ದೂರವನ್ನು ಕ್ರಮಿಸಿ ದಾಖಲೆ ನಿರ್ಮಿಸಿದೆ.ಸತತ ನಡಿಗೆಯ ಮೂಲಕ ಈ ದೂರವನ್ನು ಕ್ರಮಿಸಿದ್ದು ಒಂದು ದಾಖಲೆ.ಈ ಅವಧಿಯಲ್ಲಿ ಅದನ್ನು ಯಾರು ಮುಟ್ಟಲೂ ಇಲ್ಲ.ಅದರ ಬ್ಯಾಟರಿ ರಿಚಾರ್ಜ್ ಮಾಡುವ ಅವಶ್ಯಕತೆಯೂ ಬರಲಿಲ್ಲವೆನ್ನುವುದು ಬಹುಮುಖ್ಯ ವಿಷಯವಾಗಿದೆ.ಮನುಷ್ಯನಷ್ಟೇ ಗಾತ್ರದ ಇದು,ನಡಿಗೆಯನ್ನು ನಾಲ್ಕು ಕಾಲಿನಲ್ಲಿ ಮಾಡುವಂತೆ ರಚಿಸಲಾಗಿದೆ.ಕೋರ್ನೆಲ್ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿ ಪಡಿಸಿದ,ರೊಬೋಟ್,ಸ್ಟೇಡಿಯಂ ಒಂದನ್ನು ಸುತ್ತಿಸಿ,ಈ ದೂರ ಕ್ರಮಿಸುವಂತೆ ಮಾಡಲಾಯಿತು.ನಡಿಗೆಯ ಅಂತ್ಯ ಆಗುವುದರಲ್ಲಿ ರೊಬೋಟ್ ನಲುವತ್ತೂವರೆ ಮೈಲು ದೂರವನ್ನೇ ಕ್ರಮಿಸಿ,ಹಿಂದಿನ ದಾಖಲೆಯನ್ನು ಅಳಿಸಿಹಾಕಿತು.ಸುಮಾರು ಮುವತ್ತೊಂದು ಗಂಟೆಯ ನಡಿಗೆಯ ನಂತರ ಈ ದೂರ ಕ್ರಮಿಸಲದಕ್ಕೆ ಸಾಧ್ಯವಾಯಿತು.ಹಿಂದೆ ಜಪಾನ್ನಲ್ಲಿ ರೊಬೋಟ್ ಮ್ಯಾರಥಾನ ಓಟದಲ್ಲೂ ರೊಬೋಟುಗಳು ದಾಖಲೆ ದೂರ ಕ್ರಮಿಸಿದ್ದರೂ ಅಲ್ಲಿ,ಅವುಗಳನ್ನು ಪದೇ ಪದೇ ರಿಚಾರ್ಜ್ ಮಾಡಲಾಗಿತ್ತು.ರೊಬೋಟ್ ತೂಕ ಇಪ್ಪತ್ತೆರಡು ಪೌಂಡ್,ಅದರಲ್ಲಿ ಆರು ಆನ್ಬೋರ್ಡ್ಕಂಪ್ಯೂಟರುಗಳನ್ನು ಬಳಸಲಾಗಿದೆ.ರೊಬೋಟಿನ ದಕ್ಷತೆಗೆ ಮುಖ್ಯ ಕಾರಣ ಅದರ ವಿನ್ಯಾಸ.ಅದರಲ್ಲಿ ಬಳಸಿದ ನವೀನ ಇಲೆಕ್ಟ್ರಾನಿಕ್ಸ್ ತಾಂತ್ರಿಕತೆ ಮತ್ತು ಅದರ ಕ್ರಮವಿಧಿಯೂ ಹದಿನಾರು ವ್ಯಾಟ್ ಬಳಸಿ ಓಡುವ ರೊಬೋಟಿನ ದಕ್ಷತೆಗೆ ಕಾರಣವಾಗಿದೆ.
-----------------------------------------
ಕ್ಲಾಸಿನಲ್ಲಿ ಮೌನ: ಚರ್ಚೆ
ತರಗತಿಯಲ್ಲಿ ಪದ್ಯವನ್ನು ವಿವರಿಸಿ,ವಿದ್ಯಾರ್ಥಿಗಳ ಜತೆ ಅದರ ಬಗ್ಗೆ ಚರ್ಚಿಸಲು ಟ್ವಿಟರ್ ಬಳಸಿದ ಕಾರಣ,ಮಾತಿಲ್ಲದೆ ಪದ್ಯದ ಬಗ್ಗೆ ಚರ್ಚೆ ಸಾಧ್ಯವಾಯಿತು.ಈ ನವೀನ ಪ್ರಯೋಗ ನಡೆದದ್ದು ಅಯೋವಾ ವಿವಿಯ ತರಗತಿಯಲ್ಲಿ.ವಿದ್ಯಾರ್ಥಿಗಳು ಟ್ವಿಟರ್ ಸಂದೇಶಗಳ ಮುಖಾಂತರ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ಕಾರಣ,ತರಗತಿಯಲ್ಲಿ ಚರ್ಚೆ ಗದ್ದಲವೆಬ್ಬಿಸಲಿಲ್ಲ.ಪ್ರತಿಯೊಬ್ಬರೂ ತಮಗನಿಸಿದ್ದನ್ನು ಹೇಳಲು,ಇತರರಿಗೆ ತಿಳಿಯ ಪಡಿಸಲು ಸಾಧ್ಯವಾಯಿತು.ಓರ್ವನೇ ಹೆಚ್ಚು ಗಮನ ಸೆಳೆಯುವ ತೊಂದರೆಯೂ ತಪ್ಪಿತು.ವಿದ್ಯಾರ್ಥಿಗಳು ಕೈಯೆತ್ತದೆ ಪ್ರಶ್ನೆಗಳನ್ನೂ ಕೇಳಲು,ಟ್ವಿಟರನ್ನೇ ಬಳಸಿದ್ದರು.ಟ್ವಿಟರಿನಂತಹ ತಾಣಗಳು ಲೈವ್ ಪಟ್ಟಾಂಗ ಅಥವಾ ವಿಚಾರ ವಿನಿಮಯಕ್ಕೆ ಅವಕಾಶ ನೀಡುವ ಕಾರಣ,ಇದನ್ನು ಇಷ್ಟ ಪಡುವ ಶಿಕ್ಷಕರು ಹೆಚ್ಚುತ್ತಿದ್ದು,ತರಗತಿಯಲ್ಲಿದನ್ನು ಬಳಸುವ ಪ್ರಯೋಗಗಳೂ ಹೆಚ್ಚುತ್ತಿವೆ.
---------------------------------
ಅಧಿಕ ಸ್ಪಷ್ಟತೆಯುಳ್ಳ ತೆರೆ
ಸ್ಯಾಮ್ಸಂಗ್ ಕಂಪೆನಿಯು ಈಗ ತನ್ನ ಮೊಬೈಲ್ ಸಾಧನಗಳಲ್ಲಿ ಬಳಸಲು ಸ್ಪಷ್ಟತೆಯ ತೆರೆಯನ್ನು ಅಭಿವೃದ್ಧಿ ಪಡಿಸಿದೆ.ಅದು 2560×1600 ಪಿಕ್ಸೆಲುಗಳ ತೆರೆಯು ಬಳಸುವ ವಿದ್ಯುಚ್ಛಕ್ತಿಯ ಪ್ರಮಾಣ ಬಹಳ ಕಡಿಮೆಯೆನ್ನುವುದು ಇನ್ನೊಂದು ಗಮನಾರ್ಹ ಅಂಶ.ಶೇಕಡಾ ನಲುವತ್ತರಷ್ಟು ಕಡಿಮೆ ಶಕ್ತಿ ಬಳಸುವ ಟ್ಯಾಬ್ಲೆಟ್ ಮತ್ತು ಸ್ಮಾರ್ಟ್ ಫೋನುಗಳಲ್ಲಿ ಬಳಸಬಹುದಾದ ತೆರೆಯು ಹೈಡೆಫಿನಿಶನ್ ಟಿವಿ ತೆರೆಯ ಕಾರ್ಯಕ್ಷಮತೆಯನ್ನು ಹೊಂದಿದೆ.ಇಂತಹ ತೆರೆಗಳಿಗೆ ಇತರ ಸ್ಮಾರ್ಟ್ಫೋನ್ ತಯಾರಕರೂ ಮುಗಿ ಬಿದ್ದರೆ,ಸ್ಯಾಮ್ಸಂಗ್ ದೊಡ್ಡ ಯಶಸ್ಸನ್ನು ಸಾಧಿಸೀತು.
---------
ತುಷಾರ:ವಾರ್ಷಿಕ ಚಂದಾ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಮಾಳದ ಡಾ.ನಿರಂಜನ್ ಚಿಪ್ಳೂಣ್ಕರ್,ಉಪಪ್ರಾಂಶುಪಾಲ,ಎನ್ ಎಮ್ ಎ ಎಂ ತಾಂತ್ರಿಕ ಮಹಾವಿದ್ಯಾಲಯ,ನಿಟ್ಟೆ.
(ಉತ್ತರಗಳನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS31 ನಮೂದಿಸಿ.)
*ಕನ್ನಡ ವಿಕಿಪೀಡಿಯಾದಲ್ಲಿ ಎಷ್ಟು ಬರಹಗಳಿವೆ? (ನೀವು ಸೇರಿಸಿದ ಬರಹ ಇದ್ದರೆ ಕೊಂಡಿ ನೀಡಿ.)
ಕಳೆದ ವಾರದ ಸರಿಯುತ್ತರ:
*ಕನ್ನಡ ನಿಘಂಟು ಲಭ್ಯವಿರುವ,ಅಂತರ್ಜಾಲ ತಾಣಗಳ ಎರಡು ಕೊಂಡಿಗಳು:http://kn.wiktionary.org,ಮತ್ತುhttp://www.baraha.com/kannada/. ಬಹುಮಾನ ಗೆದ್ದವರು ಕೆ ಎನ್ ಪರಾಂಜಪೆ,ಬೆಂಗಳೂರು. ಅಭಿನಂದನೆಗಳು.
Udayavani Unicode
Udayavani
*ಅಶೋಕ್ಕುಮಾರ್ ಎ
Comments
ಉ: ಗೂಗಲ್ ಕ್ರೋಮ್ಬುಕ್