ಮಜೆಸ್ಟಿಕ್ ನಲ್ಲೊಂದು ಸುತ್ತು

ಮಜೆಸ್ಟಿಕ್ ನಲ್ಲೊಂದು ಸುತ್ತು

ಎಷ್ಟೊಂದು ಜನ, ಎಷ್ಟೊಂದು ಜನ..ಅಬ್ಬಬ್ಬಾ ಎಷ್ಟು ರೀತಿಯ ಜನಗಳು, ಪರಿಚಿತರು ಕೆಲವರಾದರೆ ಅಪರಿಚಿತರು ಹಲವಾರು. ಕಪ್ಪು ಮುಖದ ಜನ, ಬಿಳಿ ಮುಖದ ಜನ, ಕೆಂಪು ಮುಖದ ಜನ, ಉದ್ದ ಜನ, ಕುಳ್ಳ ಜನ, ಸಣ್ಣ ಜನ, ದಪ್ಪ ಜನ, ಗಂಡಸರು, ಹೆಂಗಸರು, ಮಕ್ಕಳು, ವಯಾಸ್ಸದವರು, ಅಂಗವಿಕಲರು, ಧನವಂತರು, ಬಡವರು, ಮಂಗಳಮುಖಿಯರು, ನಿತ್ಯ ಸುಮಂಗಲಿಯರು, ಎಷ್ಟು ಜನ. ಎಲ್ಲೆಲ್ಲೂ ಜನ.
ಮೊಬೈಲ್ ಚಾರ್ಜೆರ್, ಇಯರ್ ಫೋನ್ ಮಾರುವವ ಕೊಳ್ಳುವವರಿಲ್ಲದೆ ಪಕ್ಕದಲ್ಲಿ ನಿಂತು ಬೀದಿ ಸೇದುತ್ತಿದ್ದಾನೆ, ಅಲ್ಲಿಂದ ಸ್ವಲ್ಪ ಮುಂದೆ ಬಂದರೆ ಒಂದು ಹೆಂಗಸು ಗಾಳಿ ದಿಂಬಿಗೆ ಗಾಳಿ ತುಂಬುತ್ತ ನಿಂತಿದ್ದ ವಯಸ್ಸಾದ ಗ್ರಾಹಕರೊಬ್ಬರಿಗೆ ಅದರ ಬೆಲೆಯನ್ನು ಹೇಳುತ್ತಿದ್ದಾಳೆ, ಹಾಗೆ ಮುಂದೆ ಬಂದರೆ ದೊಡ್ಡ ದೊಡ್ಡ ಸಿನಿಮಾ ಕಟೌಟ್ಗಳು, ಅದರ ಮುಂದೆ ನಿಂತು ಕೆಳಗಿಂದ ಮೇಲಕ್ಕೆ ನೋಡುತ್ತಿರುವ ಕೆಲವರು, ಹಾಗೆ ಮುಂದೆ ಬಂದರೆ ಆಟೋದವನ ಜೊತೆ ಜಗಳವಾಡುತ್ತಿರುವ ಪಂಜಾಬಿ ಮನುಷ್ಯ, ಅಲ್ಲಿಂದ ಮುಂದೆ ಬಂದರೆ ಬಾಯಿ ತುಂಬಾ ಪಾನ್ ಜಗಿಯುತ್ತಾ ಯಾರಾದರೂ ಗ್ರಾಹಕರು ಸಿಗುತ್ತಾರ ಎಂದು ವಾರೆ ನೋಟದಲ್ಲಿ ನೋಡುತ್ತಿರುವ ನಿತ್ಯ ಸುಮಂಗಲಿಯರು, ಮುಂದೆ ಬಂದರೆ ಎರಡೂ ಕೈ ಇಲ್ಲದ ವ್ಯಕ್ತಿಯೊಬ್ಬ ನೆಲದ ಮೇಲೆ ಪೇಪರ್ ಹಾಸಿಕೊಂಡು ತನ್ನ ಕಾಲಿಗೆ ಬಣ್ಣದ ಪೆನ್ (sketch pen ) ಸಿಗಿಸಿಕೊಂಡು ಭಾರತದ ಬಾವುಟದ ಚಿತ್ರ ಬಿಡಿಸುತ್ತಿದ್ದಾನೆ, ಪಕ್ಕದಲ್ಲಿ ನಿಂತಿದ್ದ ಒಂದಿಬ್ಬರು ೨೫ ಪೈಸೆ, ಐವತ್ತು ಪೈಸೆ ಹಾಕಿ ಮುಂದೆ ಹೋದರೆ ಇನ್ನು ಕೆಲವರು ಹಾಗೆ ಮುಂದೆ ಹೋದರು.
ಅಲ್ಲಿಂದ ಮುಂದೆ ಬಂದರೆ ಸಿಗ್ನಲ್ ಬಿದ್ದ ತಕ್ಷಣ ಕಾಯುತ್ತಿದ್ದ ಮಂಗಳ ಮುಖಿಯರು ನಿಂತಿದ್ದ ವಾಹನಗಳ ಬಂದು ಕೈ ಚಾಚಿ ಹಣ ಕೇಳುತ್ತಿದ್ದರೆ, ಕೆಲವರು ಕೊಟ್ಟರು ಕೆಲವರು ಮುಂದೆ ಹೋಗು ಎಂದರು. ಅಲ್ಲೇ ಪಕ್ಕದಲ್ಲಿ ಕಾಲೇಜ್ ಯುವಕ ಯುವತಿಯರು ಸಿನಿಮಾ ಮುಗಿಸಿಕೊಂಡು ಆಚೆ ಬರುತ್ತಿದ್ದಾರೆ, ನೆಲದ ಮೇಲೆ ಮೈ ಎಲ್ಲ ಕಜ್ಜಿ ಬಂದು ಒಬ್ಬ ಮನುಷ್ಯ ಮಲಗಿದ್ದಾನೆ,  ಅಲ್ಲೊಬ್ಬ ತಳ್ಳುವ ಗಾಡಿಯಲ್ಲಿ ಎಳನೀರು ಮಾರುತ್ತಿದ್ದರೆ ಅವನ ಪಕ್ಕದಲ್ಲಿ ಇನ್ನೊಬ್ಬ ಸೀಬೇಕಾಯಿ ಮಾರುತ್ತಿದ್ದಾನೆ. ಇನ್ನೊಬ್ಬ ಹೆಂಗಸು ನೆಲದ ಮೇಲೆ ಸಣ್ಣದೊಂದು ಯಂತ್ರವಿಟ್ಟುಕೊಂಡು ಮುಂದೆ ಕೂತಿದ್ದವನ ಕೈ ಮೇಲೆ ಅಮ್ಮ ಎಂದು ಹಚ್ಚೆ ಹಾಕುತ್ತಿದ್ದರೆ ಸುತ್ತ ಮೂರು ನಾಲ್ಕು ಜನ ನಿಂತು ನೋಡುತ್ತಿದ್ದಾರೆ. ಅಷ್ಟರಲ್ಲಿ ಸಿಗ್ನಲ್ ಜಂಪ್ ಮಾಡಿದ ಯುವಕನನ್ನು ಹಿಡಿದ ಪೋಲಿಸ್ ಒಬ್ಬ ಅವನಿಂದ ೫೦ ರೂ ತೆಗೆದುಕೊಂಡು ರಸೀದಿ ಇಲ್ಲದೆ ಅವನನ್ನು ಬಿಟ್ಟುಬಿಟ್ಟ. ಅಲ್ಲೊಬ್ಬ ಕುಡಿದು ಮೈ ಮೇಲೆ ಪ್ರಜ್ಞೆ ಇಲ್ಲದೆ ಮಲಗಿದ್ದಾನೆ, ಅವನ ಪಕ್ಕದಲ್ಲಿ ಬಂದ ಹೆಣ್ಣು ಮಕ್ಕಳು ಮೂಗಿಗೆ ಬಟ್ಟೆ ಅಡ್ಡ ಹಿಡಿದು ಮುಖ ಸಿಂಡರಿಸಿಕೊಂಡು ಬರುತ್ತಿದ್ದಾರೆ. ಮಳೆ ಬಂದು ನಿಂತಿದ್ದ ಕೊಚ್ಚೆ ನೀರನ್ನು ಹಾರಿಸಿದ ಬೈಕ್ ಸವಾರನಿಗೆ ಹಿರಿಯ ನಾಗರಿಕರೊಬ್ಬರು ಬೈಯ್ಯುತ್ತಿದ್ದರೆ.....
ಜನ ಜನ ಜನ ಎಷ್ಟೊಂದು ಜನ....

 

 

Rating
No votes yet

Comments