ಬೂಮರಾಂಗ್!
ಅದು ವಾರದ ದಿನವಾಗಿದ್ದರಿಂದ ಕಾಫಿ ಶಾಪ್ ಪ್ರಶಾಂತವಾಗಿತ್ತು. ಎಲ್ಲೋ ಅಲ್ಲೊಬ್ಬರು, ಇಲ್ಲೊಬ್ಬರು ಪ್ರೇಮಿಗಳು (ನಮ್ಮ ಹಾಗೆ) ಕುಳಿತು ಪಿಸುಗುಡುತ್ತಾ, ಕಿಲ ಕಿಲನೆ ನಗುತ್ತಿದ್ದರು. ಯಾವುದೋ ಮುದ್ದಾದ ಜೋಡಿಯೊಂದು ಕುಳಿತು ತದೇಕ ಚಿತ್ತರಾಗಿ ಚೆಸ್ ಆಡುತ್ತಿದ್ದರು. ಎಂಥಾ ಅರಸಿಕರು ಅಂದು ಕೊಂಡು ಸಿಗರೇಟನ್ನು ಅಸಹನೆಯಿಂದ ಆಷ್ ಟ್ರೇಗೆ ಚುಚ್ಚಿದೆ.
"ಯಾವೋಳ್ನ ನೋಡ್ತಾ ಇದ್ಯಾ" ನನ್ನವಳು ಕೆಣಕಿದಳು.
"ನಿಮ್ಮಕ್ಕನ್ನಾ" ತಣ್ಣಗೆ ಉತ್ತರಿಸಿದೆ
" ಅಯ್ಯೋ! ನಿನ್ನ ಮುಖಕ್ಕೆ ನಾನು ಸಿಕ್ಕಿದ್ದೇ ಹೆಚ್ಚು. ಸಧ್ಯ! ನಮ್ಮಪ್ಪಂಗೆ ನಾನೊಬ್ಬಳೇ ಮಗಳು" ಎಂದು ಅಬ್ಬರಿಸಿದಳು
"ಅದು ನಿಮ್ಮಪ್ಪನ ತಪ್ಪು ಕಣೆ, ನಾನೇನಾದ್ರೂ ನಿಮ್ಮಪ್ಪಂಗೆ ಹೇಳಿದ್ನಾ- ಒಂದೇ ಮಗು ದೇಶಕ್ಕೆ ನಗು ಅಂತಾ." ಹೊಸ ಸಿಗರೇಟಿಗೆ ಕಡ್ಡಿ ಕೊರೆದೆ
"ಥೂ ಪೋಲಿ, ಎಲ್ಲೋಗತ್ತೆ ನಿನ್ನ ಬುದ್ದಿ. ನಿನ್ನಂತೋನ್ನ ಕಟ್ಕೊಂಡು ನಾನು ಹೆಣಗ್ತಾ ಇರೋದೆ ಸಾಕು" ಎಂದಳು ಬಿಗುಮಾನದಿಂದ
"ಏನು? ನನ್ನ ಕಟ್ಕೊಂಡು ಹೆಣಗ್ತಾ ಇರೋದಾ? ಸಾಕು ಬಾಯ್ಮುಚ್ಚು, ನನ್ನಂಥಾ ಹುಡುಗಾ ಸಿಗಬೇಕು ಅಂದ್ರೆ ಸತೀ ಸಾವಿತ್ರಿ ವ್ರತ. ಭೀಮನ ಅಮಾವಾಸ್ಯೆ ವ್ರತ, ಶೋಲಾ ಶುಕ್ರವಾರ್ ಕಾ ಉಪವಾಸ ಎಲ್ಲಾ ಮಾಡಿರಬೇಕು"
" ಛೇ! ಛೇ! ನಾನು ಅದ್ಯಾವದೂ ಮಾಡ್ಲಿಲ್ಲಾ. ಮೊದ್ಲೇ ಗೊತ್ತಿದ್ರೆ ಮಾಡಬಹುದಿತ್ತು. ಆಗ್ಲಾದ್ರೂ ಬಂಗಾರದಂಥಾ ಹುಡುಗ ಸಿಗುತಿದ್ನೋ ಏನೋ?"
ಇಲ್ಲಿಗೆ ನಾನು ಸುಮ್ಮನಾದೆ. ಇಂಥಾ ಕಹಳೆ ಬಾಯಿನ ಬಿತ್ರಿ ಹತ್ರ ಮಾತಾಡಿ ಜಯಸಿಕೊಳ್ಳೋದು ಯಾರಿಂದಲೂ ಸಾಧ್ಯವಿಲ್ಲ.
ಮತ್ತೆ ಅವಳೇ ಪ್ರಾರಂಭಿಸಿದಳು
" ಮೊನ್ನೆ ನನ್ನ ಬರ್ಥಡೇ ದಿನಾ, ನೀನು ನನಗೊಂದು ಪ್ರಾಮಿಸ್ ಮಾಡಿದ್ದೆ ನೆನಪಿದ್ಯಾ"
" ದೇವರಾಣೆಗೂ ಇಲ್ಲ" ನಾನು ಪ್ರತೀಕಾರ ತೀರಿಸಿಕೊಂಡೆ
" ಆದರೆ ನನಗಿದೆ" ಅವಳೆಂದಳು
" ಸಂತೋಷ. ಅದೇನೂಂತಾ ಹೇಳಿದ್ರೆ ಕೇಳಿ ಖುಷಿ ಪಡಬಹುದಾಗಿತ್ತು" ಉತ್ತರಿಸಿದೆ
" ಖುಷಿ ಪಡೋಂತಹ ವಿಷಯ ಏನಲ್ಲ ಬಿಡು, ಹೇಳಿದ್ರೆ ನೀನು ಕೋಪ ಮಾಡ್ಕೊಬಾರದು " ಎಂದಳು .
"ಹಾಗಾದ್ರೆ ಹೇಳದಿದ್ರೆ ಒಳ್ಳೇದು" ನಾನೆಂದೆ .
"ಇಲ್ಲ ಇಲ್ಲ ನಾನು ಹೇಳಲೇ ಬೇಕು . ಆದ್ರೆ........ಪ್ಲೀಸ್ ನೀನು ಕೋಪ ಮಾಡ್ಕೊಬಾರದು........ಹಾಗಂತ ಪ್ರಾಮಿಸ್ ಮಾಡು"
"ಇಲ್ಲ"
" ಏನು ಇಲ್ಲಾ? ಕೋಪ ಮಾಡಿಕೊಳೋದಿಲ್ವಾ ಅಥವಾ ಪ್ರಾಮಿಸ್ ಮಾಡಲ್ಲವಾ?"
" ಕೋಪ ಮಾಡಿಕೊಳ್ಳೋದಿಲ್ಲ ಅಂತ ಪ್ರಾಮಿಸ್ ಮಾಡಲ್ಲ"
"ಪ್ಲೀಸ್ ...........ಕಣೋ, ನನಗೋಸ್ಕರ" ಗೋಗರೆದಳು
" ಸರಿ ಆಯಿತು, ಸಿಗರೆಟ್ ಬಿಡಬೇಕು ಅನ್ನೋದನ್ನ ಬಿಟ್ಟು ಬೇರೆ ಏನಾದ್ರೂ ಇದ್ರೆ ಬೊಗಳು"
"ಥೂ!!! ಎಷ್ಟು ಚೆನ್ನಾಗಿ ಅರ್ಥ ಮಾಡ್ಕೋತಿಯಾ"
"ಮತ್ತೆ, ನಾನು ಲೈಫ್ನಲ್ಲಿ ಸಿಗರೇಟು ಸೇದ್ದಷ್ಟು ನೀನು ನೀರು ಸೇದಿಲ್ಲ"
" ಇದಕ್ಕೇನು ಕಡಿಮೆ ಇಲ್ಲಾ, ನಿನ್ನನ್ನ ಬಿಟ್ಟು ಬಿಡು ಅಂತ ಹೇಳಲ್ಲ, ಸ್ವಲ್ಪ ಹೊತ್ತು ನಾನು ಕೇಳೋ ಪ್ರಶ್ನೆ ಉತ್ತರಿಸು ಸಾಕು"
( ಸರಿ ಶುರುವಾಯಿತು ಇವಳ ಪುರಾಣ ಅಂದು ಕೊಂಡೆ, ಒಲ್ಲದ ಮನಸ್ಸಿನಿಂದಲೇ ಒಪ್ಪಿದೆ)
" ನೀನು ಸಿಗರೇಟು ಸೇದೋದು ಯಾಕೆ?"
ಪೂರ್ವಪ್ರಕಾರದಂತೆ ಅದೇ ಹಳೆ ಸವಕಲು ಪ್ರಶ್ನೆಯಿಂದ ಸಂದರ್ಶನ ಶುರುವಾಯಿತು.
"ನೋಡು. ನಾನು ಸಿಗರೇಟು ಸೇದೋದು ಆತ್ಮ ಸಂತೋಷಕ್ಕೆ. ಒಂದು ಒಳ್ಳೆಯ ಮುಂಜಾವು, ಸುಂದರ ಸಂಜೆ, ಧೀರ್ಘ ಏಕಾಂತಗಳೆಲ್ಲಾ ಶ್ರೀಮಂತವಾಗುವುದು ಈ ಮೂರಿಂಚಿನ ಸಿಗರೆಟಿನಿಂದಲೇ" ನಾನು ಅನುಭವಸ್ಥನಂತೆ ಉತ್ತರಿಸಿದೆ.
" ಆಹಾ! ಕವಿ ಕವಿ" ನನ್ನವಳು ಮೆಚ್ಚುಗೆ ಸೂಚಿಸಿದಳು
" ಅದರಿಂದ ನಿನ್ನ ಅರೋಗ್ಯ ಹಾಳಾಗುತ್ತೆ. ಗೊತ್ತಿಲ್ವಾ " ಎರಡನೇ ಸವಕಲು ಪ್ರಶ್ನೆ ಉದ್ಭವಿಸಿತು
" ನೋಡು, ನಮ್ಮ ಹಣೆ ಮೇಲೆ ನಮ್ಮ ಆಯಸ್ಸು ಬರೆಯೋದು ಯಾರು? "
"ದೇವರಲ್ವಾ?"
"ಕರೆಕ್ಟ್! ಜುಜುಬಿ ಮೂರಿಂಚಿನ ಸಿಗರೇಟು ಅದನ್ನು ಕಡಿಮೆ ಮಾಡುತ್ತೆ ಅಂದರೆ, ಇದು ಆ ಭಗವಂತನಿಗಿಂತಾ ದೊಡ್ದದಾ?"
ಒಂದು ಸರಿ ಅವಳು ಕನ್ಪ್ಯೂಸ್ ಆದಳು
" ಅಂದ್ರೆ"
" ಅಂದರೆ, ನಾವು ಸಿಗರೇಟು ಸೇದಲಿ ಬಿಡಲಿ ನಮ್ಮ ಆಯಸ್ಸು ತೀರಿದ ತಕ್ಷಣ ನಾವು ಸತ್ತು ಹೋಗುತ್ತೀವಿ. ಅದಕ್ಕೆ ಈ ನಿಷ್ಪಾಪಿ ಸಿಗರೇಟನ್ನು ಯಾಕೆ ದೂರಬೇಕು" ಅವಳು ಸ್ವಲ್ಪ ಇಂಪ್ರೆಸ್ ಆದಂತೆ ಕಂಡು ಬಂತು
" ಆಯಸ್ಸು ತೀರಿದ ತಕ್ಷಣ ಸಾಯೋದು ಸರಿ, ಆದರೆ ಯಾವಾಗಲು " ಅನಾಯಾಸೇನ ಮರಣಂ, ವಿನಾ ದೈನ್ಯೇನ ಜೀವನಂ" ಅಂತಾ ನೀನೆ ಹೇಳ್ತಾ ಇರ್ತೀಯಲ್ಲಾ, ಸಿಗರೇಟಿನಿಂದ ಕ್ಯಾನ್ಸೆರ್ ಬರುತ್ತೆ, ಕ್ಯಾನ್ಸೆರ್ ಬಂದ್ರೆ ನಿನಗೆ ಅನಾಯಾಸ ಮರಣ, ವಿನಾ ದೈನ್ಯೇನ ಜೀವನ ಎರಡು ಸಿಗಲ್ಲ"
( ಪರವಾಗಿಲ್ಲವೇ ಅಂದು ಕೊಂಡೆ, ನನ್ನ ಜೊತೆ ಇದ್ದು ಇದ್ದೂ ಸಖತ್ ಟ್ರೈನ್ ಆಗಿದ್ದಾಳೆ ಅನ್ನಿಸಿತು)
ಒಮ್ಮೆ ಧೀರ್ಘವಾಗಿ --ನಿಟ್ಟುಸಿರೆಳೆದುಕೊಂಡು ಪ್ರಾರಂಭಿಸಿದೆ
" ನಿಜ. ಕರ್ಮ ಸಿದ್ದಾಂತದಲ್ಲಿ ನಂಬಿಕೆ ಇಟ್ಟಿರುವವನು ನಾನು, ಈ ಸಿಗರೇಟಿನಿಂದ ಆನಂದ ಪಡೆದುಕೊಂಡೆ ಅಂದರೆ ಅದನ್ನು ಮತ್ತೊಂದು ರೀತಿಯಲ್ಲಿ ತೀರಿಸಲೇ ಬೇಕು. ಅದಕ್ಕೇ ಅಲ್ಲವೇ ಪ್ರತೀ ದಿನ ಬೆಳಗ್ಗೆ ಮುಕ್ಕಾಲು ಘಂಟೆ ಟೆರೇಸ್ ನ ಮೇಲೆ ಬೆವರು ಸುರಿಸೋದು. ದಿನಕ್ಕೆ ನಾಲ್ಕೈದು ಲೀಟರ್ ನೀರು ಕುಡಿಯೋದು ಮತ್ತು ಯೋಗ ಪ್ರಾಣಾಯಾಮ ಮಾಡೋದು. ಇದರಿಂದ ಸಿಗರೇಟು ಎಫೆಕ್ಟ್ ಪುಲ್ಲು ಡೈಲ್ಯೂಟ್ ಆಗ್ಬಿಡುತ್ತೆ" ವಿವರಿಸಿದೆ
"ಸ್ಟ್ರೇಂಜ್" ಅವಳೊಮ್ಮೆ ಉದ್ಗರಿಸಿದಳು
ಮತ್ತೆ ನಾನೇ ಮುಂದುವರಿಸಿದೆ " ಬಲ್ಲವನೇ ಬಲ್ಲ ಬೆಲ್ಲದ ರುಚಿಯ ಅಂತಾ ದೊಡ್ಡೋರು ಸುಮ್ನೇ ಹೇಳಿಲ್ಲ. ನಡುರಾತ್ರಿ ಹೊತ್ತಲ್ಲಿ ಎದ್ದು ಆಕಾಶದಲ್ಲಿ ನಕ್ಷತ್ರ ಎಣಿಸುತ್ತಾ ಸಿಗರೇಟು ಎಳೆಯುತ್ತಿದ್ದರೆ. ಆ ಮೋಡಗಳ ಮಧ್ಯೆ ಇರುವ ತಾರೆಗಳು ಮತ್ತು ಹೊಗೆಯ ಮೋಡದ ಮಧ್ಯೆ ಇರುವ ನಾವು ಒಂದೇ ಎನ್ನಿಸಿಬಿಡುತ್ತೆ , ಶುದ್ದವಾದ ನಿಕೋಟಿನ್ ಎದೆಯ ತುಂಬೆಲ್ಲಾ ಹರಡಿಕೊಂಡು ಹೊರಗೆ ಬರುವಾಗ ಸಿಗುವ ಆನಂದ ಆಧ್ಯಾತ್ಮಿಕಕ್ಕೆ ಸಂಬಂಧಿಸಿದ್ದು, ಅದನ್ನು ಸಮಾಧಿ ಬ್ರಹ್ಮಾನಂದ ಎಂದೆಲ್ಲಾ ಕರೆಯುತ್ತಾರೆ, ಅದನ್ನು ಲೌಕಿಕ ಪದಗಳಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ" ಎಂದೆ. ಅವಳು ಕಣ್ಣರಳಿಸುತ್ತಾ ತದೇಕ ಚಿತ್ತಳಾಗಿ ಕೇಳಿಸಿಕೊೞುತ್ತಿದ್ದಳು
"ಗಿರೀಶ್ ರಾವ್ ಸಿಗರೇಟಿನ ಬಗ್ಗೆ ಬರೆದ ಪ್ರಬಂಧವನ್ನೊಮ್ಮೆ ಓದು, ಗೋಪಾಲ ಕೃಷ್ಣ ಅಡಿಗರ ಧೂಮಲೀಲೆ ಪದ್ಯವನ್ನೊಮ್ಮೆ ಓದು , ರವಿ ಬೆಳೆಗೆರೆಯ ಕಾದಂಬರಿಗಳಲ್ಲಿ ವರ್ಣಿಸಿರುವ ಧೂಮಾನಂದದ ಬಗ್ಗೆ ಒಮ್ಮೆ ತಿಳಿದುಕೊ,ಖಂಡಿತಾ ನೀನು ನಿನ್ನ ಅಭಿಪ್ರಾಯ ಬದಲಾಯಿಸಿ ಕೊೞುತ್ತೀಯಾ" ಎಂದು ನನ್ನ ವ್ಯಾಖ್ಯಾನದ ಜೊತೆ ಕೆಲವು ಪೂರಕ ಪಾಠಗಳನ್ನು ಸೂಚಿಸಿದೆ. ಒಮ್ಮೆ ಮೆಲ್ಲಗೆ ತಲೆಯಾಡಿಸಿದಳು
" ನೋಡು, ನಾವು ನೂರು ವರ್ಶ ಬದುಕಿರುತ್ತೇವೆ ಎನ್ನುವುದಕ್ಕೆ ಯಾವ ಭರವಸೆಯೂ ಇಲ್ಲ , ಈ ಮರುಕ್ಷಣವೇ ನಾವು ನೆಗೆದು ಬಿದ್ದು ಹೋಗಬಹುದು. ಹಾಗೆ ನೆಗೆದು ಬಿದ್ದು ಹೋಗುವ ಮುನ್ನ ನೀನು
೧)ರೋಟ್ಟಿಕ್ಕಲ್ ನ ಸೂರ್ಯೋದಯ ವಿಥ್ ಸಿಗರೇಟ್
೨) ಆಗುಂಬೆಯ ಸೂರ್ಯಾಸ್ತ ವಿಥ್ ಸಿಗರೇಟ್.
೩) ಬೆಳಗ್ಗೆ ೭ ಘಂಟೆಗೆ ಎಂ ಟಿ ಆರ್ ಕಾಫಿ ವಿಥ್ ಸಿಗರೇಟ್
೪) ಮಳೆಗಾಲದಲ್ಲಿ ಶೃಂಗೇರಿಯ ಹನುಮಾನ್ ಗುಂಡಿ, ಕುಂದಾದ್ರಿ ಪರ್ವತದಲ್ಲಿ ಸಿಗರೇಟು ಸೇದುತ್ತಾ ನೆನೆಯುವುದು
೫) ಮಲೆನಾಡಿನ ಬೇಸಿಗೆಯಲ್ಲಿ ಕಾಡಿನಲ್ಲೆ ಸುಮ್ಮನೇ ಕಾರಣವಿಲ್ಲದೇ ಸಿಗರೇಟು ಸುಡುತ್ತಾ ಅಲೆಯುವುದು
ಇದನ್ನೆಲ್ಲಾ ಮಾಡದಿದ್ದರೆ ಬದುಕಿಯೂ ಏನು ಪ್ರಯೋಜನ" ಎಂದೆ .ಅವಳು ಪ್ರಭಾವಿತಳಾದಂತೆ ಕಂಡುಬಂತು
ನನ್ನ ಲೈಟರನ್ನು ಒಮ್ಮೆ ಕೈಗೆತ್ತಿ ಕೊಂಡು ನೋಡಲಾರಂಭಿಸಿದಳು.
ಕಬ್ಬಿಣ ಕಾದಾಗಲೇ ಬಡಿಯಬೇಕು ಅಂದು ಕೊಂಡು ಮುಂದುವರೆಸಿದೆ
" ಇದರಿಂದ ಏನೂ ಪ್ರಯೋಜನ ಇಲ್ಲಾಂತ ತಿಳುದುಕೋ ಬೇಡ, ಇದರ ಪ್ರಯೋಜನಗಳ ಪಟ್ಟಿ ಕೇಳು
೧)ಸಿಗರೇಟು ಸೇದುವವರ ಹತ್ತಿರ ಸೊಳ್ಳೆ ಬರಲ್ಲ ( ಸದಾ ಹೊಗೆ ಇರುವುದರಿಂದ)
೨) ಮನೆಗೆ ಕಳ್ಳ ಬರಲ್ಲ ( ರಾತ್ರಿಯೆಲ್ಲಾ ಕೆಮ್ಮುತ್ತಾ ಇರುವುದರಿಂದ )
೩) ನಮಗೆ ಆಗದಿರುವವರನ್ನು ಅವಾಯ್ಡ್ ಮಾಡಮಹುದು ( ಬಾಯಿ ವಾಸನೆಯಿಂದ )
ಎಂದು ಉದಾಹರಣೆ ಸಹಿತ ವಿವರಿಸಿದೆ
" ಈ ಲೈಟರ್ ನಿಂದಾ" ಪ್ರಶ್ನಿಸಿದಳು
" ಯಾಕೆ? ಒರಿಜಿನಲ್ ZIPPO ನಮ್ಮಾ US ನಿಂದಾ ತರಿಸಿದ್ದು."
" ಮತ್ತೆ ಇದರ ಮೇಲೆ ನಿನ್ನ ಫ್ರೆಂಡ್ ಹೆಸರಿದೆ"
" ಅವನು ನನ್ನ ಪ್ರಾಣ ಸ್ನೇಹಿತ (ಪ್ರಾಣ ತೆಗೆಯಲು ಸದಾ ಕಾಯುತ್ತಿರುವವನು) ಅಲ್ವಾ ? ಅದಕ್ಕೆ ಅವನ ನೆನಪಿಗೆ ಅದನ್ನು ಕೆತ್ತಿಸಿದ್ದೀನಿ"
"ಹಾಗಾದ್ರೆ ನಾನೂ ಕೂಡ ಇಂಥಾದ್ದೊಂದು ತೊಗೊಂಡು ನಿನ್ನ ಹೆಸರು ಹಾಕಿಸಬೇಕು" ಅಂದಳು
"ಸರಿ, ಒಂದು ನಿಮಿಷ ಟಾಯ್ಲೆಟ್ ಹೋಗಿ ಬರ್ತೀನಿ" ಎಂದು ಎದ್ದು ಹೊರಟೆ
ಟಾಯ್ಲೆಟ್ ನಲ್ಲಿ ನನ್ನ ವಾಕ್ಚಾತುರ್ಯದ ಬಗ್ಗೆ ನನಗೇ ಹೆಮ್ಮೆ ಎನಿಸಿತು. ಇನ್ನು ಅವಳು ಜೀವನದಲ್ಲಿ ನನಗೆ ಸಿಗರೇಟು ಬಿಡುವಂತೆ ಹೇಳಲಾರಳು ಎಂದು ಕೊಂಡೆ.
ಇದ್ದಕ್ಕಿದ್ದ ಹಾಗೆ ಅವಳು ನನ್ನ ಲೈಟರ್ ಬಗ್ಗೆ ಮಾತನಾಡುತ್ತಾ ""ಹಾಗಾದ್ರೆ ನಾನೂ ಕೂಡ ಇಂಥಾದ್ದೊಂದು ತೊಗೊಂಡು ನಿನ್ನ ಹೆಸರು ಹಾಕಿಸಬೇಕು" ಅಂದಿದ್ದು ನೆನಪಾಯಿತು. ಅವಳು ಹಾಗೇಕೆಂದಳು ಅರ್ಥವಾಗಲಿಲ್ಲ. ಮನಸ್ಸು ಯಾವುದೋ ಕೇಡನ್ನು ಶಂಕಿಸಿತು. ಧಡಧಡನೆ ಎದ್ದು ಹೊರಗೆ ಬಂದರೆ
ಅವಳು ನನ್ನ ಪ್ಯಾಕಿನಿಂದ ಒಂದು ಸಿಗರೇಟು ಎಳೆದುಕೊಂಡು ಅದೇ ಲೈಟರಿನಿಂದ ಅಂಟಿಸಲು ಹರ ಸಾಹಸ ಪಡುತ್ತಿದ್ದಳು . ಸಿಕ್ಕಾಪಟ್ಟೆ ಕೆಮ್ಮು ಬರುತ್ತಿದ್ದರೂ ಅದನ್ನು ತಡೆಯಲು ಪ್ರಯತ್ನಿಸುತ್ತಿದ್ದಳು.ಕಣ್ಣು ಮೂಗೆಲ್ಲಾ ಕೆಂಪಾಗಿತ್ತು..ಹತ್ತಿರ ಹೋಗಿ ಕಿತ್ತು ಕೊಳ್ಳಲು ಪ್ರಯತ್ನಿಸಿದೆ ಅವಳು ಕೊಡಲಿಲ್ಲ
ಒಮ್ಮೆ ಕೂಗಾಡಿಬಿಟ್ಟೆ " ಏಯ್ ವಡ್ಡೀ, ಏನ್ ಮಾಡ್ತಾ ಇದ್ಯಾ? ನಿಂಗೇನು ಹುಚ್ಚು ಹಿಡಿದಿದ್ಯಾ"
"ಇಲ್ವಲ್ಲಾ" ಥಣ್ಣಗೆ ಉತ್ತರಿಸಿದಳು
" ಮತ್ತೆ ಸಿಗರೇಟು ಯಾಕೆ ಸೇದ್ತಾ ಇದ್ಯಾ" ಕೋಪದಿಂದ ಕೇಳಿದೆ
"ನಿನ್ನ ವರ್ಣನೆ ಕೇಳಿದ ಮೇಲೆ ಸೇದದೆ ಇರಕ್ಕೆ ಆಗಲೇ ಇಲ್ಲ. ಇದೂ ಒಂದು ಜೀವನಾನ ಅನ್ನಿಸಿಬಿಡ್ತು" ನನ್ನ ಮುಖಕ್ಕೆ ಹೊಗೆ ಉಗುಳುತ್ತಾ ಉತ್ತರಿಸಿದಳು
" ತಲೆ ಕೆಟ್ಟಿದ್ಯಾ ನಿಂಗೆ. ನಿನ್ನ ಆರೋಗ್ಯ ಏನಾಗುತ್ತೆ ಅಂತಾ ಯೋಚಿಸಿದ್ಯಾ" ನನಗರಿವಿಲ್ಲದಂತೆ ನನ್ನ ಬಾಯಿಂದ ಮಾತು ಹೊರಬಂತು
ನನ್ನನ್ನೊಮ್ಮೆ ನೋಡಿ ವ್ಯಂಗ್ಯದ ನಗೆ ನಕ್ಕಳು "ಈ ಸಿಗರೇಟಿನಿಂದ ಆನಂದ ಪಡೆದುಕೊಂಡೆ ಅಂದರೆ ಅದನ್ನು ಮತ್ತೊಂದು ರೀತಿಯಲ್ಲಿ ತೀರಿಸಲೇ ಬೇಕು. SO ನಾನೂ ಕೂಡ ಇನ್ಮೇಲಿಂದ ಮುಕ್ಕಾಲು ಘಂಟೆ ಯೋಗ, ಪ್ರಾಣಾಯಾಮ ದಿನಕ್ಕೆ ನಾಲ್ಕೈದು ಲೀಟರ್ ನೀರು ಕುಡಿಯೋದು, ಎಲ್ಲಾ ಮಾಡಬೇಕು ಅಂದು ಕೊಂಡಿದ್ದೀನಿ. ಆಗ ಸಿಗರೇಟು ಎಫೆಕ್ಟ್ ಎಲ್ಲಾ ಡೈಲ್ಯೂಟ್ ಆಗಿ ಬಿಡುತ್ತೆ. ಇಷ್ಟಕ್ಕೂ, ನಾವು ಸಿಗರೇಟು ಸೇದಲಿ ಬಿಡಲಿ ನಮ್ಮ ಆಯಸ್ಸು ತೀರಿದ ತಕ್ಷಣ ನಾವು ಸತ್ತು ಹೋಗುತ್ತೀವಿ. ಅದಕ್ಕೆ ಈ ನಿಷ್ಪಾಪಿ ಸಿಗರೇಟನ್ನು ಯಾಕೆ ದೂರಬೇಕು" ಅಂತಾ ನೀನೆ ಹೇಳಿದಯಲ್ಲ
ಅಸಹಾಯಕತೆಯಿಂದ ಮೈ ಪರಚಿಕೊಳ್ಳುವಂತಾಯಿತು. ನಮ್ಮಮ್ಮ ನನ್ನ ಸೊಸೆ ಹಾಗಿರಬೇಕು, ಹೀಗಿರಬೇಕು ಅಂತಾ ಸದಾ ಬಯಸುತ್ತಿರುತ್ತಾರೆ. ಇವಳ ಈ ಅವತಾರ ನೋಡಿದರೆ ನನ್ನನ್ನೂ ಕೊಂದು, ಅವರೂ ನೇಣು ಹಾಕಿಕೊಳ್ಳುತ್ತಾರೆ ಎನ್ನಿಸಿತು. ದಯನೀಯನಾಗಿ ಅವಳ ಕಡೆ ನೋಡಿದೆ. ಅವಳು ನನ್ನ ಥರಾನೆ ಬಾಯಿ ತುಂಬಾ ಹೊಗೆ ತುಂಬಿಕೊಂಡು ರಿಂಗ್ಸ್ ಬಿಡಲು ಪ್ರಯತ್ನಿಸುತ್ತಿದ್ದಳು.
"ಇಷ್ಟು ದಿನಾ ಇಲ್ಲದಿರೋದು ಈಗ ಯಾಕೆ ಈ ಥರಾ ಬುದ್ದಿ ಬಂತು ನಿನಗೆ" ಪ್ರಶ್ನಿಸಿದೆ
" ನಾವು ನೂರು ವರ್ಷ ಬದುಕಿರುತ್ತೇವೆ ಎನ್ನುವುದಕ್ಕೆ ಯಾವ ಭರವಸೆಯೂ ಇಲ್ಲ , ಈ ಮರುಕ್ಷಣವೇ ನಾವು ನೆಗೆದು ಬಿದ್ದು ಹೋಗಬಹುದು, ಹಾಗೆ ಸಾಯೋ ಮುಂಚೆ ಇದನ್ನೆಲ್ಲಾ ಅನುಭವಿಸದಿದ್ದರೆ ಬದುಕಿಯೂ ಏನು ಪ್ರಯೋಜನ ಅನ್ನಿಸಿತು" ಅಂದಳು
ಬೂಮರಾಂಗ್ ಅಂದು ಕೊಂಡೆ
ಈ ಬಾರಿ ಅವಳು ಮುಂದುವರೆಸಿದಳು
"ನನಗೆ ಗಿರೀಶ್ ರಾವ್ ಅವರ ಪ್ರಬಂಧ. ಗೋ ಕೃ ಅಡಿಗರ ಕವನ ಎಲ್ಲಾ ಬೇಕು ಯಾವಾಗ ತಂದುಕೊಡ್ತಿಯಾ?"
ಅವಳು ನನ್ನ ಶೈಲಿಯನ್ನೇ ಅನುಕರಿಸುತ್ತಿರುವುದು ಹೃದಯವಿದ್ರಾವಕವಾಗಿತ್ತು. ಕಾಫಿ ಶಾಪ್ ಗೆ ಬಂದವರೆಲ್ಲಾ ಅವಳ ಕಡೆಗೊಮ್ಮೆ ವಿಚಿತ್ರ ನೋಟ ಬೀರಿ ಆಮೇಲೆ ನನ್ನ ಕಡೆ ನೋಡಿ ಗುಸು ಗುಸು ಮಾತಾಡಿಕೊಳ್ಳಲು ಶುರು ಮಾಡಿದ್ದರು.
ಕ್ಷಣ ಕ್ಷಣ ನನಗೆ ಅಸಹನೆ ಹೆಚ್ಚುತ್ತಾ ಹೋಯಿತು.
"ಸರಿ ಬಿಸಾಕು ಆ ದರಿದ್ರಾನ ಹೊರಡೋಣ ಇನ್ನು" ಅಂತಾ ಬ್ಯಾಗ್ ಕೈಗೆತ್ತಿಕೊಂಡೆ.
"ಸರಿ. ಇನ್ನೊಂದಿದ್ಯಾ ನಿನ್ನ ಪ್ಯಾಕಲ್ಲಿ? ಬೇಡಾ ಬಿಡು, ಹೊಸ ಪ್ಯಾಕೆ ತೊಗೋತೀನಿ" ಅಂದಳು
ಒಮ್ಮೆ ದುರುಗುಟ್ಟಿ ನೋಡಿದೆ. ಅವಳು ಅದನ್ನು ಕೇರ್ ಮಾಡದೆ ಹೊರ ನಡೆದಳು
ನಾನೂ ಬಿಲ್ ಪಾವತಿಸಿ ಹೊರಬಂದೆ. ಹೊಸ ಸಿಗರೇಟಿಗೆ ಬೆಂಕಿ ಸೋಕಿಸುತ್ತಿದ್ದಳು. ಒಮ್ಮೆ ಕರುಳೆಲ್ಲಾ ಕಿವುಚಿದಂತಾಯ್ತು.
೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦
ರಾತ್ರಿ ಎಷ್ಟು ಹೊತ್ತಾದರೂ ನಿದ್ರೆ ಬರಲಿಲ್ಲ. ಕಣ್ಣು ಮುಚ್ಚಿದರೆ ಸಾಕು, ಅವಳು ಸಿಗರೇಟು ಸೇದುತ್ತಿರುವ ದೃಶ್ಯ, ನಮ್ಮಮ್ಮ ಇಬ್ಬರನ್ನೂ ಬೈಯುತ್ತಾ ಕಣ್ಣೀರು ಹಾಕುತ್ತಿರುವ ದೃಶ್ಯ
ಇವಳು ವರ ಮಹಾಲಕ್ಷ್ಮಿ ಹಬ್ಬದ ದಿನ ನಮ್ಮಮ್ಮನ ಹದಿನಾರು ಮೊಳದ ರೇಷ್ಮೇ ಸೀರೆ ಕಚ್ಚೆ ಹಾಕಿ ಉಟ್ಟುಕೊಂಡು, ಸೀಗೆ ಪುಡಿಯಿಂದ ಘಮ ಘಮಿಸುವ ತಲೆ ತುಂಬಾ ಮಲ್ಲಿಗೆ ಹೂವು ಮುಡಿದು , ಅರಿಶಿನ ,ಕುಂಕುಮ, ಚಂದ್ರ ಗಳಿಂದಾ ಸರ್ವಾಲಂಕಾರಭೂಷಿತಳಾಗಿ
------ ಸಿಗರೇಟು ಸೇದುತ್ತಿರುವ ದುಸ್ವಪ್ನಗಳೇ ಬರುತ್ತಿತ್ತು.
ಅವಳಿಗೆ ಇನ್ನೂ ಎದ್ದಿದ್ಯಾ ಅಂತ ಮೇಸೇಜ್ ಕಳುಹಿಸಿದೆ. ಹೌದು ಅಂತ ಉತ್ತರ ಬಂತು. ತಕ್ಷಣ ಕಾಲ್ ಮಾಡಿದೆ.
" ನೂರು ವರ್ಷ ಆಯಸ್ಸು ನಿಂಗೆ, ನಿನ್ನನ್ನೇ ನೆನಸಿಕೊಳ್ಳುತ್ತಾ ಇದ್ದೆ" ಅಂದಳು
"ಯಾಕೆ?" ನಿರಾಸಕ್ತನಾಗಿ ಕೇಳಿದೆ
"ಏನಿಲ್ಲಾ. ZIPPO ಲೈಟರ್ ನ ONLINE ನಲ್ಲಿ ಬುಕ್ ಮಾಡ್ತಾ ಇದ್ದೆ" ಅಂದಳು
ಒಮ್ಮೆ ದುಃಖ ಉಮ್ಮಳಿಸಿ ಬಂತು
" ನಾನು ನಿನ್ನ ಹತ್ರ ಸ್ವಲ್ಪ ಮಾತಾಡ ಬೇಕಿತ್ತು" ಅಂದೆ
"ಹೇಳು ಹೇಳು.............ಅಂದ ಹಾಗೆ ಅದರ ಸ್ಪೆಲ್ಲಿಂಗ್ - ಝಡ್ ಐ ಪಿ ಪಿ ಒ ಅಲ್ವಾ" ಅಂದಳು
ನಾನದನ್ನು ಉಪೇಕ್ಷಿಸುತ್ತಾ ಹೇಳಿದೆ
"ನಾನು ಸೀರಿಯಸ್ಸಾಗಿ ಸಿಗರೇಟು ಬಿಡೋಣ ಅಂದುಕೊಂಡಿದ್ದೇನೆ"
ಇಷ್ಟು ಹೇಳುವಷ್ಟರಲ್ಲಿ ನನಗೆ ಎದೆ ಬಿಗಿದು ಕೊಂಡ ಹಾಗಾಯಿತು. ನನ್ನ ಕೈಲಿದ್ದ ಸಿಗರೇಟು " ಯಾಕೆ ಮಿತ್ರಾ?" ಎಂದು ಕೇಳಿದಂತೆ ಭಾಸವಾಯಿತು. ಜನ್ಮಾಂತರಗಳ ಸಹಚರನೊಬ್ಬ ನನ್ನನ್ನು ಅಗಲುತ್ತಿರುವಂತೆ ನೋವಾಯಿತು
ಇದಾವುದರ ಪರಿವೆಯೇ ಇಲ್ಲದೆ ಅವಳು ಸ್ವಚ್ಚಂಧವಾಗಿ ನಕ್ಕ ನಗೆ ಅಲೆ ಅಲೆಯಾಗೆ ನನ್ನ ಕಿವಿಗೆ ಅಪ್ಪಳಿಸಿತು.
Comments
ಉ: ಬೂಮರಾಂಗ್!