ಪೋಸ್ಟ್ ಮ್ಯಾನ್ ಅಂಕಲ್ (ನನ್ನೂರು ಮತ್ತು ನಾಸ್ಟಾಲ್ಜಿಯಾ)

ಪೋಸ್ಟ್ ಮ್ಯಾನ್ ಅಂಕಲ್ (ನನ್ನೂರು ಮತ್ತು ನಾಸ್ಟಾಲ್ಜಿಯಾ)

’ಬೀಟಲ್ಸ್’ ಎನ್ನುವ ಮ್ಯೂಸಿಕ್ ಬ್ಯಾಂಡಿನ ’ಪ್ಲೀಸ್ ಮಿ||ಪೋಸ್ಟ್ ಮ್ಯಾನ್’ ಹಾಡನ್ನು ಹೇಳುತ್ತಿದ್ದೆ. ಈ ಹಾಡು ಕೇಳುತ್ತಿರುವುದು ಮೊದಲ ಬಾರಿಯೇನಲ್ಲ ಆದರೂ ಕಾಡುತ್ತಿದ್ದ ಒಂಟಿತನದ ಪರಿಣಾಮವೋ ಏನೋ ಊರಿನ ಪೋಸ್ಟ್ ಮ್ಯಾನಿನ ನೆನಪಾಯಿತು. ನನ್ನ ಒಂಟಿತನಕ್ಕೂ ಅವರಿಗೂ ಯಾವುದೇ ಸಂಬಂಧವಿರದಿದ್ದರೂ ಮೆದುಳೆನ್ನುವ ಡೈನಾಮಿಕ್ ಮೆಮರಿಯಲ್ಲಿ ಯಾವುದ್ಯಾವುದೋ ಹೇಗೇಗೋ ಸಂಬಂಧ ಪಡೆದುಕೊಂಡು ಏನೇನೋ ನೆನಪಾಗುವುದು ಮೆದುಳಿನ ದುರ್ಬಲತೆಯೋ ಅಥವಾ ಶಕ್ತಿಯೋ ಗೊತ್ತಿಲ್ಲ. ಒಟ್ಟಾರೆ ಅಟ್ಲಾಸ್ ಸೈಕಲಿನಲ್ಲಿ ಮನೆಗೆ ಪೋಸ್ಟ್ ವಿತರಿಸಲು ಬರುತ್ತಿದ್ದ ಅವರ ನೆನಪಾಯಿತು ಎಂಬುದು ಮಾತ್ರ ಸದ್ಯದ ಮಟ್ಟಿಗೆ ಮುಖ್ಯ.

ಮುಂಬೈಯಿಂದ ಬಂದ ದಿನಗಳಲ್ಲಿ ಮನೆಯಲ್ಲಿ ಟೆಲಿಫೋನ್ ಇರಲಿಲ್ಲ. ಈಗಲೂ ಇಲ್ಲ, ಆದರೆ ಇರಲಿಲ್ಲವೆಂದಲ್ಲ. ಮಳೆಗಾಲದಲ್ಲಿ ಮೂರು ದಿನಕ್ಕೊಮ್ಮೆ ಡೆಡ್ ಆಗುತ್ತಿದ್ದ ಫೋನ್ ಇದ್ದರೆಷ್ಟು ಬಿಟ್ಟರೆಷ್ಟು. ಅಮ್ಮ ಕೈಯಲ್ಲಿ ಮೊಬೈಲ್ ಇದೆ ಸುಮ್ಮನೆ ಯಾಕೆ ಅದರ ಬಿಲ್ ಕಟ್ಟಬೇಕು ಎಂದು ತಾರುಗಳ ಮೂಲಕ ಮನೆಯವರೆಗೆ ಪಸರಿಸಿದ್ದ ಟೆಲೆಫೋನನ್ನು ಎಕ್ಸ್ ಚೇಂಜಿನವರಿಗೆ ವಾಪಾಸ್ ಮರಳಿದ್ದಾರೆ. ಮೊನ್ನೆ ಮನೆಗೆ ಹೋಗಿದ್ದಾಗ ಬಿಎಸ್ಸೆನ್ನೆಲ್ ಲ್ಯಾಂಡ್ ಲೈನ್ ಫೋನುಗಳ ಕುಸಿಯುತ್ತಿರುವ ಬಳಕೆಯ ಸಂಕೇತರೂಪವಾಗಿ ಮನೆಯ ಕಾಂಪೌಂಡಿನಲ್ಲಿ ಒಂಟಿಯಾಗಿ ನೆಲೆ ನಿಂತಿದ್ದ ಟೆಲೆಫೋನ್ ಕಂಬವನ್ನು ಕಿತ್ತೆಸೆದು ಮನೆಯಲ್ಲಿ ಫೋನ್ ಇತ್ತು ಎಂಬುದರ ಅವಶೇಷವನ್ನೂ ಅಳಿಸಿ ಬಂದೆ. ಆದರೆ ಫೋನ್ ಬರುವ ಮೊದಲು ಆಗ ಚಾಲ್ತಿಯಲ್ಲಿದ್ದ ಪೋಸ್ಟಲ್ ಸರ್ವೀಸ್ ಮಾತ್ರ ನಮ್ಮ ಮತ್ತು ಅಪ್ಪನ ನಡುವಿನ ಸಂಪರ್ಕ ಮಾಧ್ಯಮವಾಗಿತ್ತು.

ಇನ್ಲ್ಯಾಂಡ್ ಲೆಟರ್ ಎಂಬ ಕಾಗದದಲ್ಲಿ ಎರಡು ಪುಟಗಳು ಸಾಮಾನ್ಯವಾಗಿ ಅಮ್ಮನಿಗೆ ಮೀಸಲು. ಉಳಿದ ಒಂದು ಪುಟದಲ್ಲಿ ನಾವು ಮೂವರು ಹೊಂದಿಸಿಕೊಂಡು ಬರೆಯಬೇಕು. ಅದರಲ್ಲಿ ೯೦% ಇಬ್ಬರೂ ಬರೆದು ಮುಗಿಸಿದರೆ ಉಳಿದ ಸ್ಥಳದಲ್ಲಿ ನನ್ನ ಬ್ರಹ್ಮ ಲಿಪಿ ಬರೆಯಲು ನನಗೆ ಅವಕಾಶ. ಅದನ್ನು ಅಪ್ಪ ಓದುತ್ತಿದ್ದರೋ ಇಲ್ಲವೋ ಗೊತ್ತಿಲ್ಲ. ಇದು ನನಗೆ ಕನ್ನಡದಲ್ಲಿ ಮಾರ್ಕ್ಸ್ ಹೇಗೆ ಸಿಗುತ್ತಿದ್ದವು ಎಂಬುದರಷ್ಟೇ ಮಟ್ಟದ ಯಕ್ಷ ಪ್ರಶ್ನೆ! ಅಪ್ಪನೊಡಗಿನ ಕಡಿಮೆ ಮಾತುಕತೆ ಕೂಡ ನನಗೆ ಉಳಿಸಲ್ಪಡುತ್ತಿದ್ದ ಕಡಿಮೆ ಸ್ಥಳಕ್ಕೆ ಕಾರಣ. ಅದರಲ್ಲೂ ಆ ಕಾಲದಲ್ಲಿ ಭಾವನೆಗಳನ್ನು ಹೇಗೆ ವ್ಯಕ್ತ ಪಡಿಸುವುದೆಂದೇ ಅರ್ಥವಾಗುತ್ತಿರಲಿಲ್ಲ. ಈ ರೀತಿ ಅದಕ್ಕೆ ಸ್ಟಾಂಪ್ ಹಾಕಿ ಅಂಚೆ ಪೆಟ್ಟಿಗೆಗೆ ಹಾಕಿದರೆ ಮೂರು ನಾಲ್ಕು ದಿನಗಳಲ್ಲಿ ಅಪ್ಪನಿಂದ ಮರುತ್ತರ ಬರುತ್ತಿತ್ತು. ಹುಟ್ಟಿದ ಹಬ್ಬದ ಸಮಯದಲ್ಲೂ ಗ್ರೀಟಿಂಗ್ ಕಾರ್ಡುಗಳ ನಿರೀಕ್ಷೆಯಲ್ಲಿ ಪೋಸ್ಟ್ ಮ್ಯಾನಿನ ಹಾದಿ ಕಾಯುತ್ತಿದ್ದ ಕಾಲವೊಂದಿತ್ತು. ಈಗಲೂ ಒಂದು ಗ್ರೀಟಿಂಗ್ ಕಾರ್ಡಿನಷ್ಟು ಮನಸ್ಸನ್ನು ತಟ್ಟುವ ಉಡುಗೊರೆ ಬೇರೆಯಾವುದೂ ಇಲ್ಲವೇನೋ ಎಂದೆನಿಸುತ್ತದೆ. ಬಹುಶಃ ಲಿಖಿತ ಮಾಧ್ಯಮ ನನ್ನನ್ನು ಹೆಚ್ಚು ಮುಟ್ಟುವುದರಿಂದ ನನಗೆ ಹಾಗೆ ಅನಿಸುತ್ತದೆಯೇನೋ

ಆಗ ಪೋಸ್ಟ್ ಮ್ಯಾನ್ ಮನೆಗೆ ಬಂದರೆಂದರೆ ಏನೋ ಸಂತೋಷ. ಆ ಸೈಕಲ್ ಮತ್ತು ಅಜ್ಜನ ಕೊಡೆ ಅವರ ಟ್ರೇಡ್ ಮಾರ್ಕ್ ಆಗಿ ಬಿಟ್ಟಿತ್ತು.  ಅವರಿಗೆ ಈಗ ಅರುವತ್ತು ಕಳೆದಿರಬಹುದು ಎಂದೆನಿಸುತ್ತದೆ. ಮೊದಲ ಬಾರಿಗೆ ನನ್ನನ್ನು ’ಆಚಾರ್ಯರೇ’ ಎಂದು ಕರೆದವರೂ ಅವರೇ! ದೀಪಾವಳಿ ಸಮಯದಲ್ಲಿ ಅಮ್ಮ ಅವರಿಗೊಂದು ಶರ್ಟು ಪೀಸ್ ಕೊಡುತ್ತಿದ್ದುದು ಅವರು ಮನೆಗೆ ಎಷ್ಟು ಹತ್ತಿರವಾಗಿದ್ದರು ಎಂಬುದರ ಸಂಕೇತ.  ಆದರೆ ಮನೆಗೆ ಹತ್ತಿರದವರೆಂದು ಒಮ್ಮೆಯೂ ತನ್ನ ಕೆಲಸದ ನಿಯಮಗಳನ್ನು ಮುರಿದವರಲ್ಲ. ನನ್ನ ಪಾಸ್ ಪೋರ್ಟ್ ಬಂದಾಗ ನಾನು ಮನೆಯಲ್ಲಿರಲಿಲ್ಲವಾದ್ದರಿಂದ ಮನೆಗೆ ಕೊಡದೆ ಪೋಸ್ಟ್ ಆಫೀಸಿನಲ್ಲೇ ಇಟ್ಟುಕೊಂಡು ಅವರೇ ಬಂದು ತೆಗೆದುಕೊಂಡು ಹೋಗಲಿ ಎಂದಾಗ ಅಮ್ಮನಲ್ಲಿ ಅವರ ಬಗ್ಗೆ ಚೆನ್ನಾಗಿ ಬೈದಿದ್ದೆ. ಆದರೆ ಈಗ ಏನೋ ಅಭಿಮಾನ ಮೂಡುತ್ತದೆ. ಅದಕ್ಕೇ ಇತ್ತೀಚೆಗೆ ’ಫೈನಲ್ ಸೆಟ್ಲ್ ಮೆಂಟ್’ ಬಂದಾಗ ಅವರಲ್ಲೇ ಮಾತಾಡಿ ನನ್ನ ಇಲ್ಲಿನ ವಿಳಾಸ ಕೊಟ್ಟು ಇಲ್ಲಿಗೆ ಕಳುಹಿಸುವಂತೆ ಹೇಳಿದೆ. ಈಗಲೂ ಅಲ್ಲೊಮ್ಮೆ ಇಲ್ಲೊಮ್ಮೆ ಕಣ್ಣಿಗೆ ಬೀಳುವಾಗ ಆಪ್ತತೆಯ ನಗು ಮೂಡಿಬಿಡುತ್ತದೆ. ಈಗಲೂ ಕಾಗದಗಳನ್ನಿಟ್ಟುಕೊಂಡು ಹೋಗುವ ಅವರ ಬಗ್ಗೆ ಅನುಕಂಪ ಮೂಡುತ್ತದೆ.

ಅಂಚೆ ಎಂದು ಕರೆಯಲ್ಪಡುವ ವ್ಯವಸ್ಥೆ ಬದುಕಿನ ಒಂದು ಸುಂದರ ಭಾಗವಾಗಿದ್ದು ಒಂದು ರೀತಿ ಯಾವುದೋ ಕ್ಲಾಸಿಕಲ್ ದೃಶ್ಯವೆಂದು ಈಗೀಗ ಅನಿಸುತ್ತಿದೆ. ಈಗ ಕೇವಲ ರಿಜಿಸ್ಟರ್ಡ್ ಪೋಸ್ಟ್ ಅಥವಾ ಬಿಲ್ಲುಗಳು ಮಾತ್ರ ಅಂಚೆಯ ಮುಖಾಂತರ ಬರುವುದು. ಅವನ್ನೂ ಕೊರಿಯರ್ ಸರ್ವೀಸುಗಳು ಕೆಲವೊಮ್ಮೆ ತಂದೊಗಿಸುವುದರಿಂದ ಪೋಸ್ಟ್ ಮ್ಯಾನ್ ಏನಾದರೂ ತಂದುಕೊಟ್ಟರೆ ಅದು ಹತ್ತು ವರ್ಷ ಬದುಕನ್ನು ಹಿಂದೆ ಎಳೆದಂತೆ ಭಾಸವಾಗಬಹುದೇನೋ. ಗೊತ್ತಿಲ್ಲ. ಏಕೆಂದರೆ ಮನೆಗೆ ನಾನಿರುವಾಗ ಪೋಸ್ಟ್ ಬಂದು ವರುಷಗಳೇ ಕಳೆದು ಹೋಗಿವೆ. 

 

ಚಿತ್ರ : ಇಲ್ಲಿಂದ  ತೆಗೆದದ್ದು.

 

Rating
No votes yet

Comments