ಪಂ. ಸುಧಾಕರ ಚತುರ್ವೇದಿಯವರ ವಿಚಾರಧಾರೆ - 2
ಒಳ್ಳೆಯ ರೀತಿ ಬಾಳೋಣ
ಸರ್ದಾರ್ ಭಗತ್ ಸಿಂಗ್ ಹೆಸರು ಕೇಳಿದ್ದೀರಿ, ಮಹಾನ್ ಕ್ರಾಂತಿಕಾರಿ, ಅವನು ನನ್ನ ಶಿಷ್ಯ. ಲಾಹೋರಿನಲ್ಲಿ ದಯಾನಂದ ಆರ್ಯ ವೇದಿಕ್ ಕಾಲೇಜಿನಲ್ಲಿ ಅವನು ಓದುತ್ತಿದ್ದಾಗ ನಾನು ಗಣಿತದ ಪಾಠ ಹೇಳಲು ಹೋಗುತ್ತಿದ್ದೆ. ಒಂದು ಸಲ ಅವನು ನನ್ನ ಹತ್ತಿರ ಬಂದು ಹೇಳಿದ್ದ - ಪಂಡಿತಜಿ, ನಾನು ಲೆಕ್ಕದಲ್ಲಿ ಸ್ವಲ್ಪ ಹಿಂದೆ. ಕಡಿಮೆ ಅಂಕ ಬಂದರೆ ಕರುಣೆ ಇದ್ದರೆ ನನಗೆ ಐದು ಅಂಕ ಸೇರಿಸಿ ಕೊಟ್ಟರೆ ಉಪಕಾರವಾಗುತ್ತದೆ. ನಾನು ಹೇಳಿದೆ ಲಕ್ಷಣವಾಗಿ ಫೇಲಾಗು. ನಾನು ಅಂತಹ ಕೆಲಸಕ್ಕೆ ಕೈ ಹಾಕುವುದಿಲ್ಲ ಎಂದಿದ್ದೆ. ಇವನು ನನ್ನ ಶಿಷ್ಯ, ಇವನು ಉದ್ಧಾರವಾಗಲಿ ಎಂದು ನಾನು ಅಂಕ ಸೇರಿಸಿಕೊಟ್ಟು ನನ್ನ ಆತ್ಮವಂಚನೆ ಮಾಡಿಕೊಳ್ಳಲು ನಾನು ಸಿದ್ಧನಿರಲಿಲ್ಲ.
ಗಂಭೀರವಾಗಿ ಯೋಚಿಸಿ, ಆಲೋಚಿಸಿ, ವೇದದ ಮಂತ್ರ ಹೇಳುತ್ತೆ, ಸತ್ಕರ್ಮ ಮಾಡುವುದನ್ನು ಬಿಟ್ಟು ಬೇರೆಡೆ ಹೊರಳದಿರೋಣ, ನಾವು ಯಾವ ದಾರಿಯಲ್ಲಿ ಹೋಗಬೇಕೋ ಆ ದಾರಿಯನ್ನು ಬಿಟ್ಟು ಹೋಗದಿರೋಣ, ಸರ್ವೈಶ್ವರ್ಯನಾದ ಪರಮಾತ್ಮ ನಮಗೆ ಬದುಕು ಕೊಟ್ಟಿದ್ದಾನೆ, ಜೊತೆಗೆ ಐಶ್ವರ್ಯವನ್ನೂ ಕೊಟ್ಟಿದ್ದಾನೆ. 'ಸೋಮ' ಅನ್ನುವ ಪದ ಇದೆ, ಆ ಪದಕ್ಕೆ ೪೦ ಅರ್ಥ ಇದೆ. ಎಲ್ಲಾ ಬೇಡ, ೨-೩ ಅರ್ಥ ನೋಡೋಣ, ಒಂದು 'ಮಥನ ಮಾಡು' ಅಂತ. ಹಾಲನ್ನು ಸುಮ್ಮನೆ ಇಟ್ಟರೆ ಕೆನೆ ಸಿಕ್ಕುವುದಿಲ್ಲ, ಕಾಯಿಸಿ ಹೆಪ್ಪಿಟ್ಟರೆ ಮೊಸರಾಗುತ್ತದೆ, ಮಥಿಸಿದರೆ ಬೆಣ್ಣೆ ಸಿಗುತ್ತದೆ, ಆ ಮಥನ ಶಕ್ತಿ ನಿಮ್ಮಲ್ಲಿರಬೇಕು. ಇನ್ನೊಂದು 'ವಿಚಾರ ಮಾಡುವ ಶಕ್ತಿ', ಆಲೋಚನೆ ಮಾಡುವ ಶಕ್ತಿ. ಗುರೂಜಿ ಎಲ್ಲಾ ಯೋಚನೆ ಮಾಡಿಬಿಟ್ಟಿದ್ದಾರೆ, ನಾವೇನು ಯೋಚನೆ ಮಾಡುವುದು ಬೇಡ, ಅವರು ಹೇಳಿದಂತೆ ನಡೆದರೆ ಸಾಕು ಎಂದು ಭಾವಿಸುವುದು ಸರಿಯಲ್ಲ. ಗುರು ಅಂದರೆ ಎರಡು ನಮೂನೆ - ಒಂದು ಸತ್ಯೋಪದೇಶ ಮಾಡುವವನು, ಇನ್ನೊಂದು ಭಾರ ಅಂತ. ಈಗ ಹೆಚ್ಚಿನ ಗುರುಗಳು ಭಾರವಾಗಿರುವವರೇ. ನನಗೆ ಚೆನ್ನಾಗಿ ಜ್ಞಾಪಕವಿದೆ. ನನ್ನ ತಂದೆಯವರು ಸಂಪ್ರದಾಯಸ್ಥ ಬ್ರಾಹ್ಮಣರು. ಅವರು ಸ್ನಾನ ಮಾಡಿಕೊಂಡು ಬರುವಾಗ ಎದುರಿಗೆ ಶೂದ್ರರು ಬರುವಂತೇ ಇಲ್ಲ, ಬ್ರಾಹ್ಮಣರಲ್ಲೂ ಅದರಲ್ಲೂ ಯಾರೋ ಸ್ಮಾರ್ತರು, ಆಚಾರ್ಯರು, ಶಾಸ್ತ್ರಿಗಳು ಬಂದರೆ 'ನಮಸ್ಕಾರ ಆಚಾರ್ರೇ, ದೀಕ್ಷಿತರೇ' ಅಂತ ಹೇಳಿಬಿಡೋರು, ಅವರು ಹೋದ ನಂತರ ಪುನಃ ಬಚ್ಚಲು ಮನೆಗೆ ಹೋಗಿ ಪುನಃ ಸ್ನಾನ ಮಾಡಿಕೊಂಡು ಶುಚಿಯಾದೆ ಅಂದುಕೊಂಡು ಬರುತ್ತಿದ್ದರು. ನಮ್ಮಪ್ಪಂದೇ ಈ ಗತಿ. ನನ್ನನ್ನು ಕಂಡು 'ಯಾವ ಪಾಪದ ಫಲವಾಗಿ ನೀನು ನಮ್ಮ ಮನೆಯಲ್ಲಿ ಹುಟ್ಟಿದೆಯೋ, ನೀನೊಂದು ಪಾಪದ ಮುದ್ದೆ, ನಮ್ಮ ಮನೆಯಲ್ಲಿ ಏಕೆ ಹುಟ್ಟಿದೆ, ನಮ್ಮ ಮನೆಯ ಹೆಸರು ಕೆಡಿಸುತ್ತೀಯಾ' ಎನ್ನುತ್ತಿದ್ದರು. ಅವರದು ಭಾರೀ ಮಡಿ. ನಾನು ಬೆಳಿಗ್ಗೆ ಏಳುವಾಗ 'ಶಂಭೋ, ಮಹಾದೇವಾ, ಕಾಪಾಡಪ್ಪಾ' ಅಂತಿದ್ದರೆ ಅವರಿಗೆ ಮೈ ಉರಿ, ಮಾಧ್ವರ ಮನೆಯಲ್ಲಿ ಹುಟ್ಟಿ ಶೈವರ ದೇವರ ಹೆಸರು ಹೇಳುತ್ತಾನಲ್ಲಾ ಅಂತ. ಅವರು ಎರಡು ಹೊತ್ತು ವಿಷ್ಣು ಸಹಸ್ರನಾಮ ಹೇಳಿಕೊಂಡು ಪೂಜೆ ಮಾಡುತ್ತಿದ್ದರು. ನಮ್ಮ ಮನೆಯಲ್ಲಿ ಹೂವು ಬಿಡುತ್ತಿರಲಿಲ್ಲ, ಪಕ್ಕದ ಮನೆಯಲ್ಲಿ ಬಿಡುತ್ತಿದ್ದ ಹೂವು ಕದ್ದು ಕಿತ್ತು ದೇವರಿಗೆ ಪೂಜೆ ಮಾಡಿದರೆ ಪುಣ್ಯ ಬರುತ್ತದೆಯೇ ಎಂದು ನಾನು ಅಪ್ಪನನ್ನು ಕೇಳುತ್ತಿದ್ದೆ. ಅದರಲ್ಲಿ ಎರಡು ಪಾಪದ ಕೆಲಸ ಆಗುತ್ತದೆ. ಹೂವನ್ನು ಕದ್ದು ಕಿತ್ತಿದ್ದೊಂದು ಪಾಪ, ಇನ್ನೂ ಅರಳದಿರುವ ಹೂವು, ಅಲ್ಲೇ ಇದ್ದಿದ್ದರೆ ಪೂರ್ತಿ ಅರಳಿ ಬೀಳುವವರೆಗೆ ಎಷ್ಟು ಪರಿಮಳ ಬೀರಿ ಮುದ ತರುತಿತ್ತೋ ಆ ಹೂವನ್ನು ಕಿತ್ತು ಬಾಡಿಸಿದ್ದು ಇನ್ನೊಂದು. ಅದನ್ನು ಕಿತ್ತರೆ ಅದಕ್ಕೆ ನೋವಾಗುತ್ತದೆ, ನಮಗೆ ಗೊತ್ತಾಗುವುದಿಲ್ಲ. ನಿಮಗೆ ಇಷ್ಟವಾಗದೇ ಹೋಗಬಹುದು, ನಿಮಗೆ ಕೋಪ ಬರುತ್ತೇನೋ! ಹೂವನ್ನು ಕಿತ್ತು ಮುಡಿದುಕೊಳ್ಳುವುದೂ ಸರಿಯಲ್ಲ. ಹೀಗೆ ಆಲೋಚನೆ ಮಾಡಿ ಯಾರು ನಡೆದುಕೊಳ್ಳುತ್ತಾರೊ ಅವರನ್ನು ಮನುಷ್ಯ ಅಂತ ಕರೆಯಬಹುದು, ಆಲೋಚನೆ ಮಾಡದಿರುವವರು ಕೇವಲ ಮನುಷ್ಯರ ಆಕಾರ ಹೊಂದಿರುವವರು ಅಷ್ಟೆ.
ಯಜ್ಞ ಅಂದಕೂಡಲೆ ಪಶುಬಲಿ ಬೇಕೇಬೇಕು ಅಂತಾರೆ. ಯಾವ ಯಜ್ಞ ಹಿಂಸೆಯಿಂದ ಕೂಡಿರುವುದಿಲ್ಲವೋ -ಅಧ್ವರ - ಹಿಂಸೆಯಿಲ್ಲದ್ದು- ಅದೇ ಯಜ್ಞ ಎಂದು ವೇದದಲ್ಲಿ ಸ್ಪಷ್ಟವಾಗಿದೆ. ಯಜ್ಞಕ್ಕೆ ಬಲಿ ಕೊಡುವ ಪದ್ಧತಿ ಏಕೆ ಸೇರಿತೋ ಗೊತ್ತಿಲ್ಲ. ಕೋಣಬಲಿ ಕೊಟ್ಟರೆ ಶ್ರೇಷ್ಠವಂತೆ, ಅದರಿಂದ ಸೂರ್ಯದೇವನಿಗೆ ತೃಪ್ತಿಯಾಗುತ್ತಂತೆ! ಕಾಲಕಾಲಕ್ಕೆ ಮಳೆ, ಬೆಳೆ ಕೊಡುತ್ತಾನಂತೆ! ಅದು ಹೇಗೆ ತೃಪ್ತಿಯಾಗುತ್ತೋ! ಅದಕ್ಕಾಗಿ ಪಾಪ, ಆ ಕೋಣನನ್ನು ಬಲಿಕೊಡಬೇಕೆ? ನಾನು . . . . ಸಮೀಪದ ಒಂದು ಮಠದ ಮುಖ್ಯಸ್ಥ . . .ರನ್ನು (ಮಠದ ಮತ್ತು ಮುಖ್ಯಸ್ಥರ ಹೆಸರನ್ನು ಚತುರ್ವೇದಿಯವರು ಹೇಳಿದ್ದರು, ಆದರೆ ಇಲ್ಲಿ ಅದನ್ನು ಬಳಸಿಲ್ಲ -ಲೇ.) ಕೇಳಿದೆ: 'ಸ್ವಾಮಿ, ನೀವು ಯಾಕೆ ಪ್ರಾಣಿಹಿಂಸೆ ಮಾಡ್ತೀರಿ?' ಅವರು ಹೇಳಿದರು: ನಾವು ಎಲ್ಲಾ ಪ್ರಾಣಿಗಳನ್ನೂ ಬಲಿ ಕೊಡಲ್ಲ, ಸಸ್ಯಾಹಾರಿ, ಸಾಧು ಪ್ರಾಣಿ ಮಾತ್ರ ಬಲಿ ಕೊಡ್ತೀವಿ, ಅವು ಶುದ್ಧವಾಗಿರುತ್ತವೆ, ಅವನ್ನು ಬಲಿ ಕೊಟ್ಟರೆ ಸೂರ್ಯನಾರಾಯಣನಿಗೆ ತೃಪ್ತಿಯಾಗುತ್ತೆ. ನಾನು ಹೇಳಿದೆ - 'ನನ್ನ ಜೊತೆಗೆ ಬನ್ನಿ, ಕೆಲವು ತಿಂಗಳು ನಿಮಗೆ ವಡೆ, ಚಕ್ಕುಲಿ, ಏನೂ ಕೊಡಲ್ಲ, ಬರೀ ಹುಲ್ಲೇ ತಿನ್ನಿಸಿ ಆಮೇಲೆ ಯಜ್ಞಕ್ಕೆ ಬಲಿ ಕೊಡುತ್ತೇನೆ, ಸೂರ್ಯದೇವನಿಗೆ ತುಂಬಾ ಸಂತೋಷ ಆಗುತ್ತೆ'. ಅವರು 'ಅಯ್ಯೋ, ನಾನು ಮನುಷ್ಯ ಕಣಯ್ಯಾ' ಅಂದರು. 'ಮನುಷ್ಯ ಎಂದು ಏಕೆ ಹೇಳುತ್ತಿ? ಮನುಷ್ಯ ಜಾತಿಗೆ ಏಕೆ ಅವಮಾನ ಮಾಡುತ್ತಿ? ಆಲೋಚನೆ ಮಾಡಿ ಕೆಲಸ ಮಾಡುವವನು ಮನುಷ್ಯ ಎಂದು ಶಾಸ್ತ್ರ ಹೇಳುತ್ತೆ. ಆಲೋಚನೆ ಮಾಡದೆ ಕೆಲಸ ಮಾಡುವ ನೀನು ಹೇಗೆ ಮನುಷ್ಯ?' ಎಂದು ಹೇಳಿದೆ. ಯಜ್ಞ ಶ್ರೇಷ್ಠವಾದ ಕರ್ಮ, ಅಂತಹ ಯಜ್ಞದ ಹೆಸರಿನಲ್ಲಿ ಇಂತಹ ಪಾಪ ಏಕೆ ಮಾಡಬೇಕು? ಯಾವತ್ತೂ ಮಾಡಬಾರದು.
ಭಗವಂತ ಐಶ್ವರ್ಯ ಕೊಡುತ್ತಾನೆ, ಯಾರಿಗೆ? ಯಾರು ನೂರು ಕೈಗಳಿಂದ ದುಡಿದು ಸಾವಿರ ಕೈಗಳಿಂದ ದಾನ ಮಾಡುತ್ತಾನೋ ಅವರಿಗೆ! ನಾನು ಒಬ್ಬನೇ ತುಪ್ಪ ತಿಂದರೆ ನನಗೊಬ್ಬನಿಗೆ ಲಾಭ ಆಗಬಹುದು, ಅದನ್ನು ಯಜ್ಞ ಮಾಡುವಾಗ ಅಗ್ನಿಗೆ ಹಾಕಿದರೆ ನಾಶವಾಗುವುದಿಲ್ಲ, ಸೂಕ್ಷ್ಮ ಕಣಗಳಾಗಿ ಮಾರ್ಪಟ್ಟು ವಾಯುಮಂಡಲದಲ್ಲಿ ಹರಡುತ್ತೆ, ಅದರ ಲಾಭ ಎಲ್ಲರಿಗೂ ಸಿಕ್ಕುತ್ತೆ, ಈ ವೈಜ್ಞಾನಿಕ ಸತ್ಯವನ್ನು ಯಾರೂ ಯೋಚನೆ ಮಾಡುವುದಿಲ್ಲ, ನಿಮಗೆ ಗೊತ್ತಿದೆ, ಬೆಂಕಿಗೆ ಮಾತ್ರ ಆ ಶಕ್ತಿ ಇರೋದು, ಬೆಂಕಿಗೆ ತನಗೆ ಸಿಗುವ ಎಲ್ಲಾ ವಸ್ತುಗಳನ್ನು ದಹಿಸಿ, ಛಿನ್ನ ಭಿನ್ನಗೊಳಿಸಿ ಎಲ್ಲಾ ಕಡೆ ಹರಡುವ ಶಕ್ತಿ ಇದೆ, ಅದು ಒಳ್ಳೆಯದನ್ನೂ ಕೊಟ್ಟರೂ ಮಾಡುತ್ತೆ, ಕೆಟ್ಟದನ್ನು ಕೊಟ್ಟರೂ ಮಾಡುತ್ತೆ. ನೀರಿನಲ್ಲಿ ಹೋಮ ಮಾಡಿದರೆ ಏನೂ ಪ್ರಯೋಜನವಿಲ್ಲ. ಸೋಮ ಪದಕ್ಕೆ ಇರುವ ಮತ್ತೊಂದು ಅರ್ಥ ಸಾರಭೂತವಾದದ್ದು ಅಂತ. ಉದಾಹರಣೆಗೆ ಹೇಳಬೇಕೆಂದರೆ ಸೋಮ ಅನ್ನುವ ಬಳ್ಳಿ ಇದೆ, ಅದರಲ್ಲೂ ಬಿಡುವುದು ಒಂದೇ ಎಲೆ, ಅದರಲ್ಲಿ ೪೧ ವಿಧವಾದ ಔಷಧೀಯ ಗುಣಗಳಿವೆ. ಅದನ್ನು ಉಪಯೋಗಿಸಿ ಮಾಡುವ ಯಜ್ಞಕ್ಕೆ ಸೋಮಯಾಗ ಅನ್ನುತ್ತಾರೆ, ಸೋಮದ ಎಲೆ ಅಂತ ಯಾವುದೋ ಕಡ್ಡಿ ಹಾಕುತ್ತಾರೆ, ಹಾಕಬೇಕಾದ್ದನ್ನು ಹಾಕದೆ ಬೇರೆ ಏನೋ ಹಾಕಿ ಹಾಕಿದೆವೆಂದು ಅಂದುಕೊಳ್ಳುತ್ತಾರೆ. ಪುರೋಹಿತರು ಅಂತಾರಲ್ಲಾ ಅವರು ಪುರೋಹತರೇ! ಆತ್ಮಶುದ್ಧಿಯಿಲ್ಲದೆ ಪೂಜೆ ಮಾಡಿಸುವ ಪುರೋಹಿತರೆಲ್ಲಾ ಪುರೋಹತರೇ! ಸೋಮ ಅನ್ನುವ ಪದಕ್ಕೆ 'ಪ್ರಸವೈಶ್ವರ್ಯ' ಅನ್ನುವ ಹೆಸರೂ ಇದೆ. ಯಾವತ್ತೂ ವೇದ ಬಡವರಾಗಿರಿ ಎಂದು ಹೇಳುವುದಿಲ್ಲ, ತಾವಾಗೇ ಬಡತನ ಬಯಸಿದರೆ ಪರವಾಗಿಲ್ಲ, ವಿನೋಬಾ ಬಾವೆಯವರಂತೆ! ಬಡತನ ಅನ್ನುವುದು ಒಂದು ಅಭಿಶಾಪ. ಭಗವಂತ ಸರ್ವೈಶ್ಯರ್ಯ ಸಂಪನ್ನ. ಅವನ ಮಕ್ಕಳು ನಾವು ಬಡತನದಲ್ಲಿದ್ದರೆ ಅವನಿಗೆ ಸಂತೋಷವಿರುತ್ತೇನು? ಅವನ ಮಕ್ಕಳು ನಾವು ಚೆನ್ನಾಗಿ ತಿನ್ನಬೇಕು, ಸುಖವಾಗಿರಬೇಕು, ಅದು ಭಗವಂತನ ಆಸೆ. ನಾವು ಬಲವಂತವಾಗಿ ಉಪವಾಸ ಮಾಡಿದರೆ ಅವನಿಗೆ ಸಂತೋಷ ಆಗುತ್ತೆ ಅಂತ ಮಾಡಿದ್ದೀರಾ? ಗಾಂಧೀಜಿ ಪತ್ನಿ ಕಸ್ತೂರಿಬಾ ಹೇಳುತ್ತಿದ್ದರು,' ನಮ್ಮ ಯಜಮಾನರು ೭ ದಿನ, ೧೫ ದಿನ, ೨೧ ದಿನ ಹೀಗೆಲ್ಲಾ ಉಪವಾಸ ಮಾಡುತ್ತಾರೆ, ಸ್ವಲ್ಪ ಸ್ವಲ್ಪ ದಿನ ಏಕೆ, ಪೂರ್ಣ ಸಾಯುವವರೆಗೂ ಉಪವಾಸ ಮಾಡಿ ಸತ್ತುಬಿಡಲಿ, ನಾಲ್ಕು ದಿನ ಅತ್ತು ಸುಮ್ಮನಾಗುತ್ತೇನೆ, ನಂತರ ಮರೆತುಬಿಡುತ್ತೇನೆ' ಅಂತ. ಆ ಸಾಧ್ವಿಯ ಬಾಯಲ್ಲಿ, ಮಹಾಪತಿವ್ರತೆಯ ಬಾಯಲ್ಲಿ ಅಂತಹ ಮಾತು ಬರಬೇಕಾದರೆ ಎಷ್ಟು ನೊಂದಿರಬೇಕು, ಊಹಿಸಿ. ಕಸ್ತೂರಿಬಾ ಬಹಳ ಕಾಯಿಲೆಯಿಂದ ನರಳಿದವರು. ಅವರು ಸಾಯುವ ಸಮಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಡೆದ ಘಟನೆ. ಅವರು ಆಯುರ್ವೇದದ ಔಷಧಿ ಮಾತ್ರ ಬಳಸುತ್ತಿದ್ದರು, ಇಂಗ್ಲಿಷ್ ಔಷಧಿ ತೆಗೆದುಕೊಳ್ಳುತ್ತಿರಲಿಲ್ಲ. ಹತ್ತಿರವಿದ್ದವರಲ್ಲಿ ಏನೋ ಒಂದು ಆಸೆ, ಅಲ್ಲಿದ್ದ ವೈದ್ಯರೊಬ್ಬರು ಪೆನ್ಸಿಲಿನ್ ಇಂಜೆಕ್ಷನ್ ತಂದು ಕಸ್ತೂರಿಬಾರಿಗೆ ಕೊಡಲೇ ಎಂದು ಕೇಳಿದರು. ಅವರು ಗಾಂಧೀಜಿಯನ್ನು ಕೇಳಿಬಿಡಿ ಅಂದರು. ಆ ಗಾಂಧೀಜಿಯೂ ಇಂಗ್ಲಿಷ್ ಔಷಧಿ ಬಳಸುತ್ತಿರಲಿಲ್ಲ. ಅವರನ್ನು ಕೇಳುವುದೂ ಒಂದೆ, ಬಿಡುವುದೂ ಒಂದೇ ಎಂದು ಸುಮ್ಮನಾದರು. ಆ ಗಾಂಧೀಜೀನೋ, ಅವರನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅವರಷ್ಟೇ ಎತ್ತರ ಬೆಳೆಯಬೇಕು. ಅವರನ್ನು ಬಯ್ಯುವುದು ಸುಲಭ.
ನಾವು ಮನಸ್ಸಿನಲ್ಲಿ ಎಲ್ಲರೂ ಸುಖವಾಗಿರಲಿ ಅನ್ನುತ್ತೇವೆ, ಆದರೆ ನಾವು ಅನ್ನುವುದನ್ನು ಬಿಡುವುದಿಲ್ಲ. ನಮ್ಮ ಸ್ವಾರ್ಥವನ್ನು ನಾವು ಬಿಡುವುದಿಲ್ಲ. ಗೋಬ್ರಾಹ್ಮಣೇಭ್ಯಃ ಶುಭಂಭವತು ಅಂತೀವಿ, ಗೋವು, ಬ್ರಾಹಣರಿಗೆ -ಅವರೂ ಒಂದು ತರಹ ಪ್ರಾಣಿಗಳೇ ಅಂದುಕೊಳ್ಳಿ - ಶುಭವಾಗಲಿ ಅಂತ. ಈ ಗೋವು, ಬ್ರಾಹ್ಮಣರು ಈ ಪ್ರಪಂಚದಿಂದ ಹೊರಗಿದ್ದಾರೆಯೇ? 'ಲೋಕಾಸಮಸ್ತಾಃ ಸುಖಿನೋಭವಂತು' ಎಂದು ವೇದ ಹೇಳುವಾಗ ಇವೆರಡನ್ನು ಮಾತ್ರಾ ಎತ್ತಿ ಏಕೆ ತೋರಿಸಬೇಕು? ಹೀಗೆ ನಮ್ಮ ತಂದೆಗೆ ಹೇಳಿದಾಗ ಅವರಿಗೆ ಬಹಳ ಕೋಪ ಬರುತ್ತಿತ್ತು. 'ಏನಪ್ಪಾ ನೀನು, ಶಾಸ್ತ್ರಕ್ಕೆ ವಿರುದ್ಧವಾಗಿ ಮಾತನಾಡುತ್ತೀ' ಅನ್ನುತ್ತಿದ್ದರು. 'ಅದು ಯಾವ ಶಾಸ್ತ್ರ?' ಅಂತ ಕೇಳಿದರೆ ಅವರಿಗೆ ಸರಿಯಾಗಿ ಉತ್ತರ ಕೊಡಲಾಗುತ್ತಿರಲಿಲ್ಲ, 'ಶಾಸ್ತ್ರ ಶಾಸ್ತ್ರ ಕಣಯ್ಯಾ' ಅನ್ನುತ್ತಿದ್ದರು. ಸಂಸ್ಕೃತದಲ್ಲಿ ಇರುವುದೆಲ್ಲಾ ಶಾಸ್ತ್ರವಾ? ಇವೆಲ್ಲಾ ಆಲೋಚನೆ ಮಾಡಿದರೆ ಮಾತ್ರ ಗೊತ್ತಾಗುವುದೇ ಹೊರತು, ಇಲ್ಲದಿದ್ದರೆ ಗೊತ್ತಾಗುವುದಿಲ್ಲ. ನಾವು ಸತ್ಕರ್ಮಕ್ಕೆ ವಿಮುಖರಾಗದಿರೋಣ, ಐಶ್ವರ್ಯ ಇದ್ದಾಗ ಆಡಂಬರದಿಂದ ಹಬ್ಬ, ನಾಮಕರಣ, ಉಪನಯನ, ಮದುವೆ, ಇತ್ಯಾದಿಗೆ ಲಕ್ಷಾಂತರ ರೂ. ಖರ್ಚು ಮಾಡುತ್ತಾರೆ, ಬಡವ ಏನು ಮಾಡಬೇಕು? ಬಡವ, ಭಾಗ್ಯವಂತ ಎಲ್ಲಾ ನಾವು ಮಾಡಿಕೊಂಡಿರೋದು, ಬೆಂಕಿಯಲ್ಲಿ, ಗಾಳಿಯಲ್ಲಿ, ಭೂಮಿಯಲ್ಲಿ, ಆಕಾಶದಲ್ಲಿ, ನೀರಿನಲ್ಲಿ ಎಲ್ಲಾ ಕಡೆ ಐಶ್ವರ್ಯ ತುಂಬಿಕೊಂಡಿದೆ. ಬುದ್ಧಿಹೀನರಾದ ನಾವು ಆ ಐಶ್ವರ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತೇವೆ. ವಾಯುವಿನಲ್ಲಿ ಪ್ರಾಣ ಕೊಡುವ ಶಕ್ತಿ ಇದೆ. ಜನ ಹೋಮ, ಹವನ ಮಾಡಿ ಗಾಳಿಯಲ್ಲಿ ಶುದ್ಧತೆ ಹರಡುವುದಿಲ್ಲ, ಬೀಡಿ, ಸಿಗರೇಟು, ಚುಟ್ಟಾ ಸೇದಿ ಗಾಳಿಯಲ್ಲಿ ಹೊಗೆ ಬಿಟ್ಟು ಅವರೂ ಹಾಳಾಗಿ ನಮ್ಮನ್ನೂ ಹಾಳು ಮಾಡುತ್ತಾರೆ, ಯಾತಕ್ಕೆ? ಪಂಚಭೂತಗಳನ್ನು ಶುದ್ಧವಾಗಿಡಲು ಕರ್ಮ ಮಾಡಬೇಕು. ಯಜ್ಞ ಮಾಡುವುದಕ್ಕೆ ತುಪ್ಪ ಇಲ್ಲ, ಯಾವುದೋಎಣ್ಣೆ ಹಾಕುವುದು, ಅದೂ ಇಲ್ಲ, ವನಸ್ಪತಿ, ಹಾಕಬೇಕಾದ ಸಮಿತ್ತು ಇಲ್ಲ, ಯಾವುದೋ ಕಡ್ಡಿ ಹಾಕಿದರಾಯಿತು, ಈ ರೀತಿ ಮಾಡಿದರೆ ಸರಿಯೇ? ಅದರಲ್ಲಿ ಸತ್ವ ಇಲ್ಲ. ಹಾಕಬೇಕಾದ್ದನ್ನು ಹಾಕದೆ ಬಿಟ್ಟು ಯಜ್ಞ ಮಾಡಿದರೇನು, ಬಿಟ್ಟರೇನು! ನನಗೆ ಗೊತ್ತಿರುವ ಒಂದು ಕುಟುಂಬ ಇದೆ -ದೊಡ್ಡ ಆರ್ಯಸಮಾಜಿ ಪರಿವಾರ ಅದು- ಅವರ ಮನೆಯಲ್ಲಿ ಒಮ್ಮೆ ಯಜ್ಞ ಮಾಡುವಾಗ ಮನೆಯ ಯಜಮಾನಿಯಾದ ಅಜ್ಜಿ -ಅವರೂ ಉಪಾಧ್ಯಾಯಿನಿ ಆಗಿದ್ದವರು- ತನ್ನ ಅಳಿಯನಿಗೆ ತುಪ್ಪ ತರಲು ಹೇಳಿದರು, ಅವರು ಅಡಿಗೆ ಮನೆಯಿಂದ ತುಪ್ಪ ತಂದರೆ, ಅದಲ್ಲಾ, ಅದು ತಿನ್ನುವ ತುಪ್ಪ, ಯಜ್ಞಕ್ಕೆ ಅಂತ ಇಟ್ಟಿರುವ ಬೇರೆ ತುಪ್ಪ ತನ್ನಿ ಅಂತ ಹೇಳಿದರು. ಇಂಥ ಯಜ್ಞ ಯಾಕೆ ಮಾಡಬೇಕು? ಮಾಡಲೇಬಾರದು. ಬದಲಿಗೆ ನಾಸ್ತಿಕರಾಗಿ, ನಾನು ಒಪ್ಪುತ್ತೇನೆ. ಆಸ್ತಿಕತೆ ಹೆಸರಿನಲ್ಲಿ ಎಲ್ಲರ ತಲೆ ಬೋಳಿಸುವ ಕೆಲಸ ಇದೆಯಲ್ಲಾ, ಅದು ಮಹಾ ಪಾಪ. ಒಬ್ಬರು ಮಹಾಶಯರು ನನಗೆ ಹೇಳಿದ್ದರು, ನೀನು ನಾಸ್ತಿಕ ಕಣಯ್ಯಾ ಅಂತ. ಆಗಲಿ, ನಿಮ್ಮ ಆಶೀರ್ವಾದದಿಂದ ನಾನು ನಾಸ್ತಿಕನಾಗೆ ಇರುತ್ತೇನೆ ಎಂದು ಉತ್ತರಿಸಿದ್ದೆ. ಅಷ್ಟೆಲ್ಲಾ ಸಂಪ್ರದಾಯಸ್ಥರಾಗಿದ್ದ ನನ್ನ ತಂದೆ ಸಾಯುವ ಕಾಲಕ್ಕೆ ಆಸ್ಪತ್ರೆಯಲ್ಲಿದ್ದಾಗ ನಾನು ಹೊರಗೆ ಇದ್ದೆ. ನನ್ನ ತಂದೆ ನರ್ಸ್‌ಗೆ ಹೇಳಿ ನನ್ನನ್ನು ಕರೆಸಿದರು. ನನ್ನ ಕೈಹಿಡಿದು 'ಮಗೂ, ನಿನಗೆ ನಾನು ಸಿಕ್ಕಾಪಟ್ಟೆ ಬೈದುಬಿಟ್ಟಿದ್ದೀನಿ. ಮರೆತುಬಿಡು, ನೀನು ದೊಡ್ಡ ಮನುಷ್ಯ ಆಗುತ್ತೀಯ, ನಿನ್ನಿಂದ ನಮ್ಮ ಕುಲಕ್ಕೆ ಒಳ್ಳೆ ಹೆಸರು ಬರಬೇಕು' ಎಂದು ಹೇಳಿದ್ದರು. ಶಾಪ ಕೊಟ್ಟಿದ್ದ ತಂದೆಯಿಂದ ನನಗೆ ಆಶೀರ್ವಾದ ಸಿಕ್ಕಿತು, ನನಗೆ ತೃಪ್ತಿ. ಅವರು ಆಶೀರ್ವಾದ ಕೊಡದೇ ಹೋಗಿದ್ದರೂ ನನ್ನ ತೃಪ್ತಿಯಲ್ಲಿ ಕೊರತೆಯಾಗುತ್ತಿರಲಿಲ್ಲ. ನನ್ನ ತಂದೆ ನನಗೆ ಪೂಜ್ಯರು ಹೌದು, ಆದರೆ ಯಾರಿಗೆ ಗೊತ್ತು, ಎಷ್ಟು ಜನರಿಗೆ ತೊಂದರೆ ಕೊಟ್ಟಿದ್ದಾರೋ ಏನೋ, . . . ಹಳ್ಳಿಯಲ್ಲಿ ಇದ್ದಾಗ ಪಟೇಲರು, ಶಾನುಭೋಗರು, ಅವರು, ಇವರು ತರಕಾರಿ, ಎಣ್ಣೆ, ತುಪ್ಪ, ಅಕ್ಕಿ, ಬೇಳೆ ತಂದು ಕೊಡುತ್ತಿದ್ದರು. ನಾನು ಕೇಳುತ್ತಿದ್ದೆ, 'ಅಪ್ಪಾ, ಇದಕ್ಕೆ ನೀವು ದುಡ್ಡು ಕೊಡುತ್ತೀರಾ?' ಅಂತ. 'ಇಲ್ಲ, ಅವರು ಶ್ರದ್ಧೆಯಿಂದ ಕೊಡ್ತಾರೆ' ಅಂತಿದ್ದರು. 'ಅವರು ಶ್ರದ್ಧೆಯಿಂದ ಕೊಡ್ತಾರೆ, ನೀವು ಶ್ರದ್ಧೆಯಿಂದ ತೊಗೋತೀರಾ?' ಅದಕ್ಕೆ ಅವರು ಉತ್ತರಿಸುತ್ತಿರಲಿಲ್ಲ. ಯಾರು ಏನೇ ಅನ್ನಲಿ, ನಿಮ್ಮನ್ನು ಶತ್ರುವಾಗೇ ಕಾಣಲಿ, ನೀವು ಮಾತ್ರಾ ನಾನು ಎಲ್ಲರ ಮಿತ್ರ ಎಂದುಕೊಳ್ಳಿ, ಇತರರು ನಿಮ್ಮನ್ನು ದ್ವೇಶಿಸಲಿ, ಪ್ರತಿಯಾಗಿ ನೀವು ದ್ವೇಶಿಸಲು ಹೋಗಬೇಡಿ. ದೊಡ್ಡಮಾತು, ಮಹಾತ್ಮರಿಗೆ ಅರ್ಥವಾಗುತ್ತೆ, ನಮಗೆ ಅರ್ಥವಾಗಲ್ಲ, ನಮಗೆ ಯಾಕೆ? ಅಂದುಕೊಂಡು ಅವನು ಎರಡು ಮಾತು ಬೈದನಲ್ಲಾ, ಹತ್ತು ಮಾತು ಜಾಡಿಸಿಬಿಡುತ್ತೇನೆ ಅಂದರೆ ಅವನದು ಎರಡು, ನಿಮ್ಮದು ಹತ್ತು, ಹನ್ನೆರಡು ಮಾತು ಕೇಳಿ ಬಂತು, ಯಾರ ಉದ್ಧಾರಕ್ಕೆ? ನಾವು ಈರೀತಿ ಯೋಚನೆ ಮಾಡುವುದನ್ನು ಕಲಿಯಬೇಕು, ಯೋಚನೆ ಮಾಡದೆ ಯಾವ ಕೆಲಸವನ್ನೂ ಮಾಡಬಾರದು, ವಿದ್ಯೆ, ಜ್ಞಾನದಿಂದ ಮಾಡುವ ಕೆಲಸದಲ್ಲಿ ಶಕ್ತಿ ತುಂಬಿಕೊಂಡಿರುತ್ತದೆ, ಎಲ್ಲರೊಡನೆ ಮೃದುವಾಗಿ, ಮಧುರವಾಗಿ ಮಾತನಾಡಬೇಕೆಂದು ವೇದ ಹೇಳುತ್ತದೆ. ಜೇನುತುಪ್ಪದಂತಿರಬೇಕೆಂದು ಹೇಳುತ್ತದೆ. ಒಳ್ಳೆಯ ಮಾತು ಎಲ್ಲಿ ಕೇಳುತ್ತೇವೆ, ಒಬ್ಬರನ್ನೊಬ್ಬರು ಬಯ್ಯುವುದು, ಒಬ್ಬರನ್ನೊಬ್ಬರು ಹಂಗಿಸುವುದು, ಇದರಲ್ಲೆ ಕಳೆಯುತ್ತೇವೆ. ಆಲೋಚನೆ ಮಾಡೋಣ, ಒಳ್ಳೆಯ ರೀತಿ ಬಾಳೋಣ.
Comments
ಉ: ಪಂ. ಸುಧಾಕರ ಚತುರ್ವೇದಿಯವರ ವಿಚಾರಧಾರೆ - 2
In reply to ಉ: ಪಂ. ಸುಧಾಕರ ಚತುರ್ವೇದಿಯವರ ವಿಚಾರಧಾರೆ - 2 by Jayanth Ramachar
ಉ: ಪಂ. ಸುಧಾಕರ ಚತುರ್ವೇದಿಯವರ ವಿಚಾರಧಾರೆ - 2