ನಮ್ಮ ತಂದೆಯ ನೆನಪಿನ ಸುರಳಿಗಳು

ನಮ್ಮ ತಂದೆಯ ನೆನಪಿನ ಸುರಳಿಗಳು

ನೆನ್ನೆ ಊಟದ ಸಮಯಕ್ಕೆ ಇನ್ನೇನು ತಟ್ಟೆ ಹಾಕ್ಬೇಕು ಎನ್ನುವಷ್ಟರಲ್ಲಿ ವಿದ್ಯುತ್ ಕೈ ಕೊಟ್ಟಿತು. ಸರಿ ಇನ್ನು ವಿದ್ಯುತ್ ಬಾರೋ ತನಕ ಊಟವಿಲ್ಲ ಎಂದುಕೊಂಡು ಮನೆಯ ಆಚೆ ಬಂದು ಕುಳಿತೆವು. ನಾನು ನನ್ನ ತಂದೆ, ತಾಯಿ ಹಾಗೂ ನನ್ನ ಪತ್ನಿ ಮಾತಿಗೆ ಶುರುವಿಟ್ಟುಕೊಂಡೆವು. ಮಾತಿಗೆ ಮಾತು ಶುರುವಾಗಿ ನಮ್ಮ ತಂದೆಯವರು ಅವರ ನೆನಪಿನ ಬುತ್ತಿಯನ್ನು ಬಿಚ್ಚಿದರು.

೧) ಸ್ವಾತಂತ್ರ್ಯ ಬಂದ ಎರಡು ವರ್ಷಗಳ ನಂತರ ನನ್ನ ತಂದೆಯವರು ಹುಟ್ಟಿದ್ದು. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮಾರಂಡಹಳ್ಳಿ ಎಂಬ ಗ್ರಾಮದಲ್ಲಿ ಲಕ್ಷ್ಮಣಾಚಾರ್ ಪದ್ಮಾವತಿ ದಂಪತಿಗಳ ನಾಲ್ಕನೇ ಮಗನಾಗಿ ಜನಿಸಿದ ಮಗನೆ ನನ್ನ ತಂದೆ. ನನ್ನ ತಂದೆಯವರೊಂದಿಗೆ ಒಟ್ಟು ಇಬ್ಬರು ಅಕ್ಕಂದಿರು, ಒಬ್ಬ ತಂಗಿ, ಒಬ್ಬ ಅಣ್ಣ , ನಾಲ್ಕು ಜನ ತಮ್ಮಂದಿರ ದೊಡ್ಡ ಕುಟುಂಬ. ದೊಡ್ಡ ಕುಟುಂಬದ ಜೊತೆ ಬಡತನವೂ ಹೇರಳವಾಗಿ ಬಂದಿತ್ತು. ನಮ್ಮ ತಾತನವರ ಬಳಿ ಉಳುಮೆ ಮಾಡಲು ಸಾಕಷ್ಟು ಜಮೀನು ಇರಲಿಲ್ಲ. ಇದ್ದ ಸ್ವಲ್ಪ ಜಮೀನಲ್ಲೇ ವ್ಯವಸಾಯ ಮಾಡಿಕೊಂಡು ಅಷ್ಟು ದೊಡ್ಡ ಕುಟುಂಬ ಸಾಕುವುದು ಸುಲಭವಾಗಿರಲಿಲ್ಲ. ಇನ್ನು ಕುಟುಂಬ ನಿರ್ವಹಣೆ ನಡೆಸಬೇಕಲ್ಲವೇ. ಅದಕ್ಕೆಂದು ನಮ್ಮ ತಾತನವರು ನಮ್ಮ ಹಳ್ಳಿಯಿಂದ ಸುಮಾರು ೪ ಕಿ.ಮೀ ದೂರದಲ್ಲಿರುವ ನರಸಿಂಹ ತೀರ್ಥ ಎಂಬ ಕ್ಷೇತ್ರಕ್ಕೆ ಅಡಿಗೆ ಮಾಡಲು ಹೋಗುತ್ತಿದ್ದರು. ಪ್ರತಿದಿನ ಬೆಳಿಗ್ಗೆ ಬೇಗನೆ ಎದ್ದು ಇದ್ದ ಒಂದು ಹಳೆ ಸೈಕಲ್ ಏರಿ ಅಲ್ಲಿಗೆ ಹೋಗಿ ಅಡಿಗೆ ಮಾಡಿ ಅಲ್ಲಿಯೇ ಊಟ ಮಾಡಿ ವಿಶೇಷ ಭಕ್ಷ್ಯಗಳೆನಾದರೂ ಇದ್ದಾರೆ ಅದನ್ನು ಒಂದು ಬಟ್ಟೆಯಲ್ಲಿ ಕಟ್ಟಿಕೊಂಡು ಮನೆಗೆ ಬಂದು ಮಕ್ಕಳಿಗೆ ಹಂಚುತ್ತಿದ್ದರಂತೆ. ಅಲ್ಲಿ ಬರುವ ಸಂಬಳ ಹಾಗೂ ದಕ್ಷಿಣೆಯಿಂದ ಅಷ್ಟು ದೊಡ್ಡ ಕುಟುಂಬ ನಡೆಸಬೇಕಿತ್ತು.

ಒಮ್ಮೊಮ್ಮೆ ಬೆಳೆ ಕೈ ಕೊಟ್ಟಾಗ ಇವರ ಹತ್ತಿರ ಇದ್ದ ಹಣದಿಂದ ಉತ್ತಮ ಅಕ್ಕಿ ಕೊಳ್ಳಲು ಸಾಧ್ಯವಾಗದೆ ಕಡಿಮೆ ಬೆಲೆಯ ಶಾಮೆ ಅಕ್ಕಿ ಕೊಂಡು ಅಡಿಗೆ ಮಾಡಿ ತಿನ್ನುತ್ತಿದ್ದರಂತೆ, ಆ ಅಕ್ಕಿ ವಿಪರೀತ ಉಷ್ಣ, ಅದು ತಿಂದರೆ ಮೈಯೆಲ್ಲಾ ಕೆರೆತ ಉಂಟಾಗಿ ಬೊಬ್ಬೆಗಳು ಬರುತ್ತಿದ್ದವಂತೆ.ಒಮ್ಮೊಮ್ಮೆ ಗಂಜಿಯೇ ಗತಿ...ಇಷ್ಟಾದರೂ ಕುಟುಂಬದಲ್ಲಿ ಎಂದಿಗೂ ವೈಮನಸ್ಯಗಳು, ಜಗಳಗಳು ಇರಲಿಲ್ಲವಂತೆ, ಹಸಿವಿನಿಂದ ಇದ್ದರೂ ನೆಮ್ಮದಿಗೆ ಕೊರತೆ ಇರಲಿಲ್ಲವಂತೆ.

೨) ಇನ್ನು ಅಷ್ಟು ಜನ ಮಕ್ಕಳನ್ನು ಉತ್ತಮ ವಿದ್ಯಾಭ್ಯಾಸ ಕೊಡಿಸುವುದು ಎಂದರೆ ಸುಲಭದ ಮಾತೆ? ಹೇಗೋ ಕಷ್ಟಪಟ್ಟು ಅಷ್ಟು ಮಕ್ಕಳನ್ನು ಪ್ರೌಡ ಶಾಲೆವರೆಗೂ ಓದಿಸಿದರೆ ನಮ್ಮ ತಂದೆ ಹೊರತು ಪಡಿಸಿ ಮಿಕ್ಕೆಲ್ಲರೂ ಓದಿನ ಮೇಲೆ ಆಸಕ್ತಿ ಇಲ್ಲದೆ ಅಲ್ಲಿಗೆ ತಮ್ಮ ಓದಿಗೆ ವಿದಾಯ ಹೇಳಿದರಂತೆ. ನಮ್ಮ ತಂದೆ ಒಬ್ಬರೇ ಬಿ.ಎ ತನಕ ಓದಿದರು. ನಂತರ ನಮ್ಮ ತಂದೆಯ ಅಕ್ಕಂದಿರ ಮದುವೆ, ಅಣ್ಣನ ಮದುವೆ ಎಲ್ಲ ನಡೆದು ಎಲ್ಲರೂ ತಮ್ಮ ಮುಂದಿನ ಜೀವನದ ಹಾದಿ ಕಂಡುಕೊಳ್ಳುವ ಹಂತದಲ್ಲಿದ್ದರು. ಕಾಲ ಅದೇ ನರಸಿಂಹ ತೀರ್ಥ ಕ್ಷೇತ್ರದಲ್ಲಿ ನಮ್ಮ ತಂದೆ ಹಾಗೂ ಅಣ್ಣ, ತಮ್ಮಂದಿರು ತಾತನ ಜೊತೆ ಬಳುವಳಿಯಾಗಿ ಬಂದ ಅದೇ ಅಡಿಗೆ ಕಾಯಕವನ್ನು ಮುಂದುವರಿಸಿದರು. ನಂತರ ನಮ್ಮ ತಂದೆಯವರ ಮದುವೆ ನಂತರ ತಾತನವರ ಮರಣ, ಮುಂದಿನ ಜೀವನ ಸವೆಸಲು ಬೆಂಗಳೂರಿಗೆ ಪಯಣ.

೩) ಬೆಂಗಳೂರಿಗೆ ಕೆಲಸ ಅರಸಿ ಬಂದು ಕೆಲಸ ಸಿಗದೇ ಅಲ್ಲಿ ಇಲ್ಲಿ ಒದ್ದಾಡಿ ಕೊನೆಗೆ ವಿಧಾನಸೌಧದಲ್ಲಿ ಗುಮಾಸ್ತನಾಗಿ ನೇಮಕಗೊಂಡಾಗ ಒಂದು ನಿಟ್ಟುಸಿರು. ಆದರೆ ಆಗ ನಮ್ಮ ತಂದೆಯವರಿಗೆ ಬರುತ್ತಿದ್ದ ಸಂಬಳ ಕೇವಲ ೭೨ ರೂಗಳು. ಎಷ್ಟೋ ದಿನ ಪ್ಯಾಂಟ್ ಕೊಳ್ಳಲು ಹಣವಿಲ್ಲದೆ ಪಂಚೆಯಲ್ಲೇ ಕೆಲಸಕ್ಕೆ ಹೋಗುತ್ತಿದ್ದರಂತೆ, ಹಣ ಉಳಿಸಲು ಚಾಮರಾಜಪೇಟೆಯಿಂದ ವಿಧಾನಸೌಧದವರೆಗೂ ನಡೆದೇ ಹೋಗುತ್ತಿದ್ದರಂತೆ. ದಿನ ಕಳೆಯುತ್ತಿದ್ದಂತೆ ಬಡ್ತಿ ಸಿಕ್ಕ ಹಾಗೆ ಒಂದು ಸೈಕಲ್ ಕೊಂಡುಕೊಂಡು ಅದರಲ್ಲೇ ಪ್ರಯಾಣ. ೩೦ ವರ್ಷ ವಿಧಾನ ಸೌಧದಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿ ಈಗ ನಿವೃತ್ತಿ ಜೀವನವನ್ನು ನೆಮ್ಮದಿಯಿಂದ ದೂಡುತ್ತಿದ್ದಾರೆ. ಈಗಲೂ ಅವರನ್ನು ಕಂಡ ಹಲವರು ಕೇಳುವ ಪ್ರಶ್ನೆ ಏನಯ್ಯ ಇಷ್ಟು ವರ್ಷ ವಿಧಾನ ಸೌಧದಲ್ಲಿ ಕೆಲಸದಲ್ಲಿದ್ದೆ ಒಂದು ಸ್ವಂತ ಮನೆ ಮಾಡಿಕೊಳ್ಳಲಿಲ್ಲವೇ ಎಂದು. ನಮ್ಮ ತಂದೆಯವರ ಪ್ರಾಮಾಣಿಕತೆಯೇ ಅದಕ್ಕೆ ಸಾಕ್ಷಿ.

ಇಷ್ಟು ಹೇಳುವ ಹೊತ್ತಿಗೆ ವಿದ್ಯುತ್ ಬಂದು ಊಟಕ್ಕೆ ಹೊರಟೆವು..ಆದರೆ ರಾತ್ರಿಯೆಲ್ಲ ನನ್ನ ಕಾಡುತ್ತಿದ್ದ ವಿಷಯವೇನೆಂದರೆ ನಮ್ಮ ತಂದೆಯವರು ಪಟ್ಟ ಕಷ್ಟದಲ್ಲಿ ನಾವು ೧೦% ಸಹ ಕಷ್ಟ ಪಟ್ಟಿಲ್ಲ. ಮಕ್ಕಳ ಒಳ್ಳೆಯದಕ್ಕಾಗಿ ತಮ್ಮ ಆಸೆ ಆಕಾಂಕ್ಷೆಗಳನ್ನು ತ್ಯಾಗ ಮಾಡಿ ನಮಗೆ ಒಂದು ಜೀವನವನ್ನು ರೂಪಿಸಿಕೊಟ್ಟ ನಿಸ್ವಾರ್ಥ , ಸರಳ ಜೀವಿ ಗೆ ಎಷ್ಟು ವಂದಿಸಿದರೂ ಸಾಲದು.. ಅಂದ ಹಾಗೆ ನನ್ನ ತಂದೆಯ ಹೆಸರು ರಾಮಾಚಾರ್, ಪ್ರೀತಿಯಿಂದ ಬಹಳಷ್ಟು ಜನ ರಾಮಣ್ಣ ಎಂದು ಕರೆಯುತ್ತಾರೆ..

ಮುಂದೆ ನಿರೀಕ್ಷಿಸಿ ನಮ್ಮ ತಂದೆಯವರ ಸಿನೆಮಾ ಹುಚ್ಚು, ಹಾಗೂ ದೆವ್ವದ ಅನುಭವ

Comments