ಒಂದು ಸಂಭಾವ್ಯ ಡಿವೋರ್ಸ್ ಪ್ರಸಂಗ
ಪಾಕಿಸ್ತಾನದ ಅರಿವಿಗೆ, ಸುಳಿವಿಗೆ ಸಿಗದೆ ರಾಜಾರೋಷವಾಗಿ ಎತ್ತರದ ಗೋಡೆ ಸುತ್ತುವರಿದ ಕಟ್ಟಡ ವೊಂದರಲ್ಲಿ ವಾಸಿಸುತ್ತಿದ್ದ ಬಿನ್ ಲಾದೆನ್ ನನ್ನು ಅಮೇರಿಕಾ ತನ್ನದೇ ಆದ ಶೈಲಿಯಲ್ಲಿ ಪಾಕಿಸ್ತಾನದ ಅರಿವಿಗೆ ಸುಳಿವಿಗೆ ಸಿಗದೇ ತನ್ನ ಸೀಲ್-೬ ಕಮಾಂಡೋಗಳನ್ನು ಕಳಿಸಿ ಬಲಿ ಹಾಕಿತು. ತನಗೆ ತಿಳಿಸದೆ ತನ್ನ ದೇಶದೊಳಕ್ಕೆ ನುಗ್ಗಿ ಲಾದೆನ್ ಹತ್ಯೆಗೈದ ಅಮೇರಿಕೆಯ ಬಗ್ಗೆ ಪಾಕ್ ಕ್ರೋಧ ವ್ಯಕ್ತಪಡಿಸಿತು. ಪಾಕಿಸ್ತಾನದ ಅರಿವಿಗೆ ಬರದೆ ಬಿನ್ ಲಾದೆನ್ ಬದುಕುತ್ತಿದ್ದ ಅದೂ ಪಾಕ್ ರಾಜಧಾನಿಯ ಹತ್ತಿರ, ಅದೂ ಮಿಲಿಟರಿ ಅಕಾಡೆಮಿ ಯೊಂದರ ಸಮೀಪ ಎಂದರೆ ದೊಡ್ಡ ಆಶ್ಚರ್ಯವೇ. ಕೆಲವರ ಪ್ರಕಾರ ಪಾಕ್ ನೀಡಿದ ಸುಳಿವಿನ ಆಧಾರದ ಮೇಲೆಯೇ ಅಮೇರಿಕಾ ಬಿನ್ ಲಾದೆನ್ ನನ್ನು ಕೊಂದಿದ್ದು ಮತ್ತು ಪಾಕಿಸ್ತಾನದಲ್ಲಿರುವ ತಾಲಿಬಾನಿಗಳ ಆಕ್ರೋಶ ಎದುರಿಸಲು ಆಗದ ಪಾಕ್ ತನಗೆ ಈ ಕಾರ್ಯಾಚರಣೆ ಗೊತ್ತೇ ಇಲ್ಲ ಎಂದು ನಾಟಕ ಮಾಡಿ ಕೈ ತೊಳೆದು ಕೊಂಡಿತು ಎನ್ನುವ ಅಭಿಪ್ರಾಯದೊಂದಿಗೆ ಈ ಮಿಲಿಟರಿ ಕಾರ್ಯಾಚರಣೆ ಒಂದು ನಿಗೂಢ ರಹಸ್ಯವಾಗಿ ಜನರ ಊಹಾ, ಕಲ್ಪನೆಗಳಿಗೆ ಇನ್ನಷ್ಟು ಕಾಲ ಮೇವನ್ನು ಒದಗಿಸಲು ಕಾರಣವಾಯಿತು.
ಸೀಲ್ ಗಳು ನಡೆಸಿದ ಕಾರ್ಯಾಚರಣೆ ಪಾಕಿಗೆ ಗೊತ್ತೇ ಇರಲಿಲ್ಲ ಎನ್ನುವ ಮಾತಿಗೆ ಮನ್ನಣೆ ನೀಡುವುದಾದರೆ ರಹಸ್ಯ ಕಾರ್ಯಾಚರಣೆ ಪಾಕ್ ಮತ್ತು ಅಮೇರಿಕಾ ನಡುವಿನ ಆಪ್ತ ಬಾಂಧವ್ಯವನ್ನು ಡಿವೋರ್ಸ್ ಅಂಚಿಗೆ ತಂದು ನಿಲ್ಲಿಸಿದೆ ಎನ್ನಬಹುದು. ಡಿವೋರ್ಸ್ ಸಹ ಅಷ್ಟು ಸುಲಭದ್ದಲ್ಲ. ಅದು acrimonious ಆಗಿ ತೀರುತ್ತದೆ. ಏಕೆಂದರೆ ಅಮೇರಿಕಾ ಪಾಕ್ ಸುಮಧುರ ಸಂಬಂಧ ಮಕ್ಕಳು ಮರಿಗಳನ್ನು ಹುಟ್ಟಿಸಿದೆ ತಾನೇ? ತಾಲಿಬಾನ್, ಅಲ್ಕೈದಾ, ಆಫ್ಘಾನಿಸ್ತಾನ್, ಮುಲ್ಲಾ ಉಮರ್, ಭಯೋತ್ಪಾದನೆ ಇತ್ಯಾದಿ.. ಹೀಗೆ ಮುಂದುವರಿಯುವ ಸಂತಾನಗಳ ಲಾಲನೆ ಪಾಲನೆ ಹೇಗೆ? ಈ ಸಂತಾನಗಳು ಯಾರ ಜವಾಬ್ದಾರಿ? ಹೀಗೆ ಒಂದು ರೀತಿಯ ವಿಶ್ವದ ನೆಮ್ಮದಿ ಕೆಡಿಸುವ ‘ಡಿವೋರ್ಸ್ ಅಂಡ್ ಕಸ್ಟೋಡಿಯಲ್ ಪ್ರೊಸೀಡಿಂಗ್ಸ್’ ಯಾವ ಹಂತಕ್ಕೆ ಬಂದು ಮುಟ್ಟುತ್ತದೋ ಎಂದು ವಿಶ್ವ ಕೈ ಹೊಸಕಿಕೊಳ್ಳುತ್ತಾ ಆತಂಕಿತವಾಗಿದ್ದರೆ ಇದೋ ಬಂತು ಅಮೇರಿಕೆಯಿಂದ ವಿಶೇಷ ವಿಮಾನವೊಂದು ಅಲ್ಲಿನ ವಿದೇಶಾಂಗ ಕಾರ್ಯದರ್ಶಿಯನ್ನು ಹೊತ್ತು. ಹಿಲರಿ ಕ್ಲಿಂಟನ್ ಬಂದರು ಫಸ್ಟ್ ಏಡ್ ಕಿಟ್ ನೊಂದಿಗೆ. ನೊಂದ ಪ್ರಿಯತಮ/ಮೆ ಮನಕ್ಕೆ ಕೂಲಿಂಗ್, ಹೀಲಿಂಗ್ ಬಾಮ್ ನೊಂದಿಗೆ ಬಂದ ಹಿಲರಿ ಅದೇ characteristic smile ನೊಂದಿಗೆ ಪಾಕಿಸ್ತಾನ ಈಗಲೂ “ಒಳ್ಳೆಯ ಸಹಭಾಗಿ” - ಎ, ಗುಡ್ ಪಾರ್ಟ್ನರ್ ಎಂದು ಹೇಳಿ ಮಲಾಮಿನ ಲೇಪನ ಶುರು ಮಾಡಿದರು. ಈ ಮಾತಿನೊಂದಿಗೆ ಈ ಶನಿ ಸಂಬಂಧ ಇನ್ನೆಂಥ ಮಕ್ಕಳನ್ನು ಹುಟ್ಟಿಸುವ ತರಾತುರಿಯಲ್ಲಿದೆಯೋ ಎಂದು ನಮಗನ್ನಿಸಿದರೆ ಅದರಲ್ಲೇನೂ ತಪ್ಪಿಲ್ಲ. ಯಾರೊಂದಿಗಿನ ಸ್ನೇಹದಲ್ಲೂ, ಶತ್ರುತ್ವದಲ್ಲೂ ಅಮೇರಿಕಾ ಎಂದಿಗೂ ಸಕಾರಾತ್ಮಕ beneficiary ಆಗಿಯೇ ಉಳಿಯುತ್ತದೆ. ಅದಕ್ಕೆ ಇತರರ ಇರುಸು ಮುರುಸು, ಕಷ್ಟ ಕಾರ್ಪಣ್ಯ ಇವೆಲ್ಲಾ ನಗಣ್ಯ. ಪಾಕಿಸ್ತಾನದೊಂದಿಗಿನ ನಮ್ಮ ಗಡಿ ಬದಲಿಸಿ ಕೊಳ್ಳಲು ಆಗದೆ ಬೆರಳುಗಳ ನಟಿಕೆ ಮುರಿಯುತ್ತಾ ಹಲ್ಲು ಮಸೆಯುವ ನಮಗೆ ಇವರೀರ್ವರ ಸಂಬಂಧ ತಲೆ ಬೇನೆಯೇ. ಇವರಿಬ್ಬರ ಸಂಬಂಧ ಚೆನ್ನಾಗಿದ್ದರೂ, ಹಳಸಿದರೂ ನಮಗೆ ಮಾತ್ರ ಗದ್ದಲ ಕಟ್ಟಿಟ್ಟ ಬುತ್ತಿ.
Rating
Comments
ಉ: ಒಂದು ಸಂಭಾವ್ಯ ಡಿವೋರ್ಸ್ ಪ್ರಸಂಗ
ಉ: ಒಂದು ಸಂಭಾವ್ಯ ಡಿವೋರ್ಸ್ ಪ್ರಸಂಗ