ಮರೆಯಲಾರದ ಹಳೆಯ ಕತೆಗಳು: ೫
ಹಿಂದೆಲ್ಲ, ನನಗೆ ಬಸ್ ಅಥವಾ ರೈಲು ಪ್ರಯಾಣ ಅಂದರೆ, ಒಂದು ತರಹ ಖುಷಿ ಆಗ್ತಿತ್ತು. ಯಾಕಂದ್ರೆ, ದಾರಿಯಲ್ಲಿ ಕುಳಿತುಕೊಂಡು ಯಾವ್ದಾದ್ರೂ ಪುಸ್ತಕ ಓದಬಹುದಲ್ಲ ಅಂತ. ರೈಲು ಪ್ರಯಾಣವಾದರೆ ರಾತ್ರಿ ಹೊತ್ತೂ ಕೂಡ ಸ್ವಲ್ಪ ಏನಾದರೂ ಒದಬಹುದಿತ್ತು. ರಾತ್ರಿ ಆದರೆ, ಕಿಟಕೀ ಬದಿಯಲ್ಲಿ ಕುಳಿತು ಹೊರಗಡೆ ನೋಡೋದು ಇನ್ನೇನನ್ನ? ಆದರೆ ಬರೀ ಕಾರಿನಲ್ಲಿ ಪ್ರಯಾಣಿಸೋದೇ ಹೆಚ್ಚಾದ ಮೇಲೆ ದಾರಿಯಲ್ಲಿ ಓದೋದು ಅನ್ನೋದು ಕಷ್ಟವೇ - ದೂರದ ಪ್ರಯಾಣದಲ್ಲಿ ಹೆಚ್ಚು ಕಡಿಮೆ ಯಾವಾಗಲೂ ಕಾರನ್ನ ನಾನೇ ಓಡಿಸೋದ್ರಿಂದ!
ಕೆಲವು ದಿನಗಳ ದೇಶದ ಈ ತುದಿಯಿಂದ ಆ ತುದಿಗೆ ವಿಮಾನದಲ್ಲಿ ಪ್ರಯಾಣ ಮಾಡೋ ಸ್ವಲ್ಪ ದೊಡ್ಡ ಪ್ರಯಾಣದಲ್ಲಿ ತ್ರಿವೇಣಿ ಅವರ ಮೊದಲ ಹೆಜ್ಜೆ ಕಾದಂಬರಿಯನ್ನ ಓದಿದೆ. ಈ ಸಲದ ಹೆಚ್ಚಾಯ ಅಂದರೆ ಇದನ್ನ ಓದಿದ್ದು ಪುಸ್ತಕವಾಗಿ ಅಲ್ಲ, ಬದಲಿಗೆ ಇ-ಪ್ರತಿ ಯಾಗಿ. ಕಿಂಡಲ್ ಮೇಲೆ. ಓದಬೇಕು ಅಂತ ಕಿಂಡಲ್ ನಲ್ಲಿ ಹಾಕಿಕೊಂಡಿರುವ ಹಲವು ಪಿಡಿಎಫ್ ಪುಸ್ತಕಗಳ ಪೈಕಿ ಇದೂ ಒಂದಾಗಿತ್ತು. ಅಂತೂ ಪ್ರಯಾಣದ ನೆವದಲ್ಲಿ ಓದುವುದಕ್ಕೊಂದು ಕಾಲ ಬಂತು ಅನ್ನಿ.
ಸುಮಾರು ೫೦ ವರ್ಷಗಳ ಹಿಂದೆ ತ್ರಿವೇಣಿ ಅವರು ಬರೆದಿರುವ ವಿಷಯದ ಹರಹನ್ನು ನೋಡಿದರೆ ಬಹಳ ಆಶ್ಚರ್ಯವಾಗುತ್ತೆ. ಶರಪಂಜರ, ಬೆಳ್ಳಿಮೋಡ , ಹಣ್ಣೆಲೆ ಚಿಗುರಿದಾಗ ಮೊದಲಾದ ಕಾದಂಬರಿಗಳಷ್ಟು ಜನಪ್ರಿಯವಲ್ಲದೇ ಇರಬಹುದಾದ ಈ ಕಾದಂಬರಿಯಲ್ಲಿ , ೧೯೪೦-೬೦ರ ಸಮಯದ ಸಾಮಾಜಿಕ ಹಿನ್ನೆಲೆಯಲ್ಲಿ ಅಪರೂಪ ಎನ್ನಿಸಬಹುದಾದ ಮಹಿಳಾ ಅಪರಾಧಿಗಳ ವಿಷಯವನ್ನ ತ್ರಿವೇಣಿ ತೆಗೆದುಕೊಂಡಿದ್ದಾರೆ.
ಆದರೆ, ಈ ಕಾದಂಬರಿಯನ್ನ ಓದುತ್ತಿದ್ದಾಗಲೇ ನನಗೆ ತ್ರಿವೇಣಿ ಅವರ ಇನ್ನೊಂದು ಸಣ್ಣ ಕತೆ ಕೂಡ ನೆನಪಾಯಿತು. ತ್ರಿವೇಣಿ ಅವರು ಸಮಸ್ಯೆಯ ಮಗು, ಹೆಂಡತಿಯ ಹೆಸರು ಮತ್ತೆ ಎರಡು ಮನಸ್ಸು ಎನ್ನುವ ಮೂರು ಕಥಾಸಂಕಲನಗಳನ್ನ ಬರೆದಿದ್ದಾರೆ. ಬಹುಶಃ ನಾನು ನೆನಪಿಸಿಕೊಂಡ ’ಎಂಟು ಗಂಟೆ’ ಸಮಸ್ಯೆಯ ಮಗು ಕಥಾಸಂಕಲನದ್ದು.
ತ್ರಿವೇಣಿ ಹಲವಾರು ಕಥೆಗಳಲ್ಲಿ ಸಂಬಂಧಗಳು ಮತ್ತೆ ಅವು ನಮ್ಮ ನಮ್ಮಲ್ಲಿ ತರುವಂತಹ ತಾಕಲಾಟಗಳು, ಅದಕ್ಕೆ ಕಾರಣವಾಗುವ ಮನೋವೈಜ್ಞಾನಿಕ ನೆಲೆ ಇಂತಹವುಗಳ ವಿಷಯಗಳನ್ನು ತರುತ್ತಾರೆ. ಇಂತಹದೇ ಕಥೆ ’ಎಂಟು ಗಂಟೆ’. ಇದನ್ನು ನಾನು ಕಡೆಯ ಬಾರಿ ಓದಿ ಕಡಿಮೆ ಎಂದರೆ ಇಪ್ಪತ್ತೈದು ವರ್ಷಗಳಿಗಿಂತ ಹೆಚ್ಚಾಗಿರುವುದರಿಂದ, ನನ್ನ ವಿವರಗಳು ತಪ್ಪಿದ್ದರೂ ಇರಬಹುದು! ಆದರೆ, ಆ ಕಥೆ ಹೀಗೆ ಮನದಲ್ಲಿ ಅಚ್ಚೊತ್ತಿರುವುದೇ ಇದು "ಮರೆಯಲಾರದ ಹಳೆಯ ಕಥೆಗಳ" ಸಾಲಿಗೆ ಸೇರಲು ಒಂದು ಕಾರಣ.
ಇದ್ದಕ್ಕಿಂದ್ದಂತೆ ಒಂದು ದಿನ ರಾತ್ರಿ ಎಂಟು ಗಂಟೆಯ ಹೊತ್ತಿಗೆ ಚೀರಿ ತಿಳಿವು ತಪ್ಪುವ ಹುಡುಗನಿಂದ ಕಥೆ ಮೊದಲಾಗುತ್ತೆ. ಇದೇನಿದು ಎಂದೂ ಇಲ್ಲದ ತೊಂದರೆ ಎಂದು ತಂದೆ ತಾಯಿಯರಿಗೆ ದಿಗಿಲಾಗುತ್ತೆ. ಆದರೆ ಅವನು ಮತ್ತೆ ಎಚ್ಚೆತ್ತಾಗ, ಮಗು ಏನಕ್ಕೋ ಬೆಚ್ಚಿದ್ದಾನೆ ಎಂದು ಸಮಾಧಾನ ಪಡುತ್ತಾರೆ. ಆದರೆ, ಇದು ಮತ್ತೆ ಮತ್ತೆ ಪ್ರತಿ ದಿನ ಅದೇ ಸಮಯಕ್ಕೆ , ಗೋಡೆ ಗಡಿಯಾರ ಎಂಟು ಗಂಟೆ ಬಾರಿಸುತ್ತಿದ್ದ ಹಾಗೇ ಮರುಕಳಿಸಲು ತೊಡಗಿದ ಮೇಲೆ ತಂದೆ ತಾಯಿಯರ ಚಿಂತೆಗೆ ಕಾರಣವಾಗುತ್ತೆ. ನಂತರ ನುರಿತ ವೈದ್ಯರ ಸಲಹೆ ಕೇಳಲು ಹೋಗುತ್ತಾರೆ.
ವೈದ್ಯರು ಈ ತೊಂದರೆಯನ್ನ ಹೇಗೆ ಬಗೆಹರಿಸಿದರು ಅನ್ನುವುದೇ ಕಥೆಯ ಹುರುಳು. ಎಲ್ಲ ವಿವರಗಳನ್ನ ನಾನು ಹೇಳುವುದಕ್ಕಿಂತ ನೀವೇ ಓದಿದರೆ ಇನ್ನೂ ಚೆನ್ನ!
೧೯೬೦ರ ದಶಕದಲ್ಲಿ ಕನ್ನಡದಲ್ಲಿ ಇಂತಹ ಕಥೆಗಳನ್ನ ಬರೆದ ತ್ರಿವೇಣಿ ಇನ್ನೂ ಬದುಕಿದ್ದಿದ್ದರೆ ಅದೆಷ್ಟು ಬರೆಯುತ್ತಿದ್ದರೋ!
-ಹಂಸಾನಂದಿ
Comments
ಉ: ಮರೆಯಲಾರದ ಹಳೆಯ ಕತೆಗಳು: ೫
ಉ: ಮರೆಯಲಾರದ ಹಳೆಯ ಕತೆಗಳು: ೫
ಉ: ಮರೆಯಲಾರದ ಹಳೆಯ ಕತೆಗಳು: ೫