ಏ ಹುಡುಗಿ ಹುಬ್ಬಳ್ಳಿ ಪ್ಯಾಟಿ

ಏ ಹುಡುಗಿ ಹುಬ್ಬಳ್ಳಿ ಪ್ಯಾಟಿ

ಕವನ

 ಏ ಹುಡುಗಿ ಹುಬ್ಬಳ್ಳಿ ಪ್ಯಾಟಿ

ನಿನ್ನ ಅಂದಕೆ ನೀನೆ ಸಾಟಿ

ನನ್ನೆದೆಯ ವೀಣೆಯ ಮೀಟಿ

ತಪ್ಪಿಸಿದೆ ರಾಗದ ಧಾಟಿ.

 

 ಗೊತ್ತೆನಗೆ ನೀನೊಬ್ಬ ನಟಿ

ತಿವಿಬೇಡ ಕಂಗಳ ಈಟಿ

ಬೀಸುತ ನಗುವಿನ ಚಾಟಿ

ಆಟ ಆಡಿಸಬೇಡ ತುಂಟಿ.

 

ನನ್ನ ಹೃದಯದ ಖಾಲಿ ಚೀಟಿ

ತುಂಬಿತು ರಂಗಿನ ಗೋರಂಟಿ

ತಾಳೆನು ಭಾವದ ಒಳತೋಟಿ

ಮನವಿಲ್ಲ ನನ್ನ ಹತೋಟಿ.

 

ಮಾಡಿದೆ ಶಾಂತಿಯ ಲೂಟಿ

ಇರಲಾರೆನೆ ನಾನಿನ್ನು ಒಂಟಿ

ಇದೊ ನಮಸ್ಕಾರ ಕೋಟಿ

ಎಂದು ಆಗುವೆ ಭೇಟಿ.

Comments