ಮೂಢ ನಂಬಿಕೆ ಮಿತಿಮೀರಿದೆ

ಮೂಢ ನಂಬಿಕೆ ಮಿತಿಮೀರಿದೆ

ರಾಜು : ಇವತ್ತು  ಅಮವಾಸ್ಯೆಯಂತೆ ನನಗೆ ಗೊತ್ತೆ ಇರಲಿಲ್ಲ. ಅದಕ್ಕೆ ಏನೋ ಬೆಳಗ್ಗೆಯಿಂದಲೇ ಮನಸೆಲ್ಲಾ ಕಸಿವಿಸಿಯಾಗುತ್ತಿತ್ತು. ಯಾವ ಕೆಲಸಕ್ಕೆ ಹೋದರೂ ಅಪೂರ್ಣ. ಯಾವತ್ತೂ ಹೀಗೆ ಆಗಿರಲಿಲ್ಲ ಕಣೇ ಎಂದು ರಾಜು ತನ್ನ ಹೆಂಡತಿ ಸೀಮಾಗೆ ಹೇಳ್ತಾ ಇದ್ದ.
ಸೀಮಾ : ಅದನ್ನೆಲ್ಲಾ ನಂಬುವುದು ಮೂರ್ಖತನದ ಪರಮಾವಧಿ ಅನ್ಸುತ್ತೆ. ಕೆಲವರು ಅಮವಾಸ್ಯೆಯ ದಿನವೇ ಕೆಲಸ ಶುರು ಮಾಡುತ್ತಾರೆ. ಅವರೆಲ್ಲಾ ಚೆನ್ನಾಗಿಯೇ ಇದ್ದಾರೆ.
ರಾಜು : ನನ್ನ ಅಮ್ಮ ಯಾವಾಗಲೂ ಹೇಳ್ತಾ ಇದ್ಲು, ಅಮವಾಸ್ಯೆಯ ದಿನ ಏನೂ ಮಾಡಬೇಡ ಅಂತಿದ್ಲು. ಇವತ್ತು ದೆವ್ವಗಳು ಓಡಾಡುತ್ತೆ, ಹೆಚ್ಚು ಕಮ್ಮಿಯಾದ್ರೆ ಮೆಟ್ಟಿಕೊಳ್ಳುತ್ತೆ ಅಂತಿದ್ಲು. ಕಟಿಂಗ್ ಮಾಡಿಸುವುದಕ್ಕೂ ಬಿಡ್ತಾ ಇರಲಿಲ್ಲ ಗೊತ್ತಾ. ಅದಿರಲಿ ಮಗಳು ಹೇಮಾ ಎಲ್ಲಿ.
ಸೀಮಾ : ಅವಳಾ ಇಲ್ಲೇ ಇರೋ ಮಾವಿನಕೊಪ್ಪಲಿನಲ್ಲಿ ಆಟ ಆಡುವುದಕ್ಕೆ ಅಂತ ಹೋಗಿದಾಳೆ.
ರಾಜು : ಏನೇ ನೀನು, ಅದು ಮಧ್ಯಾಹ್ನ 12ಗಂಟೆ ಸಮಯದಲ್ಲಿ ಅಲ್ಲಿಗೆ ಕಳಿಸಿದೆಯೆಲ್ಲಾ, ಏನಾದ್ರೂ ರಾಹು ಹೊಡೆದರೆ ಏನಾಗಬೇಕು. ಇರುವವಳು ಒಬ್ಬಳೇ ಮಗಳು. ಛೇ ನಿನಗೆ ಯಾವತ್ತು ಬುದ್ದಿ ಬರತ್ತೋ ದೇವರೇ ಕಾಣೆ.
ಸೀಮಾ : ಏನೂ ಆಗಲ್ಲ ರೀ. ನೀವೋ, ನಿಮ್ಮ ಅಮ್ಮನ ಮಾತು ಕೇಳಿ , ಕೇಳಿ ಹೀಗೆ ಹೆದರು ಪುಕ್ಕಲ ಆಗಿದ್ದೀರಿ.


ಸರಿ ಸೀಮಾ ಮನೆಗೆ ಬಂದ್ಲು, ಊಟ ಮಾಡಿದ್ದು ಆಯಿತು, ಮಧ್ಯಾಹ್ನದ ನಂತರ ಸಿಕ್ಕಾಪಟ್ಟೆ ಜ್ವರ. ನಡುಗ್ತಾ ಇದಾಳೆ. ಏನೇನೋ ಕನವರಿಸುತ್ತಾ ಇದಾಳೆ.


ರಾಜು : ನಾನು ಬಡಕೊಂಡೆ, ನೋಡಿದ್ಯಾ ಈಗ. ಮೊದಲು ದೇವರ ತಾಯ್ತ ಕಟ್ಟು.
ಸೀಮಾ : ಅದಕ್ಕೆ ಯಾಕೆ ಇಷ್ಟೊಂದು ಗಾಬರಿ ಆಗ್ತೀರಾ. ಒಂದು ಡೋಸ್ ಸಿರಪ್ ಹಾಕಿದ್ರೆ ಸರಿ ಆಗುತ್ತೆ.


ಇತ್ತ ರಾಜುವಿಗೆ ಮನಸಲ್ಲಿ ಏನೇನೋ ಆಲೋಚನೆ. ರಾಹು ಬಡೆದಿದೆಯಾ, ಇಲ್ಲಾ ಏನನ್ನಾದರೂ ನೋಡಿ ಹೆದರಿದ್ದಳಾ, ಯಾರಾದ್ರೂ ಮಾಟ ಮಾಡಿದ್ದು ನಿಂಬೆ ಹಣ್ಣು ದಾಟಿದ್ಲಾ, ಇಲ್ಲಾಂದ್ರೆ ಮತ್ತೆ ಏನು ಆಗಿರಬಹುದು ಅಂತ.
ಸೀಮಾಗೆ ರಾತ್ರಿಯ ತನಕ ಜ್ವರ ಹಾಗೇ ಇತ್ತು, ಇತ್ತ ರಾಜು ದೇವಸ್ಥಾನಕ್ಕೆ ತೆರಳಿ ಪೂಜೆ ಪುನಸ್ಕಾರ ಅಂತ ಕುಂಕುಮ ತಂದು ಹಚ್ಚಿದ್ದ. ವಿಶೇಷವಾದ ತಾಯ್ತಗಳನ್ನು ಕಟ್ಟಿದ್ದ. ಆ ಕಡೆ ಸೀಮಾ ಜ್ವರಕ್ಕೆ ಪೂರಕವಾದಂತಹ ಔಷಧಿಗಳನ್ನು ಹಾಕುವುದರ ಮೂಲಕ ಮಗಳನ್ನು ಸಂತೈಸಿದ್ದಳು. ಬೆಳಗ್ಗೆ ಹೊತ್ತಿಗೆ ಮಗಳು ಹೇಮಾ ಎಂದಿನಂತೆ ಚೂಟಿಯಿಂದ ಎದ್ದು ಶಾಲೆಗೆ ಹೊರಡಲು ತಯಾರಾಗಿದ್ದಳು. ಒಂದೆಡೆ ರಾಜುವಿಗೆ ತನ್ನ ಮಂತ್ರ, ತಂತ್ರಗಳು ಫಲಿಸಿತು ಎನ್ನುವ ನಂಬಿಕೆ. ಮತ್ತೊಂದೆಡೆ ಸೀಮಾಳಿಗೆ ತನ್ನ ಔಷಧಿ ಕೆಲಸ ಮಾಡಿದೆ ಎನ್ನುವುದು.
ಹಾಗಾದರೆ ಇಲ್ಲಿ ನಂಬಿಕೆ ಮತ್ತು ವಿಜ್ಞಾನಕ್ಕೆ ಸ್ಪರ್ಧೆ ಏರ್ಪಟ್ಟಂತೆ. ಇಲ್ಲಿ ನಿಜಕ್ಕೂ ಔಷಧಿ ಕೆಲಸ ಮಾಡಿದೆಯಾದರೂ, ರಾಜುವಿನಂತವರು ಅಲ್ಲ ತಾಯ್ತದಿಂದಲೇ ಆಗಿದೆ ಎನ್ನುವ ನಂಬಿಕೆಯಲ್ಲೇ ಇರುತ್ತಾರೆ. ಇವತ್ತು ಹಲವರು ರಾಜುವಿನಂತಾಗಿದ್ದಾರೆ.  ಖಾಯಿಲೆಗಳಿಗೆ ದೇವರು ಬಳಿ ತೆರಳಿ ಅಲ್ಲಿನ ಸ್ವಾಮೀಜಿಯವರು ನೀಡುವಂತಹ ಬೂದಿ ತಿನ್ನಿಸುತ್ತಾರೆ, ಕುರಿ, ಕೋಳಿ ಬಲಿ ನೀಡುತ್ತಿದ್ದಾರೆ. ಬೇವಿನ ಸೊಪ್ಪಿನಲ್ಲಿ ರೋಗಿಗಳನ್ನು ಅಮಾನುಷವಾಗಿ ಬಡಿಯುತ್ತಾರೆ. ಇನ್ನು ಬುದ್ದಿ ಭ್ರಮಣೆಯಾಗಿರುವವರಿಗೆ ದೇವರ ಹೆಸರಿನಲ್ಲಿ ಇನ್ನಿಲ್ಲದ ತೊಂದರೆಗಳನ್ನು ನೀಡಲಾಗುತ್ತಿದೆ. ದೇಶ ಬೆಳೆಯುತ್ತಾ ಇದೆ. ವಿಜ್ಞಾನ ಬೆಳೆದಿದೆ. ಆದರೆ ನಮ್ಮವರು ಮಾತ್ರ ಹಾಗೆಯೇ ಇದ್ದಾರಲ್ಲಾ ಎನ್ನುವ ಪ್ರಶ್ನೆಯೂ ಮೂಡುತ್ತದೆ.
ಈ ಲೇಖನವನ್ನು ಬರೆಯಲು ಕಾರಣ, ಇತ್ತೀಚೆಗೆ ತಲೆಗೆ ಸಂಬಂಧ ಪಟ್ಟಂತಹ ಖಾಯಿಲೆ ಇರುವ ರೋಗಿಯೊಬ್ಬರಿಗೆ ದೇವರ ಹೆಸರಿನಲ್ಲಿ ನೀಡಿದ ಹಿಂಸೆಗಳು ಅಮಾನುಷವಾಗಿತ್ತು. ಆಕೆಗೆ ಸರಿಯಾದ ಚಿಕಿತ್ಸೆ ನೀಡಿದ್ದರೆ ಗುಣ ಮುಖವಾಗುತ್ತಿದ್ದಳೋ ಏನೋ, ಆದರೆ ತಮ್ಮ ಹೊಟ್ಟೆ ಪಾಡಿಗಾಗಿ ಹುಟ್ಟಿಕೊಂಡಿರುವ ಸುಳ್ಳು ಪೂಜಾರಿಗಳು, ಅತಿಯಾದ ಮೂಢ ನಂಬಿಕೆಯಿಂದಾಗಿ  ಆಕೆ ನರಳುತ್ತಿರುವುದು ಬೇಸರದ ಸಂಗತಿ.

Comments