’ಏಕೆ ಈಗ ಕವಿತೆ ಬರೆಯುವುದಿಲ್ಲ’

’ಏಕೆ ಈಗ ಕವಿತೆ ಬರೆಯುವುದಿಲ್ಲ’

’ಏಕೆ ಈಗ ಕವಿತೆ ಬರೆಯುವುದಿಲ್ಲ’
ಅವಳು ಕೇಳಿದಳು ಕಿವಿಯ ಬಳಿ ಮೆಲ್ಲನೆ
ಕಿವಿಯೊಳಗೆ ಮಾತ್ರ ನುಸುಳುವ ಆ ದನಿಗೆ 
ಇಷ್ಟು ವರ್ಷಗಳಿಂದ ಮನಸಾರೆ ಸೋಲುತ್ತಿದ್ದೇನೆ
ಅವಳ ಕಂಡೊಡನೆಯೇ ’ನೀನೇ ನನ್ನ ಕವಿತೆಯ ಸೆಲೆ’
ಎನ್ನುತ್ತಾ ಕವಿತೆಗಳ ಮೇಲೆ ಕವಿತೆಯ ಬರೆದು
ಸಿಂಗರಿಸಿದ್ದೆ ಅವಳ ಮೇಲೆ ನವಿಲಿಗೆ ಇಟ್ಟ ಗರಿಯಂತೆ
ನಾ ಕವಿಯಾಗುತ್ತಾ ಅವಳು ಕವಿತೆಯಾಗುವ ಬೆರಗನ್ನು
ನೋಡಿ ನಾ ನನ್ನ ಮರೆದಿದ್ದೆ

ಆದರೀಗ ಕವಿತೆ ಬರೆಯಬೇಕೆಂದುಕೊಂಡರೆ
ಇವಳ ಹೋಲಿಸಿದ ವಸ್ತುವೇ ಭೂತಾಕಾರವಾಗಿ ಹಾರರ್ ಸ್ಕೋಪಿನಂತೆ ಕಾಡುತ್ತಾ
ಇವಳ ಬಗ್ಗೆ ಉಳಿದಿರುವ ಮೋಹವೂ ಅಟ್ಟಹಾಸ ರೂಪದಲ್ಲಿ ಬೆದರಿಸುವುದು
ಇವಳೇ ಕವಿಶಕ್ತಿ ಕಳೆದುಕೊಳ್ಳಲು ಕಾರಣವೆಂಬ ಸತ್ಯವನ್ನು ನುಂಗಿಕೊಳ್ಳುತ್ತಾ
ಇವಳ ಪ್ರಶ್ನೆಗಳಿಗೆ ಎಂದಿನಂತೆ ನಿರುತ್ತರನಾಗಿ ಬಿಡುತ್ತೇನೆ  
’ನಿನಗೆ ನನ್ನ ಬಿಟ್ಟು ಕವಿತೆ ಬರೆಯಲಾಗುವುದಿಲ್ಲ’ ಎನ್ನುತ್ತಾ 
ಅವಳು ನಕ್ಕಳು ಮತ್ತೆ ಮುಂಗಾರಿನ ಗುಡುಗಿನಂತೆ
ಮೆಲ್ಲನೆ ಪಿಸುಗುಟ್ಟಿದೆ ಸತ್ಯವ,
ನೀ ಹೀಗೆ ನಗುವುದರಿಂದ ನನಗೆ ಕವಿತೆಯೇ ಬರೆಯಲಾಗುವುದಿಲ್ಲ

[ಕವಿತೆಗೆ ಸ್ಪೂರ್ತಿ ’ಫ್ರೆಂಡ್ಸ್’ ಎನ್ನುವ ಹಾಸ್ಯ ಸರಣಿಯ ಜೆನಿಸ್ ಎನ್ನುವ ಪಾತ್ರ]

Rating
No votes yet

Comments